ಚಾಂಪಿಯನ್ಸ್ ಟ್ರೋಫಿಯಿಂದ ಜಸ್ಪ್ರೀತ್ ಬುಮ್ರಾ ಜೊತೆಗೆ ಯಶಸ್ವಿ ಜೈಸ್ವಾಲ್ ಕೂಡ ಔಟ್; ಕೆಕೆಆರ್ನ ಇಬ್ಬರು ಬೌಲರ್ಸ್ ಆಯ್ಕೆ
ICC Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಬಿಸಿಸಿಐ ಪರಿಷ್ಕೃತ ಭಾರತ ತಂಡವನ್ನು ಪ್ರಕಟಿಸಿದೆ. ಜಸ್ಪ್ರೀತ್ ಬುಮ್ರಾ ಬದಲಿಗೆ ಹರ್ಷಿತ್ ರಾಣಾ, ಯಶಸ್ವಿ ಜೈಸ್ವಾಲ್ ಬದಲಿಗೆ ವರುಣ್ ಚಕ್ರವರ್ತಿಗೆ ಮಣೆ ಹಾಕಲಾಗಿದೆ.

ಫೆಬ್ರವರಿ 19 ರಿಂದ ಪ್ರಾರಂಭವಾಗುವ ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ (ICC Champions Trophy 2025) ಮುನ್ನವೇ ಭಾರತ ತಂಡಕ್ಕೆ (Indian Cricket Team) ದೊಡ್ಡ ಆಘಾತವಾಗಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಫಿಟ್ನೆಸ್ ಸಮಸ್ಯೆ ಕಾರಣ ಐಸಿಸಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಜನವರಿ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ (BGT 2024-25) ಅಂತಿಮ ಟೆಸ್ಟ್ ಪಂದ್ಯದಲ್ಲಿ ಬೆನ್ನು ನೋವಿನ ಸಮಸ್ಯೆಗೆ ತುತ್ತಾಗಿದ್ದ ಬುಮ್ರಾ, ಇಂಗ್ಲೆಂಡ್ ಸರಣಿಯಿಂದಲೂ (England Series) ಹೊರಬಿದ್ದಿದ್ದರು.
ಚಾಂಪಿಯನ್ಸ್ ಟ್ರೋಫಿಗೆ ಬಿಸಿಸಿಐ ಪರಿಷ್ಕೃತ ತಂಡವನ್ನು ಪ್ರಕಟಿಸಿದ್ದು, ಬುಮ್ರಾ ಹೊರಗುಳಿದಿರುವ ಕುರಿತು ಮಾಹಿತಿ ನೀಡಿದೆ. ಅವರ ಬದಲಿಗೆ ವೇಗಿ ಹರ್ಷಿತ್ ರಾಣಾಗೆ ಮಣೆ ಹಾಕಲಾಗಿದೆ. ಆದರೆ ಅವಕಾಶದ ನಿರೀಕ್ಷೆಯಲ್ಲಿದ್ದ ವೇಗಿ ಮೊಹಮ್ಮದ್ ಸಿರಾಜ್ಗೆ ಮತ್ತೆ ನಿರಾಸೆಯಾಗಿದೆ. ತಂಡದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯೂ ಆಗಿದೆ. ಯಶಸ್ವಿ ಜೈಸ್ವಾಲ್ ಅವರನ್ನೂ ತಂಡದಿಂದ ಹೊರಗಿಟ್ಟು ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಅವಕಾಶ ಕಲ್ಪಿಸಲಾಗಿದೆ. ಹರ್ಷಿತ್, ವರುಣ್ ಇಬ್ಬರೂ ಕೆಕೆಆರ್ ಬೌಲರ್ಸ್.
ವರುಣ್ ಸೇರ್ಪಡೆಯಿಂದ ತಂಡದಲ್ಲಿ ಮೂವರು ಆಲ್ರೌಂಡರ್ಗಳು ಸೇರಿ ಐವರು ಸ್ಪಿನ್ನರ್ಗಳಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿಸಿದ್ದ ತಾತ್ಕಾಲಿಕ ತಂಡದಿಂದ ಹೊರಗಿಟ್ಟ ಬಿಸಿಸಿಐ, ಯಶಸ್ವಿ ಜೈಸ್ವಾಲ್ ಅವರನ್ನು ಪ್ರಯಾಣೇತರ ಆಟಗಾರರ ಪಟ್ಟಿಗೆ ಸೇರಿಸಿದೆ. ಇವರೊಂದಿಗೆ ಮೊಹಮ್ಮದ್ ಸಿರಾಜ್, ಶಿವಂ ದುಬೆ ಕೂಡ ಇದ್ದಾರೆ. ಈ ಮೂವರು ಆಟಗಾರರು ಅಗತ್ಯವಿದ್ದಾಗ ದುಬೈಗೆ ಪ್ರಯಾಣ ಬೆಳೆಸಬಹುದು.
ಮ್ಯಾಚ್ ಫಿಟ್ ಆಗಿಲ್ಲ ಜಸ್ಪ್ರೀತ್ ಬುಮ್ರಾ
ಸಿಡ್ನಿ ಟೆಸ್ಟ್ ಪಂದ್ಯದ ನಡುವೆಯೇ ಬೆನ್ನು ನೋವಿಗೆ ಸಿಲುಕಿದ್ದ ಬುಮ್ರಾಗೆ 5 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದರು. ಇದರಿಂದಾಗಿ ಅವರು ಚಾಂಪಿಯನ್ಸ್ ಟ್ರೋಫಿಗೆ ಮರಳುತ್ತಾರೆ ಎಂದು ಭರವಸೆ ಇತ್ತು. ಆದರೆ ವೇಗಿ ಇನ್ನೂ ಬೆನ್ನು ನೋವಿನಿಂದ ಚೇತರಿಸಿಕೊಂಡಿಲ್ಲ. ಹಾಗಾಗಿ ಬುಮ್ರಾ ಇಲ್ಲದೆ ಭಾರತ ತಂಡ ಮೈದಾನಕ್ಕಿಳಿಯಲಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಸಲಾದ ಸ್ಕ್ಯಾನ್‌ನಲ್ಲಿ ಬುಮ್ರಾ ಬೆನ್ನಿನಲ್ಲಿ ಯಾವುದೇ ಗಂಭೀರ ಸಮಸ್ಯೆ ಕಂಡುಬಂದಿಲ್ಲ. ಆದರೆ ಮ್ಯಾಚ್ ಫಿಟ್ ಆಗಿಲ್ಲ ಎನ್ನಲಾಗಿದೆ.
ಬುಮ್ರಾ ಚೇತರಿಕೆಗೆ ಸಂಬಂಧಿಸಿ ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ನಡೆಸುತ್ತಿದೆ. ಗಾಯದ ಕಾರಣದಿಂದಾಗಿ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಐಸಿಸಿ ಟೂರ್ನಮೆಂಟ್‌ನಿಂದ ಹೊರಬಿದ್ದಿದ್ದಾರೆ. ಇದೇ ಬೆನ್ನಿನ ಗಾಯದಿಂದಾಗಿ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯನ್ನು ಕಳೆದುಕೊಂಡಿದ್ದರು. ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪ್ರಸ್ತುತ ಬುಮ್ರಾ ಯಾವಾಗ ಮೈದಾನಕ್ಕೆ ಮರಳುತ್ತಾರೆ? ಎನ್ನುವುದು ಸಮಯ ನಿಗದಿಯಾಗಿಲ್ಲ. ಆದರೆ ಐಪಿಎಲ್ ಆರಂಭದೊಳಗೆ ಫಿಟ್ ಆಗುವ ನಿರೀಕ್ಷೆ ಇದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತದ ಅಂತಿಮ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.
ಪ್ರಯಾಣೇತರ ಬದಲಿ ಆಟಗಾರರು: ಯಶಸ್ವಿ ಜೈಸ್ವಾಲ್, ಮೊಹಮ್ಮದ್ ಸಿರಾಜ್ ಮತ್ತು ಶಿವಂ ದುಬೆ. ಮೂವರು ಆಟಗಾರರು ಅಗತ್ಯವಿದ್ದಾಗ ದುಬೈಗೆ ಪ್ರಯಾಣಿಸುತ್ತಾರೆ.
ಭಾರತ ತಂಡವು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ಚಾಂಪಿಯನ್ಸ್ ಟ್ರೋಫಿ 2025ರ ಅಭಿಯಾನ ಪ್ರಾರಂಭಿಸಲಿದೆ. ನಂತರ ಫೆಬ್ರವರಿ 23 ರಂದು ಬಹು ನಿರೀಕ್ಷಿತ ಮುಖಾಮುಖಿಯಲ್ಲಿ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಗ್ರೂಪ್ ಎ ಪಂದ್ಯವನ್ನು ಆಡಲಿದೆ.
