ನನ್ನಿಂದಲೇ ಸಮಸ್ಯೆಯಾಗಿದ್ದರೆ ನಾನೇ ಹೋಗುವೆ; ಸೋಲಿನ ಬೆನ್ನಲ್ಲೇ ಜೋಸ್ ಬಟ್ಲರ್ ನಾಯಕತ್ವ ತ್ಯಜಿಸುವ ಸುಳಿವು
ಕನ್ನಡ ಸುದ್ದಿ  /  ಕ್ರಿಕೆಟ್  /  ನನ್ನಿಂದಲೇ ಸಮಸ್ಯೆಯಾಗಿದ್ದರೆ ನಾನೇ ಹೋಗುವೆ; ಸೋಲಿನ ಬೆನ್ನಲ್ಲೇ ಜೋಸ್ ಬಟ್ಲರ್ ನಾಯಕತ್ವ ತ್ಯಜಿಸುವ ಸುಳಿವು

ನನ್ನಿಂದಲೇ ಸಮಸ್ಯೆಯಾಗಿದ್ದರೆ ನಾನೇ ಹೋಗುವೆ; ಸೋಲಿನ ಬೆನ್ನಲ್ಲೇ ಜೋಸ್ ಬಟ್ಲರ್ ನಾಯಕತ್ವ ತ್ಯಜಿಸುವ ಸುಳಿವು

ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದ ಬೆನ್ನಲ್ಲೇ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ವ್ಯಾಪಕ ಟೀಕೆ ಎದುರಿಸುತ್ತಿದ್ದು, ನಾಯಕತ್ವ ತ್ಯಜಿಸುವ ಸುಳಿವು ನೀಡಿದ್ದಾರೆ.

ನನ್ನಿಂದಲೇ ಸಮಸ್ಯೆಯಾಗಿದ್ದರೆ ನಾನೇ ಹೋಗುವೆ; ಸೋಲಿನ ಬೆನ್ನಲ್ಲೇ ಜೋಸ್ ಬಟ್ಲರ್ ನಾಯಕತ್ವ ತ್ಯಜಿಸುವ ಸುಳಿವು
ನನ್ನಿಂದಲೇ ಸಮಸ್ಯೆಯಾಗಿದ್ದರೆ ನಾನೇ ಹೋಗುವೆ; ಸೋಲಿನ ಬೆನ್ನಲ್ಲೇ ಜೋಸ್ ಬಟ್ಲರ್ ನಾಯಕತ್ವ ತ್ಯಜಿಸುವ ಸುಳಿವು (AFP)

Jos Buttler: ಅಫ್ಘಾನಿಸ್ತಾನ ವಿರುದ್ಧ ಅಚ್ಚರಿಯ ಹಾಗೂ ಆಘಾತಕಾರಿ ಸೋಲುಂಡ ಇಂಗ್ಲೆಂಡ್ ತಂಡವು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದಲೇ ಹೊರ ಬಿದ್ದಿದೆ. ಆಸ್ಟ್ರೇಲಿಯಾ ವಿರುದ್ಧ ದಾಖಲೆಯ 352 ರನ್ ರಕ್ಷಿಸಿಕೊಳ್ಳಲು ಮತ್ತು ಅಫ್ಘನ್ ವಿರುದ್ಧ 325 ರನ್ ಗುರಿ ಬೆನ್ನಟ್ಟಲು ವಿಫಲವಾದ ಕ್ರಿಕೆಟ್ ಜನಕರು, ವಿಶ್ವ ಮಟ್ಟದಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ. ಟೆಸ್ಟ್, ಏಕದಿನ, ಟಿ20 ಸರಣಿಗಳಲ್ಲಿ ಸತತ ಸೋಲು, ಐಸಿಸಿ ಟೂರ್ನಿಗಳಲ್ಲಿ ನೀಡುತ್ತಿರುವ ನೀರಸ ಪ್ರದರ್ಶನವು ಇಂಗ್ಲೆಂಡ್ ಭವಿಷ್ಯವನ್ನು ಆತಂಕಕ್ಕೆ ದೂಡಿದೆ. ಅಫ್ಘನ್ ಎದುರು ಸೋಲಿನ ಬೆನ್ನಲ್ಲೇ ತೀವ್ರ ಒತ್ತಡಕ್ಕೆ ಸಿಲುಕಿರುವ ಜೋಸ್ ಬಟ್ಲರ್, ನಾಯಕತ್ವ ತೊರೆಯುವ ಕುರಿತು ಮಾತನಾಡಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಅವಮಾನಕರ ಸೋಲನ್ನು ಇಂಗ್ಲೆಂಡ್ ಅಭಿಮಾನಿಗಳು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ 2023ರ ಏಕದಿನ ವಿಶ್ವಕಪ್​ನಲ್ಲೂ ಅಫ್ಘನ್ ವಿರುದ್ಧವೇ ಇಂಗ್ಲೆಂಡ್ ಸೋತಿತ್ತು. ಈಗ ಅದು ಮತ್ತೊಮ್ಮೆ ಸಂಭವಿಸಿದ್ದು, ಜೋಸ್ ಬಟ್ಲರ್ ನಾಯಕತ್ವವನ್ನು ಟೀಕಿಸಲಾಗುತ್ತಿದೆ. 2022ರ ಜುಲೈನಲ್ಲಿ ಇಯಾನ್ ಮಾರ್ಗನ್​ ಮಾರ್ಗನ್ ನಿರ್ಗಮನದ ನಂತರ ಜವಾಬ್ದಾರಿ ವಹಿಸಿಕೊಂಡ ಬಟ್ಲರ್, ಅದೇ ವರ್ಷ ಇಂಗ್ಲೆಂಡ್​ಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದರು. ಅಂತಹ ನಾಯಕನೇ ಈಗ ಅನೇಕ ಪ್ರಶ್ನೆಗಳನ್ನು ಎದುರಿಸುವಂತಾಗಿದೆ. ಈ ವಿಶ್ವಕಪ್ ಬಳಿಕ ಇಂಗ್ಲೆಂಡ್ 58 ವೈಟ್ ಬಾಲ್​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 32ರಲ್ಲಿ ಪರಾಜಯಗೊಂಡಿದೆ.

ನಾಯಕತ್ವ ತೊರೆಯುವ ಕುರಿತು ಬಟ್ಲರ್ ಸುಳಿವು

ಈಗ ಚಾಂಪಿಯನ್ಸ್ ಟ್ರೋಫಿ, 2023ರಲ್ಲಿ ಏಕದಿನ ವಿಶ್ವಕಪ್ ಲೀಗ್ ಹಂತದಲ್ಲಿ ನಾಕೌಟ್ ಆಗಿತ್ತು. ಕಳೆದ ವರ್ಷ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್ಲಿ ಸೋತಿತ್ತು. ಅಫ್ಘಾನಿಸ್ತಾನ ವಿರುದ್ಧದ ಸೋಲಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಟ್ಲರ್, 'ನಾವು ನಿರೀಕ್ಷಿಸಿದಂತೆ ಫಲಿತಾಂಶಗಳು ಬರಲಿಲ್ಲ ಎಂಬುದು ನಿಜ. ಎಲ್ಲಾ ಸಾಧ್ಯತೆಗಳನ್ನು ಸಹ ನಾನು ಪರಿಶೀಲಿಸುತ್ತೇನೆ. ವೈಟ್-ಬಾಲ್ ಸ್ವರೂಪಗಳಲ್ಲಿ ಇಂಗ್ಲೆಂಡ್​​ಗೆ ಗತವೈಭವ ಮರಳಿ ತರುವ ಅವಶ್ಯಕತೆಯಿದೆ. ನಾನು ಸಮಸ್ಯೆಯ ಭಾಗವೇ ಅಥವಾ ಪರಿಹಾರದ ಭಾಗವೇ ಎಂಬುದರ ಬಗ್ಗೆ ನಾನು ಯೋಚಿಸಬೇಕಾಗಿದೆ ಎಂದು ಬಟ್ಲರ್ ನಾಯಕತ್ವದ ನಿವೃತ್ತಿಯ ಕುರಿತು ತುಟಿಬಿಚ್ಚಿದ್ದಾರೆ. ಒಂದು ವೇಳೆ ತಮ್ಮಿಂದಲೇ ಸಮಸ್ಯೆ ಆದರೆ ನಾಯಕತ್ವ ತೊರೆಯುವ ಕುರಿತು ಸುಳಿವು ನೀಡಿದ್ದಾರೆ.

ಗತವೈಭವ ತರಬೇಕಿದೆ ಎಂದ ಜೋಸ್ ಬಟ್ಲರ್

ಬಟ್ಲರ್ ಅವರ ಬ್ಯಾಟಿಂಗ್ ಫಾರ್ಮ್ ಕೂಡ ನಿರಾಶಾದಾಯಕವಾಗಿದ್ದು, ಟಿ20 ವಿಶ್ವಕಪ್ ಗೆದ್ದ ಬಳಿಕ ಆಡಿದ 58 ಪಂದ್ಯಗಳಲ್ಲಿ ಒಂದು ಶತಕವನ್ನಷ್ಟೇ ಗಳಿಸಿದ್ದಾರೆ. ತನ್ನ ಭವಿಷ್ಯದ ಬಗ್ಗೆ ಈಗಲೇ ನಿರ್ಧರಿಸುವುದಿಲ್ಲ ಎನ್ನುತ್ತಾರೆ. ನಾನು ಭಾವುಕನಾಗಲು ಹೋಗುವುದಿಲ್ಲ ಮತ್ತು ಇದೀಗ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೋಗುವುದಿಲ್ಲ. ಈಗಲೇ ಏನನ್ನೂ ಚರ್ಚಿಸುವುದಿಲ್ಲ. ನಾನು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ. ಯಾವುದು ಸರಿ ಎಂಬುದರ ಬಗ್ಗೆ ನಾನು ಯೋಚಿಸುತ್ತೇನೆ. ಮೇಲಿನವರು ಸಹ ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿದ್ದಾರೆ. ನಾನು ಈ ಸಮಸ್ಯೆಯನ್ನು ಪರಿಹರಿಸುವ ಪ್ರಕ್ರಿಯೆಯಲ್ಲಿದ್ದೇನೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯೋಚಿಸಬೇಕಾಗಿದೆ ಎಂದು ಬಟ್ಲರ್ ಹೇಳಿದ್ದಾರೆ.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner