ಜಸ್ಪ್ರೀತ್ ಬುಮ್ರಾ ಮಾರಕ ದಾಳಿ; ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 253 ರನ್‌ಗೆ ಆಲೌಟ್, 143 ರನ್ ಮುನ್ನಡೆಯಲ್ಲಿ ಭಾರತ
India vs England 2nd Test: ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಬೆನ್ ಸ್ಟೋಕ್ಸ್ ಬಳಗವು ಕೇವಲ 253 ರನ್‌ಗಳಿಗೆ ಆಲೌಟ್ ಆಗಿದೆ. ಭಾರತ 143 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.
ಭಾರತ ಮತ್ತು ಇಂಗೆಂಡ್ (India vs England, 2nd Test) ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು ರೋಚಕ ಹಂತ ತಲುಪಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದ ಬೆನ್ನಲ್ಲೇ, ಒಂದೇ ದಿನದೊಳಗೆ ಇಂಗ್ಲೆಂಡ್ ಕೂಡಾ ಮೊದಲ ಇನ್ನಿಂಗ್ಸ್‌ನಲ್ಲಿ ಆಲೌಟ್ ಆಗಿದೆ. ಆ ಮೂಲಕ ಭಾರಿ ಹಿನ್ನಡೆಯೊಂದಿಗೆ ಭಾರತದ ಎರಡನೇ ಇನ್ನಿಂಗ್ಸ್‌ಗೆ ದಾರಿ ಮಾಡಿಕೊಟ್ಟಿದೆ.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ, ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು 112 ಓವರ್‌ಗಳಲ್ಲಿ 396 ರನ್ ಗಳಿಸಿ ಆಲೌಟ್ ಆಯ್ತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಚೊಚ್ಚಲ ದ್ವಿಶತಕದ (209) ನೆರವಿನಿಂದ ಟೀಮ್ ಇಂಡಿಯಾ ಉತ್ತಮ ಮೊತ್ತ ಕಲೆ ಹಾಕಿತು. ಆ ಬೆನ್ನಲ್ಲೇ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್, ದಿನದಾಟ ಅಂತ್ಯಗೊಳ್ಳುವ ಮುನ್ನವೇ 55.5 ಓವರ್‌ಗಳಲ್ಲಿ 253 ರನ್ ಗಳಿಸಿ ಆಲೌಟ್ ಆಗಿದೆ. ಆ ಮೂಲಕ ಭಾರತ ತಂಡವು 143 ರನ್‌ಗಳ ಮುನ್ನಡೆ ಸಾಧಿಸಿದೆ.
ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಿದ ಆರಂಭಿಕರಾದ ಜಾಕ್ ಕ್ರಾಲೆ, ವೇಗದ ಆಟಕ್ಕೆ ಕೈ ಹಾಕಿದರು. 77 ಎಸೆತಗಳಲ್ಲಿ 11 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ 76 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್ ಮ್ಯಾಜಿಕ್ ಮಾಡಿದರು. ಅಕ್ಷರ್ ಎಸೆದ ಫುಲ್ ಡೆಲಿವರಿಗೆ ದೊಡ್ಡ ಹೊಡೆತಕ್ಕೆ ಮುಂದಾದ ಕ್ರಾಲೆ, ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ನೀಡಿದರು. ವೇಗವಾಗಿ ಹಿಂದಕ್ಕೆ ಓಡಿ ಸಮಯೋಚಿತವಾಗಿ ಡೈವ್ ಹೊಡೆದು ಕ್ಯಾಚ್ ಹಿಡಿದ ಅಯ್ಯರ್, ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು.
ಇದನ್ನೂ ಓದಿ | Video: ಹಿಮ್ಮುಖವಾಗಿ ಓಡಿ ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್; ನೆನಪಾಯ್ತು ವಿಶ್ವಕಪ್ ಫೈನಲ್ ಪಂದ್ಯ
ಆರಂಭಿಕ ಆಟಗಾರ ಬೆನ್ ಡಕೆಟ್ 21 ರನ್ ಗಳಿಸಿ ಔಟಾದರು. ಅನುಭವಿ ಆಟಗಾರ ಜೋ ರೂಟ್ ಕೇವಲ 5 ರನ್ ಗಳಿಸಿ ಬುಮ್ರಾ ಎಸೆತದಲ್ಲಿ ಶುಭ್ಮನ್ ಗಿಲ್‌ಗೆ ಕ್ಯಾಚ್ ನೀಡಿ ಔಟಾದರು. ಆ ಬಳಿಕ ಓಲಿ ಪೋಪ್ 23 ರನ್ ಗಳಿಸಿ ಕ್ಲೀನ್ ಬೋಲ್ಡ್ ಆದರು. ಜಾನಿ ಬೇರ್‌ಸ್ಟೋ ಆಟ 25 ರನ್‌ಗೆ ಅಂತ್ಯವಾದರೆ, 6 ರನ್ ಗಳಿಸಿದ್ದ ಬೆನ್ ಫೋಕ್ಸ್ ಕುಲ್ದೀಪ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಟಾಮ್ ಹಾರ್ಟ್ಲೆ 21 ರನ್ ಗಳಿಸಿದರೆ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ 47 ರನ್ ಗಳಿಸಿದ್ದಾಗ ಬುಮ್ರಾ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಅಂತಿಮವಾಗಿ ಜೇಮ್ಸ್ ಆಂಡರ್‌ಸನ್ ಎಲ್‌ಬಿಡಬ್ಲ್ಯೂ ಬಲೆಗೆ ಬೀಳುವುದರೊಂದಿಗೆ ತಂಡ ಆಲೌಟ್ ಆಯ್ತು.
ಭಾರತದ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ವೇಗಿ ಜಸ್ಪ್ರೀತ್ ಬುಮ್ರಾ, ಕೇವಲ 45 ರನ್ ಬಿಟ್ಟುಕೊಟ್ಟು 6 ವಿಕೆಟ್ ಕಬಳಿಸಿದರು. ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರೆ, ಅಕ್ಷರ್ ಒಂದು ವಿಕೆಟ್ ಖಾತೆಗೆ ಹಾಕಿಕೊಂಡರು.
ಇದನ್ನೂ ಓದಿ | ಅನುಭವಿಗಳು ವೈಫಲ್ಯ, ಅನಾನುಭವಿ ಯಶಸ್ವಿ ಜೈಸ್ವಾಲ್ ದ್ವಿಶತಕ; ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 396 ರನ್
ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿದ್ದ ಭಾರತ, ಎರಡನೇ ದಿನ ಇನ್ನಿಂಗ್ಸ್ ಮುಂದುವರೆಸಿತು. ಯಶಸ್ವಿ ಜೈಸ್ವಾಲ್ ಸ್ಫೋಟಕ ಆಟ ಮುಂದುವರೆಸಿದರು. ಸತತ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದ ಜೈಸ್ವಾಲ್, ತಮ್ಮ ಚೊಚ್ಚಲ ದ್ವಿಶಕ ಸಿಡಿಸಿ ದಾಖಲೆ ಬರೆದರು. 290 ಎಸೆತಗಳಲ್ಲಿ 19 ಬೌಂಡರಿ, 7 ಸಿಕ್ಸರ್ ಸಹಿತ 209 ರನ್ ಗಳಿಸಿದರು. ಅಂತಿಮವಾಗಿ ಆಂಡರ್ಸನ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಜಾನಿ ಬೈರ್ಸ್ಟೋಗೆ ಕ್ಯಾಚ್ ನೀಡಿದರು.
ಇದನ್ನೂ ಓದಿ | ಹೀಗಾಗುತ್ತೆ ಎಂದು ಮೊದಲೇ ಗೊತ್ತಿತ್ತು; ವೀಸಾ ವಿಳಂಬ ಕುರಿತು ಮೌನ ಮುರಿದ ಸ್ಪಿನ್ನರ್ ಶೋಯೆಬ್ ಬಶೀರ್
(This copy first appeared in Hindustan Times Kannada website. To read more like this please logon to kannada.hindustantime.com)