‌IND vs ENG: ರೂಟ್‌-ರಾಬಿನ್ಸನ್‌ ಆಕರ್ಷಕ ಜೊತೆಯಾಟ; ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್
ಕನ್ನಡ ಸುದ್ದಿ  /  ಕ್ರಿಕೆಟ್  /  ‌Ind Vs Eng: ರೂಟ್‌-ರಾಬಿನ್ಸನ್‌ ಆಕರ್ಷಕ ಜೊತೆಯಾಟ; ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್

‌IND vs ENG: ರೂಟ್‌-ರಾಬಿನ್ಸನ್‌ ಆಕರ್ಷಕ ಜೊತೆಯಾಟ; ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್

India vs England 4th Test: ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 353 ರನ್‌ ಗಳಿಸಿ ಆಲೌಟ್‌ ಆಗಿದೆ. ಜೋ ರೂಟ್‌ ಅಜೇಯ ಶತಕ ಸಿಡಿಸಿದ್ದಾರೆ. ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್‌ ಕಬಳಿಸಿ ಮಿಂಚಿದರು.

ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್
ಮೊದಲ ಇನ್ನಿಂಗ್ಸ್‌ನಲ್ಲಿ 353 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್ (PTI)

ಭಾರತ ಮತ್ತು ಇಂಗ್ಲೆಂಡ್‌ ತಂಡಗಳ (India vs England 4th Test) ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ, ಮೊದಲ ಇನ್ನಿಂಗ್ಸ್‌ನಲ್ಲಿ ಬೆನ್ ಸ್ಟೋಕ್ಸ್ ಬಳಗವು ಉತ್ತಮ ಮೊತ್ತ ಕಲೆ ಹಾಕಿದೆ. ಮೊದಲ ದಿನದ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 302 ರನ್ ಕಲೆ ಹಾಕಿ ಹಾಕಿ ಎರಡನೇ ದಿನ ಬ್ಯಾಟಿಂಗ್‌ ಮುಂದುವರೆಸಿದ ಇಂಗ್ಲೆಂಡ್‌, ಮೊದಲ ಸೆಷನ್‌ನಲ್ಲಿ 104.5 ಓವರ್‌ಗಳಲ್ಲಿ 353 ರನ್‌ ಗಳಿಸಿ ಆಲೌಟ್‌ ಆಗಿದೆ.

ರಾಂಚಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಂಗ್ಲರ ಬಳಗದ ಮಧ್ಯಮ ಕ್ರಮಾಂಕದ ಅನುಭವಿ ಆಟಗಾರ ಜೋ ರೂಟ್ (Joe Root), ಆಕರ್ಷಕ ಶತಕ ಸಿಡಿಸಿದರು. ಕಳೆದ ಮೂರು ಪಂದ್ಯಗಳ 6 ಇನ್ನಿಂಗ್ಸ್‌ಗಳಲ್ಲಿ 50ರ ಗಡಿ ದಾಟಲು ವಿಫಲವಾಗಿದ್ದ ರೂಟ್, ಈ ಪಂದ್ಯದಲ್ಲೇ ಮೊದಲ ದಿನವೇ ಶತಕ ಸಿಡಿಸಿದರು. ಮೊದಲ ದಿನದ ಅಂತ್ಯಕ್ಕೆ 226 ಎಸೆತಗಳಲ್ಲಿ 9 ಬೌಂಡರಿ ಸಹಿತ 106 ರನ್ ಕಲೆ ಹಾಕಿದ್ದ ಅವರು, ಎರಡನೇ ದಿನದಾಟದ ವೇಳೆ 122 ರನ್‌ ಕಲೆ ಹಾಕಿ ಅಜೇಯರಾಗಿ ಉಳಿದರು.

ಇದನ್ನೂ ಓದಿ | ಕೊನೆಯ ಎಸೆತಕ್ಕೆ 5 ರನ್, ಭರ್ಜರಿ ಸಿಕ್ಸರ್ ಸಿಡಿಸಿ ರೋಚಕ ಜಯ ತಂದುಕೊಟ್ಟ ಸಜನಾ; ಚೊಚ್ಚಲ ಪಂದ್ಯದಲ್ಲೇ ಮುಂಬೈಗೆ ಗೆಲುವು

ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ ಅವರು, ಅಲ್ಪ ಮೊತ್ತಕ್ಕೆ ಆಲೌಟ್‌ ಆಗುವುದನ್ನು ತಪ್ಪಿಸಿದರು. ಫೋಕ್ಸ್‌ ಅವರೊಂದಿಗೆ 6ನೇ ವಿಕೆಟ್‌ಗೆ 113 ರನ್‌ಗಳ ಜೊತೆಯಾಟವಾಡಿದ ರೂಡ್‌, ಆ ಬಳಿಕ 8ನೇ ವಿಕೆಟ್‌ಗೆ ಆಲಿ ರಾಬಿನ್ಸನ್ ಜೊತೆಗೂಡಿ 102 ರನ್ ಒಟ್ಟುಗೂಡಿಸಿದರು. ಈ ಎರಡು ಜೊತೆಯಾಟ ಇಂಗ್ಲೆಂಡ್‌ ತಂಡ ಇನ್ನಿಂಗ್‌ನಲ್ಲಿ ಮೇಲುಗೈ ಸಾಧಿಸಲು ನೆರವಾಯ್ತು.

ರೂಟ್‌ಗೆ ರಾಬಿನ್ಸನ್‌ ಸಾಥ್

ರೂಟ್‌ಗೆ ಉತ್ತಮ ಸಾಥ್‌ ನೀಡಿದ ರಾಬಿನ್ಸನ್‌, 58 ರನ್‌ ಸಿಡಿಸಿ ಮಿಂಚಿದರು. ತಂಡದ ಮೊತ್ತ 347 ಆಗಿದ್ದಾಗ ಅವರು ಔಟಾಗುತ್ತಿದ್ದಂತೆಯೇ, ತಂಡ ಲಯ ಕಳೆದುಕೊಂಡಿತು. ಬಶೀರ್‌ ಮತ್ತು ಆಂಡರ್ಸನ್‌ ಶೂನ್ಯಕ್ಕೆ ಔಟಾಗುವುದರೊಂದಿಗೆ, ರೂಟ್‌ ಅಜೇಯರಾಗಿ ಉಳಿದರು.

ಇದನ್ನೂ ಓದಿ | ಡೆಲ್ಲಿ ಕ್ಯಾಪಿಟಲ್ಸ್​ ಫ್ಯಾನ್ಸ್​​ಗೆ ಗುಡ್​ನ್ಯೂಸ್: ರಿಷಭ್ ಪಂತ್ ಐಪಿಎಲ್​ ಆಡುವುದು ಖಚಿತ, ಆದರೆ ಷರತ್ತುಗಳು ಅನ್ವಯ

ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್‌ ಕಬಳಿಸಿದರೆ, ಪದಾರ್ಪಣೆ ಪಂದ್ಯದಲ್ಲೇ ಆಕಾಶ್‌ ದೀಪ್‌ 3 ವಿಕೆಟ್‌ ಪಡೆದು ಮಿಂಚಿದರು. ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಕಿತ್ತರು.‌

ಮೊದಲ ದಿನದಾಟದಲ್ಲಿ ಮಿಂಚಿದ ಆಕಾಶ್‌ ದೀಪ್

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಆಕಾಶ್ ದೀಪ್ ಮಾರಕ ದಾಳಿಗೆ ಆಂಗ್ಲರು ಬಲುಬೇಗನೆ ಪೆವಿಲಿಯನ್‌ ಸೇರಿಕೊಂಡರು.‌ ಮೇಲಿಂದ ಮೇಲೆ 3 ವಿಕೆಟ್‌ ಕಬಳಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಬೆನ್ ಡಕೆಟ್ 11 ರನ್‌ ಗಳಿಸಿದರೆ, ಒಲ್ಲಿ ಫೋಪ್ 0, ಜಾಕ್ ಕ್ರ್ಯಾವ್ಲಿ 42 ರನ್‌ ಗಳಿಸಿ ಔಟಾದರು. ಜಾನಿ ಬೇರ್‌ ಸ್ಟೋ 38, ಬೆನ್​ ಸ್ಟೋಕ್ಸ್ 3 ಮತ್ತು ಬೆನ್ ಫೋಕ್ಸ್ 47 ರನ್ ಗಳಿಸಿ ಔಟಾದರು.

ಇದನ್ನೂ ಓದಿ | ಬೌಲಿಂಗ್-ಬ್ಯಾಟಿಂಗ್ ನಡೆಸದೆಯೇ ವಿಶ್ವದಾಖಲೆ ನಿರ್ಮಿಸಿದ ಜೇಮ್ಸ್ ಆಂಡರ್ಸನ್; ವಿವಿಯನ್ ರಿಚರ್ಡ್ಸ್ ಹಿಂದಿಕ್ಕಿದ ವೇಗಿ

ಸಂಕಷ್ಟದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾದ ಜೋ ರೂಟ್, 31ನೇ ಟೆಸ್ಟ್ ಶತಕ ಸಿಡಿಸಿದರು. 219 ಎಸೆತಗಳಲ್ಲಿ ನೂರರ ಗಡಿ ದಾಟಿದ ಅವರು, ಭಾರತದ ಎದುರು 10ನೇ ಟೆಸ್ಟ್​ ಶತಕದ ಸಾಧನೆಯನ್ನೂ ಮಾಡಿದರು. ಆ ಮೂಲಕ ಭಾರತದ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಸಾಧನೆ ಮಾಡಿದರು.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner