ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ಗೆ ಜಸ್ಪ್ರೀತ್ ಬುಮ್ರಾ ನಾಯಕ; ರೋಹಿತ್ ಆಡದಿದ್ದರೆ ಕೆಎಲ್ ರಾಹುಲ್ ಓಪನಿಂಗ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡದಿದ್ದರೆ, ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಇದೇ ವೇಳೆ ಕನ್ನಡಿಗ ಕೆಎಲ್ ರಾಹುಲ್ ಇನ್ನಿಂಗ್ಸ್ ಓಪನಿಂಗ್ ಮಾಡಲಿದ್ದಾರೆ ಎಂದು ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ನವೆಂಬರ್ 22ರಿಂದ ಬಹುನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆರಂಭವಾಗುತ್ತಿದೆ. ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಮುಗ್ಗರಿಸಿರುವ ಭಾರತ, ಮಹತ್ವದ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರ ಹಾಕಿಕೊಂಡಿದೆ. ಆದರೆ, ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವೈಯಕ್ತಿಕ ಕಾರಣಗಳಿಂದಾಗಿ ಮೊದಲ ಟೆಸ್ಟ್‌ಗೆ ಅಲಭ್ಯರಾಗುವ ಸಾಧ್ಯತೆ ಇದೆ. ಹಿಟ್‌ಮ್ಯಾನ್ ಅಲಭ್ಯರಾದರೆ, ಪರ್ತ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಸೋಮವಾರ ಹೇಳಿದ್ದಾರೆ.
ಆರಂಭಿಕ ಆಟಗಾರ ರೋಹಿತ್ ಬದಲಿಗೆ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಹುದು ಎಂದು ಗಂಭೀರ್ ಸುಳಿವು ನೀಡಿದ್ದಾರೆ. ಭಾರತೀಯ ಆಟಗಾರರ ಮೊದಲ ಬ್ಯಾಚ್ ಈಗಾಗಲೇ ಆಸೀಸ್ ತಲುಪಿದ್ದು, ಎರಡನೇ ಬ್ಯಾಚ್ ತೆರಳುತ್ತಿದೆ. ಆದರೆ ರೋಹಿತ್ ಶರ್ಮಾ ಪ್ರಯಾಣಿಸಿಲ್ಲ. ಹೀಗಾಗಿ ಸರಣಿಯ ಆರಂಭಿಕ ಪಂದ್ಯದಲ್ಲಿ ರೋಹಿತ್ ಆಡುವುದು ಈಗಲೇ ಅನಿಶ್ಚಿತವಾಗಿದೆ.
“ಸದ್ಯಕ್ಕೆ ಯಾವುದೂ ಸ್ಪಷ್ಟವಿಲ್ಲ. ಪರಿಸ್ಥಿತಿ ಏನು ಎಂಬುದನ್ನು ನಾವು ನಿಮಗೆ ಮುಂದೆ ತಿಳಿಸುತ್ತೇವೆ. ರೋಹಿತ್ ಮೊದಲ ಪಂದ್ಯಕ್ಕೆ ಲಭ್ಯವಿರುತ್ತಾರೆ ಎಂದು ನಾವು ಆಶಿಸುತ್ತೇವೆ. ಸದ್ಯ ಬುಮ್ರಾ ತಂಡದ ಉಪನಾಯಕರಾಗಿದ್ದಾರೆ. ಹೀಗಾಗಿ ರೋಹಿತ್ ಲಭ್ಯವಿಲ್ಲದಿದ್ದರೆ, ಬುಮ್ರಾ ಪರ್ತ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ” ಎಂದು ಕೋಚ್ ಹೇಳಿದರು.
ರೋಹಿತ್ ಅನುಪಸ್ಥಿತಿಯಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಒಂದು ಸ್ಥಾನ ಖಾಲಿ ಉಳಿಯುತ್ತದೆ. ಆಗ ಕನ್ನಡಿಗ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಎ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಎ ಪರ ಆಡಿದ ಅನ್‌ಕ್ಯಾಪ್ಡ್ ಆಟಗಾರ ಅಭಿಮನ್ಯು ಈಶ್ವರನ್ ಮತ್ತು ಕೆಎಲ್ ರಾಹುಲ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುವುದು ಎಂದು ಗಂಭೀರ್ ಹೇಳಿದರು.
ಈಶ್ವರನ್ ಹಾಗೂ ಕೆಎಲ್ ರಾಹುಲ್
“ಖಂಡಿತವಾಗಿಯೂ ಈಶ್ವರನ್ ಹಾಗೂ ಕೆಎಲ್ ಇದ್ದಾರೆ. ರೋಹಿತ್ ಲಭ್ಯವಿಲ್ಲದಿದ್ದರೆ ನಾವು ಮೊದಲ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಒಬ್ಬರನ್ನು ಕರೆಸಿಕೊಳ್ಳುತ್ತೇವೆ,” ಎಂದು ಅವರು ಹೇಳಿದರು.
ರಾಹುಲ್ ಅವರ ಅನುಭವವು ಈಶ್ವರನ್ ಅವರ ಪ್ರಸ್ತುತ ಫಾರ್ಮ್‌ಗಿಂತ ಮೇಲುಗೈ ಸಾಧಿಸಬಹುದು ಎಂದು ಅವರು ಸುಳಿವು ನೀಡಿದರು, “ಅನುಭವಿ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು. ರಾಹುಲ್ ನಿಜವಾಗಿಯೂ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲರು. ಇದೇ ವೇಳೆ 3ನೇ ಕ್ರಮಾಂಕದಲ್ಲಿ ಮತ್ತು 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದು," ಎಂದು ಗೌತಿ ತಿಳಿಸಿದ್ದಾರೆ.
ಕಿವೀಸ್ ವಿರುದ್ಧದ ಸರಣಿಯನ್ನು 3-0 ಅಂತರದಿಂದ ಸೋತಿರುವ ಭಾರತ, ಸತತ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಬೇಕೆಂದರೆ ಆಸೀಸ್ ವಿರುದ್ಧದ ಸರಣಿಯನ್ನು 4-0 ಅಂತರದಿಂದ ಗೆಲ್ಲಬೇಕಾಗಿದೆ.
ಎರಡನೇ ಟೆಸ್ಟ್ ಪಂದ್ಯವು ಡಿಸೆಂಬರ್ 6ರಿಂದ 10ರವರೆಗೆ ಅಡಿಲೇಡ್ ಓವಲ್‌ನಲ್ಲಿ ನಡೆಯಲಿದೆ. ಡಿಸೆಂಬರ್ 14ರಿಂದ 18ರವರೆಗೆ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯಲಿದೆ. ಡಿಸೆಂಬರ್ 26ರಿಂದ 30ರವರೆಗೆ ಮೆಲ್ಬೋರ್ನ್‌ನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಾಲ್ಕನೇ ಟೆಸ್ಟ್ ನಿಗದಿಯಾಗಿದೆ. ಐದನೇ ಮತ್ತು ಅಂತಿಮ ಟೆಸ್ಟ್ ಜನವರಿ 3ರಿಂದ 7ರವರೆಗೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಬಾರ್ಡರ್-ಗವಾಸ್ಕರ್ ಸರಣಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಅಭಿಮನ್ಯು ಈಶ್ವರನ್, ಶುಭಮನ್ ಗಿಲ್, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ವಿರಾಟ್ ಕೊಹ್ಲಿ, ಪ್ರಸಿದ್ಧ್ ಕೃಷ್ಣ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.