ಕಿಂಗ್ ಆಫ್ ಸ್ವಿಂಗ್ ಜೇಮ್ಸ್ ಆ್ಯಂಡರ್ಸನ್ ಅವರ ಈ ವಿಶ್ವದಾಖಲೆಗಳನ್ನು ಟಚ್ ಮಾಡೋದು ಅಷ್ಟು ಸುಲಭವಲ್ಲ!
James Anderson: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಸಾರ್ವಕಾಲಿಕ ಶ್ರೇಷ್ಠ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರ ವಿಶ್ವದಾಖಲೆಗಳನ್ನು ಈ ವರದಿಯಲ್ಲಿ ನೋಡೋಣ.

ಲಂಡನ್‌ನ ಐಕಾನಿಕ್ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ (ಜುಲೈ 12) ನಡೆದ ಮೊದಲ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪ್ರಬಲ ಗೆಲುವು ಸಾಧಿಸಿದ ನಂತರ ಇಂಗ್ಲೆಂಡ್ ಲೆಜೆಂಡ್ ಮತ್ತು ಸಾರ್ವಕಾಲಿಕ ಶ್ರೇಷ್ಠ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರ ಸುದೀರ್ಘ ವೃತ್ತಿಜೀವನ ಕೊನೆಗೊಂಡಿತು. 2003ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟಿದ್ದ ಜಿಮ್ಮಿ, 21 ವರ್ಷಗಳ ಕಾಲ ಸೇವೆ ಸಲ್ಲಿಸಿ ಗುಡ್ಬೈ ಹೇಳಿದರು. ತನ್ನ ಅಂತಿಮ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 1, ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಪಡೆದು ಮಿಂಚಿದರು.
ಆ್ಯಂಡರ್ಸನ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ 3ನೇ ಬೌಲರ್ ಎನಿಸಿದ್ದಾರೆ. ಶ್ರೀಲಂಕಾದ ದಿಗ್ಗಜ ಮುತ್ತಯ್ಯ ಮುರಳೀಧರನ್ ಅವರು 800 ವಿಕೆಟ್ ಪಡೆದು, ಅಗ್ರಸ್ಥಾನ ಪಡೆದಿದ್ದಾರೆ. ಶೇನ್ ವಾರ್ನ್ 708 ವಿಕೆಟ್ ಕಬಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಜಿಮ್ಮಿ 704 ವಿಕೆಟ್ ಕಿತ್ತಿದ್ದು, ಮೂರನೇ ಸ್ಥಾನ ಪಡೆದಿದ್ದಾರೆ. ಜಿಮ್ಮಿ ತನ್ನ ಕರಿಯರ್ನಲ್ಲಿ ಹಲವು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ದಾಖಲೆಗಳ ಪಟ್ಟಿ ಇಲ್ಲಿದೆ.
ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ವೇಗಿ
ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ವೇಗಿ ಎಂಬ ವಿಶ್ವದಾಖಲೆ ಆ್ಯಂಡರ್ಸನ್ ಹೆಸರಿನಲ್ಲಿದೆ. 700 ವಿಕೆಟ್‌ಗಳ ಮೈಲುಗಲ್ಲು ದಾಟಿದ ವೇಗದ ಬೌಲರ್ ಕೂಡ ಅವರೇ. ಜಿಮ್ಮಿ ನಂತರ ಸ್ಟುವರ್ಟ್ ಬ್ರಾಡ್ 2ನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದಾರೆ.
ಸಚಿನ್ ನಂತರ ಅತಿ ಹೆಚ್ಚು ಟೆಸ್ಟ್ ಪಂದ್ಯ
ಆ್ಯಂಡರ್ಸನ್ ಟೆಸ್ಟ್ ವೃತ್ತಿಜೀವನ ಜಿಂಬಾಬ್ವೆ ವಿರುದ್ಧ ಲಾರ್ಡ್ಸ್‌ನಲ್ಲಿ ಪ್ರಾರಂಭವಾಯಿತು. ಈಗ ಅವರ ಕರಿಯರ್ ಕೂಡ ಅದೇ ಸ್ಥಳದಲ್ಲಿ ಕೊನೆಗೊಂಡಿತು. 21 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಒಟ್ಟು 188 ಟೆಸ್ಟ್‌ಗಳಲ್ಲಿ ಆಡಿದ್ದು, ಸಚಿನ್ ತೆಂಡೂಲ್ಕರ್ ನಂತರ ಸ್ಥಾನ ಪಡೆದಿದ್ದಾರೆ. ಸಚಿನ್ 200 ಟೆಸ್ಟ್ ಪಂದ್ಯ ಆಡಿದ್ದಾರೆ.
11ನೇ ಕ್ರಮಾಂಕದಲ್ಲಿ 3ನೇ ಅತ್ಯಧಿಕ ರನ್
ಟೆಸ್ಟ್ ಕ್ರಿಕೆಟ್ನಲ್ಲಿ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಅತ್ಯಧಿಕ ರನ್ ಗಳಿಸಿದ 3ನೇ ಬ್ಯಾಟರ್ ಆಗಿದ್ದಾರೆ. ಅವರು 81 ರನ್‌ಗಳೊಂದಿಗೆ ಕ್ರಮಾಂಕದ ಕೆಳಭಾಗದಲ್ಲಿ ಬ್ಯಾಟಿಂಗ್‌ನಲ್ಲಿ 3ನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. 2014ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಭಾರತದ ವಿರುದ್ಧ ಈ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.
ಕೀಪರ್‌ನಿಂದ ಪಡೆದ ಹೆಚ್ಚಿನ ವಿಕೆಟ್
ಚೆಂಡು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ ಆ್ಯಂಡರ್ಸನ್ ಅವರು ಬೌಲಿಂಗ್‌ನಲ್ಲಿ ಅತಿ ಹೆಚ್ಚು ಮಂದಿ ವಿಕೆಟ್ ಕೀಪರ್ಗೆ ಬಲಿಯಾಗಿದ್ದಾರೆ. ಆತನ ಬೌಲಿಂಗ್‌ನಲ್ಲಿ 198 ಬ್ಯಾಟರ್ಗಳು ಕೀಪರ್ಗೆ ಔಟ್ ಆಗಿದ್ದಾರೆ.
ಟೆಸ್ಟ್‌ನಲ್ಲಿ 40,000 ಎಸೆತ ಬೌಲ್ ಮಾಡಿದ ಮೊದಲ ವೇಗಿ
ಜಿಮ್ಮಿ ತಮ್ಮ ಬೌಲಿಂಗ್‌ನಲ್ಲಿ 40000 ಎಸೆತಗಳನ್ನು ಬೌಲ್ ಮಾಡಿದ್ದಾರೆ. ಅವರು ಈ ಸ್ವರೂಪದಲ್ಲಿ ಬೌಲ್ ಮಾಡಿದ 40,000 ಕಾನೂನುಬದ್ಧ ಎಸೆತಗಳನ್ನು ಎಸೆದ ಏಕೈಕ ವೇಗದ ಬೌಲರ್ ಆಗಿದ್ದಾರೆ.
1000 ರನ್, 50 ವಿಕೆಟ್ ಮತ್ತು 50 ಕ್ಯಾಚ್
ಟೆಸ್ಟ್‌ನಲ್ಲಿ 1000 ರನ್, 50+ ವಿಕೆಟ್ ಮತ್ತು 50 + ಕ್ಯಾಚ್ ಪಡೆದ ವಿಶೇಷ ಸಾಧನೆ ಮಾಡಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಅಪರೂಪ ಸಾಧನೆಯಾಗಿದೆ.
