ಕನ್ನಡ ಸುದ್ದಿ  /  Cricket  /  Jharkhand Cricketer Shahbaz Nadeem Announces Retirement From International Cricket To Play Franchise Based Leagues Jra

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಹಬಾಜ್ ನದೀಮ್ ವಿದಾಯ; ನನಗೆ ಅವಕಾಶ ಸಿಗುವ ನಿರೀಕ್ಷೆ ಇಲ್ಲ ಎಂದ ಜಾರ್ಖಂಡ್ ಆಟಗಾರ

2019ರಲ್ಲಿ ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶಹಬಾಜ್ ನದೀಮ್‌, ನಾಲ್ಕು ವಿಕೆಟ್‌ ಪಡೆದು ಮಿಂಚಿದ್ದರು. 2021ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ತಮ್ಮ ಎರಡನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಹಬಾಜ್ ನದೀಮ್ ವಿದಾಯ
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಹಬಾಜ್ ನದೀಮ್ ವಿದಾಯ

ಭಾರತ ಕ್ರಿಕೆಟ್‌ ತಂಡದ ಪರ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಆಡಿರುವ ಜಾರ್ಖಂಡ್ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಅವಕಾಶಗಳ ನಿರೀಕ್ಷೆ ಕೈಬಿಟ್ಟಿರುವ ಆಟಗಾರ, ಫ್ರಾಂಚೈಸ್ ಆಧಾರಿತ ಲೀಗ್‌ಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವ ಸಲುವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಅವರು, ಸುದೀರ್ಘ ಎರಡು ದಶಕಗಳ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ.

34 ವರ್ಷ ವರ್ಷದ ಆಟಗಾರ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವುದು ಉತ್ತಮ ಎಂದು ಹೇಳಿದ್ದಾರೆ. “ನಾನು ಇನ್ನು ಮುಂದೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ ಎಂಬುದನ್ನು ಅರ್ಥಮಾಡಿಕೊಂಡಿದ್ದೇನೆ. ಏಕೆಂದರೆ ನಾನು ಆಯ್ಕೆಗಾರರ ಗುಂಪಿನಲ್ಲಿ ಇಲ್ಲ. ಅಲ್ಲದೆ ಪ್ರತಿಭಾವಂತ ಯುವಕರ ಬಳಗವೇ ಭಾರತ ತಂಡದಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದೆ” ಎಂದು ನದೀಮ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ನದೀಮ್ 2004ರಲ್ಲಿ ಕೇರಳ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2019ರ ಅಕ್ಟೋಬರ್‌ ತಿಂಗಳಲ್ಲಿ ತಮ್ಮ ತವರು ಮೈದಾನವಾದ ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅವರು, ನಾಲ್ಕು ವಿಕೆಟ್‌ ಪಡೆದು ಮಿಂಚಿದ್ದರು. ಆ ಪಂದ್ಯದಲ್ಲಿ ಭಾರತ ತಂಡವು ಇನ್ನಿಂಗ್ಸ್ ಹಾಗೂ 202 ರನ್‌ಗಳ ಭಾರಿ ಅಂತರದಿಂದ ಜಯ ಸಾಧಿಸಿತ್ತು. ಆ ಬಳಿಕ 2021ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ತಮ್ಮ ಎರಡನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಇವು ಭಾರತದ ಪರ ಅವರು ಆಡಿದ ಎರಡು ಟೆಸ್ಟ್ ಪಂದ್ಯಗಳಾಗಿವೆ.

“ಟೀಮ್ ಇಂಡಿಯಾದಲ್ಲಿ ನನಗೆ ಅವಕಾಶಗಳು ಇದ್ದಲ್ಲಿ ನಾನು ಆಟವನ್ನು ಮುಂದುವರಿಸುತ್ತಿದ್ದೆ. ಆದರೆ, ಸದ್ಯ ಅಲ್ಲಿ ಯಾವುದೇ ಅವಕಾಶಗಳನ್ನು ನಾನು ನಿರೀಕ್ಷಿಸುವುದಿಲ್ಲ. ಹೀಗಾಗಿ ನಾನು ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲು ನಿರ್ಧರಿಸಿದೆ. ವಿವಿಧ ಲೀಗ್‌ಗಳಲ್ಲಿ ನನ್ನ ಅದೃಷ್ಟ ಪರೀಕ್ಷಿಸಲು ನಿರ್ಧರಿಸಿದ್ದೇನೆ” ಎಂದು ಬೌಲರ್ ಹೇಳಿದ್ದಾರೆ.

ಇದನ್ನೂ ಓದಿ | ಡಬ್ಲ್ಯೂಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ತಲುಪಿದ ಮೆಗ್‌ ಲ್ಯಾನಿಂಗ್;‌ ಈ ಸಾಧನೆ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ್ತಿ

ಜಾರ್ಖಂಡ್‌ ಪರ ಎರಡು ದಶಕಗಳ ಸುದೀರ್ಘ ವೃತ್ತಿಜೀವನ ಹೊಂದಿರುವ ನದೀಮ್‌, ಲಿಸ್ಟ್ ಎ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಅಂಕಿ-ಅಂಶ ದಾಖಲಿಸಿರುವ ರೆಕಾರ್ಡ್‌ ಹೊಂದಿದ್ದಾರೆ. 2018-19ರಲ್ಲಿ ರಾಜಸ್ಥಾನದ ವಿರುದ್ಧ 10 ರನ್‌ಗಳಿಗೆ 8 ವಿಕೆಟ್‌ ಪಡೆದು ಮಿಂಚಿದ್ದರು.

"ನಿವೃತ್ತಿಗೆ ಇದು ಸೂಕ್ತ ಸಮಯ ಎಂದು ನಾನು ಭಾವಿಸಿದೆ. ವೈಯಕ್ತಿಕ ದಾಖಲೆಗಳಿಗಾಗಿ ರಾಜ್ಯ ತಂಡದಲ್ಲಿ ಸ್ಥಾನ ಪಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಯುವ ಆಟಗಾರರಿಗೆ ಅವಕಾಶ ನೀಡುವುದು ಉತ್ತಮ," ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | ಧೋನಿ ಅವರಂತಾಗಲು ಯಾರಿಂದಲೂ ಸಾಧ್ಯವಿಲ್ಲ: ಧ್ರುವ್ ಜುರೆಲ್ ಕುರಿತು ನೀಡಿದ್ದ ಹೇಳಿಕೆಗೆ ಸುನಿಲ್ ಗವಾಸ್ಕರ್ ಸ್ಪಷ್ಟನೆ

2015–16 ಮತ್ತು 2016–17ರ ರಣಜಿ ಟ್ರೋಫಿಯಲ್ಲಿ ಅಧಿಕ ವಿಕೆಟ್ ಪಡೆದ ಬೌಲರ್ ನದೀಮ್. ಇದಲ್ಲದೆ, ಅವರು 2018ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿಯೂ ಹೊರಹೊಮ್ಮಿದ್ದರು.

ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಪರ ಒಟ್ಟು 72 ಪಂದ್ಯಗಳಲ್ಲಿ ನದೀಮ್‌ ಆಡಿದ್ದಾರೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point