ಜೋಸ್ ಬಟ್ಲರ್ ಗೆಲುವಿನ ಸೆಂಚುರಿ ಮುಂದೆ ಕೊಹ್ಲಿ ಶತಕ ವ್ಯರ್ಥ; ರಾಜಸ್ಥಾನ್​ಗೆ ಸತತ 4ನೇ ಜಯ, ಆರ್​​ಸಿಬಿ ಹ್ಯಾಟ್ರಿಕ್​ ಸೋಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಜೋಸ್ ಬಟ್ಲರ್ ಗೆಲುವಿನ ಸೆಂಚುರಿ ಮುಂದೆ ಕೊಹ್ಲಿ ಶತಕ ವ್ಯರ್ಥ; ರಾಜಸ್ಥಾನ್​ಗೆ ಸತತ 4ನೇ ಜಯ, ಆರ್​​ಸಿಬಿ ಹ್ಯಾಟ್ರಿಕ್​ ಸೋಲು

ಜೋಸ್ ಬಟ್ಲರ್ ಗೆಲುವಿನ ಸೆಂಚುರಿ ಮುಂದೆ ಕೊಹ್ಲಿ ಶತಕ ವ್ಯರ್ಥ; ರಾಜಸ್ಥಾನ್​ಗೆ ಸತತ 4ನೇ ಜಯ, ಆರ್​​ಸಿಬಿ ಹ್ಯಾಟ್ರಿಕ್​ ಸೋಲು

RR Beat RCB: 17ನೇ ಆವೃತ್ತಿಯ ಐಪಿಎಲ್​ನ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್​ 6 ವಿಕೆಟ್​​ಗಳ ಗೆಲುವು ಸಾಧಿಸಿತು. ಜೋಸ್​ ಬಟ್ಲರ್ ಶತಕ ಸಿಡಿಸಿ ಆರ್​ಸಿಬಿ ಗೆಲುವನ್ನು ಕಿತ್ತುಕೊಂಡರು. ಇದರೊಂದಿಗೆ ವಿರಾಟ್ ಕೊಹ್ಲಿ ಸೆಂಚುರಿ ವ್ಯರ್ಥವಾಯಿತು.

ರಾಜಸ್ಥಾನ್​ಗೆ ಸತತ 4ನೇ ಜಯ, ಆರ್​​ಸಿಬಿ ಹ್ಯಾಟ್ರಿಕ್​ ಸೋಲು
ರಾಜಸ್ಥಾನ್​ಗೆ ಸತತ 4ನೇ ಜಯ, ಆರ್​​ಸಿಬಿ ಹ್ಯಾಟ್ರಿಕ್​ ಸೋಲು (AP)

ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರ ಶತಕಕ್ಕೂ (113*) ಜಗ್ಗದ ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಜೋಸ್ ಬಟ್ಲರ್ (100)​ ಅವರ ಶತಕ ಮತ್ತು ಸಂಜು ಸ್ಯಾಮ್ಸನ್ (69) ಅರ್ಧಶತಕ ಸಿಡಿಸಿದ್ದರ ಜತೆಗೆ 148 ರನ್​ಗಳ ಜೊತೆಯಾಟವಾಡುವ ಮೂಲಕ ಆರ್​ಸಿಬಿಯನ್ನು ಆರ್​​ಆರ್,​ 6 ವಿಕೆಟ್​​ಗಳಿಂದ ಮಣಿಸಿತು. ಟೂರ್ನಿಯಲ್ಲಿ ಬೆಂಗಳೂರು 4ನೇ ಸೋಲು ಕಂಡರೆ, ರಾಜಸ್ಥಾನ ಸತತ 4ನೇ ಜಯದ ನಗೆ ಬೀರಿದೆ. ಇದು ಬಟ್ಲರ್​​ಗೆ 100ನೇ ಐಪಿಎಲ್​ ಪಂದ್ಯವಾಗಿದ್ದು, ಶತಕ ಸಿಡಿಸಿ ಸ್ಮರಣೀಯವಾಗಿಸಿಕೊಂಡಿದ್ದಾರೆ.

ಜೈಪುರದ ಸವಾಯಿ ಮಾನ್ಸಿಂಗ್​ ಕ್ರಿಕೆಟ್ ಮೈದಾನದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್​ನ 19ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ, ಉತ್ತಮ ಮೊತ್ತವನ್ನು ಕಲೆ ಹಾಕಿತು. ಕೊಹ್ಲಿ ಅವರ ಸೆಂಚುರಿ ಸಹಾಯದಿಂದ ಬೆಂಗಳೂರು 20 ಓವರ್​​ಗಳಲ್ಲಿ 3 ವಿಕೆಟ್​ಗೆ 183 ರನ್ ಗಳಿಸಿತು. ಆದರೆ ಗುರಿ ಬೆನ್ನಟ್ಟಿದ ಆರ್​​ಆರ್​​, ಎದುರಾಳಿ ಬೌಲರ್​ಗಳ ಬೆನ್ನು ಮುರಿದರು. ಸ್ಯಾಮ್ಸನ್ ಮತ್ತು ಬಟ್ಲರ್​ ಅವರ ಆರ್ಭಟದಿಂದ 19.1 ಓವರ್​​ಗಳಲ್ಲೇ ಗೆಲುವಿನ ಗೆರೆ ದಾಟಿತು.

ವಿಕೆಟ್ ಪಡೆಯಲು ಆರ್​​ಸಿಬಿ ಬೌಲರ್ಸ್ ಪರದಾಟ

184 ರನ್​​​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್​, ಇನ್ನಿಂಗ್ಸ್​ನ ಆರಂಭಿಕ ಓವರ್​​​ನಲ್ಲೇ ಯಶಸ್ವಿ ಜೈಸ್ವಾಲ್​ (0) ಅವರನ್ನು ಕಳೆದುಕೊಂಡಿತು. ರೀಸ್​ ಟೋಪ್ಲಿ ಈ ವಿಕೆಟ್ ಪಡೆದು ತಂಡಕ್ಕೆ ಮೇಲುಗೈ ತಂದುಕೊಟ್ಟರು. ಆದರೆ, ಆ ಬಳಿಕ ಒಂದಾದ ಸ್ಯಾಮ್ಸನ್ ಮತ್ತು ಬಟ್ಲರ್​ ಜೋಡಿ ಆರ್​​ಸಿಬಿ ಬೌಲರ್​​ಗಳಿಗೆ ಕರುಣೆಯಿಲ್ಲದೆ ಮನಬಂದಂತೆ ದಂಡಿಸಿತು. ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈದಿತು. ಒತ್ತಡಕ್ಕೆ ಒಳಗಾಗದೆ ನಿರ್ಭೀತಿಯಿಂದ ಆಟವಾಡಿದ ಇಬ್ಬರು, 2ನೇ ವಿಕೆಟ್​ಗೆ 148 ರನ್​ಗಳ ಭರ್ಜರಿ ಜೊತೆಯಾಟವಾಡಿದರು.

ಸ್ಯಾಮ್ಸನ್ ಅರ್ಧಶತಕ, ಬಟ್ಲರ್ ಶತಕ

ಸೆಂಚುರಿ ಪಾಲುದಾರಿಕೆ ನೀಡಿದ ಸ್ಯಾಮ್ಸನ್ ಅರ್ಧಶತಕ ಸಿಡಿಸಿದರೆ, ಬಟ್ಲರ್​ ಐಪಿಎಲ್​ನಲ್ಲಿ 6ನೇ ಶತಕ ಸಿಡಿಸಿ ಮಿಂಚಿದರು. ಒಂದೆಡೆ ಆರ್​ಸಿಬಿ ಬೌಲರ್​​ಗಳು ವಿಕೆಟ್ ಪಡೆಯಲು ಪರದಾಟ ನಡೆಸಿದರೆ, ಮತ್ತೊಬ್ಬರು ಈ ಇಬ್ಬರು ರನ್​ ಮಳೆ ಹರಿಸಿದರು. ಸ್ಯಾಮ್ಸನ್ 42 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​​ನೊಂದಿಗೆ 69 ರನ್​ಗಳಿಸಿ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ಸಿರಾಜ್ ಈ ವಿಕೆಟ್ ಪಡೆದರು. ರಿಯಾನ್ ಪರಾಗ್ 4, ಧ್ರುವ್ ಜುರೆಲ್ 2 ರನ್ ಗಳಿಸಿ ಔಟಾದರು.

ಆದರೆ, ಧ್ರುವ್ ಜುರೆಲ್ ಕೊನೆಯವರೆಗೂ ಕ್ರೀಸ್​ನಲ್ಲಿದ್ದು, ತಂಡವನ್ನು ಗೆಲ್ಲಿಸಿದರು. ಕಳೆದ ಮೂರು ಪಂದ್ಯಗಳಿಂದ ನಿರಾಸೆ ಮೂಡಿಸಿದ್ದ ಬಟ್ಲರ್​, ಈ ಪಂದ್ಯದಲ್ಲಿ ಲಯಕ್ಕೆ ಮರಳಿದ್ದಲ್ಲದೆ, ಗೆಲುವಿನ ಇನ್ನಿಂಗ್ಸ್​ ಆಡಿದರು. ಅಲ್ಲದೆ, ಶತಕ ಸಿಡಿಸಿ ದಾಖಳೆ ಬರೆದರು. ಈ ಐಪಿಎಲ್​ನಲ್ಲಿ ದಾಖಲಾದ ಎರಡನೇ ಶತಕ ಇದಾಗಿದೆ. 58 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್​​​ನೊಂದಿಗೆ ಅಜೇಯ 100 ರನ್ ಗಳಿಸಿದರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮೆಯರ್​ 11 ರನ್ ಗಳಿಸಿ ಬಟ್ಲರ್​​ಗೆ ಸಾಥ್ ನೀಡಿದರು.

ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ

ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ, ಈ ಐಪಿಎಲ್​ನಲ್ಲಿ ಭರ್ಜರಿ ಆರಂಭ ಪಡೆಯಿತು. ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಮೊದಲ ವಿಕೆಟ್​​ಗೆ 125 ರನ್​ಗಳ ಅಮೋಘ ಭದ್ರಬುನಾದಿ ಹಾಕಿಕೊಟ್ಟರು. ಫಾಫ್ ಡು ಪ್ಲೆಸಿಸ್ 44 ರನ್ ಗಳಿಸಿ ಲಯಕ್ಕೆ ಮರಳಿದರು. ಆದರೆ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಮತ್ತೊಂದೆಡೆ ಗ್ಲೆನ್ ಮ್ಯಾಕ್ಸ್​ವೆಲ್ (1) ಸತತ ಐದನೇ ಪಂದ್ಯದಲ್ಲೂ ರನ್ ಗಳಿಸಲು ಪರದಾಡಿದರು. ಡೆಬ್ಯೂಸ್ಟಾರ್ ಸೌರಭ್ ಚೌಹಾಣ್ 9, ಕ್ಯಾಮರೂನ್ ಗ್ರೀನ್ ಅಜೇಯ 6 ರನ್ ಗಳಿಸಿದರು.

ಆರಂಭದಿಂದಲೂ ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ, ಇನ್ನಿಂಗ್ಸ್​​ ಕೊನೆಯವರೆಗೂ ಬ್ಯಾಟ್​ ಬೀಸಿದರು. ತಾನು ಎದುರಿಸಿದ 67ನೇ ಎಸೆತದಲ್ಲಿ ತನ್ನ 8ನೇ ಐಪಿಎಲ್ ಶತಕವನ್ನು ಪೂರೈಸಿದರು. ರಾಜಸ್ಥಾನ್ ವಿರುದ್ಧ ಇದು ಅವರ ಮೊದಲ ಸೆಂಚುರಿಯಾಗಿದೆ. ಇದರ ನಡುವೆಯೂ ಶತಕ ಚಚ್ಚಿದ ಕೊಹ್ಲಿ, ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು. 72 ಎಸೆತಗಳಲ್ಲಿ 12 ಬೌಂಡರಿ, 4 ಬೌಂಡರಿ ಸಹಿತ 113 ರನ್ ಕಲೆ ಹಾಕಿದರು.

ಕೊನೆಯ ಹಂತದಲ್ಲಿ ಖಡಕ್ ಬೌಲಿಂಗ್ ದಾಳಿ ನಡೆಸಿದ ಆರ್​ಆರ್​​ ಬೌಲರ್ಸ್​, ಆರ್​ಸಿಬಿ ಬ್ಯಾಟಿಂಗ್​ಗೆ ಕಡಿವಾಣ ಹಾಕಿದರು. ಆದರೆ ಕೊಹ್ಲಿಯಂತೆ ಉಳಿದ ಬ್ಯಾಟರ್​ಗಳು ಸಹ ಸಿಡಿದಿದ್ದರೆ, ತಂಡದ ಮೊತ್ತವು 200ರ ಗಡಿ ದಾಟುತ್ತಿತ್ತು. ಆಗ ಆರ್​ಆರ್​​ಗೆ ಸವಾಲು ಹಾಕಲು ಸಾಧ್ಯವಾಗುತ್ತಿತ್ತು. ಅಂತಿಮವಾಗಿ ಆರ್​ಸಿಬಿ 20 ಓವರ್​​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 183 ರನ್ ಗಳಿಸಿತು.

Whats_app_banner