ಚಾಂಪಿಯನ್ಸ್ ಟ್ರೋಫಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ತಂಡದ ನಾಯಕತ್ವ ತ್ಯಜಿಸಿದ ಜೋಸ್ ಬಟ್ಲರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ತಂಡದ ನಾಯಕತ್ವ ತ್ಯಜಿಸಿದ ಜೋಸ್ ಬಟ್ಲರ್

ಚಾಂಪಿಯನ್ಸ್ ಟ್ರೋಫಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ತಂಡದ ನಾಯಕತ್ವ ತ್ಯಜಿಸಿದ ಜೋಸ್ ಬಟ್ಲರ್

Jos Buttler: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಸೋಲಿನ ನಂತರ ಜೋಸ್ ಬಟ್ಲರ್ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ವೈಟ್ ಬಾಲ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ತಂಡದ ನಾಯಕತ್ವ ತ್ಯಜಿಸಿದ ಜೋಸ್ ಬಟ್ಲರ್
ಚಾಂಪಿಯನ್ಸ್ ಟ್ರೋಫಿ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ತಂಡದ ನಾಯಕತ್ವ ತ್ಯಜಿಸಿದ ಜೋಸ್ ಬಟ್ಲರ್

ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಿಂದಲೇ ಹೊರಬಿದ್ದ ಹಿನ್ನೆಲೆ ಲಾಹೋರ್​​ನ ಗಡಾಫಿ ಕ್ರೀಡಾಂಗಣದಲ್ಲಿ ಶನಿವಾರ (ಮಾರ್ಚ್ 1) ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ತಮ್ಮ ಕೊನೆಯ ಪಂದ್ಯಕ್ಕೂ ಮುನ್ನ ಜೋಸ್ ಬಟ್ಲರ್ ಇಂಗ್ಲೆಂಡ್‌ ತಂಡದ ವೈಟ್-ಬಾಲ್ ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ದೃಢಪಡಿಸಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಟ್ಲರ್ ಕೊನೆಯ ಬಾರಿಗೆ ಇಂಗ್ಲೆಂಡ್ ಅನ್ನು ಮುನ್ನಡೆಸಲಿದ್ದಾರೆ. ಸೋಲಿನ ಹೊಣೆ ಹೊತ್ತು ಈ ನಿರ್ಧಾರ ಕೈಗೊಂಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಲಾಹೋರ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಸೋತ ನಂತರ ಮತ್ತು ಎರಡು ಬಾರಿ ಫೈನಲಿಸ್ಟ್ ಆಗಿದ್ದ ತಂಡ ಗುಂಪು ಹಂತದಲ್ಲಿಯೇ ಹೊರಬಿದ್ದ ನಂತರ ಈ ಘೋಷಣೆ ಬಂದಿದೆ. ಬುಧವಾರ (ಫೆಬ್ರವರಿ 26) ಅಫ್ಘಾನಿಸ್ತಾನ ವಿರುದ್ಧದ ಸೋಲಿನ ನಂತರ, ಬಟ್ಲರ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಉನ್ನತ ಹುದ್ದೆಯಿಂದ ಕೆಳಗಿಳಿಯುವ ಬಗ್ಗೆ ಯೋಚಿಸುತ್ತಿರುವುದಾಗಿ ಸುಳಿವು ನೀಡಿದ್ದರು.

ನಾಯಕತ್ವ ತೊರೆಯಲು ಇದು ಸರಿಯಾದ ನಿರ್ಧಾರ ಎಂದು ಬಟ್ಲರ್ ಹೇಳಿದ್ದಾರೆ. ಏಕದಿನ ಮತ್ತು ಟಿ20ಐ ಕ್ರಿಕೆಟ್​ಗೆ ನಾಯಕತ್ವ ವಹಿಸಿದ್ದರು. ಆದರೆ 2015ರಿಂದ 2025ರ ತನಕ ಕ್ಯಾಪ್ಟನ್ ಆಗಿದ್ದರು. 2015ರಿಂದ 2022ರ ತನಕ ಹಂಗಾಮಿ ನಾಯಕನಾಗಿ ತಂಡ ಮುನ್ನಡೆಸಿದ್ದರು. ಆದರೆ 2022ರಿಂದ ಕಾಯಂ ನಾಯಕನಾಗಿ ಸೇರ್ಪಡೆಗೊಂಡರು. ತನ್ನ ನಾಯಕತ್ವದಲ್ಲಿ ಇಂಗ್ಲೆಂಡ್ 95 (ಟಿ20ಐ, ಏಕದಿನ) ಪಂದ್ಯಗಳನ್ನು ಆಡಿದೆ. ಆದರೆ ಗೆಲುವಿಗಿಂತ ಸೋಲು ಕಂಡಿರೋದೇ ಹೆಚ್ಚು. 44 ಗೆಲುವು, 47 ಸೋಲು ಕಂಡಿದ್ದಾರೆ. ಅದರಲ್ಲೂ ಏಕದಿನದಲ್ಲಿ 43 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್, 18 ಗೆಲುವು, 25 ಸೋಲು ಅನುಭವಿಸಿದೆ.

ಚಾಂಪಿಯನ್ಸ್​ಗೂ ಮುನ್ನ ಏಕದಿನ, ಟಿ20 ವಿಶ್ವಕಪ್​ನಲ್ಲೂ ಸೋಲು

ಬಟ್ಲರ್ ನಾಯಕತ್ವದಲ್ಲಿ ರಾಷ್ಟ್ರೀಯ ತಂಡಕ್ಕೆ ಇದು ಸತತ ಮೂರನೇ ಕಳಪೆ ಐಸಿಸಿ ಟೂರ್ನಿಯಾಗಿದೆ. 2023ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಸೆಮಿಫೈನಲ್ ತಲುಪಲು ವಿಫಲವಾಗಿತ್ತು. ಲೀಗ್ ಹಂತದಿಂದಲೇ ಹೊರ ಬಿದ್ದ ಕಾರಣ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. 2019ರಲ್ಲಿ ಚಾಂಪಿಯನ್ ಆಗಿದ್ದ ಬಟ್ಲರ್ ಪಡೆ, ಬಾಂಗ್ಲಾದೇಶ, ನೆದರ್ಲೆಂಡ್ಸ್ ಮತ್ತು ಪಾಕಿಸ್ತಾನ ವಿರುದ್ಧದ ಮಾತ್ರ ಗೆಲುವು ಸಾಧಿಸಿತ್ತು. ಅಂದು ಆಡಿದ್ದ 9 ಪಂದ್ಯಗಳಲ್ಲಿ ಕೇವಲ 3 ಗೆಲುವುಗಳೊಂದಿಗೆ ಗುಂಪು ಹಂತದಲ್ಲಿ 6ನೇ ಸ್ಥಾನ ಪಡೆದಿತ್ತು.

ಬಳಿಕ 2024ರ ಟಿ20 ವಿಶ್ವಕಪ್‌ನಲ್ಲಿ ಬಟ್ಲರ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿತ್ತು. ಆದರೆ ಅವರ ಅಭಿಯಾನವು ಪ್ರಭಾವಶಾಲಿಯಾಗಿರಲಿಲ್ಲ. ಗುಂಪು ಹಂತದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದ ಇಂಗ್ಲೆಂಡ್, ತಮ್ಮ ಮೊದಲ ಸೂಪರ್ 8 ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿತ್ತು. ಇದರ ನಡುವೆಯೂ ಸೆಮೀಸ್​ಗೇರಿದ್ದ ಆಂಗ್ಲರು, ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಶರಣಾದರು. ಇದರೊಂದಿಗೆ ಟೂರ್ನಿಯಲ್ಲಿ ತಮ್ಮ ಅಭಿಯಾನ ಮುಗಿಸಿದ್ದರು.

ಐಸಿಸಿ ಪ್ರಶಸ್ತಿ ಗೆದ್ದ ಮೂವರಲ್ಲಿ ಒಬ್ಬರು ಬಟ್ಲರ್

ಇಯಾನ್ ಮಾರ್ಗನ್ ನಿವೃತ್ತಿಯ ನಂತರ ಜುಲೈ 2022ರಲ್ಲಿ ಬಟ್ಲರ್ ನಾಯಕತ್ವ ವಹಿಸಿದ್ದರು. ಅದೇ ವರ್ಷ ನಡೆದ ಆಸ್ಟ್ರೇಲಿಯಾ ನೆಲದಲ್ಲಿ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಎರಡನೇ ಟ್ರೋಫಿಗೆ ಮುತ್ತಿಕ್ಕಿತ್ತು. ಪಾಲ್ ಕಾಲಿಂಗ್‌ವುಡ್ (2010 ಟಿ20 ವಿಶ್ವಕಪ್) ಮತ್ತು (2019 ವಿಶ್ವಕಪ್) ನಂತರ ಐಸಿಸಿ ಪ್ರಶಸ್ತಿಯನ್ನು ಗೆದ್ದ ಕೇವಲ ಮೂರು ಇಂಗ್ಲೆಂಡ್ ನಾಯಕರಲ್ಲಿ ಬಟ್ಲರ್ ಕೂಡ ಒಬ್ಬರಾಗಿದ್ದಾರೆ. 2024ರ ಟಿ20 ವಿಶ್ವಕಪ್ ಸೋಲಿನ ನಂತರ ಇಂಗ್ಲೆಂಡ್‌ನ ವೈಟ್-ಬಾಲ್ ಕೋಚ್ ಮ್ಯಾಥ್ಯೂ ಮಾಟ್ಸ್ ಆ ಹುದ್ದೆಯಿಂದ ಕೆಳಗಿಳಿದಿದ್ದರು.

ಜೂನ್ 2022 ರಿಂದ ತಂಡದ ರೆಡ್-ಬಾಲ್ ಕೋಚ್ ಆಗಿದ್ದ ಬ್ರೆಂಡನ್ ಮೆಕಲಮ್ ಅವರನ್ನು 2025ರ ಜನವರಿ 1 ರಿಂದ ಕ್ರಿಕೆಟ್​ನ ಎಲ್ಲಾ ಮೂರು ಸ್ವರೂಪಗಳಲ್ಲಿ ಇಂಗ್ಲೆಂಡ್ ಕೋಚ್ ಆಗಿ ನೇಮಕಗೊಂಡರು.

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.