ಕನ್ನಡ ಸುದ್ದಿ  /  Cricket  /  Jofra Archer To Play For Virat Kohli Starrer Rcb In Ipl 2024 Pacer Practice In Bengaluru Royal Challengers Bangalore Prs

ಜೋಪ್ರಾ ಆರ್ಚರ್​ ಆರ್​​ಸಿಬಿ ಪರ ಕಣಕ್ಕಿಳಿಯಲ್ಲ; ಇಂಗ್ಲೆಂಡ್ ವೇಗಿ ಬೆಂಗಳೂರಿಗೆ ಬಂದಿರುವುದೇ ಬೇರೆ ಉದ್ದೇಶಕ್ಕೆ!

Jofra Archer : ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ಅವರು ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ ಎಂದು ಸುದ್ದಿಯಾಗುತ್ತಿದೆ. ಆದರೆ ಅದು ಸುಳ್ಳು ಸುದ್ದಿ ಎಂದು ಇನ್ನೂ ಕೆಲವು ವರದಿಗಳು ಉಲ್ಲೇಖಿಸಿವೆ.

ಜೋಪ್ರಾ ಆರ್ಚರ್​ ಆರ್​​ಸಿಬಿ ಪರ ಕಣಕ್ಕಿಳಿಯಲ್ಲ; ಇಂಗ್ಲೆಂಡ್ ವೇಗಿ ಬೆಂಗಳೂರಿಗೆ ಬಂದಿರುವುದೇ ಬೇರೆ ಉದ್ದೇಶಕ್ಕೆ!
ಜೋಪ್ರಾ ಆರ್ಚರ್​ ಆರ್​​ಸಿಬಿ ಪರ ಕಣಕ್ಕಿಳಿಯಲ್ಲ; ಇಂಗ್ಲೆಂಡ್ ವೇಗಿ ಬೆಂಗಳೂರಿಗೆ ಬಂದಿರುವುದೇ ಬೇರೆ ಉದ್ದೇಶಕ್ಕೆ!

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​​ ಲೀಗ್​​​ (Indian Premier League) ಆರಂಭಕ್ಕೆ ದಿನಗಣನೆ ಆರಂಭಗೊಂಡಿದೆ. ಅದಕ್ಕೂ ಮುನ್ನವೇ ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ (Jofra Archer) ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಪರ ಆಡುತ್ತಾರೆ ಎಂದು ವರದಿಯಾಗಿತ್ತು. ಆರ್ಚರ್​ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿರುವ ಕಾರಣ ಆರ್​ಸಿಬಿಗೆ ಆಡುವುದು ಖಚಿತ ಎಂದು ಹೇಳಲಾಗಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಈಗ ವರದಿಯಾಗುತ್ತಿದೆ.

ಜೋಫ್ರಾ ಆರ್ಚರ್ ಅವರು ಸಸೆಕ್ಸ್‌ ತಂಡದೊಂದಿಗೆ ಬೆಂಗಳೂರಿನಲ್ಲಿ ಕೌಂಟಿ ಟೂರ್ನಿಗಾಗಿ ಪೂರ್ವ-ಋತುವಿನ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಹಾಗೆಯೇ 2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿಯುವ ಸಲುವಾಗಿ ಫಿಟ್ ಆಗಲು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಅವರ ಉಪಸ್ಥಿತಿಯು ಐಪಿಎಲ್‌ನಲ್ಲಿ ಆರ್​​ಸಿಬಿ ಪರ ಆಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹರಾಜಿನಲ್ಲಿ ಮಾರಾಟವಾಗದೆ ಉಳಿದ ಆರ್ಚರ್​, ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಆರ್​​ಸಿಬಿ ಪರ ಆಡುವುದಿಲ್ಲ.

ಹೌದು, ಆರ್​​ಸಿಬಿ ಪರ ಆಡುವ ಕುರಿತಂತೆ ಆರ್ಚರ್​ ಫ್ರಾಂಚೈಸಿ ಜೊತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ವರದಿಯಾಗಿದೆ. ತಾನು ಪ್ರತಿನಿಧಿಸುವ ಕೌಂಟಿ ತಂಡದೊಂದಿಗೆ ಒಂದು ವಾರದ ಅಭ್ಯಾಸ ಶಿಬಿರದ ಭಾಗವಾಗಿ ಆರ್ಚರ್​ ಬೆಂಗಳೂರಿಗೆ ಆಗಮಿಸಿದ್ದಾರೆ. ಹೆಚ್ಚು ಸ್ನೇಹಪರ ಹವಾಮಾನ ಪರಿಸ್ಥಿತಿಗಳಲ್ಲಿ ತಂಡದೊಂದಿಗೆ ಅಭ್ಯಾಸ ಮಾಡಲು ಇಲ್ಲಿಗೆ ಬಂದಿದ್ದಾರೆ. ದೀರ್ಘ ಕಾಲದ ಮೊಣಕೈ ಗಾಯದಿಂದಾಗಿ ಇಂಗ್ಲೆಂಡ್ ವೇಗಿ ಪ್ರಸ್ತುತ ತಂಡದಿಂದ ಹೊರಗುಳಿದಿದ್ದು ಫಿಟ್​ನೆಸ್ ಕಡೆಗೆ ಗಮನ ಹರಿಸಿದ್ದಾರೆ.

ಆರ್ಚರ್​​ಗೆ ಈ​ ಐಪಿಎಲ್​ ಆಡುವ ಅವಕಾಶ ಇದ್ಯಾ?

ಹೌದು, ಇದೆ. ಆರ್ಚರ್​ ಸಂಪೂರ್ಣ ಫಿಟ್​ ಆಗಿದ್ದರೆ ಆಡುವ ಅವಕಾಶ ಹೊಂದಿದ್ದಾರೆ. ಐಪಿಎಲ್ ತಂಡದ ಆಟಗಾರರೊಬ್ಬ ಇಂಜುರಿಯಾಗಿ ಟೂರ್ನಿಯಿಂದ ಹೊರಬಿದ್ದರೆ, ಆ ತಂಡವು ಆರ್ಚರ್​​ನೊಂದಿಗೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳಬಹುದು. ಆರ್​​ಸಿಬಿ ಆಲ್​ರೌಂಡರ್ ಟಾಮ್ ಕರನ್ ಗಾಯಗೊಂಡಿದ್ದಾರೆ ಎಂಬ ಸುದ್ದಿ ಇದೆ. ಒಂದು ವೇಳೆ ಇದು ನಿಜವಾದರೆ, ಆರ್ಚರ್​ ಜೊತೆಗೆ ಚರ್ಚಿಸಿ ಕರನ್ ಬದಲಿಯಾಗಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದು.

ಗಾಯದ ಕಾರಣದಿಂದ ಅವರು 2022ರ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡಲು ಹಿಂದೆ ಸರಿದಿದ್ದರು. 2023ರಲ್ಲಿ ಮುಂಬೈ ಪರ ಐದು ಪಂದ್ಯಗಳಲ್ಲಿ ಕಣಕ್ಕಿಳಿದು 2 ವಿಕೆಟ್ ಪಡೆಯಲು ಮಾತ್ರ ಸಾಧ್ಯವಾಯಿತು. ಇನ್ನೂ ಅನ್​ಫಿಟ್ ಆಗಿದ್ದ ಕಾರಣ ಮುಂಬೈ, ಆರ್ಚರ್​ರನ್ನು ತಂಡದಿಂದ ಕೈಬಿಟ್ಟಿತು. ಹಾಗಾಗಿ ಏಕದಿನ ವಿಶ್ವಕಪ್ ಜೊತೆಗೆ ಪ್ರಮುಖ ಸರಣಿಗಳಿಂದಲೂ ಅವರನ್ನು ಕೈಬಿಡಲಾಗಿತ್ತು. ಇದೀಗ ಚೇತರಿಕೆಯತ್ತ ಸಾಗುತ್ತಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಸಸೆಕ್ಸ್ ಹೊರತುಪಡಿಸಿ, ಲಂಕಾಶೈರ್ ಪುರುಷರ ಮತ್ತು ಮಹಿಳಾ ತಂಡಗಳು ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿವೆ. ಲಂಕಾಶೈರ್​ ತಂಡದ ಆಟಗಾರರು ಕೆಎಸ್‌ಸಿಎ ಆಲೂರ್ ಸೌಲಭ್ಯದಲ್ಲಿ ತಮ್ಮ ಮೂಲ ಶಿಬಿರ ಆರಂಭಿಸಿದ್ದಾರೆ. ಪುರುಷರ ಮತ್ತು ಮಹಿಳಾ ತಂಡಗಳು ತಮ್ಮ 10 ದಿನಗಳ ವಾಸ್ತವ್ಯದ ಅವಧಿಯಲ್ಲಿ ಕರ್ನಾಟಕದ ಆಯ್ದ ತಂಡಗಳ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿವೆ.

ಮೊಣಕೈಗೆ ಶಸ್ತ್ರಚಿಕಿತ್ಸೆ ನಂತರ ಮೊಣಕೈ ಗಾಯದಿಂದ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೂ ಮುನ್ನ ಅವರನ್ನು ಫಿಟ್​ಗೊಳಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮೇಲ್ವಿಚಾರಣೆ ನಡೆಸುತ್ತಿದೆ. ಆರ್ಚರ್, ಭಾರತ ವಿರುದ್ಧದ ಟೆಸ್ಟ್ ಸರಣಿಯನ್ನೂ ಕಳೆದುಕೊಂಡಿದ್ದರು. ಆರ್ಚರ್ 13 ಟೆಸ್ಟ್, 21 ಏಕದಿನ ಪಂದ್ಯಗಳನ್ನು ಆಡಿದ್ದು, ಎರಡು ಸ್ವರೂಪಗಳಲ್ಲಿ ತಲಾ 42 ವಿಕೆಟ್‌ ಪಡೆದಿದ್ದಾರೆ. 15 ಟಿ20 ಪಂದ್ಯಗಳಲ್ಲಿ 18 ವಿಕೆಟ್‌ ಕಬಳಿಸಿದ್ದಾರೆ. 40 ಐಪಿಎಲ್ ಪಂದ್ಯಗಳಲ್ಲಿ 48 ವಿಕೆಟ್ ಪಡೆದಿದ್ದಾರೆ.

IPL_Entry_Point