ಗಳಿಸಿದ್ದು 29 ರನ್, ಬರೆದಿದ್ದು ವಿಶ್ವದಾಖಲೆ; ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಜೋ ರೂಟ್ ಹೊಸ ಸಾಧನೆ
Joe Root Record: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ನಲ್ಲಿ 29 ರನ್ ಗಳಿಸಿ ಔಟಾದ ಇಂಗ್ಲೆಂಡ್ ತಂಡದ ಜೋ ರೂಟ್ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ (ಜನವರಿ 25) ಭಾರತ ಮತ್ತು ಇಂಗ್ಲೆಂಡ್ ನಡುವಿನ (India vs England) ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದ ಆಟದಲ್ಲಿ ಸ್ಟಾರ್ ಇಂಗ್ಲಿಷ್ ಬ್ಯಾಟ್ಸ್‌ಮನ್ ಜೋ ರೂಟ್ (Joe Root) ಇತಿಹಾಸವನ್ನು ನಿರ್ಮಿಸಿದರು. ಸರಣಿಯ ಆರಂಭಿಕ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮಾಜಿ ನಾಯಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (WTC) 4000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಮೊದಲ ಇನ್ನಿಂಗ್ಸ್ನಲ್ಲಿ ರೂಟ್ 29 ರನ್ ಗಳಿಸಿ ಔಟಾದರು. ಆದರೆ ವಿಶ್ವ ದಾಖಲೆ ಬರೆದರು.
ಈ ಮೈಲಿಗಲ್ಲು ತಲುಪಲು ರೂಟ್‌ಗೆ 13 ರನ್‌ಗಳ ಅಗತ್ಯವಿತ್ತು. ಅಕ್ಷರ್ ಪಟೇಲ್ ಬೌಲ್ ಮಾಡಿದ 21ನೇ ಓವರ್‌ನ ಐದನೇ ಎಸೆತದಲ್ಲಿ ಡಬಲ್ ಗಳಿಸುವ ಮೂಲಕ ಅವರು ಈ ಸಾಧನೆ ಮಾಡಿದರು. 48 ಪಂದ್ಯಗಳಲ್ಲಿ 50.20ರ ಬ್ಯಾಟಿಂಗ್ ಸರಾಸರಿಯಲ್ಲಿ 12 ಶತಕ, 16 ಅರ್ಧಶತಕಗಳ ಸಹಿತ 4016 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ತಂಡದ ಮಾರ್ನಸ್ ಲಬುಶೇನ್ ಡಬ್ಲ್ಯುಟಿಸಿಯಲ್ಲಿ ಪ್ರಮುಖ ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಲಬುಶೇನ್ 43 ಟೆಸ್ಟ್‌ಗಳಲ್ಲಿ 3797 ರನ್, ಸ್ಟೀವ್ ಸ್ಮಿತ್ 43 ಟೆಸ್ಟ್‌ಗಳಲ್ಲಿ 3338 ರನ್ ಗಳಿಸಿದ್ದು, 3ನೇ ಸ್ಥಾನದಲ್ಲಿದ್ದಾರೆ.
ಮತ್ತೊಂದು ದಾಖಲೆ
ಡಬ್ಲ್ಯುಟಿಸಿ ಇತಿಹಾಸದಲ್ಲಿ 4000 ರನ್ ಗಳಿಸಿದ ಮೊದಲ ಬ್ಯಾಟರ್ ಆಗಿದ್ದಲ್ಲದೆ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ರೂಟ್ ಮತ್ತೊಂದು ಇತಿಹಾಸ ಸೃಷ್ಟಿಸಿದರು. ಇಂಡೋ-ಇಂಗ್ಲೆಂಡ್ ಟೆಸ್ಟ್‌ಗಳಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಗಣ್ಯರ ಪಟ್ಟಿಯಲ್ಲಿ ನಂ. 1 ಸ್ಥಾನವನ್ನು ಪಡೆದರು. ಸಚಿನ್ ತಮ್ಮ ಆಟದ ದಿನಗಳಲ್ಲಿ ಇಂಗ್ಲೆಂಡ್ ವಿರುದ್ಧ 32 ಟೆಸ್ಟ್‌ಗಳಲ್ಲಿ 2535 ರನ್ ಗಳಿಸಿದ್ದರು. ಸಚಿನ್ ದಾಖಲೆ ಮೀರಿಸಲು ರೂಟ್‌ಗೆ 10 ರನ್‌ಗಳ ಅಗತ್ಯವಿತ್ತು. ಮೊದಲ ಟೆಸ್ಟ್‌ನ ಮೊದಲ ದಿನದಾಟದ ಮೊದಲ ಸೆಷನ್‌ನಲ್ಲೇ ಅವರು ಈ ಸಾಧನೆ ಮಾಡಿದರು.
ಸ್ಥಾನ | ಆಟಗಾರ | ದೇಶ | ಪಂದ್ಯ | ರನ್ | ಬೆಸ್ಟ್ ಸ್ಕೋರ್ | 100/50 |
---|---|---|---|---|---|---|
1. | ಜೋ ರೂಟ್ | ಇಂಗ್ಲೆಂಡ್ | 48* | 4005* | 228 | 12/16 |
2. | ಮಾರ್ನಸ್ ಲಬುಶೇನ್ | ಆಸ್ಟ್ರೇಲಿಯಾ | 43* | 3797 | 215 | 11/18 |
3. | ಸ್ಟೀವ್ ಸ್ಮಿತ್ | ಆಸ್ಟ್ರೇಲಿಯಾ | 43* | 3338 | 211 | 09/16 |
4. | ಬೆನ್ ಸ್ಟೋಕ್ಸ್ | ಇಂಗ್ಲೆಂಡ್ | 41* | 2710 | 176 | 07/12 |
5. | ಬಾಬರ್ ಅಜಮ್ | ಪಾಕಿಸ್ತಾನ | 29 | 2661 | 196 | 08/15 |
6. | ಉಸ್ಮಾನ್ ಖವಾಜಾ | ಆಸ್ಟ್ರೇಲಿಯಾ | 30* | 2513 | 195* | 07/11 |
7. | ಟ್ರಾವಿಸ್ ಹೆಡ್ | ಆಸ್ಟ್ರೇಲಿಯಾ | 39* | 2441 | 175 | 06/11 |
8. | ಡೇವಿಡ್ ವಾರ್ನರ್ | ಆಸ್ಟ್ರೇಲಿಯಾ | 38 | 2423 | 335* | 05/08 |
9. | ವಿರಾಟ್ ಕೊಹ್ಲಿ | ಭಾರತ | 36 | 2235 | 254* | 04/10 |
10. | ದಿಮುತ್ ಕರುಣಾರತ್ನೆ | ಶ್ರೀಲಂಕಾ | 24 | 2160 | 244 | 06/12 |
ಇಂಗ್ಲೆಂಡ್ ಆಲೌಟ್
ಆರ್ ಅಶ್ವಿನ್ (3), ರವೀಂದ್ರ ಜಡೇಜಾ (3) ಹಾಗೂ ಅಕ್ಷರ್ ಪಟೇಲ್ (2) ಸ್ಪಿನ್ ಮೋಡಿಗೆ ಬೇಗನೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್, ನಾಯಕ ಬೆನ್ ಸ್ಟೋಕ್ಸ್ ಅರ್ಧಶತಕದ ಹೊರತಾಗಿಯೂ 64.3 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಆಗಿದೆ. ಜಸ್ಪ್ರೀತ್ ಬುಮ್ರಾ ಕೂಡ 2 ವಿಕೆಟ್ ಪಡೆದು ಸಾಥ್ ನೀಡಿದರು.
ಭಾರತದ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶ್ರೀಕರ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್ ಪ್ಲೇಯಿಂಗ್ XI
ಜಾಕ್ ಕ್ರಾವ್ಲಿ, ಬೆನ್ ಡಕೆಟ್, ಓಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜ್ಯಾಕ್ ಲೀಚ್.