ಜಸ್ಪ್ರೀತ್ ಬುಮ್ರಾ ಮೋಸಗಾರ: ಭಾರತೀಯ ನಾಯಕನ ವಿರುದ್ಧ ಶೋ ಒಳಗೆ ಸ್ಯಾಂಡ್ ಪೇಪರ್ ಬಳಕೆ ಆರೋಪ, VIDEO
Jasprit Bumrah: ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಚೀಟರ್ ಅವರನ್ನು ಆಸ್ಟ್ರೇಲಿಯಾದ ಅಭಿಮಾನಿಗಳು ಚೀಟರ್ ಎಂದು ಆರೋಪಿಸಿದ್ದಾರೆ. ಭಾರತೀಯ ನಾಯಕನ ವಿರುದ್ಧ ಶೋ ಒಳಗೆ ಸ್ಯಾಂಡ್ ಪೇಪರ್ ಬಳಕೆ ಆರೋಪ ಮಾಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತ-ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ರೋಚಕ ಘಟ್ಟದತ್ತ ಸಾಗುತ್ತಿದೆ. ಉಭಯ ತಂಡಗಳ ನಡುವೆ ಸಮಬಲದ ಹೋರಾಟ ನಡೆಯುತ್ತಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 185 ರನ್ ಗಳಿಸಿದರೆ, ಆಸ್ಟ್ರೇಲಿಯಾ 181 ರನ್ ಕಲೆ ಹಾಕಿದೆ. ಹೀಗಾಗಿ 4 ರನ್ಗಳ ಮುನ್ನಡೆ ಪಡೆಯಿತು. ಇದರೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಭಾರತ 2ನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಈ ನಡುವೆ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಜಸ್ಪ್ರೀತ್ ಬುಮ್ರಾಗೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದೆ. ಭಾರತ ತಂಡದ ವೇಗಿ ತಮ್ಮ ಶೂಗಳೊಳಗೆ ಸ್ಯಾಂಡ್ ಪೇಪರ್ ಇಟ್ಟುಕೊಂಡು ಚೆಂಡನ್ನು ವಿರೂಪಗೊಳಿಸಿ ವಿಕೆಟ್ ಪಡೆಯುತ್ತಿದ್ದಾರೆ ಎಂದು ಆಸ್ಟ್ರೇಲಿಯಾ ಅಭಿಮಾನಿಗಳು ಗಂಭೀರ ಆರೋಪ ಮಾಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಬುಮ್ರಾ ತಾನು ಧರಿಸಿದ್ದ ಶೂಗಳನ್ನು ಬಿಚ್ಚುವ ವೇಳೆ ಯಾವುದೋ ಒಂದು ವಸ್ತು ಕೆಳಗೆ ಬೀಳುತ್ತದೆ. ತಕ್ಷಣವೇ ಅವರು ಶೂಗಳನ್ನು ಮತ್ತೆ ಧರಿಸಿದ್ದಾರೆ. ಆದರೆ ಇದನ್ನೇ ಸ್ಯಾಂಡ್ ಪೇಪರ್ ಅಂದರೆ ಚೆಂಡನ್ನು ವಿರೂಪ ಮಾಡಲು ಬಳಕೆ ಮಾಡುವ ಸಾಧನ ಎಂದು ಆರೋಪಿಸಿದ್ದಾರೆ. ಬುಮ್ರಾ ಚೀಟರ್ ಎಂದು ಒತ್ತಡ ಹೇರುತ್ತಿರುವ ಕೆಲಸ ಮಾಡುತ್ತಿದ್ದಾರೆ.
ಆಸೀಸ್ ಅಭಿಮಾನಿಗಳ ಆರೋಪಕ್ಕೆ ಇಲ್ಲಿದೆ ಉತ್ತರ
ಜಸ್ಪ್ರೀತ್ ಬುಮ್ರಾ ಶೂ ತೆಗೆದಾಗ ವಸ್ತುವೊಂದು ಹೊರಬಿದ್ದದ್ದು ಸ್ಯಾಂಡ್ ಪೇಪರ್ನಂತೆಯೇ ಕಾಣುತ್ತದಾದರೂ, ಅದಲ್ಲ. ಹೌದು, ಸ್ಯಾಂಡ್ ಪೇಪರ್ ಅಲ್ಲ. ಅದು ಫಿಂಗರ್ ಕ್ಯಾಪ್. ಬೌಲರ್ಗಳು ತಮ್ಮ ಬೆರಳುಗಳನ್ನು ಗಾಯದಿಂದ ರಕ್ಷಿಸಲು ಈ ಫಿಂಗರ್ ಕ್ಯಾಪ್ ಅನ್ನು ಧರಿಸುತ್ತಾರೆ. ಆಸೀಸ್ ಇನ್ನಿಂಗ್ಸ್ನಲ್ಲಿ ಬುಮ್ರಾರ ಫಿಂಗರ್ ಕ್ಯಾಪ್ ಶೂನಿಂದ ಹೊರ ಬಂದಿದೆ. ಅದು ಫೀಲ್ಡಿಂಗ್ಗೆ ತೆರಳುವ ವೇಳೆ ಶೂನಿಂದ ಫಿಂಗರ್ ಕ್ಯಾಪ್ ತೆಗೆದಿದ್ದಾರಷ್ಟೆ. ಆದರೆ ಆಸೀಸ್ ಅಭಿಮಾನಿಗಳು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಸುಖಾಸುಮ್ಮನೆ ಆರೋಪ ಮಾಡಿದ್ದಾರೆ. ಆದರೆ ಆಸ್ಟ್ರೇಲಿಯಾದ ಆಟಗಾರರು ಈ ಹಿಂದೆ ಸ್ಯಾಂಡ್‌ಪೇಪರ್ ಹಗರಣದಲ್ಲಿ ಸಿಲುಕಿ ಬ್ಯಾನ್ ಕೂಡ ಆಗಿದ್ದರು.
2018ರಲ್ಲಿ ನಡೆದಿತ್ತು ಸ್ಯಾಂಡ್ ಪೇಪರ್ ಹಗರಣ
ಐದು ವರ್ಷಗಳ ಹಿಂದೆ ಅಂದರೆ 2018ರ ಮಾರ್ಚ್ 24ರಂದು ಮಾಜಿ ನಾಯಕ ಸ್ಟೀವ್ ಸ್ಮಿತ್, ಕ್ಯಾಮರೂನ್ ಬ್ಯಾಂಕ್ರಾಫ್ಟ್ ಮತ್ತು ಡೇವಿಡ್ ವಾರ್ನರ್ ಅವರು ಕುಖ್ಯಾತ 'ಸ್ಯಾಂಡ್‌ಪೇಪರ್ ಗೇಟ್' ಹಗರಣದಲ್ಲಿ ಭಾಗಿಯಾಗಿದ್ದರು. ಅಲ್ಲದೆ, ಬ್ಯಾನ್ ಕೂಡ ಆಗಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲಿ ಕರಾಳ ದಿನವಾಗಿ ಮಾರ್ಪಟ್ಟಿತ್ತು. ಕೇಪ್ ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ವೇಳೆ ಬಾಲ್ ಟ್ಯಾಂಪರ್ ಮಾಡಲು ಯತ್ನಿಸಿದ ಆರೋಪದಲ್ಲಿ ಈ ಮೂವರು ತಪ್ಪಿತಸ್ಥರಾಗಿದ್ದರು. ಪಂದ್ಯದ ಮೂರನೇ ದಿನ ಈ ಘಟನೆ ನಡೆದಿತ್ತು.
ಮೂವರಲ್ಲಿ ಕಿರಿಯವನಾದ ಬ್ಯಾಂಕ್ರಾಫ್ಟ್ ಹಳದಿ ಬಣ್ಣದ ವಸ್ತುವಿನಿಂದ ಚೆಂಡನ್ನು ಉಜ್ಜುತ್ತಿದ್ದರು. ಕ್ಯಾಮೆರಾಗಳು ಆಸ್ಟ್ರೇಲಿಯನ್ನರ ಬಂಡವಾಳವನ್ನು ಬಯಲು ಮಾಡಿದ್ದವು. ಪತ್ರಿಕಾಗೋಷ್ಠಿಯಲ್ಲಿ ವಾರ್ನರ್, ಸ್ಮಿತ್, ಬ್ಯಾಂಕ್ರಾಫ್ಟ್ ಚೆಂಡನ್ನು ವಿರೂಪಗೊಳಿಸಲು ಹಳದಿ ಅಂಟಿಕೊಳ್ಳುವ ಟೇಪ್ ಬಳಸಿರುವುದನ್ನು ಒಪ್ಪಿಕೊಂಡರು. ಬಳಸಿರುವುದು ಸ್ಯಾಂಡ್ ಪೇಪರ್ ಎಂಬುದು ತನಿಖೆಯಿಂದಲೂ ದೃಢಪಟ್ಟಿತ್ತು. ನಂತರ ಸ್ಮಿತ್ ಮತ್ತು ವಾರ್ನರ್ ನಾಯಕ ಮತ್ತು ಉಪನಾಯಕ ಸ್ಥಾನದಿಂದ ಕೆಳಗಿಳಿಸಲಾಗಿತ್ತು.