ಕನ್ನಡ ಸುದ್ದಿ  /  Cricket  /  Jasprit Bumrah Released From India Squad Ahead Of India Vs England 4th Test Bcci Confirms Kl Rahul Ruled Out Ranchi Jra

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ; ಕೆಎಲ್ ರಾಹುಲ್ ಔಟ್

India vs England 4th Test: ಭಾರತ ತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಟೆಸ್ಟ್‌ಗೂ ಮುನ್ನ, ಜಸ್ಪ್ರೀತ್ ಬುಮ್ರಾ ಅವರನ್ನು ಭಾರತ ತಂಡದಿಂದ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಕೆಎಲ್ ರಾಹುಲ್ ನಾಲ್ಕನೇ ಟೆಸ್ಟ್‌ ಪಂದ್ಯದಿಂದಲೂ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ದೃಢಪಡಿಸಿದೆ.

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ (PTI)

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ (India vs England 4th Test) ಪಂದ್ಯಕ್ಕೂ ಮುಂಚಿತವಾಗಿ ಭಾರತ ತಂಡದ ಉಪನಾಯಕ ಹಾಗೂ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಇದೇ ವೇಳೆ ಐದು ಪಂದ್ಯಗಳ ಸರಣಿಯ 4ನೇ ಟೆಸ್ಟ್‌ನಿಂದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ ಎಂದು ಕ್ರಿಕೆಟ್‌ ಮಂಡಳಿಯು ಫೆಬ್ರವರಿ 20ರ ಮಂಗಳವಾರ ದೃಢಪಡಿಸಿದೆ.

ಧರ್ಮಶಾಲಾದಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ರಾಹುಲ್ ಭಾಗವಹಿಸುವುದು ಇನ್ನೂ ಖಚಿತವಾಗಿಲ್ಲ. ಅವರು ಆಡುವುದು ಫಿಟ್ನೆಸ್‌ ಮೇಲೆ ಅವಲಂಬಿಸಿದೆ. ಮತ್ತೊಂದೆಡೆ, ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟೆಸ್ಟ್‌ಗೂ ಮುನ್ನ ತಂಡದಿಂದ ಬಿಡುಗಡೆಯಾಗಿದ್ದ ವೇಗಿ ಮುಖೇಶ್ ಕುಮಾರ್, ರಾಂಚಿಯಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಬುಮ್ರಾ ಬದಲಿಗೆ ಮುಖೇಶ್‌ ಆಡುವ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ | ವಿರುಷ್ಕಾ ದಂಪತಿಗೆ ಗಂಡು ಮಗು ಜನನ; ಜೂನಿಯರ್ ವಿರಾಟ್‌ಗೆ ಅಕಾಯ್‌ ಹೆಸರಿಟ್ಟ ಕೊಹ್ಲಿ-ಅನುಷ್ಕಾ -Virat Kohi Son Akaay

ಹೈದರಾಬಾದ್‌ಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ, ಟೀಮ್ ಇಂಡಿಯಾ ಪರ ಕೆಎಸ್ ಭರತ್ ವಿಕೆಟ್ ಕೀಪಿಂಗ್ ಮಾಡಿದ್ದರು. ಅದರೊಂದಿಗೆ ರಾಹುಲ್ ಅವರನ್ನು ಸರಣಿಯ ಆರಂಭಿಕ ಪಂದ್ಯಕ್ಕೆ ಪ್ರಮುಖ ಬ್ಯಾಟರ್‌ ಆಗಿ ಆಡುವ ಬಳಗಕ್ಕೆ ಸೇರಿಸಲಾಯಿತು. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕನ್ನಡಿಗ ರಾಹುಲ್ 123 ಎಸೆತಗಳಲ್ಲಿ 86 ರನ್ ಗಳಿಸಿದ್ದರು. ಆ ಬಳಿಕ ಮೊಣಕಾಲು ಗಾಯದಿಂದಾಗಿ ಅವರು 2ನೇ ಟೆಸ್ಟ್‌ಗೆ ಅಲಭ್ಯರಾಗಿದ್ದರು. ಫಿಟ್‌ನೆಸ್‌ ಸಾಬೀತಾಗದ ಕಾರಣದಿಂದ 3ನೇ ಟೆಸ್ಟ್‌ನಿಂಲೂ ಹೊರಗುಳಿದರು.‌

ಚೇತರಿಸಿಕೆ, ಸಿದ್ದಗಂಗಾ ಮಠಕ್ಕೆ ಭೇಟಿ

ಅತ್ತ ಕೆಎಲ್‌ ರಾಹುಲ್ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ಮತ್ತು ಕೊಹ್ಲಿ ಅನುಪಸ್ಥಿತಿಯಲ್ಲಿಯೂ, ಭಾರತ ತಂಡವು ಇಂಗ್ಲೆಂಡ್ ಅನ್ನು ಹೀನಾಯವಾಗಿ ಸೋಲಿಸಿತು. ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 500ನೇ ಟೆಸ್ಟ್ ವಿಕೆಟ್ ಪಡೆದರೆ, ಯುವ ಆಟಗಾರರಾದ ಸರ್ಫರಾಜ್ ಖಾನ್ ಸತತ ಎರಡೂ ಇನ್ನಿಂಗ್ಸ್‌ಗಳಲ್ಲಿಯೂ ಅರ್ಧಶತಕ ಸಿಡಿಸಿದರು. ಯಶಸ್ವಿ ಜೈಸ್ವಾಲ್‌ ದ್ವಿಶತಕ ಸಿಡಿಸಿದರು.

ಇದನ್ನೂ ಓದಿ | ಭಾರತದಲ್ಲಿ ರೈಲು, ಆಟೋ ಹಿಡಿಯಲು ಕೂಡಾ ಚಿಕ್ಕ ವಯಸ್ಸಿನಲ್ಲೇ ಕಷ್ಟಪಡಬೇಕು; ಯಶಸ್ವಿ ಜೈಸ್ವಾಲ್ ಪ್ರಬುದ್ಧ ಮಾತು

ರಾಂಚಿ ಟೆಸ್ಟ್‌ಗೆ ಬುಮ್ರಾ ಅನುಪಸ್ಥಿತಿ, ಸರಣಿ ಗೆಲ್ಲುವ ಗುರಿ

ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಗಳಿಸಿದ ಜಡೇಜಾ, ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಬಳಿಸಿದರು. ಜಡೇಜಾ ಮತ್ತು ಜೈಸ್ವಾಲ್ ಅವರ ವೀರೋಚಿತ ಆಟದಿಂದಾಗಿ ಭಾರತವು 434 ರನ್‌ಗಳಿಂದ ಜಯ ಸಾಧಿಸಿತು. ಟೆಸ್ಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ಟೀಮ್‌ ಇಂಡಿಯಾ, ಫೆಬ್ರವರಿ 23ರ ಶುಕ್ರವಾರ ರಾಂಚಿಯ ಎಸ್‌ಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಪಂದ್ಯದಲ್ಲಿ ಸೆಣಸಲಿದೆ. ಪಂದ್ಯದಲ್ಲಿ ಅನುಭವಿ ವೇಗಿಯ ಅನುಪಸ್ಥಿತಿ ತಂಡವನ್ನು ಕಾಡಲಿದೆ.

ನಾಲ್ಕನೇ ಟೆಸ್ಟ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಆಕಾಶ್ ದೀಪ್.

ಇದನ್ನೂ ಓದಿ | ರಣಜಿ ಟ್ರೋಫಿ: ಚಂಡೀಗಢ ವಿರುದ್ಧದ ಪಂದ್ಯ ಡ್ರಾಗೊಂಡರೂ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ ಕರ್ನಾಟಕ

(This copy first appeared in Hindustan Times Kannada website. To read more like this please logon to kannada.hindustantimes.com)