Jasprit Bumrah: ಜಸ್ಪ್ರೀತ್ ಬುಮ್ರಾ ನನಗಿಂತ 1000 ಪಟ್ಟು ಉತ್ತಮ ಬೌಲರ್: ದಿಗ್ಗಜ ಕಪಿಲ್ ದೇವ್ ಬಣ್ಣನೆ
ಟೀಮ್ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರು ತನಗಿಂತ 1000 ಪಟ್ಟು ಉತ್ತಮ ಬೌಲರ್ ಎಂದು ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಗುಣಗಾನ ಮಾಡಿದ್ದಾರೆ.
ಮಾರಕ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ನನಗಿಂತಲೂ ಸಾವಿರ ಪಟ್ಟು ಉತ್ತಮ ಬೌಲರ್ ಎಂದು 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಮತ್ತು 687 ಅಂತಾರಾಷ್ಟ್ರೀಯ ವಿಕೆಟ್ ಪಡೆದಿರುವ ಕಪಿಲ್ ದೇವ್ (Kapil Dev) ಗುಣಗಾನ ಮಾಡಿದ್ದಾರೆ. ಚಂಡಮಾರುತಕ್ಕಿಂತ ಉತ್ತಮವಾದ ವೇಗದ ಬೌಲರ್ ಅನ್ನು ಭಾರತ ತಂಡ ಕಂಡುಕೊಂಡಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಹೇಳಿದ್ದಾರೆ. ಐಸಿಸಿ ಟಿ20 ವಿಶ್ವಕಪ್ 2024ರ (T20 World Cup 2024) ಎರಡನೇ ಸೆಮಿಫೈನಲ್ನಲ್ಲಿ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಮತ್ತು ಭಾರತ (India vs England) ನಡುವಿನ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಬುಮ್ರಾ ಅವರನ್ನು ಶ್ಲಾಘಿಸಿದ್ದಾರೆ.
ನಾನು ಪ್ರಧಾನ ಬೌಲರ್ ಆಗಿದ್ದಕ್ಕೆ ಹೋಲಿಸಿದರೆ ಜಸ್ಪ್ರೀತ್ ಬುಮ್ರಾ 1000 ಪಟ್ಟು ಉತ್ತಮ ಎಂದು ಕಪಿಲ್ ಹೇಳಿದ್ದಾರೆ. ಹಾಲಿ ವಿಶ್ವಕಪ್ ಆವೃತ್ತಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾದ ಬೌಲಿಂಗ್ ದಾಳಿಯನ್ನು ಬುಮ್ರಾ ಮುನ್ನಡೆಸುತ್ತಿದ್ದಾರೆ. ಟಿ 20 ವಿಶ್ವಕಪ್ ಕ್ರಿಕೆಟ್ನಲ್ಲಿ ಪ್ರಭಾವಶಾಲಿ ಪುನರಾಗಮನ ಮಾಡುತ್ತಿರುವ ಭಾರತೀಯ ತಂಡದ ಯಾರ್ಕರ್ ಸ್ಪೆಷಲಿಸ್ಟ್, 2024ರ ಆವೃತ್ತಿಯಲ್ಲಿ ಕೇವಲ 23 ಓವರ್ಗಳನ್ನು ಬೌಲಿಂಗ್ ಮಾಡಿದ್ದಾರೆ. ಕೇವಲ 4.08ರ ಎಕಾನಮಿಯಲ್ಲಿ ರನ್ ನೀಡಿ 11 ವಿಕೆಟ್ ಪಡೆದಿದ್ದಾರೆ.
ಬುಮ್ರಾ ನನಗಿಂತ 1000 ಪಟ್ಟು ಉತ್ತಮ. ಈ ಚಿಕ್ಕ ಹುಡುಗ ನಮಗಿಂತ ಉತ್ತಮರು. ನಮಗೆ ಹೆಚ್ಚಿನ ಅನುಭವವಿತ್ತು. ಆದರೆ ಅವರು ನಮಗಿಂತಲೂ ಉತ್ತಮವಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಪ್ರಸ್ತುತ ಭಾರತೀಯ ತಂಡದ ಹೆಚ್ಚು ಸುಧಾರಿತ ಫಿಟ್ನೆಸ್ ಮಾನದಂಡಗಳ ವಿಚಾರಕ್ಕೆ ಸಂಬಂಧಿಸಿ ಸಂತಸಗೊಂಡ ಭಾರತದ ಮಾಜಿ ನಾಯಕ, ಅವರು (ಬುಮ್ರಾ) ತುಂಬಾ ಒಳ್ಳೆಯವರು. ಅತ್ಯುತ್ತಮ. ತುಂಬಾ ಸದೃಢರಾಗಿದ್ದಾರೆ. ಹೆಚ್ಚು ಶ್ರಮಜೀವಿ. ಅವರು ಅದ್ಭುತವಾಗಿದ್ದಾರೆ ಎಂದು ಕಪಿಲ್ ಕೊಂಡಾಡಿದ್ದಾರೆ.
ಬುಮ್ರಾ ವರ್ಸಸ್ ಕಪಿಲ್ ದೇವ್
ಮಾಜಿ ನಾಯಕ ಕಪಿಲ್ ಟೀಮ್ ಇಂಡಿಯಾದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು. 1983ರಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆಲ್ಲುವಲ್ಲಿ ಕಪಿಲ್ ದೇವ್ ಪ್ರಮುಖ ಪಾತ್ರ ವಹಿಸಿದ್ದರು. ಅತಿ ಹೆಚ್ಚು ವಿಕೆಟ್ ಪಡೆದ ನಂತರ ಕಪಿಲ್ ಸುದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದರು. ಭಾರತದ ಮಾಜಿ ನಾಯಕ ರಿಚರ್ಡ್ ಹ್ಯಾಡ್ಲೀ ಅವರ 431 ಟೆಸ್ಟ್ ವಿಕೆಟ್ಗಳ ದಾಖಲೆಯನ್ನು ಮುರಿದಿದ್ದರು. 5,000 ರನ್ ಮತ್ತು 400 ವಿಕೆಟ್ ಪಡೆದ ಏಕೈಕ ಆಟಗಾರ. ಈ ವಿಶ್ವ ಶ್ರೇಷ್ಠ ಕ್ರಿಕೆಟಿಗ ತನ್ನ ಇಡೀ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಎಂದಿಗೂ ರನೌಟ್ ಆಗಿಲ್ಲ.
ಆಧುನಿಕ ಯುಗದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಬುಮ್ರಾ ಭಾರತದ ಪರ 26 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 159 ವಿಕೆಟ್ಗಳನ್ನು ಪಡೆದಿದ್ದಾರೆ. ಭಾರತದ ವೇಗದ ಬೌಲರ್ 89 ಏಕದಿನ ಪಂದ್ಯಗಳಲ್ಲಿ 149 ವಿಕೆಟ್ ಪಡೆದಿದ್ದಾರೆ. ಟಿ20ಐ ಕ್ರಿಕೆಟ್ನಲ್ಲಿ ಬುಮ್ರಾ 68 ಪಂದ್ಯಗಳಿಂದ 85 ವಿಕೆಟ್ ಕಬಳಿಸಿದ್ದಾರೆ. ಕಪಿಲ್ ದೇವ್ 356 ಪಂದ್ಯಗಳಲ್ಲಿ 687 ವಿಕೆಟ್ ಪಡೆದಿದ್ದಾರೆ. ಬುಮ್ರಾ 193 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 393 ವಿಕೆಟ್ ಪಡೆಯುವ ಮೂಲಕ ಭಾರತದ 4ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ