ಜೋಸ್ ಬಟ್ಲರ್ ಓಪನಿಂಗ್, ಸಿರಾಜ್ ಪದಾರ್ಪಣೆ; ಐಪಿಎಲ್ 2025ಕ್ಕೆ ಗುಜರಾತ್ ಟೈಟಾನ್ಸ್ ಸಂಭಾವ್ಯ ಆಡುವ ಬಳಗ
ಗುಜರಾತ್ ಟೈಟಾನ್ಸ್‌ಗೆ ತಂಡವು ಈ ಬಾರಿಯೂ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಜೋಸ್ ಬಟ್ಲರ್, ಗ್ಲೆನ್ ಫಿಲಿಪ್ಸ್, ಮೊಹಮ್ಮದ್ ಸಿರಾಜ್ ಸೇರ್ಪಡೆಯು ತಂಡಕ್ಕೆ ಬಲ ತುಂಬಲಿದೆ. ಐಪಿಎಲ್ 2025ರ ಟೂರ್ನಿಗೆ ಜಿಟಿ ತಂಡದ ಸಂಭಾವ್ಯ ಆಡುವ ಬಳಗ ಹೀಗಿರಲಿದೆ.

ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ 18ನೇ ಆವೃತ್ತಿಯಲ್ಲಿ ಮಾರ್ಚ್ 25ರಂದು ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ತಂಡದ ಎದುರಾಳಿ ಪಂಜಾಬ್ ಕಿಂಗ್ಸ್. ಕಳೆದ ಆವೃತ್ತಿಯು ಜಿಟಿ ಪಾಲಿಗೆ ಕಹಿಯಾಗಿತ್ತು. ಅದೇ ಮೊದಲ ಬಾರಿಗೆ ಫೈನಲ್ ಮಾತ್ರವಲ್ಲದೆ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯಲು ತಂಡ ವಿಫಲವಾಯ್ತು. ತಂಡದ ಕಳಪೆ ಫಲಿತಾಂಶದ ಹೊರತಾಗಿಯೂ, ತಂಡದ ಮ್ಯಾನೇಜ್‌ಮೆಂಟ್ ಶುಭ್ಮನ್ ಅವರನ್ನು ನಾಯಕನನ್ನಾಗಿ ಉಳಿಸಿಕೊಂಡಿದೆ. ಮೆಗಾ ಹರಾಜಿನಲ್ಲಿ ತಂಡವನ್ನು ಮತ್ತಷ್ಟು ಬಲಿಷ್ಠವಾಗಿಸಿರುವ ಜಿಟಿ, ಈ ಬಾರಿ ಎರಡನೇ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.
ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ ಗುಜರಾತ್, 2022ರಲ್ಲಿ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿತು. 2023ರಲ್ಲಿಯೂ ಸತತ ಎರಡನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯಿತು. ಕಳೆದ ಬಾರಿ ವೈಫಲ್ಯ ಅನುಭವಿಸಿದ ಬಳಿಕ ಈ ಬಾರಿ ತಂಡದಲ್ಲಿ ಮೇಜರ್ ಸರ್ಜರಿ ನಡೆದಿದೆ. ಬಲಿಷ್ಠ ಆಟಗಾರರಾದ ಮೊಹಮ್ಮದ್ ಶಮಿ, ನೂರ್ ಅಹ್ಮದ್ ಮತ್ತು ಡೇವಿಡ್ ಮಿಲ್ಲರ್ ಅವರಂಥಾ ಆಟಗಾರರನ್ನು ಬಿಡುಗಡೆ ಮಾಡಿರುವ ತಂಡವು, ಕೆಲವು ಹೊಸಬರನ್ನು ತಂಡಕ್ಕೆ ಕರೆಸಿಕೊಂಡಿದೆ. ಈ ಬಾರಿ ಜೋಸ್ ಬಟ್ಲರ್, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಆಟಗಾರರು ತಂಡದ ಬಲ ಹೆಚ್ಚಿಸಲಿದ್ದಾರೆ.
ಟೈಟಾನ್ಸ್‌ಗೆ ತಂಡಕ್ಕೆ ಸ್ಫೋಟಕ ಬ್ಯಾಟಿಂಗ್ ಲೈನ್‌ಅಪ್ ದೊಡ್ಡ ಶಕ್ತಿ. ಬಟ್ಲರ್ ಸೇರ್ಪಡೆ, ಬ್ಯಾಟಿಂಗ್ ಕ್ರಮಾಂಕವನ್ನು ಮತ್ತಷ್ಟು ಬಲಪಡಿಸಲಿದೆ. ಇವರು ಶುಭ್ಮನ್ ಗಿಲ್ ಅವರೊಂದಿಗೆ ಇನ್ನಿಂಗ್ಸ್ ಓಪನಿಂಗ್ ಮಾಡುವುದು ಬಹುತೇಕ ಖಚಿತ. ಗ್ಲೆನ್ ಫಿಲಿಪ್ಸ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಆಲ್‌ರೌಂಡ್ ಆಟ ತಂಡಕ್ಕೆ ನೆರವಾಗಲಿದೆ. ಅಲ್ಲದೆ ಫೀಲ್ಡಿಂಗ್‌ಗೂ ಶಕ್ತಿ ತುಂಬಲಿದೆ. ವಿಶ್ವ ದರ್ಜೆಯ ಸ್ಪಿನ್ನರ್ ರಶೀದ್ ಖಾನ್ ತಂಡದಲ್ಲಿದ್ದಾರೆ. ಕೆಳಕ್ರಮಾಂಕದಲ್ಲಿ ಇವರು ಬ್ಯಾಟಿಂಗ್‌ಗೂ ನೆರವಾಗಲಿದ್ದಾರೆ. ಈ ಬಾರಿ ಕಗಿಸೊ ರಬಾಡ ಮತ್ತು ಮೊಹಮ್ಮದ್ ಸಿರಾಜ್ ತಂಡದ ವೇಗದ ದಾಳಿಯನ್ನು ಬಲಪಡಿಸಲಿದ್ದಾರೆ.
ತಂಡದ ಮಧ್ಯಮ ಕ್ರಮಾಂಕದಲ್ಲಿ ಸಾಯಿ ಸುದರ್ಶನ್ ಮತ್ತು ಶಾರುಖ್ ಖಾನ್ ಮೇಲೆ ತುಸು ಒತ್ತಡ ಇರಲಿದೆ. ತೆವಾಟಿಯಾ ಹಾಗೂ ವಾಷಿಂಗ್ಟನ್ ಲಭ್ಯತೆಯಿಂದ ಕೆಳ ಕ್ರಮಾಂಕದಲ್ಲೂ ರನ್‌ಗಳು ಹರಿದು ಬರಲಿವೆ. ಅಗ್ರಕ್ರಮಾಂಕದ ಆಟಗಾರರು ವಿಫಲವಾದರೆ, ಅದು ತಂಡದ ಒಟ್ಟಾರೆ ಸಮತೋಲನದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಈ ಬಾರಿ ತಂಡದ ಆಡುವ ಬಳಗದ ರಚನೆ ಕುತೂಹಲ ಮೂಡಿಸಿದೆ.
ಐಪಿಎಲ್ 2025ಕ್ಕೆ ಗುಜರಾತ್ ಟೈಟಾನ್ಸ್ ಸಂಭಾವ್ಯ ಆಡುವ ಬಳಗ
1. ಶುಭ್ಮನ್ ಗಿಲ್ (ನಾಯಕ)
2. ಜೋಸ್ ಬಟ್ಲರ್ (ವಿಕೆಟ್ ಕೀಪರ್)
3. ಸಾಯಿ ಸುದರ್ಶನ್
4. ಗ್ಲೆನ್ ಫಿಲಿಪ್ಸ್
5. ಶಾರುಖ್ ಖಾನ್
6. ರಾಹುಲ್ ತೆವಾಟಿಯಾ
7. ರಶೀದ್ ಖಾನ್
8. ವಾಷಿಂಗ್ಟನ್ ಸುಂದರ್
9. ಕಗಿಸೊ ರಬಾಡ
10. ಮೊಹಮ್ಮದ್ ಸಿರಾಜ್
11. ಪ್ರಸಿದ್ಧ್ ಕೃಷ್ಣ
