ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ; ಹೀನಾಯವಾಗಿ ಸೋತ ಪಾಕಿಸ್ತಾನಕ್ಕೆ ಲೀಗ್​ನಿಂದಲೇ ಹೊರಬೀಳುವ ಆತಂಕ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ; ಹೀನಾಯವಾಗಿ ಸೋತ ಪಾಕಿಸ್ತಾನಕ್ಕೆ ಲೀಗ್​ನಿಂದಲೇ ಹೊರಬೀಳುವ ಆತಂಕ

ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ; ಹೀನಾಯವಾಗಿ ಸೋತ ಪಾಕಿಸ್ತಾನಕ್ಕೆ ಲೀಗ್​ನಿಂದಲೇ ಹೊರಬೀಳುವ ಆತಂಕ

India vs Pakistan: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗುಂಪು ಹಂತದ 19ನೇ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಟೀಮ್ ಇಂಡಿಯಾ 6 ರನ್​ಗಳ ಅಂತರದಿಂದ ಮಣಿಸಿತು. ಮತ್ತೊಂದೆಡೆ ಸೋತ ಪಾಕಿಸ್ತಾನ ಲೀಗ್​​ನಿಂದಲೇ ಹೊರಬೀಳುವ ಆತಂಕಕ್ಕೆ ಸಿಲುಕಿದೆ.

ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ; ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗ, ಲೀಗ್​ನಿಂದಲೇ ಹೊರಬೀಳುವ ಆತಂಕ
ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ; ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗ, ಲೀಗ್​ನಿಂದಲೇ ಹೊರಬೀಳುವ ಆತಂಕ (PTI)

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗುಂಪು ಹಂತದ 19ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ರೋಚಕ 6 ರನ್​ಗಳ ಗೆಲುವು ದಾಖಲಿಸಿತು. ಆ ಮೂಲಕ ಬದ್ಧವೈರಿ ಪಾಕ್ ವಿರುದ್ಧ ಟೀಮ್ ಇಂಡಿಯಾ ಪಾರುಪತ್ಯ ಮುಂದುವರೆಸಿತು. ಲೋ ಸ್ಕೋರಿಂಗ್​ ಪಂದ್ಯದಲ್ಲೂ ಮುಗ್ಗರಿಸಿದ ಬಾಬರ್ ಪಡೆ, ತೀವ್ರ ಮುಖಭಂಗಕ್ಕೆ ಒಳಗಾಯಿತು. ಆದರೆ, ಈ ಸೋಲು ಲೀಗ್​ನಿಂದಲೇ ಹೊರಬೀಳುವ ಆತಂಕಕ್ಕೆ ಸಿಲುಕುವಂತೆ ಮಾಡಿತು. ಭಾರತ ಸತತ 2ನೇ ಗೆಲುವು ದಾಖಲಿಸಿದರೆ, ಪಾಕಿಸ್ತಾನ ಸತತ 2ನೇ ಸೋಲು ಕಂಡಿತು. ಈಗಾಗಲೇ ಅಮೆರಿಕ 2 ಪಂದ್ಯದಲ್ಲಿ ಜಯಿಸಿದೆ. ಹಾಗಾಗಿ ಭಾರತ - ಅಮೆರಿಕ ತಲಾ ಒಂದೊಂದು ಪಂದ್ಯ ಗೆದ್ದಿದ್ದೇ ಆದರೆ ಅಲ್ಲಿಗೆ ಪಾಕಿಸ್ತಾನ ತವರಿಗೆ ಗಂಟು ಮೂಟೆ ಕಟ್ಟಬೇಕಾಗುತ್ತದೆ.

ನ್ಯೂಯಾರ್ಕ್​​ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ನೀರಸ ಪ್ರದರ್ಶನ ನೀಡಿತು. ಪಾಕ್ ಬೌಲರ್​​ಗಳ ಎದುರು ರನ್ ಗಳಿಸಲು ಪರದಾಡಿದ ರೋಹಿತ್ ಪಡೆ, ತನ್ನ ಪಾಲಿನ 20 ಓವರ್​​ಗಳ ಕೋಟಾ ಕೂಡ ಮುಗಿಸಲಿಲ್ಲ. 19 ಓವರ್​​​​ಗಳಲ್ಲೇ 119 ರನ್​ಗಳಿಗೆ ಆಲೌಟ್ ಆಯಿತು. ಸಾಧಾರಣ ಗುರಿ ಹಿಂಬಾಲಿಸಿದ ಪಾಕಿಸ್ತಾನ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಜಸ್ಪ್ರೀತ್ ಬುಮ್ರಾ (3/14) ಖತರ್ನಾಕ್ ಬೌಲಿಂಗ್ ನಡೆಸಿದರು. ಟಿ20 ವಿಶ್ವಕಪ್​ ಇತಿಹಾಸದಲ್ಲಿ ಪಾಕ್ ತಂಡವನ್ನು 7ನೇ ಬಾರಿಗೆ ಸೋಲಿಸಿ ದಾಖಲೆ ಬರೆದಿದೆ.

ಭಾರತೀಯ ಬೌಲರ್​​ಗಳಿಂದ ಅತ್ಯುತ್ತಮ ಪ್ರದರ್ಶನ

ಅಲ್ಪ ಗುರಿ ಬೆನ್ನಟ್ಟಿದ ಪಾಕ್, ಆರಂಭದಲ್ಲೇ ಬಾಬರ್ ಅಜಮ್ (13) ಕಳೆದುಕೊಂಡಿತು. ಪ್ರಾರಂಭದಲ್ಲೇ ಜಸ್ಪ್ರೀತ್ ಬುಮ್ರಾ ವಿಕೆಟ್ ಪಡೆದರೂ ಮುನ್ನಡೆ ತಂದುಕೊಟ್ಟರೂ ಭಾರತ ಕಂಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ. ಬೌಲರ್​​ಗಳು ಆಗಾಗ್ಗೆ ಟೈಟ್ ಬೌಲಿಂಗ್ ನಡೆಸಿದರೂ ವಿಕೆಟ್ ಉರುಳಿಸಲು ಕಷ್ಟಪಟ್ಟರು. ಆರಂಭಿಕ ಮೊಹಮ್ಮದ್ ರಿಜ್ವಾನ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ಪಾಕ್ ತಂಡಕ್ಕೆ ಆಸರೆಯಾದರು. ಒತ್ತಡ ಮುಕ್ತರಾಗಿ ಬ್ಯಾಟ್ ಬೀಸತೊಡಗಿದರು.

ಉಸ್ಮಾನ್ ಖಾನ್ 13, ಫಖಾರ್ ಜಮಾನ್ 13 ರನ್ ಗಳಿಸಿ ಔಟಾದರೂ ತಂಡದ ಮೇಲೆ ಯಾವುದೇ ಪರಿಣಾಮ ಬೀರಿರಲಿಲ್ಲ. ಆದರೆ 31 ರನ್ ಗಳಿಸಿ ಕ್ರೀಸ್​ ಕಚ್ಚಿ ನಿಂತಿದ್ದ ಮೊಹಮ್ಮದ್ ರಿಜ್ವಾನ್, ಜಸ್ಪ್ರೀತ್ ಬುಮ್ರಾ ಸ್ವಿಂಗ್​​​ಗೆ ಕ್ಲೀನ್​​ ಬೋಲ್ಡ್ ಆದರು. ಇದು ಪಾಕ್ ಆತಂಕವನ್ನು ಹೆಚ್ಚಿಸಿತು. ಶಾದಾಬ್ ಖಾನ್ (4) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ ಅಂತಿಮ ಹಂತದಲ್ಲಿ ಇಮಾದ್ ವಾಸೀಂ ಮತ್ತು ಇಫ್ತಿಕಾರ್ ಅಹ್ಮದ್, ಭಾರತೀಯ ಬೌಲರ್​​ಗಳ ದಾಳಿಯನ್ನು ಹಿಮ್ಮೆಟ್ಟಲು ವಿಫಲರಾದರು.

ಕೊನೆಯ ಓವರ್​ 3 ಓವರ್​​​ಗಳಲ್ಲಿ ಪಾಕ್​ಗೆ 30 ರನ್ ಬೇಕಿತ್ತು. ಆದರೆ, 18ನೇ ಓವರ್​​ನಲ್ಲಿ ಸಿರಾಜ್ 9 ರನ್ ಬಿಟ್ಟುಕೊಟ್ಟರು. ಬಳಿಕ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ಕೇವಲ 3 ರನ್ ಬಿಟ್ಟುಕೊಟ್ಟರು.ಕೊನೆಯಲ್ಲಿ ಇಫ್ತಿಕಾರ್​ 9 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದರೆ, ಇಮಾದ್ 23 ಎಸೆತಗಳಲ್ಲಿ 15 ರನ್ ಗಳಿಸಲಷ್ಟೇ ಶಕ್ತರಾದರು. ಅಂತಿಮ ಓವರ್​ನಲ್ಲಿ ಪಾಕ್ ಗೆಲ್ಲಲು 18 ರನ್ ಬೇಕಿತ್ತು. ಆದರೆ 11 ರನ್ ಗಳಿಸಲಷ್ಟೇ ಶಕ್ತವಾಯಿತು. ಅರ್ಷದೀಪ್​ ಅದ್ಭುತ ಬೌಲಿಂಗ್ ನಡೆಸಿದರು. ಬುಮ್ರಾ 4 ಓವರ್​​ಗಳಲ್ಲಿ 13 ಓವರ್​​ಗಳಲ್ಲಿ 3 ವಿಕೆಟ್, ಹಾರ್ದಿಕ್ 4 ಓವರ್​​ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು.

ಭಾರತೀಯ ಬ್ಯಾಟರ್​​​ಗಳ ಪೆವಿಲಿಯನ್ ಪರೇಡ್

ಪ್ರತಿಷ್ಠೆಯ ಕದನದಲ್ಲಿ ಭಾರತೀಯ ಬ್ಯಾಟರ್​​ಗಳು ಕೈ ಎತ್ತಿದರು. ಕಳೆದ ವರ್ಷ ಪಾಕ್ ಎದುರು ಅಬ್ಬರಿಸಿದ್ದ ವಿರಾಟ್ ಕೊಹ್ಲಿ, ಈ ಬಾರಿ ಒಂದಂಕಿಗೆ ಸುಸ್ತಾದರು. ಬೌಂಡರಿ ಸಿಡಿಸಿದ ಅದೇ ಓವರ್​​ನಲ್ಲಿ ಔಟಾದರು. ಮತ್ತೊಂದೆಡೆ ರೋಹಿತ್​ ಶರ್ಮಾ ಅಬ್ಬರಿಸುವ ಭರವಸೆ ಮೂಡಿಸಿದ್ದರ ನಡುವೆಯೂ ನಿರಾಸೆ ಮೂಡಿಸಿದರು. ಅಕ್ಷರ್​ ಪಟೇಲ್ ಬಡ್ತಿ ಪಡೆದು ಕ್ರೀಸ್​ಗೆ ಬಂದರೂ 18 ರನ್ ಗಳಿಸಿ ಔಟಾದರು. ಮತ್ತೊಂದೆಡೆ ರಿಷಭ್ ಪಂತ್ ಮಾತ್ರ ಏಕಾಂಗಿ ಹೋರಾಟ ನಡೆಸಿದರು.

ರಿಷಭ್ ಪಂತ್ ಮತ್ತೊಂದು ಉತ್ತಮ ಇನ್ನಿಂಗ್ಸ್ ಆಡಿದರು. ಕಳೆದ ಪಂದ್ಯದಲ್ಲೇ ಅಜೇಯ 36 ರನ್ ಚಚ್ಚಿದ್ದ ಪಂತ್ ಈ ಪಂದ್ಯದಲ್ಲೂ 31 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 42 ರನ್ ಗಳಿಸಿ ಔಟಾದರು. ಆದರೆ ಉಳಿದ ಬ್ಯಾಟರ್ಸ್ ಎರಡಂಕಿ ದಾಟಲು ಸಾಧ್ಯವಾಗಿಲ್ಲ. ರೋಹಿತ್​ 12, ಪಂತ್ 42, ಅಕ್ಷರ್​​ 18 ರನ್ ಗಳಿಸಿದರು. ವಿರಾಟ್ 4, ಸೂರ್ಯಕುಮಾರ್​ 7, ಶಿವಂ ದುಬೆ 3, ಹಾರ್ದಿಕ್ ಪಾಂಡ್ಯ 7, ಜಡೇಜಾ 0, ಅರ್ಷದೀಪ್ 9, ಸಿರಾಜ್ 7 ರನ್ ಮತ್ತು ಬುಮ್ರಾ ಸೊನ್ನೆ ಸುತ್ತಿದರು.

ಪಾಕ್ ಬೌಲರ್ಸ್ ಮಾರಕ ದಾಳಿ

ಟೀಮ್ ಇಂಡಿಯಾ ಬ್ಯಾಟರ್​​ಗಳು ಪೆವಿಲಿಯನ್ ಪರೇಡ್ ನಡೆಸಿದರೆ, ಪಾಕ್​ ಬೌಲರ್​ಗಳಿ ಅಬ್ಬರಿಸಿದರು. ನಿಧಾನಗತಿಯ ಪಿಚ್​​​ನಲ್ಲಿ ಆರಂಭದಿಂದಲೇ ಭಾರತೀಯ ಬ್ಯಾಟರ್​ಗಳ ರನ್ ನಿಯಂತ್ರಣಕ್ಕೆ ಕಡಿವಾಣ ಹಾಕಿದರು. ನಸೀಮ್ ಶಾ 4 ಓವರ್​​​ಗಳಲ್ಲಿ 21 ರನ್ ನೀಡಿ 3 ವಿಕೆಟ್ ಪಡೆದರೆ, ಹ್ಯಾರಿಸ್ ರೌಫ್ 3 ಓವರ್​ಗಳಲ್ಲಿ 21 ರನ್ ನೀಡಿ 3 ವಿಕೆಟ್ ಕಿತ್ತರು. ಮೊಹಮ್ಮದ್ ಅಮೀರ್ 2, ಶಾಹೀನ್ ಅಫ್ರಿದಿ 1 ವಿಕೆಟ್ ಪಡೆದು ಮಿಂಚಿದರು.

Whats_app_banner