ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಅಲಭ್ಯ? 15 ಸದಸ್ಯರ ತಂಡದಲ್ಲಿ ಸೇರ್ಪಡೆ ಅನಿಶ್ಚಿತ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಅಲಭ್ಯ? 15 ಸದಸ್ಯರ ತಂಡದಲ್ಲಿ ಸೇರ್ಪಡೆ ಅನಿಶ್ಚಿತ

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಅಲಭ್ಯ? 15 ಸದಸ್ಯರ ತಂಡದಲ್ಲಿ ಸೇರ್ಪಡೆ ಅನಿಶ್ಚಿತ

Jasprit Bumrah: ಬೆನ್ನು ನೋವಿನ ಸಮಸ್ಯೆಯ ಕಾರಣ ವೇಗಿ ಜಸ್ಪ್ರೀತ್ ಬುಮ್ರಾ ಅವರು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಗುಂಪು ಹಂತದ ಪಂದ್ಯಗಳನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಅಲಭ್ಯ? 15 ಸದಸ್ಯರ ತಂಡದಲ್ಲಿ ಸೇರ್ಪಡೆ ಅನಿಶ್ಚಿತ
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಜಸ್ಪ್ರೀತ್ ಬುಮ್ರಾ ಅಲಭ್ಯ? 15 ಸದಸ್ಯರ ತಂಡದಲ್ಲಿ ಸೇರ್ಪಡೆ ಅನಿಶ್ಚಿತ (HT_PRINT)

ನವದೆಹಲಿ: ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರು ಬೆನ್ನು ನೋವಿನ ಸಮಸ್ಯೆ ಕಾರಣ ಮುಂಬರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಗುಂಪು ಹಂತದ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದು ಇಂಡಿಯನ್ ಎಕ್ಸ್​​ಪ್ರೆಸ್​ ವರದಿ ಮಾಡಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನ ತರಬೇತಿ ಪಡೆಯುವಂತೆ ಬುಮ್ರಾಗೆ ಬಿಸಿಸಿಐ ಸೂಚಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎನ್​ಸಿಎನಲ್ಲಿ ವೈದ್ಯಕೀಯ ತಂಡವು ಮೇಲ್ವಿಚಾರಣೆ ನಡೆಸಲಿದೆ.

ವೈದ್ಯಕೀಯ ವರದಿಯಲ್ಲಿ ಬೆನ್ನಿನ ಮೇಲೆ ಊತ ಬಂದಿರುವುದು ಗೊತ್ತಾಗಿದೆ. ಹೀಗಾಗಿ, ಜಸ್ಪ್ರೀತ್ ಬುಮ್ರಾ ಅವರು ಪುನರ್ವಸತಿಗೆ ಎನ್​ಸಿಎಗೆ ಹೋಗಲಿದ್ದಾರೆ. ಎನ್​ಸಿಎನಲ್ಲಿ 3 ವಾರಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ. ಅದರ ನಂತರ ಬುಮ್ರಾ ತಮ್ಮ ಪಂದ್ಯದ ಫಿಟ್​ನೆಸ್​ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದೆ.​ ಅದಕ್ಕಾಗಿ ಆಯೋಜಿಸುವ ಅಭ್ಯಾಸ ಪಂದ್ಯ ಆಡಬೇಕಾಗುತ್ತದೆ. ಒಂದು ಅಥವಾ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಬೇಕಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇಂಗ್ಲೆಂಡ್​​ ವಿರುದ್ಧ ಸೀಮಿತ ಓವರ್​​ಗಳ ಸರಣಿಗೆ ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಆಯ್ಕೆ ಮಾಡಲು ಶನಿವಾರ (ಜ 11) ಮುಂಬೈನಲ್ಲಿ ಜರುಗಿದ ಸಭೆಯಲ್ಲಿ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಅಧಿಕಾರಿಗಳು ಬುಮ್ರಾ ಫಿಟ್​​ನೆಸ್​ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದರು. ಚಾಂಪಿಯನ್ಸ್ ಟ್ರೋಫಿಗಾಗಿ 15 ಸದಸ್ಯರ ತಂಡದಲ್ಲಿ ಬುಮ್ರಾ ಅವರನ್ನು ಸೇರಿಸಬೇಕೇ ಅಥವಾ ಟೂರ್ನಿಗೆ ಮೀಸಲು ಆಟಗಾರರ ಪಟ್ಟಿಗೆ ಸೇರಿಸಬೇಕೇ ಎನ್ನುವ ಗೊಂದಲಕ್ಕೆ ಆಯ್ಕೆ ಸಮಿತಿ ಸಿಲುಕಿದೆ ಎಂದು ವರದಿಯಾಗಿದೆ. ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಬುಮ್ರಾಗೆ ಬೆನ್ನುನೋವು ಕಾಣಿಸಿಕೊಂಡಿದ್ದು ಯಾವಾಗ?

ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಮತ್ತು ಅಂತಿಮ ಟೆಸ್ಟ್​​​ನಲ್ಲಿ ಬುಮ್ರಾ ಅವರ ಬೆನ್ನುನೋವು ಮುನ್ನೆಲೆಗೆ ಬಂದಿತು. ಆಸ್ಟ್ರೇಲಿಯಾ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯದಲ್ಲಿ ರೋಹಿತ್​ ಶರ್ಮಾ ಅಲಭ್ಯತೆಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಬುಮ್ರಾ, ಮೊದಲ ಇನ್ನಿಂಗ್ಸ್​​​​ನಲ್ಲಿ ಬೌಲಿಂಗ್​ ಮಾಡುವಾಗ ಬೆನ್ನು ನೋವು ಕಾಣಿಸಿಕೊಂಡಿತು. ಹೀಗಾಗಿ ಅವರು ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದರಾದರೂ, ಬೌಲಿಂಗ್ ಮಾಡಲಿಲ್ಲ. ಅವರು ಆಸ್ಪತ್ರೆಗೆ ಹೋಗಿದ್ದ ಚಿತ್ರಗಳು, ವಿಡಿಯೋಗಳು ವೈರಲ್ ಆಗಿದ್ದವು.

ಫೆಬ್ರವರಿ 19ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭ

2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಫೆಬ್ರವರಿ 19ರಿಂದ ಆರಂಭವಾಗಲಿದೆ. ಮಾರ್ಚ್ 4 ಮತ್ತು 5 ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲಿದೆ. ಹೈಬ್ರಿಡ್ ಸ್ವರೂಪದಲ್ಲಿ ಟೂರ್ನಿ ನಡೆಯಲಿದ್ದು, ಭಾರತದ ಪಂದ್ಯಗಳು ದುಬೈನಲ್ಲಿ ಮತ್ತು ಉಳಿದ ಎಲ್ಲಾ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ.

'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಫೆಬ್ರವರಿ 20ರಂದು ಬಾಂಗ್ಲಾದೇಶ, ಫೆಬ್ರವರಿ 23ರಂದು ಪಾಕಿಸ್ತಾನ ಹಾಗೂ ಮಾರ್ಚ್ 2ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. 'ಬಿ' ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ. ಚಾಂಪಿಯನ್ಸ್ ಟ್ರೋಫಿಗೆ ತಾತ್ಕಾಲಿಕ ತಂಡವನ್ನು ಸಲ್ಲಿಸಲು ಕೊನೆಯ ದಿನಾಂಕ ಜನವರಿ 12. ಆದರೆ, ತನ್ನ ತಂಡವನ್ನು ತಡವಾಗಿ ಸಲ್ಲಿಸುವುದಾಗಿ ಐಸಿಸಿಗೆ ಬಿಸಿಸಿಐ ಮನವಿ ಮಾಡಿದೆ ಎಂದು ವರದಿಯಾಗಿದೆ.

Whats_app_banner