ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಫಿಟ್ ಆಗಲು ಪವಾಡ ನಡೆಯಬೇಕಂತೆ!; ಬದಲಿ ಸ್ಥಾನಕ್ಕೆ ಆರ್​ಸಿಬಿ ಮಾಜಿ ವೇಗಿ?
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಫಿಟ್ ಆಗಲು ಪವಾಡ ನಡೆಯಬೇಕಂತೆ!; ಬದಲಿ ಸ್ಥಾನಕ್ಕೆ ಆರ್​ಸಿಬಿ ಮಾಜಿ ವೇಗಿ?

ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಫಿಟ್ ಆಗಲು ಪವಾಡ ನಡೆಯಬೇಕಂತೆ!; ಬದಲಿ ಸ್ಥಾನಕ್ಕೆ ಆರ್​ಸಿಬಿ ಮಾಜಿ ವೇಗಿ?

Jasprit Bumrah: ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಬಹುತೇಕ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಅವರ ಸ್ಥಾನಕ್ಕೆ ಮತ್ತೊಬ್ಬರ ಆಯ್ಕೆಯಲ್ಲಿ ಬಿಸಿಸಿಐ ನಿರತವಾಗಿದೆ.

ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಫಿಟ್ ಆಗಲು ಪವಾಡ ನಡೆಯಬೇಕಂತೆ!; ಬದಲಿ ಸ್ಥಾನಕ್ಕೆ ಆರ್​ಸಿಬಿ ಮಾಜಿ ವೇಗಿ?
ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಫಿಟ್ ಆಗಲು ಪವಾಡ ನಡೆಯಬೇಕಂತೆ!; ಬದಲಿ ಸ್ಥಾನಕ್ಕೆ ಆರ್​ಸಿಬಿ ಮಾಜಿ ವೇಗಿ?

ಫೆಬ್ರವರಿ 19ರಿಂದ ಪಾಕಿಸ್ತಾನ ಮತ್ತು ಯುಎಇ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ (ICC Champions Trophy 2025) ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ (Indian Cricket Team) ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಮಹತ್ವದ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ (Jasprit Bumrah) ಬೆನ್ನು ನೋವಿನ ಸಮಸ್ಯೆಯಿಂದ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದ ಬಿಸಿಸಿಐಗೆ (BCCI) ಇದೀಗ ನಿರಾಸೆಯಾಗಿದೆ. ಫಿಟ್ (Fitness) ಆಗಬೇಕು ಎಂದರೆ ಪವಾಡವೇ ನಡೆಯಬೇಕೆಂದು ವರದಿಯಾಗಿದೆ. ಇದು ಬುಮ್ರಾ ಟೂರ್ನಿಯಿಂದ ಹೊರಬೀಳುತ್ತಾರೆ ಎಂಬುದರ ಸುಳಿವು ನೀಡಿದೆ.

ಹೀಗಾಗಿ, ಬುಮ್ರಾ ಬದಲಿ ಆಟಗಾರನ ಹುಡುಕಾಟ ನಡೆಸುತ್ತಿರುವ ಬಿಸಿಸಿಐ, ಮೊಹಮ್ಮದ್ ಸಿರಾಜ್ (Mohammed Siraj) ಅಥವಾ ಹರ್ಷಿತ್ ರಾಣಾ (Harshit Rana) ಅವರಿಗೆ ಮಣೆ ಹಾಕಲು ಚಿಂತನೆ ನಡೆಸುತ್ತಿದೆ. ಆದರೆ ಅನುಭವ ಇರುವ ಆರ್​ಸಿಬಿ ಮಾಜಿ ಸಿರಾಜ್​ಗೆ ಮೊದಲ ಆದ್ಯತೆ ನೀಡಲು ಮ್ಯಾನೇಜ್​ಮೆಂಟ್ ಚಿಂತಿಸಿದೆ. ತಂಡ ಪ್ರಕಟಿಸುವ ವೇಳೆ ಫಿಟ್​ನೆಸ್ ಆಧರಿಸಿ ಆಡಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಅಲ್ಲದೆ, ಫೆಬ್ರವರಿ ಮೊದಲ ವಾರದಲ್ಲಿ ವೇಗಿಯ ಫಿಟ್​ನೆಸ್ ವರದಿ ಸಿಗುವ ಭರವಸೆ ವ್ಯಕ್ತಪಡಿಸಿತ್ತು. ಈಗ ಬುಮ್ರಾ ಶೇ 100ರಷ್ಟು ಚೇತರಿಕೆ ಕಾಣುವುದು ಕಷ್ಟ ಎಂದು ಬಿಸಿಸಿಐ ಮೂಲಗಳೇ ಖಚಿತಪಡಿಸಿರುವುದಾಗಿ ವರದಿಯಾಗಿದೆ.

ಆಸ್ಟ್ರೇಲಿಯಾ ವಿರುದ್ಧ ಸಿಡ್ನಿಯಲ್ಲಿ ನಡೆದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಬುಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ನ್ಯೂಜಿಲೆಂಡ್‌ನ ಡಾ.ರೋವನ್ ಸ್ಕೌಟೆನ್ ಅವರೊಂದಿಗೆ ಬಿಸಿಸಿಐ ವೇಗಿಯ ಇಂಜುರಿಗೆ ಸಂಬಂಧಿಸಿ ನಿರಂತರ ಸಂಪರ್ಕದಲ್ಲಿದೆ. ಚಾಂಪಿಯನ್ಸ್ ಟ್ರೋಫಿಗೂ ಮುಂಚಿತವಾಗಿ ಚಿಕಿತ್ಸೆಗೆ ನ್ಯೂಜಿಲೆಂಡ್​ಗೆ ಕಳುಹಿಸಲಿದೆ ಎಂದು ವರದಿಯಾಗಿದೆ. ಆದಾಗ್ಯೂ, ಟೂರ್ನಿಗೂ ಮುನ್ನ ಶೇ 100ರಷ್ಟು ಫಿಟ್ ಆಗುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಬಿಸಿಸಿಐ ಬ್ಯಾಕ್ಅಪ್ ಸಿದ್ಧಪಡಿಸುತ್ತಿದೆ. ಬುಮ್ರಾ ಶೇ 100 ಫಿಟ್ ಆಗಬೇಕು ಎಂದರೆ ಪವಾಡವೇ ನಡೆಯಬೇಕಾಗುತ್ತದೆ ಎಂದು ವರದಿ ತಿಳಿಸಿದೆ.

ಬಿಸಿಸಿಐ ಹೇಳಿದ್ದೇನು?

‘ಬಿಸಿಸಿಐ ವೈದ್ಯಕೀಯ ತಂಡವು ನ್ಯೂಜಿಲೆಂಡ್‌ನ ಡಾ. ಸ್ಕೌಟೆನ್ ಅವರೊಂದಿಗೆ ಸಂಪರ್ಕದಲ್ಲಿದೆ. ಮಂಡಳಿಯು ಬುಮ್ರಾ ಅವರನ್ನು ನ್ಯೂಜಿಲೆಂಡ್‌ಗೆ ಭೇಟಿ ಮಾಡಲು ಯೋಜಿಸಿತ್ತು. ಆದರೆ ಅದು ಇನ್ನೂ ಸಂಭವಿಸಿಲ್ಲ. ಬುಮ್ರಾ ಶೇ 100% ಫಿಟ್‌ ಆಗಿದ್ದರೆ ಅದು ಪವಾಡ’ ಎಂದು ಬಿಸಿಸಿಐ ಮೂಲವೊಂದನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಹಿಂದೆ ಗಾಯದ ಕಾರಣ 2022ರ ಟಿ20 ವಿಶ್ವಕಪ್​ ಟೂರ್ನಿಗೆ ಅಲಭ್ಯರಾಗಿದ್ದ ಬುಮ್ರಾ, ಡಾ. ಸ್ಕೌಟೆನ್ ಅವರಿಂದ ಚಿಕಿತ್ಸೆ ಪಡೆದಿದ್ದರು.'

‘ಸದ್ಯದ ವರದಿಗಳನ್ನು ಸ್ಕೌಟೆನ್​ಗೆ ಕಳುಹಿಸಿಕೊಡಲಾಗುವುದು. ಅವರ ನೀಡುವ ಪ್ರತಿಕ್ರಿಯೆಯ ಮೇಲೆ ಮುಂದಿನ ನಿರ್ಧಾರ ಅವಲಂಬಿತವಾಗಿರುತ್ತದೆ. ಇಡೀ ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರು ಆಡಲು ಸಿದ್ಧರಾಗಿದ್ದರೆ ಮಾತ್ರ ಆಯ್ಕೆದಾರರಿಗೆ ತಿಳಿಸಲಾಗುವುದು. ಇಲ್ಲವಾದಲ್ಲಿ ಆಯ್ಕೆದಾರರು ಅವರಿಗೆ ಬ್ಯಾಕಪ್ ಯೋಜನೆಯನ್ನು ಸಿದ್ಧಪಡಿಸಬೇಕಾಗುತ್ತದೆ’ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 12ರವರೆಗೆ ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿಸಿದ ತಂಡದಲ್ಲಿ ಮಾರ್ಪಡು ಮಾಡಲು ಅವಕಾಶ ಇದೆ. ಅಲ್ಲಿಯವರೆಗೂ ಕಾದುನೋಡಬೇಕಾಗಿದೆ.

ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಗೊಂಡ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ (ಅನುಮಾನ).

Whats_app_banner