ಸಚಿನ್ ತೆಂಡೂಲ್ಕರ್, ದ್ರಾವಿಡ್, ಪಾಂಟಿಂಗ್ ಹಿಂದಿಕ್ಕಿದ ಜೋ ರೂಟ್; ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ಮೈಲಿಗಲ್ಲು
ಟೆಸ್ಟ್ ಕ್ರಿಕೆಟ್‌ನಲ್ಲಿ 13,000 ರನ್ ಪೂರೈಸಿದ ಇಂಗ್ಲೆಂಡ್‌ನ ಮೊದಲ ಹಾಗೂ ಒಟ್ಟಾರೆ ಐದನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಜೋ ರೂಟ್ ಪಾತ್ರರಾಗಿದ್ದಾರೆ. 2012ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರೂಟ್, ಈ ಸ್ವರೂಪದಲ್ಲಿ ಅತ್ಯುತ್ತಮ ಆಟಗಾರ ಆಗಿದ್ದಾರೆ.
ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಜೋ ರೂಟ್ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಗುರುವಾರ (ಮೇ 22) ನಡೆದ ಮೊದಲ ದಿನದಾಟದಲ್ಲಿ ಜೋ ರೂಟ್ ತಮ್ಮ ಹೆಸರನ್ನು ಇತಿಹಾಸ ಪುಸ್ತಕಗಳಲ್ಲಿ ಬರೆದಿದ್ದಾರೆ. 2025ರಲ್ಲಿ ಮೊದಲ ಬಾರಿಗೆ ರೆಡ್-ಬಾಲ್ ಕ್ರಿಕೆಟ್ ಆಡಿದ ರೂಟ್, ಪಂದ್ಯದಲ್ಲಿ 34 ರನ್ ಮಾತ್ರ ಗಳಿಸಿದರು. ಆದರೂ ದಾಖಲೆ ನಿರ್ಮಿಸಿದರು. ಇದರೊಂದಿಗೆ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್ ಮತ್ತು ಜಾಕ್ ಕಾಲಿಸ್ ಅವರನ್ನು ಹಿಂದಿಕ್ಕಿದ್ದಾರೆ. ಇದಕ್ಕೆ ಕಾರಣ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 13,000 ರನ್ ಗಳಿಸಿದ್ದಾರೆ.
ಪಂದ್ಯಗಳ ಲೆಕ್ಕದಲ್ಲಿ ವಿಶ್ವದಲ್ಲಿ ಅತಿ ವೇಗವಾಗಿ 13,0000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೋ ರೂಟ್‌ಗೆ ಈ ಮೈಲಿಗಲ್ಲನ್ನು ತಲುಪಲು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 28 ರನ್‌ಗಳ ಅಗತ್ಯವಿತ್ತು. ಇಂಗ್ಲೆಂಡ್ ತಂಡದ ಇನ್ನಿಂಗ್ಸ್‌ನ 80ನೇ ಓವರ್‌ನಲ್ಲಿ ಒಂದು ರನ್ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದರು. ಇದು ಇಂಗ್ಲೆಂಡ್ ಪರ ರೂಟ್ ಅವರ 153ನೇ ಟೆಸ್ಟ್ ಪಂದ್ಯವಾಗಿತ್ತು. ಇಷ್ಟು ಕಡಿಮೆ ಪಂದ್ಯಗಳಲ್ಲಿ ಯಾರೂ 13 ಸಾವಿರ ರನ್ ಗಳಿಸಿರಲಿಲ್ಲ. ಈ ಮೂಲಕ ಅವರು ದಕ್ಷಿಣ ಆಫ್ರಿಕಾ ದಿಗ್ಗಜ ಜಾಕ್ ಕಾಲಿಸ್ (159), ರಾಹುಲ್ ದ್ರಾವಿಡ್ (160), ರಿಕಿ ಪಾಂಟಿಂಗ್ (162) ಮತ್ತು ಸಚಿನ್ ತೆಂಡೂಲ್ಕರ್ (163) ಅವರ ದಾಖಲೆ ಮುರಿದರು.
ಟೆಸ್ಟ್ ಕ್ರಿಕೆಟ್‌ನಲ್ಲಿ 13,000 ರನ್ ಪೂರೈಸಿದ ಇಂಗ್ಲೆಂಡ್‌ನ ಮೊದಲ ಹಾಗೂ ಒಟ್ಟಾರೆ ಐದನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ರೂಟ್ ಪಾತ್ರರಾದರು. 2012ರಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರೂಟ್, ಆಟದ ದೀರ್ಘ ಸ್ವರೂಪದಲ್ಲಿ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ರೂಟ್ ಇದುವರೆಗೆ ಆಸ್ಟ್ರೇಲಿಯಾ ಮತ್ತು ಭಾರತದ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ 2000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 1000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಜೋ ರೂಟ್ ಅವರ ಟೆಸ್ಟ್ ರನ್ ಎಲ್ಲಾ ತಂಡಗಳ ವಿರುದ್ಧ
ತಂಡ | ಪಂದ್ಯಗಳು | ರನ್ | ಸರಾಸರಿ | ಅತ್ಯುತ್ತಮ ಸ್ಕೋರ್ | 100/50 |
ಆಸ್ಟ್ರೇಲಿಯಾ | 34 | 2428 | 40.46 | 180 | 4/18 |
ಬಾಂಗ್ಲಾದೇಶ | 2 | 98 | 24.50 | 56 | 0/1 |
ಭಾರತ | 30 | 2846 | 58.08 | 218 | 10/11 |
ಐರ್ಲೆಂಡ್ | 2 | 89 | 29.66 | 56 | 0/1 |
ನ್ಯೂಜಿಲೆಂಡ್ | 21 | 1925 | 53.47 | 226 | 6/9 |
ಪಾಕಿಸ್ತಾನ | 18 | 1487 | 53.10 | 262 | 2/7 |
ದಕ್ಷಿಣ ಆಫ್ರಿಕಾ | 15 | 1210 | 46.53 | 190 | 2/9 |
ಶ್ರೀಲಂಕಾ | 13 | 1376 | 62.54 | 228 | 6/2 |
ವೆಸ್ಟ್ ಇಂಡೀಸ್ | 17 | 1513 | 56.03 | 182* | 6/7 |
ಜಿಂಬಾಬ್ವೆ | 1 | 34 | 34 | 34 | 0/0 |
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 13,000 ರನ್ ಪೂರೈಸಿದ ಆಟಗಾರ (ಪಂದ್ಯಗಳು)
- ಜೋ ರೂಟ್ (ಇಂಗ್ಲೆಂಡ್) - 153
- ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) - 159
- ರಾಹುಲ್ ದ್ರಾವಿಡ್ (ಭಾರತ) - 160
- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 162
- ಸಚಿನ್ ತೆಂಡೂಲ್ಕರ್ (ಭಾರತ) - 163
ಇದನ್ನೂ ಓದಿ | ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟಿಸಲು ದಿನಾಂಕ ಬಹಿರಂಗ; ನೂತನ ನಾಯಕನ ಹೆಸರೂ ಅದೇ ದಿನ ಘೋಷಣೆ, ಸದ್ಯಕ್ಕಿದು ಸಂಭಾವ್ಯ ತಂಡ