ಇದು ಪ್ರಶಸ್ತಿಯೋ ಅಥವಾ ಅವಮಾನವೋ? ಅತ್ಯುತ್ತಮ ಪ್ರದರ್ಶನಕ್ಕೆ ಹೇರ್ ಡ್ರೈಯರ್ ಕೊಟ್ಟ ಪಿಎಸ್ಎಲ್ ಫ್ರಾಂಚೈಸಿ, ವಿಡಿಯೋ
James Vince: ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಅತ್ಯಂತ ವಿಶ್ವಾಸಾರ್ಹ ಆಟಗಾರ ಪ್ರಶಸ್ತಿ ಪಡೆದ ಕ್ರಿಕೆಟಿಗ ಜೇಮ್ಸ್ ವಿನ್ಸ್ಗೆ ಹೇರ್ ಡ್ರೈಯರ್ ನೀಡಲಾಗಿದೆ. ಹೌದು, ನೀವು ಕೇಳಿದ್ದು ನಿಜ!

ಯಾವುದೇ ಟೂರ್ನಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗುವ ಆಟಗಾರರಿಗೆ ಇಂತಿಷ್ಟು ಎಂದು ಬಹುಮಾನ ಮೊತ್ತ ನೀಡುವುದು ಸಾಮಾನ್ಯವಾಗಿದೆ. ಆದರೆ, ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದ ಕ್ರಿಕೆಟಿಗನಿಗೆ ಹೇರ್ ಡ್ರೈಯರ್ ನೀಡಲಾಗಿದೆ. ಹೌದು, ನೀವು ಕೇಳಿದ್ದು ನಿಜ. ಕೂದಲು ಒಣಗಿಸುವ ಯಂತ್ರ ನೀಡಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಇದು ಕರಾಚಿ ಕಿಂಗ್ಸ್ ಡ್ರೆಸ್ಸಿಂಗ್ ರೂಮ್ನಲ್ಲಿ ಕೊಟ್ಟ ಪ್ರಶಸ್ತಿಯಾಗಿದೆ.
ಪಾಕಿಸ್ತಾನ ಸೂಪರ್ ಲೀಗ್ ಫ್ರಾಂಚೈಸಿಯಾದ ಕರಾಚಿ ಕಿಂಗ್ಸ್ ತನ್ನ ವಿದೇಶಿ ಆಟಗಾರ ಜೇಮ್ಸ್ ವಿನ್ಸ್ಗೆ ‘ಅತ್ಯಂತ ವಿಶ್ವಾಸಾರ್ಹ ಆಟಗಾರ’ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಿದೆ. ಮುಲ್ತಾನ್ ಸುಲ್ತಾನ್ಸ್ ವಿರುದ್ಧದ ಋತುವಿನ ಮೊದಲ ಪಂದ್ಯದಲ್ಲಿ ಜೇಮ್ಸ್ ವಿನ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 235 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಅವಧಿಯಲ್ಲಿ 43 ಎಸೆತಗಳಲ್ಲಿ 101 ರನ್ ಗಳಿಸಿದರು.
ಪಿಎಸ್ಎಲ್ ವಿರುದ್ಧ ಟೀಕೆ
ಈ ವಿಡಿಯೋವನ್ನು ಕರಾಚಿ ಕಿಂಗ್ಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ. ಹೇರ್ ಡ್ರೈಯರ್ ಅನ್ನು ಪ್ರಶಸ್ತಿಯ ರೂಪದಲ್ಲಿ ಪಡೆಯಲು ಬಂದಾಗ ಜೇಮ್ಸ್ ವಿನ್ಸ್ಗೆ ಅಚ್ಚರಿಯಾಗಿದೆ. ಅವರ ಮುಖದಲ್ಲಿ ವಿಭಿನ್ನ ನಗು ಗೋಚರಿಸಿತು. ಈ ವಿಡಿಯೋಗೆ ಅಪಹಾಸ್ಯ ಮಾಡುವಂತಹ ಕಾಮೆಂಟ್ಗಳ ಮಳೆಯೇ ಹರಿಯುತ್ತಿದೆ. ಮುಂದಿನ ಪಂದ್ಯಗಳಲ್ಲಿ ಮನೆಗೆ ಬೇಕಾದ ಸಾಮಾಗ್ರಿಗಳನ್ನು ನೀಡುವಂತೆ ಕ್ರಿಕೆಟ್ ಪ್ರೇಮಿಗಳು ಈಗ ಫ್ರಾಂಚೈಸಿಗಳಿಗೆ ಸಲಹೆ ನೀಡುವ ಮೂಲಕ ವ್ಯಂಗ್ಯವಾಡಿದ್ದಾರೆ.
ಪಿಎಸ್ಎಲ್ನ ಫ್ರಾಂಚೈಸಿಗಳು ಈ ರೀತಿ ಕೆಟ್ಟದಾಗಿ ನಡೆದುಕೊಂಡರೆ ಮುಂದಿನ ಸೀಸನ್ಗಳಲ್ಲಿ ಆಡಲು ಇಷ್ಟಪಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಮಾತೆತ್ತಿದರೆ ಪಾಕಿಸ್ತಾನವು ಪಿಎಸ್ಎಲ್ ಅನ್ನು ಇಂಡಿಯನ್ ಪ್ರೀಮಿಯರ್ ಲೀಗ್ಗೆ ಹೋಲಿಸುತ್ತದೆ. ಐಪಿಎಲ್ಗಿಂತ ತಮ್ಮ ಲೀಗ್ ಉತ್ತಮ ಎಂದು ಹೇಳುತ್ತದೆ. ಹೋಲಿಕೆಗೂ ಒಂದು ಮಿತಿ ಇರಬೇಕು ಎಂದು ಕೆಲವರು ಕಿಡಿಕಾರಿದ್ದರೆ, ಇನ್ನೂ ಕೆಲವರು ಕಿಂಡಲ್ ಮಾಡಿದ್ದಾರೆ. ನಾವು ಈ ರೀತಿ ಹೇರ್ ಡ್ರೈಯರ್ ಕೊಡಲ್ಲ ಎಂದಿದ್ದಾರೆ.
ಪ್ರಸ್ತುತ ಐಪಿಎಲ್ ಮತ್ತು ಪಿಎಸ್ಎಲ್ ಎರಡೂ ಒಟ್ಟಿಗೆ ನಡೆಯುತ್ತಿವೆ. ವಾಸ್ತವವಾಗಿ ಪಿಎಸ್ಎಲ್ ಫೆಬ್ರವರಿಯಲ್ಲಿ ನಡೆಯಬೇಕಿತ್ತು. ಆದರೆ, ಈ ವೇಳೆ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿದ್ದ ಹಿನ್ನೆಲೆಯಲ್ಲಿ ಈ ಫ್ರಾಂಚೈಸಿ ಲೀಗ್ ಅನ್ನು ಮುಂದಕ್ಕೆ ಹಾಕಿದ್ದರು. ಐಪಿಎಲ್ ಮೆಗಾ ಹರಾಜಿನಲ್ಲಿ ಖರೀದಿಯಾಗದ ಆಟಗಾರರು ಮತ್ತು ಪಾಕ್ ಆಟಗಾರರು ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ: ಕರುಣ್ ಅಬ್ಬರಕ್ಕೂ ಕರುಣೆ ತೋರದ ಗೆಲುವು
ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಕಾರ್ಬಿನ್ ಬಾಷ್ ಅವರು ಐಪಿಎಲ್ ಆಡಲು ಪಿಎಸ್ಎಲ್ನಿಂದ ಹಠಾತ್ತನೆ ಹಿಂದೆ ಸರಿದರು. ಬಾಷ್ ಅವರನ್ನು ಬದಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದರಿಂದ ಕೋಪಗೊಂಡ ಕೋಪಗೊಂಡ ಪಾಕಿಸ್ತಾನವು ಒಂದು ವರ್ಷದ ನಿಷೇಧ ಹೇರಿದೆ. ಆದರೆ ಮುಂಬೈ ಇಂಡಿಯನ್ಸ್ ಪರ ಆಡಲು ಇನ್ನೂ ಅವಕಾಶ ಪಡೆದಿಲ್ಲ.
ಟಿಫನ್ ಬಾಕ್ಸ್, ರೋಟಿ ಮೇಕರ್ ಕೊಡಿ ಎಂದ ನೆಟ್ಟಿಗರು
ಜೇಮ್ಸ್ ವಿನ್ಸ್ಗೆ ಹೇರ್ ಡ್ರೈಯರ್ ನೀಡಿದ ಬೆನ್ನಲ್ಲೇ ನೆಟ್ಟಿಗರು ಬಗೆಬಗೆಯ ಕಾಮೆಂಟ್ಗಳನ್ನು ಮಾಡಿದ್ದಾರೆ. ಮುಂದಿನ ಸಲ ರೋಟಿ ತಯಾರಿಸುವುದನ್ನು ಕೊಡಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು ಲಂಚ್ ಬಾಕ್ಸ್ ಕೊಡಿ ಎಂದು ಹಲವರು ಹೇಳಿದ್ದಾರೆ. ಐಪಿಎಲ್ಗಾಗಿ ಪಿಎಸ್ಎಲ್ ತೊರೆಯುವುದು ಇದೇ ಕಾರಣಕ್ಕೆ. ಇದು ಪ್ರಶಸ್ತಿಯೋ, ಅವಮಾನವೋ ಒಂದೂ ಗೊತ್ತಾಗುತ್ತಿಲ್ಲ ಎಂದು ಹಲವರು ಹೇಳಿದ್ದಾರೆ.
ಇದನ್ನೂ ಓದಿ: ಲಕ್ನೋ ಗೆಲುವಿನ ರಥ ನಿಲ್ಲಿಸುವುದೇ ಸಿಎಸ್ಕೆ?
