ಜಸ್ಪ್ರೀತ್ ಬುಮ್ರಾ ಫಿಟ್ ಇದ್ದರೂ ಆಯ್ಕೆ ಮಾಡಲಿಲ್ಲವೇಕೆ ಅಜಿತ್ ಅಗರ್ಕರ್? ಕಾರಣ ಬಿಚ್ಚಿಟ್ಟ ಬಿಸಿಸಿಐ ಅಧಿಕಾರಿ
Jasprit Bumrah: ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರ ವೈದ್ಯಕೀಯ ವರದಿ ಸರಿಯಿದ್ದರೂ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಏಕೆ ಆಯ್ಕೆ ಮಾಡಲಿಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ (ICC Champions Trophy 2025) ಪರಿಷ್ಕೃತ ಭಾರತ ತಂಡವನ್ನು ಬಿಸಿಸಿಐ (BCCI) ಪ್ರಕಟಿಸಿದೆ. ಕೊನೆ ಕ್ಷಣದಲ್ಲಿ ಅಚ್ಚರಿ ಎರಡು ಬದಲಾವಣೆ ಮಾಡಿದೆ. ಆರಂಭದಲ್ಲಿ ಪ್ರಕಟಿಸಿದ್ದ ತಂಡದಲ್ಲಿದ್ದ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅವರನ್ನು ಕೈಬಿಟ್ಟಿದೆ. ಇವರ ಸ್ಥಾನಕ್ಕೆ ಹರ್ಷಿತ್ ರಾಣಾ (Harshit Rana), ವರುಣ್ ಚಕ್ರವರ್ತಿಗೆ (Varun Chakravarthy) ಅವಕಾಶ ನೀಡಿದೆ. ಇದರ ಬೆನ್ನಲ್ಲೇ ಬುಮ್ರಾ ಅವರ ವೈದ್ಯಕೀಯ ವರದಿ ಸಕರಾತ್ಮಕವಾಗಿದ್ದರೂ ಅವರಿಗೆ ಅವಕಾಶ ನೀಡಲು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ (Ajit Agarkar) ಹಿಂದೇಟು ಹಾಕಿದರು ಎನ್ನುವ ಅಚ್ಚರಿ ಅಂಶ ಇದೀಗ ಬೆಳಕಿಗೆ ಬಂದಿದೆ.
ಬಿಸಿಸಿಐಗೆ ಜಸ್ಪ್ರೀತ್ ಬುಮ್ರಾ ಸಲ್ಲಿಸಿರುವ ವೈದ್ಯಕೀಯ ವರದಿಯು ಫಿಟ್ ಆಗಿದ್ದಾರೆ ಎಂಬ ಅಂಶಗಳನ್ನು ಬಹಿರಂಗಪಡಿಸಿದೆ. ವೇಗದ ಬೌಲರ್ ತಮ್ಮ ಪುನರ್ವಸತಿಯನ್ನು ಪೂರ್ಣಗೊಳಿಸಿದ್ದಾರೆ ಎಂಬುದನ್ನು ಈ ವರದಿ ಸ್ಪಷ್ಟಪಡಿಸಿದೆ. ಆದರೆ ಅಜಿತ್ ಅಗರ್ಕರ್ ಅವರು ಬುಮ್ರಾ ಆಯ್ಕೆಗೆ ಒಲವು ತೋರಿಸಿಲ್ಲ. ಏಕೆಂದರೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ವೈದ್ಯಕೀಯ ತಂಡವು ಬುಮ್ರಾ ಫಿಟ್ ಇದ್ದರೂ ಮ್ಯಾಚ್ ಫಿಟ್ ಆಗಿಲ್ಲ. ಹೀಗಾಗಿ ಐಸಿಸಿ ಟೂರ್ನಿಗೆ ಸಿದ್ಧ ಎಂಬುದನ್ನು ಖಚಿತಪಡಿಸಲು ವೈದ್ಯರು ಮುಂದಾಗಲಿಲ್ಲ. ಇದನ್ನು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರ ಮುಂದಿಟ್ಟು ನಿಮ್ಮ ನಿರ್ಧಾರವೇ ಅಂತಿ ಎಂದು ವೈದ್ಯರು ತಿಳಿದಿದ್ದರು.
ಒಂದು ವರ್ಷ ತಂಡಕ್ಕೆ ದೂರವಾಗಿದ್ದ ಬುಮ್ರಾ
ಹಾಗಾಗಿ, ಬುಮ್ರಾರನ್ನು ಮತ್ತಷ್ಟು ಅಪಾಯಕ್ಕೆ ಸಿಲುಕಿಸದಿರಲು ನಿರ್ಧರಿಸಿದ ಅಗರ್ಕರ್ ಆಯ್ಕೆ ಮಾಡದೆ ಕೈಬಿಟ್ಟರು. ಹೀಗಂತ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2022ರಲ್ಲೂ ಇಂತಹದ್ದೇ ಒತ್ತಡಕ್ಕೆ ಸಿಲುಕಿದ್ದ ಬುಮ್ರಾ ಎರಡೆರಡು ಬಾರಿ ಇಂಜುರಿಗೆ ತುತ್ತಾಗಿ ಸುಮಾರು ಒಂದು ವರ್ಷ ಕ್ರಿಕೆಟ್ನಿಂದ ದೂರ ಉಳಿದಿದ್ದರು. 2022ರ ಟಿ20 ವಿಶ್ವಕಪ್ಗೂ ಮುನ್ನ ಗಾಯಗೊಂಡಿದ್ದ ಬುಮ್ರಾ, ಟೂರ್ನಿಗೆ ಫಿಟ್ ಆಗುವ ಸಲುವಾಗಿ ತರಾತುರಿಯಲ್ಲಿ ತಂಡಕ್ಕೆ ಮರಳಿದ್ದರು. ಆದರೆ ಈ ಟೂರ್ನಿ ಆರಂಭಕ್ಕೂ ಮುನ್ನ ಟಿ20ಐ ಸರಣಿಯೊಂದರಲ್ಲಿ ಕಣಕ್ಕಿಳಿದು ಮತ್ತೆ ಬೆನ್ನಿನ ಗಾಯಕ್ಕೆ ಒಳಗಾದರು. ಅಂದು ತಂಡ ತೊರೆದ ಬುಮ್ರಾ ಮತ್ತೆ ಕಂಬ್ಯಾಕ್ ಮಾಡಿದ್ದು ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ಗೆ. ಐಪಿಎಲ್ ಸೇರಿ ಪ್ರಮುಖ ಸರಣಿಗಳನ್ನು ಕಳೆದುಕೊಂಡಿದ್ದರು.
ಮುಂದೆ ಐಪಿಎಲ್ ಸೇರಿದಂತೆ ಪ್ರಮುಖ ಸರಣಿಗಳಿರುವ ಕಾರಣ ಅಂತಹ ಪರಿಸ್ಥಿತಿ ಮತ್ತೆ ಮರುಕಳುಹಿಸಬಾರದು ಎನ್ನುವ ದೃಷ್ಟಿಯಿಂದ ಅಜಿತ್ ಅರ್ಗಕರ್ ಅವರು ಸಂಪೂರ್ಣ ಫಿಟ್ ಆಗುವ ತನಕ ಆಯ್ಕೆ ಮಾಡಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಜನವರಿ ಆರಂಭದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದ ಮಧ್ಯೆ ಜಸ್ಪ್ರೀತ್ ಬುಮ್ರಾಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಸ್ಕ್ಯಾನಿಂಗ್ಗೂ ಒಳಪಟ್ಟಿದ್ದರು. ಆಗ 5 ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಹಾಗಾಗಿ ಚಾಂಪಿಯನ್ಸ್ ಟ್ರೋಫಿ ಸಮಯಕ್ಕೆ ಅವರು ರೆಡಿಯಾಗುತ್ತಾರೆ ಎಂದು ಭಾವಿಸಲಾಗಿತ್ತು. ಆದರೀಗ ಆಗಿದ್ದೇ ಬೇರೆ.
ಬುಮ್ರಾ ವೈದ್ಯಕೀಯ ವರದಿಗಳು ಸರಿಯಾಗಿವೆ ಎಂದ ಬಿಸಿಸಿಐ ಅಧಿಕಾರಿ
ಬುಮ್ರಾ ಅವರ ಸ್ಕ್ಯಾನ್ ವರದಿಗಳು ಸರಿಯಾಗಿವೆ. ಎನ್ಸಿಎ ಮುಖ್ಯಸ್ಥ ನಿತಿನ್ ಪಟೇಲ್ ಅವರು ಮ್ಯಾಚ್ ಫಿಟ್ ಆಗಿರುವುದನ್ನು ಪರೀಕ್ಷಿಸದ ಕಾರಣ ಚಾಂಪಿಯನ್ಸ್ ಟ್ರೋಫಿಯ ಆಯ್ಕೆ ನಿರ್ಧಾರವನ್ನು ಅಗರ್ಕರ್ಗೆ ಒಪ್ಪಿಸಿದರು. ಎನ್ಸಿಎ ವೈದ್ಯಕೀಯ ವರದಿಗಳು ಬುಮ್ರಾ ತಮ್ಮ ಪುನಶ್ಚೇತನ ಮತ್ತು ಸ್ಕ್ಯಾನ್ ವರದಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದರೆ ಪಂದ್ಯಾವಳಿ ಪ್ರಾರಂಭವಾಗುವ ಹೊತ್ತಿಗೆ ಫಿಟ್ ಆಗಿ ಬೌಲಿಂಗ್ ಮಾಡುತ್ತಾರೆಯೇ ಎಂದು ತೀರ್ಮಾನಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಮತ್ತೆ ಬೌಲರ್ ಗಾಯಗೊಂಡರೆ ಪರಿಸ್ಥಿತಿ ಎನ್ನುವ ಭೀತಿಯಿಂದ ಸೆಲೆಕ್ಟರ್ಸ್ ಧೈರ್ಯ ಮಾಡಲಿಲ್ಲ ಎನ್ನುತ್ತಾರೆ ಬಿಸಿಸಿಐ ಅಧಿಕಾರಿ.
ವೈದ್ಯಕೀಯ ತಂಡವು ಸಂಪೂರ್ಣವಾಗಿ ಹಸಿರು ನಿಶಾನೆ ತೋರಿಸದಿದ್ದರೆ, ಆಯ್ಕೆ ಸಮಿತಿಯು ಗಟ್ಟಿಯಾದ ನಿಲುವುದು ತೆಗೆದುಕೊಳ್ಳುವುದು ಹೇಗೆ? ಮುಂದಾಗುವ ಅನಾಹುತಕ್ಕೆ ಹೊಣೆ ಯಾರು? ಹೀಗಾಗಿ ಅಜಿತ್ ಅಗರ್ಕರ್ ಬುಮ್ರಾರನ್ನು ಕೈ ಬಿಟ್ಟರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಹ್ಮದಾಬಾದ್ನಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಗರ್ಕರ್, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ನಡುವೆ ನಡೆದ ಸಭೆಯಲ್ಲಿ ಬುಮ್ರಾ ಅವರನ್ನು ಆಯ್ಕೆ ಮಾಡಬೇಕೇ?ಅನನುಭವಿ ರಾಣಾ ಆಯ್ಕೆ ಮಾಡಬೇಕೇ ಎಂಬುದರ ಕುರಿತು ಚರ್ಚೆ ನಡೆದಿತ್ತು. ಇದೀಗ ರಾಣಾ ಆಯ್ಕೆಯ ನಂತರ ಗಂಭೀರ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಕೈಬಿಟ್ಟಿದ್ದು ಇದಕ್ಕೆ ಪ್ರಮುಖ ಕಾರಣ.
