ಕನ್ನಡ ಸುದ್ದಿ  /  ಕ್ರಿಕೆಟ್  /  ಜಾಸ್ ಬಟ್ಲರ್ ಪ್ರಚಂಡ ಶತಕ; ಕೆಕೆಆರ್ ವಿರುದ್ಧ ಯಶಸ್ವಿ ರನ್ ಚೇಸ್ ಮಾಡಿ ಗೆದ್ದ ರಾಜಸ್ಥಾನ್ ರಾಯಲ್ಸ್, ಅಗ್ರಸ್ಥಾನ ಭದ್ರ

ಜಾಸ್ ಬಟ್ಲರ್ ಪ್ರಚಂಡ ಶತಕ; ಕೆಕೆಆರ್ ವಿರುದ್ಧ ಯಶಸ್ವಿ ರನ್ ಚೇಸ್ ಮಾಡಿ ಗೆದ್ದ ರಾಜಸ್ಥಾನ್ ರಾಯಲ್ಸ್, ಅಗ್ರಸ್ಥಾನ ಭದ್ರ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಅದ್ವಿತೀಯ ಗೆಲುವು ಸಾಧಿಸಿದೆ. ಜೋಸ್‌ ಬಟ್ಲರ್‌ ದಾಖಲೆಯ ಶತಕದೊಂದಿಗೆ, ಐಪಿಎಲ್‌ ಇತಿಹಾಸದಲ್ಲಿ ಯಶಸ್ವಿ ರನ್‌ ಚೇಸ್‌ ಮಾಡಿದ ತನ್ನದೇ ದಾಖಲೆಯನ್ನು ಆರ್‌ಆರ್ ಸರಿಗಟ್ಟಿದೆ.‌ ಕೊನೆಯ ಎಸೆತದಲ್ಲಿ ತಂಡ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.

ಜಾಸ್ ಬಟ್ಲರ್ ಪ್ರಚಂಡ ಶತಕ
ಜಾಸ್ ಬಟ್ಲರ್ ಪ್ರಚಂಡ ಶತಕ (AP)

ಅಸಾಧ್ಯ ಎನಿಸಿದಂತೆ ಗೆಲುವನ್ನು ರಾಜಸ್ಥಾನ್‌ ರಾಯಲ್ಸ್‌ ಸಾಧ್ಯವಾಗಿದೆ. ನಿಜಾರ್ಥದಲ್ಲಿ ಜಾಸ್‌ ಬಟ್ಲರ್‌ ಸಾಧ್ಯವಾಗಿಸಿದ್ದಾರೆ. ಕೆಕೆಆರ್‌ ವಿರುದ್ಧ ಗೆಲುವಿಗೆ 224 ರನ್‌ಗಳ ಬೃಹತ್‌ ಗುರಿ ಪಡೆದ ಆರ್‌ಆರ್‌, ಐಪಿಎಲ್‌ ಇತಿಹಾಸದಲ್ಲೇ ಯಶಸ್ವಿ ರನ್‌ ಚೇಸಿಂಗ್‌ ಮಾಡಿದ ದಾಖಲೆ ನಿರ್ಮಿಸಿದೆ. ಈ ಹಿಂದೆ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿಯೂ ರಾಜಸ್ಥಾನ ಇಷ್ಟೇ ಮೊತ್ತವನ್ನು ಯಶಸ್ವಿಯಾಗಿ ಚೇಸಿಂಗ್‌ ಮಾಡಿ ಗೆದ್ದಿತ್ತು.‌ ಇದೀಗ ಅದೇ ದಾಖಲೆಯನ್ನು ಮತ್ತೊಮ್ಮೆ ಪುನರಾವರ್ತಿಸಿದೆ. ಇದರೊಂದಿಗೆ ಐಪಿಎಲ್‌ 2024ರ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರವಾಗಿಸಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 6 ವಿಕೆಟ್‌ ಕಳೆದುಕೊಂಡು 223 ರನ್‌ ಗಳಿಸಿತು. ದಾಖಲೆಯ ಚೇಸಿಂಗ್‌ ನಡೆಸಿದ ಕೆಕೆಆರ್‌ ಕೊನೆಯ ಎಸೆತದಲ್ಲಿ 224 ರನ್‌ ಗಳಿಸುವ ಮೂಲಕ 2 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌, ಸುನಿಲ್‌ ನರೈನ್‌ ಚೊಚ್ಚಲ ಐಪಿಎಲ್‌ ಶತಕದ ನೆರವಿನಿಂದ ಭರ್ಜರಿ ಮೊತ್ತ ಕಲೆ ಹಾಕಿತು. ಆರಂಭಿಕರಾಗಿ ಕಣಕ್ಕಿಳಿದ ನರೈನ್, 56 ಎಸೆತಗಳಲ್ಲಿ 13 ಬೌಂಡರಿ ಹಾಗೂ 6 ಸಿಕ್ಸರ್‌ ಸಹಿತ 109 ರನ್‌ ಪೇರಿಸಿದರು. ಇದು ಟಿ20 ಹಾಗೂ ಐಪಿಎಲ್‌ನಲ್ಲಿ ಅವರ ಚೊಚ್ಚಲ ಶತಕ. ಮತ್ತೋರ್ವ ಆರಂಭಿಕ ಆಟಗಾರ ಫಿಲ್‌ ಸಾಲ್ಟ್ ಕೇವಲ 10 ರನ್‌ ಗಳಿಸಿ ಔಟಾದರೆ, ಯುವ ಆಟಗಾರ ರಘುವಂಶಿ 18 ಎಸೆತಗಳಿಂದ 30 ರನ್‌ ಕಲೆ ಹಾಕಿದರು.

ನಾಯಕ ಶ್ರೇಯಸ್‌ ಅಯ್ಯರ್‌ 11 ರನ್‌ ಗಳಿಸಿದ್ದಾಗ ಚಹಾಲ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ರಸೆಲ್‌ ಆಟ ಕೂಡಾ 13 ರನ್‌ಗಳಿಗೆ ಅಂತ್ಯವಾಯ್ತು. ವೆಂಕಟೇಶ್‌ ಅಯ್ಯರ್ 8 ರನ್‌ ಗಳಿಸಿ ಔಟಾದರು. ಡೆತ್‌ ಓವರ್‌ಗಳಲ್ಲಿ ಸಿಡಿದ ರಿಂಕು ಸಿಂಗ್‌, 9 ಎಸೆತಗಳಲ್ಲಿ 20‌ ರನ್‌ ಸಿಡಿಸಿದರು. ಅಂತಿಮವಾಗಿ ಕೆಕೆಆರ್‌ 6 ವಿಕೆಟ್‌ ಕಳೆದುಕೊಂಡು ಭರ್ಜರಿ 223 ರನ್‌ ಪೇರಿಸಿತು.

ರಾಜಸ್ಥಾನ ಪರ ಆವೇಶ್‌ ಖಾನ್‌ ಒಂದು ಅದ್ಭುತ ಕ್ಯಾಚ್‌ ಸಹಿತ ಎರಡು ವಿಕೆಟ್‌ ಕಬಳಿಸಿದರೆ, ಕುಲ್ದೀಪ್‌ ಸೇನ್‌ ಕೂಡಾ 2 ವಿಕೆಟ್ ಪಡೆದರು. ಬೋಲ್ಟ್‌ ಹಾಗೂ ಚಹಾಲ್‌ ತಲಾ ಒಂದು ವಿಕೆಟ್‌ ಪಡೆದರು.‌

ರಾಜಸ್ಥಾನ ದಾಖಲೆಯ ಚೇಸಿಂಗ್

ಬೃಹತ್‌ ಮೊತ್ತ ಚೇಸಿಂಗ್‌ಗಿಳಿದ ರಾಜಸ್ಥಾನ ಆರಂಭದಲ್ಲೇ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಕಳೆದುಕೊಂಡಿತು. 19 ರನ್‌ ಗಳಿಸಿ ಜೈಸ್ವಾಲ್‌ ವಿಕೆಟ್‌ ಒಪ್ಪಿಸಿದರೆ, ನಾಯಕ ಸಂಜು ಸ್ಯಾಮ್ಸನ್‌ ಆಟ 12 ರನ್‌ಗಳಿಗೆ ಅಂತ್ಯವಾಯ್ತು. ಟೂರ್ನಿಯಲ್ಲಿ ಪ್ರಚಂಡ ಫಾರ್ಮ್‌ನಲ್ಲಿರುವ ರಿಯಾನ್‌ ಪರಾಗ್‌, ಕೇವಲ 14 ಎಸೆತಗಳಲ್ಲಿ 34 ರನ್‌ ಸಿಡಿಸಿ ರಸೆಲ್‌ಗೆ ಕ್ಯಾಚ್‌ ನೀಡಿ ಔಟಾದರು. ಧ್ರುವ್‌ ಜುರೆಲ್‌ ಪಿಚ್ ಬಳಿ ಬರುತ್ತಿದ್ದಂತೆಯೇ ನರೈನ್‌ ಮೋಡಿಗೆ ಬಲಿಯಾದರು. ರವಿಚಂದ್ರನ್‌ ಅಶ್ವಿನ್‌ ಆಟ 8 ರನ್‌ಗಳಿಗೆ ಅಂತ್ಯವಾಯ್ತು.

ತಂಡದ ಭರವಸೆಯ ಫಿನಿಶರ್‌ ಹೆಟ್ಮಾಯರ್‌ ಎದುರಿಸಿದ ಮೊದಲ ಎಸೆತದಲ್ಲೇ ಶ್ರೇಯಸ್‌ ಅಯ್ಯರ್‌ಗೆ ಕ್ಯಾಚ್‌ ನೀಡಿ ಗೋಲ್ಡನ್‌ ಡಕ್‌ ಆದರು. ತಂಡದ ಅರ್ಧಕ್ಕರ್ಧ ಬ್ಯಾಟರ್‌ಗಳು ಪೆವಿಲಿಯನ್‌ ಸೇರಿಕೊಂಡಾಗ ಪಿಚ್‌ ಬಳಿ ಬಂದ ರೋವ್ಮನ್‌ ಪೊವೆಲ್‌, ಆರಂಭಿಕನಾಗಿ ಕ್ರೀಸ್‌ಗಿಳಿದಿದ್ದ ಬಟ್ಲರ್‌ ಜೊತೆಗೂಡಿ ಆಕರ್ಷಕ ಆಟವಾಡಿದರು. ಕೇವಲ 13 ಎಸೆತಗಳಲ್ಲಿ 3 ಸಿಕ್ಸರ್‌ ಸಹಿತ 26 ರನ್‌ ಸಿಡಿಸಿದರು. ಈ ವೇಳೆ ನರೈನ್‌ ಸ್ಪಿನ್‌ ಮ್ಯಾಜಿಕ್‌ಗೆ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

ಬಟ್ಲರ್‌ ಏಕಾಂಗಿ ಹೋರಾಟ

ಅಬ್ಬರ ಮುಂದುವರೆಸಿದ ಬಟ್ಲರ್‌ ತಮ್ಮ ಆಟ ಮುಂದುವರೆಸಿದರು.‌ ನೋಡನೋಡುತ್ತಿದ್ದಂತೆಯೇ ಸ್ಫೋಟಕ ಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲೇ ಚೇಸಿಂಗ್‌ ವೇಳೆ ಎರಡನೇ ಶತಕ ಸಿಡಿಸಿದ ಅವರು, ತಂಡವನ್ನು ಗೆಲ್ಲಿಸಿದರು. ಆರಂಭಿಕನಾಗಿ ಕಣಕ್ಕಿಳಿದು ಕೊನೆಯವರೆಗೂ ಹೋರಾಡಿದರು. 60 ಎಸೆತಗಳಲ್ಲಿ 107 ರನ್‌ ಗಳಿಸಿ ಪಂದ್ಯಶ್ರೇಷ್ಠರಾದರು.

IPL_Entry_Point