ಪಂದ್ಯದ ನಡುವೆ ಆಸ್ಪತ್ರೆಗೆ ತೆರಳಿದ ಜಸ್ಪ್ರೀತ್ ಬುಮ್ರಾ; ಸಿಡ್ನಿ ಟೆಸ್ಟ್‌ಗೆ ವಿರಾಟ್ ಕೊಹ್ಲಿ‌ ನಾಯಕ
ಕನ್ನಡ ಸುದ್ದಿ  /  ಕ್ರಿಕೆಟ್  /  ಪಂದ್ಯದ ನಡುವೆ ಆಸ್ಪತ್ರೆಗೆ ತೆರಳಿದ ಜಸ್ಪ್ರೀತ್ ಬುಮ್ರಾ; ಸಿಡ್ನಿ ಟೆಸ್ಟ್‌ಗೆ ವಿರಾಟ್ ಕೊಹ್ಲಿ‌ ನಾಯಕ

ಪಂದ್ಯದ ನಡುವೆ ಆಸ್ಪತ್ರೆಗೆ ತೆರಳಿದ ಜಸ್ಪ್ರೀತ್ ಬುಮ್ರಾ; ಸಿಡ್ನಿ ಟೆಸ್ಟ್‌ಗೆ ವಿರಾಟ್ ಕೊಹ್ಲಿ‌ ನಾಯಕ

ಗಾಯದಿಂದಾಗಿ ಸಿಡ್ನಿ ಕ್ರಿಕೆಟ್ ಮೈದಾನದಿಂದ ಜಸ್ಪ್ರೀತ್ ಬುಮ್ರಾ ಕಾರಿನಲ್ಲಿ ಆಸ್ಪತ್ರೆಗೆ ಹೊರಟಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಐದನೇ ಟೆಸ್ಟ್‌ ಪಂದ್ಯಕ್ಕೆ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ. ಬುಮ್ರಾ ಅವರನ್ನು ಸ್ಕ್ಯಾನ್‌ಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸಿಡ್ನಿ ಟೆಸ್ಟ್ ಪಂದ್ಯದ ನಡುವೆ ಆಸ್ಪತ್ರೆ ತೆರಳಿದ ಜಸ್ಪ್ರೀತ್ ಬುಮ್ರಾ
ಸಿಡ್ನಿ ಟೆಸ್ಟ್ ಪಂದ್ಯದ ನಡುವೆ ಆಸ್ಪತ್ರೆ ತೆರಳಿದ ಜಸ್ಪ್ರೀತ್ ಬುಮ್ರಾ (AFP)

ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಟೆಸ್ಟ್‌ ಪಂದ್ಯದ 2ನೇ ದಿನದಾಟದ ನಡುವೆ ಭಾರತ ತಂಡದ ಸ್ಟ್ಯಾಂಡ್-ಇನ್ ನಾಯಕ ಜಸ್ಪ್ರೀತ್ ಬುಮ್ರಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪಂದ್ಯದ ನಡುವೆ ಸಣ್ಣ ಗಾಯದಿಂದಾಗಿ ಮೈದಾನದಿಂದ ಹೊರನಡೆದಿದ್ದ ಬುಮ್ರಾಗೆ ಎಷ್ಟು ಪ್ರಮಾಣದಲ್ಲಿ ಗಾಯಗಳಾಗಿವೆ ಎಂಬ ಸ್ಪಷ್ಟತೆ ಸಿಕ್ಕಿಲ್ಲ. ಆದರೆ, ವಿಶ್ವದ ನಂ.1 ವೇಗದ ಬೌಲರ್ ಸ್ಕ್ಯಾನ್‌ ಮಾಡಿಸುವ ಸಲುವಾಗಿ ವೈದ್ಯರೊಂದಿಗೆ ಮೈದಾನವನ್ನು ತೊರೆದಿದ್ದಾರೆ ಎಂದು ಹಿಂದೂಸ್ತಾನ್‌ ಟೈಮ್ಸ್‌ಗೆ ವಿಶ್ವಾಸಾರ್ಹ ಮೂಲಗಳು ದೃಢಪಡಿಸಿವೆ.

ನಾಯಕನಾಗಿದ್ದ ಬುಮ್ರಾ ಮೈದಾನ ತೊರೆದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ. ಪಂದ್ಯದ ನೇರಪ್ರಸಾರ ಮಾಡುವ ಸ್ಟಾರ್ ಸ್ಪೋಟ್ಸ್‌ನಲ್ಲಿ, ತರಬೇತಿ ಜೆರ್ಸಿ ಧರಿಸಿರುವ ಬುಮ್ರಾ ಅವರನ್ನು ಕಾರಿನಲ್ಲಿ ಕರೆದೊಯ್ಯುವ ದೃಶ್ಯಗಳ‌ನ್ನು ನೋಡಬಹುದು. ಮೈದಾನದಿಂದ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವುದನ್ನು ತೋರಿಸಲಾಗಿದೆ.

ಶನಿವಾರದ ದಿನದಾಟದಲ್ಲಿ ಆರಂಭದಿಂದಲೇ ಆಸೀಸ್‌ ಬ್ಯಾಟರ್‌ಗಳಿಗೆ ಕಂಟಕರಾದ ಬುಮ್ರಾ, ಊಟದ ಸಮಯದಲ್ಲಿ ಮೊದಲ ಬಾರಿಗೆ ಮೈದಾನವನ್ನು ತೊರೆದರು. ವಿರಾಮದ ನಂತರ ಒಂದು ಓವರ್ ಎಸೆಯಲು ಮೈದಾನಕ್ಕೆ ಮರಳಿದರು. ಆದರೆ ಮತ್ತೆ ಮೈದಾನವನ್ನು ತೊರೆದರು. ಆ ಬಳಿಕ ಅವರ ಬದಲಿಗೆ ಬದಲಿ ಫೀಲ್ಡರ್ ಆಗಿ ಅಭಿಮನ್ಯು ಈಶ್ವರನ್ ಕಣಕ್ಕಿಳಿದಿದ್ದಾರೆ.

ಇಲ್ಲಿದೆ ವಿಡಿಯೋ

ಮೈದಾನದಿಂದ ಹೊರಡುವುದಕ್ಕೂ ಮೊದಲು, ಕೊಹ್ಲಿಯೊಂದಿಗೆ ಬುಮ್ರಾ ತ್ವರಿತ ಮಾತುಕತೆ ನಡೆಸಿರುವುದು ಕಂಡುಬಂದಿದೆ. ಬಹುಶಃ, ಬೌಲಿಂಗ್ ಮಾಡುವಾಗ ಅವರಿಗಾದ ಅಸ್ವಸ್ಥತೆಯ ಬಗ್ಗೆ ಕೊಹ್ಲಿಗೆ ಹೇಳಿರುವ ಸಾಧ್ಯತೆ ಇದೆ. ಆ ನಂತರ ಕೊಹ್ಲಿ ನಾಯಕನ ಜವಾಬ್ದಾರಿಯನ್ನು ವಹಿಸಿಕೊಂಡರು.

ಬುಮ್ರಾ ಅವರ ಗಾಯವು ಟೀಮ್‌ ಇಂಡಿಯಾ ಹಾಗೂ ಅಭಿಮಾನಿಗಳಿಗೆ ಚಿಂತೆಯಾಗಿದೆ. ಈ ಟೆಸ್ಟ್ ಪಂದ್ಯ ಗೆದ್ದು ಬಾರ್ಡರ್-ಗವಾಸ್ಕರ್‌ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳಲು ಗೆಲುವು ಅನಿವಾರ್ಯವಾಗಿದೆ. ಬುಮ್ರಾ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿದ್ದು, ಸರಣಿಯ ಕೊನೆಯ ಇನ್ನಿಂಗ್ಸ್‌ ವೇಳೆ ಅವರ ಅಗತ್ಯ ತಂಡಕ್ಕಿದೆ.

ದಾಖಲೆಯ ಬೌಲಿಂಗ್

ಎರಡನೇ ದಿನದಾಟದ ಆರಂಭದಲ್ಲಿಯೇ ಮಾರ್ನಸ್ ಲಬುಶೇನ್ ವಿಕೆಟ್‌ ಪಡೆಯುವ ಮೂಲಕ ಭಾರತಕ್ಕೆ ಉತ್ತಮ ಆರಂಭ ತಂದುಕೊಟ್ಟರು. ಇದು ಪ್ರಸಕ್ತ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ ಅವರ 32ನೇ ವಿಕೆಟ್. ಆ ಮೂಲಕ ಆಸ್ಟ್ರೇಲಿಯಾದಲ್ಲಿ ಒಂದೇ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತೀಯ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕ್ರಿಕೆಟ್‌ ದಂತಕಥೆ ಬಿಷನ್ ಸಿಂಗ್ ಬೇಡಿ ಅವರ ದೀರ್ಘಕಾಲದ ದಾಖಲೆಯನ್ನು ಮುರಿದರು. ಮಾಜಿ ಎಡಗೈ ಸ್ಪಿನ್ನರ್ 1977-78ರ ಋತುವಿನಲ್ಲಿ 31 ವಿಕೆಟ್ ಪಡೆದಿದ್ದರು.

ಭಾರತ ಮುನ್ನಡೆ

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಕೂಡಾ ಅಲ್ಪಮೊತ್ತಕ್ಕೆ ಆಲೌಟ್‌ ಆಗಿದೆ. ಭಾರತವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 185 ರನ್‌ ಗಳಿಸಿತ್ತು. ಆ ಬಳಿಕ ಆಸೀಸ್‌ ಕೂಡಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 181 ರನ್‌ ಮಾತ್ರ ಗಳಿಸಿದೆ. ಇದರೊಂದಿಗೆ ಭಾರತ 4 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ದೊಡ್ಡ ಮೊತ್ತ‌ ಕಲೆ ಹಾಕಬೇಕಿದೆ. 

Whats_app_banner