ಮುಂಬೈ ಸೋಲಿಸಿ ಮೊದಲ ಕ್ವಾಲಿಫೈಯರ್ ಪ್ರವೇಶಿಸಿದ ಪಂಜಾಬ್ ಕಿಂಗ್ಸ್; ಹಾರ್ದಿಕ್ ಪಡೆ ಎಲಿಮಿನೇಟರ್ನಲ್ಲಿ ಕಣಕ್ಕೆ
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ 69ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಂಡಿದೆ.

ಜೋಸ್ ಇಂಗ್ಲಿಸ್ (73) ಮತ್ತು ಪ್ರಿಯಾಂಶ್ ಆರ್ಯ (73) ಅಬ್ಬರದ ಅರ್ಧಶತಕಗಳ ಸಹಾಯದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ 7 ವಿಕೆಟ್‌ಗಳ ಗೆಲುವಿನೊಂದಿಗೆ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಂಡಿದೆ. ಪ್ರಸ್ತುತ 19 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 11 ವರ್ಷಗಳ ನಂತರ ಅಗ್ರಸ್ಥಾನ ಪಡೆದಿರುವ ಪಿಬಿಕೆಎಸ್, ಮೇ 29ರಂದು ಮೊದಲ ಕ್ವಾಲಿಫೈಯರ್ನಲ್ಲಿ ಆರ್ಸಿಬಿ ಅಥವಾ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಮತ್ತೊಂದೆಡೆ ಸೋತ ಐದು ಬಾರಿಯ ಚಾಂಪಿಯನ್ ಮುಂಬೈ ಎಲಿಮಿನೇಟರ್ನಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಮೇ 27ರಂದು ಐಪಿಎಲ್ನ ಕೊನೆಯ ಲೀಗ್ ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಅಗ್ರ-2ರಲ್ಲಿ ಸ್ಥಾನ ಪಡೆದು ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ವಿರುದ್ಧ, ಸೋತರೆ ಮುಂಬೈ ಇಂಡಿಯನ್ಸ್ ವಿರುದ್ಧ ಎಲಿಮಿನೇಟರ್ ಆಡಲಿದೆ. ಎಲಿಮಿನೇಟರ್ ಪಂದ್ಯವು ಮೇ 30ರಂದು ನಡೆಯಲಿದೆ.
ಐಪಿಎಲ್ 2025 ರಲ್ಲಿ ಸೋಮವಾರ ಪಂಜಾಬ್, ಮುಂಬೈ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ 185 ರನ್‌ಗಳ ಗುರಿ ನಿಗದಿಪಡಿಸಿತು. ಆದರೆ ಪಿಬಿಕೆಎಸ್ ತಂಡವು 18.3 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಗುರಿ ಮುಟ್ಟಿತು. ಇದೀಗ ಅಂಕ ಪಟ್ಟಿಯಲ್ಲಿ ಪಂಜಾಬ್ ಅಗ್ರ-2 ರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ತಂಡಗಳಿಗೆ ಫೈನಲ್ ತಲುಪಲು ಹೆಚ್ಚುವರಿ ಅವಕಾಶ ಸಿಗುತ್ತದೆ. ಆದರೆ ಮುಂಬೈ ಈಗ ಎಲಿಮಿನೇಟರ್ ಪಂದ್ಯವನ್ನು ಆಡಬೇಕಾಗುತ್ತದೆ. ಎಂಐ 14 ಪಂದ್ಯಗಳಿಂದ 16 ಅಂಕಗಳೊಂದಿಗೆ ಲೀಗ್ ಹಂತವನ್ನು ಮುಗಿಸಿತು. 4ನೇ ಸ್ಥಾನಕ್ಕೆ ಲೀಗ್ ಮುಗಿಸಿದೆ. ಪಂಜಾಬ್ 14 ಪಂದ್ಯಗಳಿಂದ 19 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಆರ್ಯ, ಇಂಗ್ಲಿಸ್ ಅಬ್ಬರ
ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ ಪಂಜಾಬ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಐದನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರು ಪ್ರಭುಸಿಮ್ರಾನ್ ಸಿಂಗ್ (13) ಅವರನ್ನು ಔಟ್ ಮಾಡಿದರು. ಇದಾದ ನಂತರ, ಜೋಶ್ ಇಂಗ್ಲಿಸ್ ಮತ್ತು ಆರಂಭಿಕ ಆಟಗಾರ ಪ್ರಿಯಾಂಶ್ ಆರ್ಯ ವಿಕೋಪ ಸೃಷ್ಟಿಸಿದರು. ಈ ಜೋಡಿ 2ನೇ ವಿಕೆಟ್‌ಗೆ 109 ರನ್‌ಗಳನ್ನು ಸೇರಿಸಿ ಮುಂಬೈ ತಂಡವನ್ನು ಹಿನ್ನಡೆಗೆ ತಳ್ಳಿತು. ಪ್ರಿಯಾಂಶ್ 35 ಎಸೆತಗಳಲ್ಲಿ 62 ರನ್ ಸೇರಿಸಿದರು. ಅವರು 9 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. 15ನೇ ಓವರ್‌ನಲ್ಲಿ ಪ್ರಿಯಾಂಶ್ ಅವರನ್ನು ಮಿಚೆಲ್ ಸ್ಯಾಂಟ್ನರ್ ಪೆವಿಲಿಯನ್‌ಗೆ ಕಳುಹಿಸಿದರು. 18ನೇ ಓವರ್‌ನಲ್ಲಿ ಸ್ಯಾಂಟ್ನರ್ ಇಂಗ್ಲಿಷ್ ಬೌಲಿಂಗ್‌ಗೆ ಎಲ್‌ಬಿಡಬ್ಲ್ಯೂ ಪಡೆದರು. ಅವರು 42 ಎಸೆತಗಳಲ್ಲಿ 9 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ 73 ರನ್ ಗಳಿಸಿದರು. ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ ಗೆಲುವಿನ ಇನ್ನಿಂಗ್ಸ್ ಆಡಿದರು. ಅವರು 16 ಎಸೆತಗಳಲ್ಲಿ ಅಜೇಯ 26 ರನ್ (ಒಂದು ಬೌಂಡರಿ ಮತ್ತು ಎರಡು ಸಿಕ್ಸರ್) ಗಳಿಸಿದರು. ಅಯ್ಯರ್ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಗೆದ್ದರು. ನೆಹಾಲ್ ವಧೇರಾ ಎರಡು ಎಸೆತಗಳಲ್ಲಿ ಎರಡು ರನ್ ಗಳಿಸಿ ಅಜೇಯರಾಗುಳಿದರು.
ಮುಂಬೈಗೆ ಸೂರ್ಯ ಆಸರೆ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮುಂಬೈ ತಂಡವು ಉತ್ತಮ ಆರಂಭವನ್ನೇ ನೀಡಿತು. ಮೊದಲ ವಿಕೆಟ್‌ಗೆ ರಯಾನ್ ರಿಕಲ್ಟನ್ ಮತ್ತು ರೋಹಿತ್ ಶರ್ಮಾ 45 ರನ್‌ಗಳ ಜತೆಯಾಟ ನೀಡಿದರು. ರಿಕಲ್ಟನ್ 21 ಎಸೆತಗಳಲ್ಲಿ ಐದು ಬೌಂಡರಿಗಳಿಂದ 24 ರನ್ ಗಳಿಸಿದರು. ರೋಹಿತ್ 21 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 24 ರನ್ ಗಳಿಸಿದರು. ತಿಲಕ್ ವರ್ಮಾ (1) ಯಾವುದೇ ಪರಿಣಾಮ ಬೀರುವಲ್ಲಿ ವಿಫಲರಾದರು. ವಿಲ್ ಜ್ಯಾಕ್ಸ್ 17 ರನ್, ನಾಯಕ ಹಾರ್ದಿಕ್ ಪಾಂಡ್ಯ 26 ರನ್, ನಮನ್ ಧೀರ್ 12 ಎಸೆತಗಳಲ್ಲಿ 20 ರನ್ ಗಳಿಸಿದರಾದರೂ ಅದನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ವಿಫಲರಾದರು. ಸೂರ್ಯ 39 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 67 ರನ್ ಗಳಿಸಿದರು. ಸೂರ್ಯ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಪಿಬಿಕೆಎಸ್ ಪರ ಅರ್ಷದೀಪ್ ಸಿಂಗ್, ವಿಜಯಕುಮಾರ್ ವೈಶಾಖ್ ಮತ್ತು ಮಾರ್ಕೊ ಜಾನ್ಸೆನ್ ತಲಾ ಎರಡು ವಿಕೆಟ್ ಪಡೆದರೆ, ಹರ್ಪ್ರೀತ್ ಬ್ರಾರ್ ಒಂದು ವಿಕೆಟ್ ಪಡೆದರು.