ಜಸ್ಪ್ರೀತ್ ಬುಮ್ರಾ ವಾಪಸ್, ಶುಭ್ಮನ್ ಗಿಲ್ ಇನ್, ಜೈಸ್ವಾಲ್ ಔಟ್; 2026ರ ಟಿ20 ವಿಶ್ವಕಪ್‌ಗೆ ಭಾರತದ ಸಂಭಾವ್ಯ ತಂಡ
T20 World Cup 2026: ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಐಪಿಎಲ್‌ನಲ್ಲಿ ಯುವ ಆಟಗಾರರು ನೀಡುವ ಪ್ರದರ್ಶನ ಮಹತ್ವದ ಪಾತ್ರವಹಿಸಲಿದೆ. ಚುಟುಕು ಸಮರಕ್ಕೆ ಭಾರತದ ಸಂಭಾವ್ಯ ತಂಡ ಹೇಗಿರಲಿದೆ? ಇಂತಿದೆ ವಿವರ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಟೀಮ್ ಇಂಡಿಯಾ ಇದೀಗ 18ನೇ ಆವೃತ್ತಿಯ ಐಪಿಎಲ್ ಮಧ್ಯೆಯೇ 2026ರ ಟಿ20 ವಿಶ್ವಕಪ್ ಸಿದ್ಧತೆ ಆರಂಭಿಸಲಿದೆ. ಮುಂದಿನ ವರ್ಷ ಫೆಬ್ರವರಿ - ಮಾರ್ಚ್ನಲ್ಲಿ ಐಸಿಸಿ ಮಿನಿ ಸಮರ ನಡೆಯುವ ಕಾರಣ ಬಿಸಿಸಿಐ ಪಾಲಿಗೆ ಈ ಐಪಿಎಲ್ ಮಹತ್ವದ್ದಾಗಿದೆ. ಸತತ 2ನೇ ಟ್ರೋಫಿ ಹಾಗೂ ಸೀಮಿತ ಓವರ್‌ಗಳ ಹ್ಯಾಟ್ರಿಕ್ ಐಸಿಸಿ ಪ್ರಶಸ್ತಿಗೆ ಮುತ್ತಿಕ್ಕಲು ಆಟಗಾರರ ಪ್ರದರ್ಶನ, ತಂಡವನ್ನು ರಚಿಸಲು ಮತ್ತು ಅಂತಿಮ ಸಿದ್ಧತೆ ರೂಪಿಸಲು ಇದೊಳ್ಳೆ ಅವಕಾಶವೂ ಹೌದು. ಹಾಗಾದರೆ ಚುಟುಕು ಸಮರಕ್ಕೆ ಭಾರತದ ಸಂಭಾವ್ಯ ತಂಡ ಹೇಗಿರಲಿದೆ? ಇಂತಿದೆ ವಿವರ.
2024ರ ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಭಾರತ 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಒಲಿಸಿಕೊಂಡಿದೆ. ಇದೀಗ 2026ರ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದೆ. ಅದಕ್ಕೆ ಸುಮಾರು ಒಂದು ವರ್ಷ ಬಾಕಿ ಇದೆ. ಆದರೆ, ಮೆಗಾ ಟೂರ್ನಿಗೆ ಐಪಿಎಲ್ನಿಂದಲೇ ಸಿದ್ಧತೆಗಳು ಪ್ರಾರಂಭವಾಗಲಿವೆ. ಟಿ20 ವಿಶ್ವಕಪ್‌ಗೆ ಮೊದಲು ಐಪಿಎಲ್‌ನಲ್ಲಿ ಭಾರತದ ಆಟಗಾರರು ತಮ್ಮ ಕೌಶಲ್ಯ ಪ್ರದರ್ಶಿಸಲಿದ್ದಾರೆ. ನಂತರ ಬಾಂಗ್ಲಾದೇಶ ವಿರುದ್ಧ 3 ಟಿ20ಐ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳನ್ನು ಭಾರತ ಆಡಲಿದೆ.
ಈ ಚುಟುಕು ಸರಣಿಗಳು ಭಾರತದ ಬಲಿಷ್ಠ ತಂಡವನ್ನು ನಿರ್ಮಿಸಲು ಮತ್ತು ಸಿದ್ಧತೆಯ ಭಾಗವೂ ಹೌದು. 2026ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವು 2024ರ ಟಿ20 ವಿಶ್ವಕಪ್‌ನಲ್ಲಿ ಆಡಿದ ತಂಡಕ್ಕಿಂತ ಬಹಳ ಭಿನ್ನವಾಗಿರುತ್ತದೆ. ಏಕೆಂದರೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಈಗಾಗಲೇ ಈ ಸ್ವರೂಪದಿಂದ ನಿವೃತ್ತರಾಗಿದ್ದು, ಅವರ ಸ್ಥಾನವನ್ನು ತುಂಬಲು ಯುವಕರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಸ್ಥಿರವಾದ ತಂಡವನ್ನು ಭಾರತ ಹೊಂದಿದ್ದು, ಕೆಲ ಸ್ಥಾನಗಳನ್ನೇ ಭರ್ತಿ ಮಾಡಬೇಕಿದೆ.
ಇನ್ನು ತಂಡವನ್ನು ಮುನ್ನಡೆಸುವ ಜವಾಬ್ದಾರಿ ಸೂರ್ಯಕುಮಾರ್ ಮೇಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಈ ಐಸಿಸಿ ಟೂರ್ನಿ ನಡೆಯಲಿದ್ದು, ತವರಿನ ಲಾಭದೊಂದಿಗೆ ಮತ್ತೊಮ್ಮೆ ಟ್ರೋಫಿ ಗೆಲ್ಲಲು ಸುವರ್ಣಾವಕಾಶವೂ ಹೌದು. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಖಚಿತವಾಗಿ ಸ್ಥಾನ ಪಡೆಯುವ ಆಟಗಾರರಾಗಿದ್ದಾರೆ. ಆದರೆ ಆರಂಭಿಕ ಸ್ಥಾನಕ್ಕೆ ಐವರ ನಡುವೆ ಪೈಪೋಟಿ ನಡೆಯುತ್ತಿದೆ. ಆದರೆ ಐಪಿಎಲ್‌ನಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎನ್ನುವುದರ ಮೇಲೆ ಅವರ ಸ್ಥಾನ ನಿರ್ಧಾರವಾಗಲಿದೆ.
ಆರಂಭಿಕ ಸ್ಥಾನಕ್ಕೆ ಐವರ ನಡುವೆ ಪೈಪೋಟಿ
ಆರಂಭಿಕ ಆಟಗಾರನ ಪಾತ್ರಕ್ಕಾಗಿ ಪೈಪೋಟಿ ನಡೆಯಲಿದೆ. ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ ಮತ್ತು ಋತುರಾಜ್ ಗಾಯಕ್ವಾಡ್ ಕಣದಲ್ಲಿದ್ದಾರೆ. ಐಪಿಎಲ್‌ನಲ್ಲಿ ಆಟಗಾರರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಅವರ ಸ್ಥಾನ ಅಷ್ಟು ಭದ್ರವಾಗಿರುತ್ತದೆ. ತಂಡಕ್ಕೆ ಅನುಭವಿ ಆರಂಭಿಕರ ಅಗತ್ಯ ತಂಡಕ್ಕಿದೆ. ಹಾಗಾಗಿ ಇದು ಶುಭ್ಮನ್ ಗಿಲ್‌ಗೆ ಸ್ವಲ್ಪ ಅನುಕೂಲ ತಂದುಕೊಡಬಹುದು. ಸಂಜು ಸ್ಯಾಮ್ಸನ್ ಬ್ಯಾಕಪ್ ಕೀಪರ್ ಆಗಿ ಸೇವೆ ಸಲ್ಲಿಸಬಹುದು. ಆದ್ದರಿಂದ ಅವರಿಗೂ ಆದ್ಯತೆ ನೀಡಲಾಗುವುದು. ಆದರೆ ಅಭಿಷೇಕ್ ಶರ್ಮಾ ಮತ್ತು ಜೈಸ್ವಾಲ್‌ಗಳಲ್ಲಿ ಒಬ್ಬರು ಬ್ಯಾಕಪ್ ಆರಂಭಿಕರಾಗಬಹುದು.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ರಿಂಕು ಸಿಂಗ್ ಇದ್ದಾರೆ. ಇವರು ತಮ್ಮ ಸ್ಥಾನಗಳನ್ನು ಗಟ್ಟಿಗೊಳಿಸಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಇದರಿಂದಾಗಿ ಬ್ಯಾಟಿಂಗ್‌ಗೆ ಹೆಚ್ಚಿನ ಅನುಭವ ಸಿಗುತ್ತದೆ. ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಇಬ್ಬರು ಪ್ರಮುಖ ಸ್ಪಿನ್ನರ್ಗಳಾಗಲಿದ್ದಾರೆ. ಆದರೆ ಮತ್ತೊಬ್ಬರ ಸ್ಪಿನ್ ಆಲ್ರೌಂಡರ್, ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಕ್ರಮವಾಗಿ ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್ಗೆ ಸ್ಥಾನ ಸಿಗಬಹುದು.
ಜಸ್ಪ್ರೀತ್ ಬುಮ್ರಾ ವಾಪಸ್
ವೇಗದ ಬೌಲಿಂಗ್ ವಿಷಯದಲ್ಲಿ ಜಸ್ಪ್ರೀತ್ ಬುಮ್ರಾ ದಾಳಿಯನ್ನು ಮುನ್ನಡೆಸಲಿದ್ದಾರೆ. ಪ್ರಸ್ತುತ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಬುಮ್ರಾ ಶೀಘ್ರದಲ್ಲೇ ಐಪಿಎಲ್ಗೆ ಮರಳಲಿದ್ದಾರೆ. ಆ ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮರಳಲಿದ್ದಾರೆ. ಮೂರು ಫಾರ್ಮೆಟ್ಗಳಲ್ಲೂ ಆಡುವ ಆಟಗಾರನಾದ ಕಾರಣ ಐಸಿಸಿ ಟೂರ್ನಿಗೆ ಅವರ ಕೆಲಸದ ಹೊರೆ ಇಳಿಸಿದರೆ ಉತ್ತಮ. ಏಕೆಂದರೆ ಮತ್ತೆ ಗಾಯಗೊಂಡರೆ ಕಷ್ಟವಾಗಬಹುದು. ಅರ್ಷದೀಪ್ ಸಿಂಗ್ ಹೊಸ ಚೆಂಡಿನೊಂದಿಗೆ ಮಿಂಚಿನ ಪ್ರದರ್ಶನ ನೀಡಲಿದ್ದಾರೆ. ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ. ಆದರೆ ಮೊಹಮ್ಮದ್ ಸಿರಾಜ್ ಪುನರಾಗಮನಕ್ಕೆ ಅವಕಾಶವಿರಬಹುದು ಅಥವಾ ತಂಡವು ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಬಹುದು. ಒಟ್ಟಾರೆ ಐಪಿಎಲ್ ಬಹುತೇಕ ಆಟಗಾರ ಭವಿಷ್ಯ ನಿರ್ಧರಿಸಲಿದೆ. ಕಾದುನೋಡೋಣ.
2026ರ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತದ ಸಂಭಾವ್ಯ ತಂಡ
ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ಅರ್ಷ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್.
ಸಂಭಾವ್ಯ ಬ್ಯಾಕಪ್ ಆಟಗಾರರು: ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ.
