ಕನ್ನಡ ಸುದ್ದಿ  /  Cricket  /  Jay Shah Confirms Entire Ipl 2024 Will Happen In India Despite Lok Sabha Elections Bcci Quashes Report Of Ipl Moving Prs

BCCI: ಯಾವುದೇ ಕಾರಣಕ್ಕೂ ಐಪಿಎಲ್​​ ಸ್ಥಳಾಂತರ ಮಾಡಲ್ಲ; ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಸ್ಪಷ್ಟನೆ

IPL 2024 : ಲೋಕಸಭಾ ಚುನಾವಣೆ-2024 ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್​ ಲೀಗ್​ ಎರಡನೇ ಹಂತದ ಪಂದ್ಯಗಳನ್ನು ಯುಎಇಗೆ ಶಿಫ್ಟ್ ಮಾಡಲಾಗುತ್ತದೆ ಎಂಬ ವರದಿಗಳನ್ನು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ತಳ್ಳಿ ಹಾಕಿದ್ದಾರೆ.

ಯಾವುದೇ ಕಾರಣಕ್ಕೂ ಐಪಿಎಲ್​​ ಸ್ಥಳಾಂತರ ಮಾಡಲ್ಲ; ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಸ್ಪಷ್ಟನೆ
ಯಾವುದೇ ಕಾರಣಕ್ಕೂ ಐಪಿಎಲ್​​ ಸ್ಥಳಾಂತರ ಮಾಡಲ್ಲ; ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಸ್ಪಷ್ಟನೆ (PTI)

ಲೋಕಸಭಾ ಚುನಾವಣೆ ದಿನಾಂಕ ಪ್ರಕಟಗೊಂಡ ಹಿನ್ನೆಲೆಯಲ್ಲಿ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ವಿದೇಶಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ವರದಿಗಳನ್ನು ಬಿಸಿಸಿಐ ತಳ್ಳಿ ಹಾಕಿದೆ. ಸಾರ್ವತ್ರಿಕ ಚುನಾವಣೆಗಳ ಕಾರಣದಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯನ್ನು ಕೆಲವು ವರದಿಗಳು ಸೂಚಿಸಿದ ನಂತರ ಈಗ ಸ್ಪಷ್ಟೀಕರಣ ಸಿಕ್ಕಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕ್ರಿಕ್‌ಬಜ್‌ಗೆ ಸ್ಪಷ್ಟನೆ ನೀಡಿದ್ದಾರೆ. 2024ರ ಐಪಿಎಲ್​ ಟೂರ್ನಿಯನ್ನು ಯಾವುದೇ ಕಾರಣಕ್ಕೂ ವಿದೇಶಕ್ಕೆ ಸ್ಥಳಾಂತರಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇಡೀ ಲೀಗ್ ಅನ್ನು ಭಾರತದಲ್ಲಿಯೇ ನಡೆಸಲಾಗುವುದು. ಆ ಮೂಲಕ ವಿದೇಶಕ್ಕೆ ಸ್ಥಳಾಂತರಿಸುವ ಊಹಾಪೋಹ ಸುದ್ದಿಗಳನ್ನು ತಳ್ಳಿ ಹಾಕಿದ್ದು, ವಿದೇಶಕ್ಕೆ ಶಿಫ್ಟ್ ಮಾಡಲ್ಲ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯ ಬೆನ್ನಲ್ಲೇ ಐಪಿಎಲ್​ನ ದ್ವಿತೀಯಾರ್ಧವು ಯುಎಇಗೆ ಶಿಫ್ಟ್​ ಆಗುತ್ತದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​​ ಅನ್ನು ಕಣ್ತುಂಬಿಕೊಳ್ಳಲು ತಪ್ಪಿಸಿಕೊಳ್ಳುತ್ತೇವೆ ಎಂದು ಆತಂಕದಲ್ಲಿದ್ದ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗವು ಹೇಳಿದೆ.

ಐಪಿಎಲ್ 2024ರ ದ್ವಿತೀಯಾರ್ಧವನ್ನು ಯುಎಇಗೆ ಸ್ಥಳಾಂತರಿಸುವ ಸಾಧ್ಯತೆಯನ್ನು ಅನ್ವೇಷಿಸಲು ಬಿಸಿಸಿಐ ಅಧಿಕಾರಿಗಳು ಪ್ರಸ್ತುತ ದುಬೈನಲ್ಲಿದ್ದಾರೆ. ಐಪಿಎಲ್ ತಂಡಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಸಲ್ಲಿಸಲು ಆಟಗಾರರನ್ನು ಕೇಳಿಕೊಂಡಿವೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿಂದೆ ಎರಡು ಬಾರಿ ಅರಬ್ಬರ ನಾಡಿನಲ್ಲಿ ಐಪಿಎಲ್​ ಅನ್ನು ಆಯೋಜಿಸಲಾಗಿತ್ತು.

2014ರ ಸಾರ್ವತ್ರಿಕ ಚುನಾವಣೆ ಅವಧಿಯಲ್ಲಿ ಐಪಿಎಲ್​​ ಮೊದಲಾರ್ಧವನ್ನು ಯುಎಇಯಲ್ಲಿ ಆಯೋಜಿಸಿತ್ತು. 2020ರಲ್ಲೂ ಭಾರತದಲ್ಲಿ ಕೋವಿಡ್ ಕಾರಣ ಇಡೀ ಟೂರ್ನಿಯನ್ನು ದುಬೈನಲ್ಲೇ ಆಯೋಜಿಸಿತ್ತು. ಈ ವರದಿಗಳು ವೈರಲ್ ಆದಾಗ 2024ರ ಲೀಗನ್ನು​ ದುಬೈನಲ್ಲೇ ನಡೆಸುವ ಬಗ್ಗೆ ಖಚಿತ ಮಾಹಿತಿ ಇನ್ನೂ ಹೊರ ಬಿದ್ದಿರಲಿಲ್ಲ.

ಭಾರತದಲ್ಲಿ ಭದ್ರತೆ ಸಮಸ್ಯೆ

ಏಪ್ರಿಲ್​​ 19ರಿಂದ ಏಳು ಹಂತದಲ್ಲಿ ನಡೆಯಲಿದ್ದು, ಜೂನ್​ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇದರ ಮಧ್ಯೆ ಐಪಿಎಲ್ ಅನ್ನು ಆಯೋಜಿಸಿದರೆ ಭದ್ರತೆ ಸಮಸ್ಯೆ ಕಾಣಲಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​ ಆಯೋಜಿಸಲು ಕಷ್ಟಸಾಧ್ಯವಾಗಲಿದೆ. ಒಂದು ವೇಳೆ ಯುಎಇಗೆ ಐಪಿಎಲ್ ಶಿಫ್ಟ್ ಆದರೆ ಮೂರನೇ ಬಾರಿಗೆ ಅಲ್ಲಿಗೆ ಸ್ಥಳಾಂತರಗೊಳ್ಳಲಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿತ್ತು

ಫೆಬ್ರವರಿ 22ರಂದು ಐಪಿಎಲ್​ ಮೊದಲ ಹಂತದ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ದಿನಾಂಕ ಘೋಷಿಸಿದ ನಂತರ ಎರಡನೇ ಹಂತದ ವೇಳಾಪಟ್ಟಿ ಬಹಿರಂಗಪಡಿಸುವುದಾಗಿ ಬಿಸಿಸಿಐ ಹೇಳಿತ್ತು. ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ.

ಐಪಿಎಲ್ ಟೂರ್ನಿಯನ್ನು ಬೇಗ ಮುಕ್ತಾಯಗೊಳಿಸಲು ಬಿಸಿಸಿಐ ಚಿಂತಿಸುತ್ತಿದೆ. ಏಕೆಂದರೆ ಜೂನ್​ 1ರಿಂದ ಐಸಿಸಿ ಟಿ20 ವಿಶ್ವಕಪ್ ಜರುಗುವ ಕಾರಣ ಐಪಿಎಲ್​ ಬೇಗ ಮುಗಿಸಲು ವಿದೇಶಕ್ಕೆ ಸ್ಥಳಾಂತರ ಮಾಡಬಹುದು ಎಂದು ಕೆಲವು ವರದಿಗಳು ತಿಳಿಸಿವೆ. ಆದರೆ ಬಿಸಿಸಿಐ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

IPL_Entry_Point