ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ಐಸಿಸಿ ಟಿ20 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರಿಂದ ತೆರವಾಗಲಿರುವ ಟೀಮ್‌ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ, ಎಲ್‌ಎಸ್‌ಜಿ ಕೋಚ್ ಜಸ್ಟಿನ್ ಲ್ಯಾಂಗರ್ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಖುದ್ದು ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ
ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ (PTI)

ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದೆ. ಟೀಮ್‌ ಇಂಡಿಯಾದ ಮುಂದಿನ ತರಬೇತುದಾರರಾಗಬಹುದಾದ ಸಂಭಾವ್ಯ ಪಟ್ಟಿಯಲ್ಲಿ ಹಲವು ದಿಗ್ಗಜ ಆಟಗಾರರಿದ್ದಾರೆ. ಅವರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಪ್ರಮುಖರು. ಇವರೊಂದಿಗೆ ಭಾರತ ಹಾಗೂ ವಿದೇಶಗಳ ಹಲವು ಮಾಜಿ ಆಟಗಾರರು ಈ ಜವಾಬ್ದಾರಿ ಹೊರುವ ಸಾಧ್ಯತೆ ಇದೆ. ಆದರೆ, ಸದ್ಯ ಯಾವುದೂ ಬಹಿರಂಗವಾಗಿಲ್ಲ. ಜೂನ್‌ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿ ಮುಗಿದ ನಂತರ, ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ ಅಧಿಕಾರಾವಧಿ ಮುಕ್ತಾಯಗೊಳ್ಳಲಿದೆ. ಆ ಬಳಿಕ ಅವರು ಈ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಬಿಸಿಸಿಐಗೆ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಬೆನ್ನಲ್ಲೇ, ದ್ರಾವಿಡ್‌ ಅವಧಿ ಅಂತ್ಯಗೊಂಡಿತ್ತು. ಆದರೆ, ಈ ವರ್ಷದ ಟಿ20 ವಿಶ್ವಕಪ್‌ವರೆಗೂ ಈ ಜವಾಬ್ದಾರಿಯಲ್ಲಿ ಉಳಿಯುವಂತೆ ಅವರಲ್ಲಿ ಬಿಸಿಸಿಐ ಕೇಳಿಕೊಂಡಿತ್ತು.

ಭಾರತೀಯ ಕ್ರಿಕೆಟ್‌ ಮಂಡಳಿಯು ಐಪಿಎಲ್‌ನಲ್ಲಿ ವಿವಿಧ ತಂಡಗಳ ಕೋಚ್‌ ಆಗಿರುವ ಮೂವರು ವಿದೇಶಿ ತರಬೇತುದಾರರನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ. ಅವರಲ್ಲಿ ಎಲ್‌ಎಸ್‌ಜಿ ಕೋಚ್‌ ಲ್ಯಾಂಗರ್ ಕೂಡ ಒಬ್ಬರು. ಇವರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಕೂಡಾ ಸೇರಿದ್ದಾರೆ.

ಇದನ್ನೂ ಓದಿ | ಆರ್‌ಸಿಬಿ, ಸಿಎಸ್‌ಕೆ ಟಿ-ಶರ್ಟ್ ಖರೀದಿ ಭರಾಟೆ ಜೋರು; ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಭಿಮಾನಿಗಳ ಹರ್ಷೋದ್ಗಾರ; ಫೋಟೊಸ್

ಎಲ್ಎಸ್‌ಜಿ ತರಬೇತುದಾರರಾದ ಲ್ಯಾಂಗರ್ ಅವರಲ್ಲಿ, ಭಾರತದ ಮುಖ್ಯ ಕೋಚ್ ಆಗುವ ಆಕಾಂಕ್ಷೆಗಳ ಕುರಿತು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು “ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಆಗುವುದೆಂದರೆ ವಿಶ್ವ ಕ್ರಿಕೆಟ್‌ನಲ್ಲಿ ಅದು ಬಹುತೇಕ ದೊಡ್ಡ ಕೆಲಸವಾಗಿದೆ” ಎಂದು ಹೇಳಿದ್ದಾರೆ.

ಟೀಮ್‌ ಇಂಡಿಯಾ ಕೋಚ್‌ ಎಂದರೆ ದೊಡ್ಡ ಸವಾಲು

“ಭಾರತದಲ್ಲಿ ಕ್ರಿಕೆಟ್‌ ದೊಡ್ಡ ಮಟ್ಟದ ಕ್ರೀಡೆಯಾಗಿರುವುದರಿಂದ ಭಾರಿ ನಿರೀಕ್ಷೆಗಳಿವೆ. ಹೀಗಾಗಿ ಟೀಮ್‌ ಇಂಡಿಯಾ ಕೋಚ್‌ ಆಗುವುದೆಂದರೆ ಅದು ಒಂದು ದೊಡ್ಡ ಸವಾಲಾಗಿದೆ. ಐಸಿಸಿ ಪ್ರಶಸ್ತಿಗಳನ್ನು ಗೆಲ್ಲಲು ಇದು ಅದ್ಭುತ ಅವಕಾಶವಾಗಿದೆ” ಎಂದು ಲ್ಯಾಂಗರ್ ವಾಂಖೆಡೆ ಕ್ರೀಡಾಂಗಣದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎಂಐ ವಿರುದ್ಧದ ಕೊನೆಯ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 18 ರನ್‌ಗಳಿಂದ ಗೆದ್ದ ಬಳಿಕ ಅವರು ಮಾತನಾಡಿದರು.

ಭಾರತ ಕ್ರಿಕೆಟ್‌ ತಂಡದ ತರಬೇತುದಾರರಾಗಿ ಬರುವವರಿಗೆ ಅಪಾರ ಪ್ರಮಾಣದ ಒತ್ತಡ ಹಾಗೂ ಕೆಲಸದ ಹೊರೆ ಇರುವುದನ್ನು ಲ್ಯಾಂಗರ್ ಉಲ್ಲೇಖಿಸಿದರು. “ನಾನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ಆಗಿ ನಾಲ್ಕಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ್ದೇನೆ. ಆದರೆ ಈಗ ಹೊಸ ಜವಾಬ್ದಾರಿಗೆ ಸಮಯ ಉತ್ತರ ಹೇಳಬೇಕು,” ಎಂದು 53 ವರ್ಷದ ಮಾಜಿ ಆಟಗಾರ ಹೇಳಿದ್ದಾರೆ.

“ರಾಹುಲ್ ದ್ರಾವಿಡ್ ಕೂಡಾ ಒತ್ತಡದ ಕುರಿತು ಹೇಳಬಹುದು. ಮಾಜಿ ಕೋಚ್ ರವಿ ಶಾಸ್ತ್ರಿ ಕೂಡಾ ಬಹುಶಃ ಅದೇ ವಿಷಯವನ್ನು ಹೇಳಬಹುದು. ಭಾರತ ತಂಡದ ಗೆಲುವಿನ ಮೇಲೆ ಭಾರಿ ಒತ್ತಡವಿದೆ,” ಎಂದು ಅವರು ಹೇಳಿದ್ದಾರೆ. ವರ್ಷದಲ್ಲಿ 10 ತಿಂಗಳ ಕಾಲ ಕೆಲಸಕ್ಕೆ ಬದ್ಧರಾಗಲು ಮಾನಸಿಕವಾಗಿ ಸಿದ್ಧರಿಲ್ಲ ಎಂಬ ಸುಳಿವನ್ನು ಕೂಡಾ ಲ್ಯಾಂಗರ್‌ ನೀಡಿದ್ದಾರೆ.

ಇದನ್ನೂ ಓದಿ | ರಾಹುಲ್ ದ್ರಾವಿಡ್ ಸ್ಥಾನಕ್ಕೆ ಕೆಕೆಆರ್ ಮೆಂಟರ್‌ಗೆ ಗಾಳ ಹಾಕಲು ಮುಂದಾದ ಬಿಸಿಸಿಐ; ಆಫರ್‌ ಒಪ್ತಾರಾ 2011ರ ವಿಶ್ವಕಪ್ ವಿಜೇತ?

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner