ತವರಿನಲ್ಲಿ ಘರ್ಜಿಸಿದ ಜೆಮಿಮಾ ರೋಡ್ರಿಗಸ್; ಡೆಲ್ಲಿ ವಿರುದ್ಧ 29 ರನ್ಗಳಿಂದ ಸೋತ ಮುಂಬೈ ಇಂಡಿಯನ್ಸ್
Delhi Capitals vs Mumbai Indians : ಮುಂಬೈ ಇಂಡಿಯನ್ಸ್ ವಿರುದ್ಧದ ಡಬ್ಲ್ಯುಪಿಎಲ್ನ 12ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 29 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ವುಮೆನ್ಸ್ ಪ್ರೀಮಿಯರ್ ಲೀಗ್ನ 2ನೇ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜಯದೊಂದಿಗೆ ಅಭಿಯಾನ ಆರಂಭಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದ್ದ ಡೆಲ್ಲಿ ಈಗ ಸೇಡು ತೀರಿಸಿಕೊಂಡಿದೆ. ತವರಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ 2ನೇ ಹಂತದ ಪ್ರಥಮ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ಪಡೆ 29 ರನ್ಗಳಿಂದ ಜಯದ ನಗೆ ಬೀರಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್, ಡೆಲ್ಲಿಗೆ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಕೊಟ್ಟಿತು. ಅದರಂತೆ ಮೊದಲು ಬ್ಯಾಟಿಂಗ್ ನಡೆಸಿದ ಕ್ಯಾಪಿಟಲ್ಸ್, ಬಿರುಸಿನ ಆರಂಭ ಪಡೆಯಿತು. ಶಫಾಲಿ ವರ್ಮಾ ಎಂದಿನಂತೆ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಆದರೆ, 12 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಸಿಡಿಸಿ 28 ರನ್ ಗಳಿಸಿ ಔಟಾದರು. ತದ ನಂತರ ಕಣಕ್ಕಿಳಿದ ಅಲೀಸ್ ಕ್ಯಾಪ್ಸೆ (19) ಹೆಚ್ಚು ಕ್ರೀಸ್ನಲ್ಲಿ ಇರಲಿಲ್ಲ.
ಆದರೆ ಈ ಹಂತದಲ್ಲಿ ಒಂದಾದ ಆರಂಭಿಕ ಆಟಗಾರ್ತಿ ಮೆಗ್ ಲ್ಯಾನಿಂಗ್ ಮತ್ತು ಜೆಮಿಮಾ ರೋಡ್ರಿಗಸ್ ಮುಂಬೈ ಬೌಲರ್ಗಳಿಗೆ ಬೆಂಡೆತ್ತಿತ್ತು. ಅಲ್ಲದೆ, ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಎರಡು ವಿಕೆಟ್ ನಂತರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ನಾಯಕಿ ಮೆಗ್ ಲ್ಯಾನಿಂಗ್, ಭರ್ಜರಿ ಅರ್ಧಶತಕ ಸಿಡಿಸಿ ಆಸರೆಯಾದರು. 38 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 53 ರನ್ ಗಳಿಸಿ ಔಟಾದರು.
ಲ್ಯಾನಿಂಗ್ ಜೊತೆಗೆ ನಿಧಾನವಾಗಿ ರನ್ ಕಲೆ ಹಾಕುತ್ತಿದ್ದ ಜೆಮಿಮಾ, ಅಂತಿಮ ಹಂತದ ಓವರ್ಗಳಲ್ಲಿ ಗೇರ್ ಚೇಂಜ್ ಮಾಡಿದರು. ಮದವೇರಿದ ಆನೆಯಂತೆ ಘರ್ಜಸಿ ತಂಡವ ಮೊತ್ತವನ್ನು 190ರ ಗಡಿ ದಾಟಿಸಿದರು. ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದ ಜೆಮಿಮಾ, ಸ್ಪೋಟಕ ಅರ್ಧಶತಕ ಸಿಡಿಸಿದರು. ಕೇವಲ 32 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 69 ರನ್ ಚಚ್ಚಿದರು. ಸ್ಟ್ರೇಕ್ರೇಟ್ 209.09.
ಜೆಮಿಮಾ ಒಂದೆಡೆ ಬೆಂಡೆತ್ತುತ್ತಿದ್ದರೆ ಮತ್ತೊಂದೆಡೆ ಮರಿಜಾನ್ನೆ ಕಪ್ 11 ರನ್ ಗಳಿಸಿ ಸಾಥ್ ನೀಡಿದರು. ಅಂತಿಮವಾಗಿ ಡೆಲ್ಲಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 192 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಮುಂಬೈ ಪರ ಶಬ್ನಿಮ್ ಇಸ್ಮಾಯಿಲ್, ಸಾಯಿಕಾ ಇಶಾಕ್, ಪೂಜಾ ವಸ್ತ್ರಕರ್, ಹೇಲಿ ಮ್ಯಾಥ್ಯೂಸ್ ತಲಾ ಒಂದು ವಿಕೆಟ್ ಪಡೆದರು.
ಡೆಲ್ಲಿ ನೀಡಿದ 193 ರನ್ಗಳ ಗುರಿ ಬೆನ್ನಟ್ಟಿದ ಮುಂಬೈ, ಉತ್ತಮ ಆರಂಭ ಪಡೆಯಲಿಲ್ಲ. ಡೆಲ್ಲಿ ಬೌಲರ್ಸ್ ಹರ್ಮನ್ ಪಡೆಯ ಬ್ಯಾಟರ್ಗಳಿಗೆ ಕಡಿವಾಣ ಹಾಕಿದರು. ಯಾಸ್ತಿಕಾ ಭಾಟಿಯಾ 6, ನಟಾಲಿ ಸೀವರ್ 5, ಹರ್ಮನ್ಪ್ರೀತ್ ಕೌರ್ 6 ರನ್ ಗಳಿಸಿ ಬೇಗನೇ ಔಟಾದರು. ಆದರೆ ಹೇಲಿ ಮ್ಯಾಥ್ಯೂಸ್ (29) ಹೋರಾಡಲು ಪ್ರಯತ್ನ ನಡೆಸಿದರಾದರೂ ಸಾಧ್ಯವಾಗಲಿಲ್ಲ. ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್ ತಲಾ 17 ರನ್ಗೆ ಸುಸ್ತಾದರು.
ಆದರೆ ಅದಾಗಲೇ ಮುಂಬೈ ಸೋಲೊಪ್ಪಿಕೊಂಡಿತ್ತು. ಚೇಸ್ ಮಾಡುವುದು ಕಷ್ಟವಾಗಿತ್ತು. ಈ ಹಂತದಲ್ಲಿ ಅಮನ್ಜೋತ್ ಕೌರ್ ಮತ್ತು ಎಸ್ ಸಜನಾ ಅವರು ಫೈಟ್ ನೀಡಲು ಯತ್ನಿಸಿದರು. ಗೆಲುವಿಗಾಗಿ ಹೋರಾಡಿದರು. ಅಮನ್ಜೋತ್ 27 ಎಸೆತಗಳಲ್ಲಿ 7 ಬೌಂಡರಿ ಸಹಿತ 42 ರನ್ ಗಳಿಸಿದರು. ಮತ್ತೊಂದೆಡೆ ಸಜನಾ 24 ರನ್ ಗಳಿಸಿದರೂ ಗೆಲುವು ಅವರ ಪರ ತಿರುಗಲಿಲ್ಲ. ಮುಂಬೈ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ಜೆಸ್ ಜೊನಾಸೆನ್ ಮೂರು ವಿಕೆಟ್ ಪಡೆದರು.