ಜಸ್ಪ್ರೀತ್ ಬುಮ್ರಾ ನಾಯಕನಾಗಲು ಗಾಯಗಳೇ ಅಡ್ಡಿ? ರೋಹಿತ್ ಶರ್ಮಾ ಉತ್ತರಾಧಿಕಾರಿಯ ರೇಸ್ನಲ್ಲಿ ಇಬ್ಬರ ಹೆಸರು
Jasprit Bumrah: ಮೈದಾನದಲ್ಲಿ ಪದೆಪದೇ ಗಾಯದ ಸಮಸ್ಯೆಗಳಿಗೆ ತುತ್ತಾಗುತ್ತಿರುವ ಜಸ್ಪ್ರೀತ್ ಬುಮ್ರಾ ಅವರಿಗೆ ಜವಾಬ್ದಾರಿ ವಹಿಸಿದರೆ, ತಂಡಕ್ಕೆ ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸೋಲಿನ ನಂತರ ರೋಹಿತ್ ಶರ್ಮಾ ಭವಿಷ್ಯ ಅಡಕತ್ತರಿಯಲ್ಲಿ ಸಿಲುಕಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದ ನಾಯಕತ್ವ ಬದಲಾಗಲಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ. ರೋಹಿತ್ ಅವರನ್ನು ಕೈಬಿಟ್ಟು ಜಸ್ಪ್ರೀತ್ ಬುಮ್ರಾಗೆ ಪಟ್ಟ ಕಟ್ಟಬಹುದು ಎಂದು ವರದಿಯಾಗಿದೆ. ಪಿಟಿಐ ವರದಿಯ ಪ್ರಕಾರ, ರೋಹಿತ್ ನಂತರ ಬುಮ್ರಾ ಭಾರತ ತಂಡದ ಟೆಸ್ಟ್ ನಾಯಕನಾಗಿ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಬಿಜಿಟಿ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಮುನ್ನಡೆಸಿ ಸೈ ಎನಿಸಿಕೊಂಡಿರುವ ಅವರೇ ಭವಿಷ್ಯದ ನಾಯಕ ಎನ್ನಲಾಗ್ತಿದೆ. ಆದರೆ ಖಾಯಂ ನಾಯಕನಾಗುವುದಕ್ಕೂ ಮುನ್ನವೇ ಬುಮ್ರಾ ನಾಯಕತ್ವ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದೆ. ಅದಕ್ಕೆ ಕಾರಣ ಫಿಟ್ನೆಸ್ ಸಮಸ್ಯೆ.
ಮೈದಾನದಲ್ಲಿ ಪದೆಪದೇ ಗಾಯದ ಸಮಸ್ಯೆಗಳಿಗೆ ತುತ್ತಾಗುತ್ತಿರುವ ಬುಮ್ರಾ ಅವರಿಗೆ ಜವಾಬ್ದಾರಿ ನೀಡಿದರೆ, ತಂಡಕ್ಕೆ ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಬಿಜಿಟಿ ಸರಣಿಯ ಕೊನೆಯ ಪಂದ್ಯದಲ್ಲಿ ಬೆನ್ನು ನೋವಿನ ಸಮಸ್ಯೆಗೆ ತುತ್ತಾದ ಯಾರ್ಕರ್ ಸ್ಪೆಷಲಿಸ್ಟ್, ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ಬೆನ್ನಿನ ಊತ ಕಡಿಮೆಯಾದರೂ ಬೌಲಿಂಗ್ ಮಾಡಲು ಕಷ್ಟಕರ. ಹೀಗಿದ್ದಾಗ ಖಾಯಂ ನಾಯಕತ್ವದ ಜವಾಬ್ದಾರಿಗಳನ್ನು ಹೊರುವ ಅವರ ಸಾಮರ್ಥ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ. ಈ ಹಿಂದೆಯೂ ಬೆನ್ನುನೋವಿನ ಸಮಸ್ಯೆ ಕಾರಣ ಹಲವು ಸರಣಿಗಳಿಗೆ ಅಲಭ್ಯರಾಗಿದ್ದರು. ಒಂದು ವೇಳೆ ನಾಯಕನಾದರೆ ನೇಮಕಗೊಂಡರೆ ಹೀಗೆ ಪದೆಪದೇ ಗಾಯಗೊಂಡರೆ ಹೇಗೆ ಎಂಬುದು ಹಲವರ ಪ್ರಶ್ನೆ.
ಉಪನಾಯಕತ್ವಕ್ಕೆ ಪಂತ್ vs ಜೈಸ್ವಾಲ್ ನಡುವೆ ಪೈಪೋಟಿ
ಭಾರತದ ವೇಗದ ದಾಳಿಯ ನಿರ್ಣಾಯಕ ಭಾಗವಾಗಿರುವ ಬುಮ್ರಾ ಅವರನ್ನು ಖಾಯಂ ಟೆಸ್ಟ್ ನಾಯಕನಾಗಿ ಅವಲಂಬಿಸಬಹುದೇ ಎಂಬ ಪ್ರಶ್ನೆ ಆಯ್ಕೆದಾರರಲ್ಲಿ ಮೂಡಿದೆ. ವಿಶೇಷವಾಗಿ ರೋಹಿತ್ ಅಧಿಕಾರಾವಧಿ ಕೊನೆಗೊಳ್ಳುತ್ತಿರುವ ಹಿನ್ನೆಲೆ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ನಡೆಸುತ್ತಿರುವ ಸೆಲೆಕ್ಟರ್ಸ್,ಜೊತೆಗೆ ಉಪನಾಯಕನನ್ನೂ ಹುಡುಕುವತ್ತ ಗಮನ ಹರಿಸಿದ್ದಾರೆ. ಪ್ರಸ್ತುತ ರಿಷಭ್ ಪಂತ್ ಮತ್ತು ಯಶಸ್ವಿ ಜೈಸ್ವಾಲ್ ಇಬ್ಬರನ್ನು ಉಪನಾಯಕನ ಪಾತ್ರಕ್ಕೆ ಪರಿಗಣಿಸಲಾಗುತ್ತಿದೆ. ಈ ಪೈಕಿ ರಿಷಭ್ ಪಂತ್ ಹೆಚ್ಚು ಸಂಭವನೀಯ ಅಭ್ಯರ್ಥಿಯಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆದಿದೆ. ಮೀಟಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯ ಬಗ್ಗೆಯೇ ಹೆಚ್ಚು ಚರ್ಚೆ ನಡೆದಿದೆ ಎಂದು ವರದಿಯಾಗಿದೆ. ಇದು ಬುಮ್ರಾ ಫಿಟ್ನೆಸ್ ಸುತ್ತಲಿನ ಅನಿಶ್ಚಿತತೆಯು ದೀರ್ಘಾವಧಿಯಲ್ಲಿ ತಂಡವನ್ನು ಮುನ್ನಡೆಸುವ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ.
ಇದನ್ನೂ ಓದಿ: ಜಯ್ ಶಾ ಸ್ಥಾನ ತುಂಬಿದ ದೇವಜಿತ್ ಸೈಕಿಯಾ ಯಾರು?
ವಯಸ್ಸಾದಂತೆ ಗಾಯಗಳು ಹೆಚ್ಚು
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 32 ವಿಕೆಟ್ ಉರುಳಿಸಿ ಸರಣಿ ಶ್ರೇಷ್ಠ ಗೆದ್ದಿರುವ ಬುಮ್ರಾ, ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ. ಬುಮ್ರಾಗೆ ವಯಸ್ಸಾದಂತೆ ಗಾಯಗಳು ಹೆಚ್ಚಾಗುತ್ತವೆ. ಹೀಗಾಗಿ ಅವರು ದೀರ್ಘಕಾಲ ಫಿಟ್ ಆಗಿ ಉಳಿಯಬಹುದೇ ಎಂಬ ಕಳವಳ ಉಂಟಾಗಿದೆ. 30 ವರ್ಷದ ಬುಮ್ರಾ, ಟೆಸ್ಟ್ ಚಾಂಪಿಯನ್ಶಿಪ್, ಚಾಂಪಿಯನ್ಸ್ ಟ್ರೋಫಿ, ವಿಶ್ವಕಪ್ನಂತಹ ಐಸಿಸಿ ಟೂರ್ನಿಗಳಲ್ಲಿ ತಮ್ಮ ದೇಹವನ್ನು ಫಿಟ್ ಆಗಿಡುವುದೇ ದೊಡ್ಡ ಸವಾಲಾಗಿದೆ. ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಬುಮ್ರಾ ಅವರನ್ನೇ ನಾಯಕನಾಗಿ ನೇಮಕ ಮಾಡಬೇಕಾ? ಅಥವಾ ಉಪನಾಯಕತ್ವಕ್ಕೆ ಸಜ್ಜುಗೊಳಿಸಬೇಕಾದ ಆಟಗಾರರನ್ನೇ ನಾಯಕತ್ವಕ್ಕೆ ಸಿದ್ಧಪಡಿಸಬೇಕಾ ಎಂಬ ಚರ್ಚೆ ಬಿಸಿಸಿಐ ವಲಯದಲ್ಲಿ ನಡೆಯುತ್ತಿದೆ ಎಂದು ವರದಿಯಾಗಿದೆ.
