ಹೈದರಾಬಾದ್ ಟೆಸ್ಟ್ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಜಸ್ಪ್ರೀತ್ ಬುಮ್ರಾಗೆ ಐಸಿಸಿ ಛೀಮಾರಿ; ಕಾರಣ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಹೈದರಾಬಾದ್ ಟೆಸ್ಟ್ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಜಸ್ಪ್ರೀತ್ ಬುಮ್ರಾಗೆ ಐಸಿಸಿ ಛೀಮಾರಿ; ಕಾರಣ ಹೀಗಿದೆ

ಹೈದರಾಬಾದ್ ಟೆಸ್ಟ್ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಜಸ್ಪ್ರೀತ್ ಬುಮ್ರಾಗೆ ಐಸಿಸಿ ಛೀಮಾರಿ; ಕಾರಣ ಹೀಗಿದೆ

Jasprit Bumrah: ನೀತಿ ಸಂಹಿತೆ ಉಲ್ಲಂಘಿನೆ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ತಂಡದ ವೇಗಿ ಜಸ್ಪ್ರೀತ್ ಬುಮ್ರಾಗೆ ಐಸಿಸಿ ಛೀಮಾರಿ ಹಾಕಿದೆ. ಇಂಗ್ಲೆಂಡ್‌ ತಂಡದ ಎರಡನೇ ಇನ್ನಿಂಗ್‌ ವೇಳೆ ಈ ನಡೆದ ಘಟನೆ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ.

ಜಸ್ಪ್ರೀತ್ ಬುಮ್ರಾ
ಜಸ್ಪ್ರೀತ್ ಬುಮ್ರಾ (AFP)

ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ‌ (India vs England 1st Test) ಭಾರತವು ಅನಿರೀಕ್ಷಿತ ಸೋಲು ಕಂಡಿದೆ. ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ (Jasprit Bumrah) ಐಸಿಸಿ ಛೀಮಾರಿ ಹಾಕಿದೆ. ಐಸಿಸಿಯ ನೀತಿ ಸಂಹಿತೆ ಉಲ್ಲಂಘಿನೆ ಹಿನ್ನೆಲೆಯಲ್ಲಿ, ಬುಮ್ರಾ ನಡೆಯನ್ನು ಖಂಡಿಸಿರುವ ಐಸಿಸಿಯು ಅಧಿಕೃತ ಸೂಚನೆ ನೀಡಿದೆ. ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಂದು ನಡೆದ ಅಪರಾಧಕ್ಕಾಗಿ ಬುಮ್ರಾಗೆ ಛೀಮಾರಿ ಹಾಕಿದೆ.

ಇಂಗ್ಲೆಂಡ್‌ ತಂಡದ ಎರಡನೇ ಇನ್ನಿಂಗ್‌ನ 81ನೇ ಓವರ್‌ ವೇಳೆ ಈ ಘಟನೆ ನಡೆದಿದೆ. ಆಂಗ್ಲ ಬ್ಯಾಟರ್ ಒಲಿ ಪೋಪ್ ಅವರು ಸಿಂಗಲ್‌ ರನ್‌ ಓಡುವ ವೇಳೆ, ಅವರ ಹಾದಿಯಲ್ಲಿ ಬುಮ್ರಾ ಉದ್ದೇಶಪೂರ್ವಕವಾಗಿ ಹೆಜ್ಜೆ ಹಾಕಿದ್ದರು. ಇದು ಅನುಚಿತ ದೈಹಿಕ ಸಂಪರ್ಕಕ್ಕೆ ಕಾರಣವಾಯಿತು.

ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್‌ಗಳನ್ನು ಪಡೆದ ಭಾರತದ ಅನುಭವಿ ವೇಗಿಯು, ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಇರುವ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ಅನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಇದು “ಆಟಗಾರ, ಆಟಗಾರರ ಬೆಂಬಲ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಇತರ ಯಾವುದೇ ವ್ಯಕ್ತಿಯೊಂದಿಗೆ ಅನುಚಿತ ದೈಹಿಕ ಸಂಪರ್ಕಕ್ಕೆ ಸಂಬಂಧಿಸಿದೆ,” ಎಂದು ಐಸಿಸಿ ತಿಳಿಸಿದೆ.

ಇದನ್ನೂ ಓದಿ | ಇಂಗ್ಲೆಂಡ್ ಅನ್ನು ಹಗುರವಾಗಿ ಪರಿಗಣಿಸಬೇಡಿ; ಮೊದಲ ಟೆಸ್ಟ್ ಸೋಲಿನ ಬೆನ್ನಲ್ಲೇ ಭಾರತಕ್ಕೆ ನಾಸಿರ್ ಹುಸೈನ್ ಎಚ್ಚರಿಕೆ ಕರೆ

ಆನ್ ಫೀಲ್ಡ್ ಅಂಪೈರ್‌ಗಳಾದ ಪಾಲ್ ರೀಫೆಲ್ ಮತ್ತು ಕ್ರಿಸ್ ಗಫಾನಿ, ಮೂರನೇ ಅಂಪೈರ್ ಮರೈಸ್ ಎರಾಸ್ಮಸ್ ಮತ್ತು ನಾಲ್ಕನೇ ಅಂಪೈರ್ ರೋಹನ್ ಪಂಡಿತ್ ಅವರು ಬುಮ್ರಾ ಮೇಲೆ ಆರೋಪ ಮಾಡಿದ್ದರು.

ಬುಮ್ರಾ ಅವರು ಕಳೆದ 24 ತಿಂಗಳುಗಳಲ್ಲಿ ಇದೇ ಮೊದಲ ಬಾರಿಗೆ ಇಂಥಾ ತಪ್ಪು ಮಾಡಿದ್ದರಿಂದ, ವೇಗದ ಬೌಲರ್‌ಗೆ ಐಸಿಸಿ ಯಾವುದೇ ರೀತಿಯ ದಂಡ ವಿಧಿಸಿಲ್ಲ. ಆದರೆ ಒಂದು ಡಿಮೆರಿಟ್ ಪಾಯಿಂಟ್ ಬುಮ್ರಾ ಖಾತೆಗೆ ಸೇರಿದೆ.

ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಕನಿಷ್ಠ ಪ್ರಮಾಣದ ದಂಡವಾಗಿ ಅಧಿಕೃತ ಛೀಮಾರಿ ಹಾಕಲಾಗುತ್ತದೆ. ಗರಿಷ್ಠ ಆಟಗಾರನ ಪಂದ್ಯದ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಗುತ್ತದೆ. ಜೊತೆಗೆ ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ.

ಮೊದಲ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಂದು ಗೆಲುವಿಗೆ 231 ರನ್‌ಗಳ ಸುಲಭ ಗುರಿ ಪಡೆದ ರೋಹಿತ್ ಪಡೆಯು, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 202 ರನ್‌ಗಳಿಗೆ ಆಲೌಟ್ ಆಯ್ತು. ಆ ಮೂಲಕ 28 ರನ್‌ಗಳಿಂದ ಸೋಲನುಭವಿಸಿತು. ಭಾರತವು 91 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 100ಕ್ಕೂ ಹೆಚ್ಚು ರನ್‌ಗಳ ಮುನ್ನಡೆ ಸಾಧಿಸಿದ ನಂತರವೂ ಪಂದ್ಯವನ್ನು ಕಳೆದುಕೊಂಡಿರುವುದು ಇದೇ ಮೊದಲು. ಇಂಗ್ಲೆಂಡ್‌ ಬ್ಯಾಟರ್‌ ಓಲಿ ಪೋಪ್ ಸಿಡಿಸಿದ ಆಕರ್ಷಕ ಶತಕವು ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತು. ಹೀಗಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದನ್ನೂ ಒದಿ | ರೋಹಿತ್ ಬೇಡ, ಕೊಹ್ಲಿ ಬೇಕು; ಇಂಗ್ಲೆಂಡ್ ವಿರುದ್ಧ ಸೋಲಿನ ಬಳಿಕ ಎದ್ದಿದೆ ಭಾರತ ಟೆಸ್ಟ್ ನಾಯಕತ್ವದ ಚರ್ಚೆ

ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಫೆಬ್ರವರಿ 2ರಂದು ವಿಶಾಖಪಟ್ಟಣದ ಡಾ.ವೈಎಸ್‌ ರಾಜಶೇಖರ್ ರೆಡ್ಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.

(This copy first appeared in Hindustan Times Kannada website. To read more like this please logon to kannada.hindustantime.com )

Whats_app_banner