ಆತ ನಂ 1‌ ಬ್ಯಾಟರ್ ಆಗಿದ್ದರೆ ಪಾಕಿಸ್ತಾನ ವಿರುದ್ಧ ರನ್‌ ಗಳಿಸಲಿ; ಸೂರ್ಯಕುಮಾರ್ ಯಾದವ್‌ಗೆ ಪಾಕ್‌ ಮಾಜಿ ಕ್ರಿಕೆಟಿಗನ ಸವಾಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಆತ ನಂ 1‌ ಬ್ಯಾಟರ್ ಆಗಿದ್ದರೆ ಪಾಕಿಸ್ತಾನ ವಿರುದ್ಧ ರನ್‌ ಗಳಿಸಲಿ; ಸೂರ್ಯಕುಮಾರ್ ಯಾದವ್‌ಗೆ ಪಾಕ್‌ ಮಾಜಿ ಕ್ರಿಕೆಟಿಗನ ಸವಾಲು

ಆತ ನಂ 1‌ ಬ್ಯಾಟರ್ ಆಗಿದ್ದರೆ ಪಾಕಿಸ್ತಾನ ವಿರುದ್ಧ ರನ್‌ ಗಳಿಸಲಿ; ಸೂರ್ಯಕುಮಾರ್ ಯಾದವ್‌ಗೆ ಪಾಕ್‌ ಮಾಜಿ ಕ್ರಿಕೆಟಿಗನ ಸವಾಲು

India vs Pakistan: ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ಸಾಮರ್ಥ್ಯಕ್ಕೆ ಬಲುದೊಡ್ಡ ಸವಾಲು ಹಾಕಲಾಗಿದೆ. ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಬಹಿರಂಗ ಸವಾಲು ಹಾಕಿದ್ದಾರೆ. ತಾಕತ್ತಿದ್ದರೆ ಪಾಕ್‌ ವಿರುದ್ಧ ರನ್‌ ಗಳಿಸಿಲಿ ಎಂದು ಚಾಲೆಂಜ್‌ ಮಾಡಿದ್ದಾರೆ.

ಸೂರ್ಯಕುಮಾರ್ ಯಾದವ್‌ಗೆ ಪಾಕ್‌ ಮಾಜಿ ಕ್ರಿಕೆಟಿಗನ ಸವಾಲು
ಸೂರ್ಯಕುಮಾರ್ ಯಾದವ್‌ಗೆ ಪಾಕ್‌ ಮಾಜಿ ಕ್ರಿಕೆಟಿಗನ ಸವಾಲು

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಟಿ20 ವಿಶ್ವಕಪ್ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ರೋಚಕ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಎರಡೂ ತಂಡಗಳಲ್ಲಿ ಬಲಿಷ್ಠ ಆಟಗಾರರಿದ್ದಾರೆ. ಅನುಭವದ ಲೆಕ್ಕದಲ್ಲಿ ಭಾರತ ತಂಡ ಇನ್ನೂ ಬಲಿಷ್ಠವಾಗಿದೆ.‌ ಟೀಮ್‌ ಇಂಡಿಯಾದಲ್ಲಿ ಒಬ್ಬರ ನಂತರ ಮತ್ತೊಬ್ಬರಂತೆ ಸ್ಫೋಟಕ ಆಟಗಾರರಿದ್ದಾರೆ. ಅವರಲ್ಲಿ ವಿಶ್ವದ ನಂಬರ್‌ ವನ್‌ ಟಿ20 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಕೂಡಾ ಒಬ್ಬರು. 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗಿನಿಂದ, ಸೂರ್ಯಕುಮಾರ್ ಯಾದವ್ ಟಿ20 ಸ್ವೂರೂಪದಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಅತಿ ವೇಗವಾಗಿ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ. ಅಂದಿನಿಂದ ತಮ್ಮ ಅಗ್ರಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.

ಇದೀಗ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಮತ್ತೆ ಸೂರ್ಯ ಮೇಲೆ ಭಾರಿ ನಿರೀಕ್ಷೆಗಳಿವೆ. ಜೂನ್‌ 9ರಂದು ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಮಹತ್ವದ ಪಂದ್ಯದಲ್ಲಿ 360 ಡಿಗ್ರ ಬ್ಯಾಟರ್‌ ಆಟ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪಾಕ್‌ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ, ವಿಶ್ವದ ನಂಬರ್‌ ವನ್‌ ಬ್ಯಾಟರ್‌ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಸವಾಲು ಹಾಕಿದ್ದಾರೆ. ಸೂರ್ಯಕುಮಾರ್‌ ಸಾಮರ್ಥ್ಯ ಏನೇ ಇದ್ದರೂ, ಅದನ್ನು ಪಾಕ್‌ ಮುಂದೆ ತೋರಿಸಲಿ ಎಂದು ಹೇಳಿದ್ದಾರೆ. ಈ ಸವಾಲು ಹಾಕಿದ್ದು ಬೇರಾರೂ ಅಲ್ಲ, ಅವರೇ ಕಮ್ರಾನ್ ಅಕ್ಮಲ್.

ಪಾಕ್‌ ವಿರುದ್ಧ ಸೂರ್ಯಕುಮಾರ್‌ ವಿಫಲ

ಸುದ್ದಿಸಂಸ್ಥೆ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿದ ಅಕ್ಮಲ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂಥ ಅನುಭವಿ ಆಟಗಾರರು ಈಗಾಗಲೇ ಮಹತ್ವದ ಟೂರ್ನಿಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಪಾಕಿಸ್ತಾನ ವಿರುದ್ಧದ ಒತ್ತಡದ ಪಂದ್ಯಗಳಲ್ಲಿಯೂ ತಮ್ಮನ್ನು ತಾವು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಟಿ20 ಸ್ವರೂಪದಲ್ಲಿ ಸೂರ್ಯಕುಮಾರ್ ಯಾದವ್‌ ನಂ.1 ಶ್ರೇಯಾಂಕದ ಬ್ಯಾಟರ್ ಆಗಿದ್ದರೂ, ಬಾಬರ್ ಅಜಮ್ ಬಳಗದ ವಿರುದ್ಧ ವಿಫಲರಾಗಿದ್ದಾರೆ ಎಂದು ಅಕ್ಮಲ್‌ ಹೇಳಿದ್ದಾರೆ.

“ಪಾಕ್‌ ವಿರುದ್ಧ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಇದ್ದಾರೆ. ಪಾಕಿಸ್ತಾನದ ವಿರುದ್ಧ ಸೂರ್ಯ ಅವರ ಯಶಸ್ವಿ ಪ್ರದರ್ಶನ ಇನ್ನೂ ಕಾಣಿಸಿಲ್ಲ. ಆದರೂ ನಾನು ಅವರನ್ನು ಆಯ್ಕೆ ಮಾಡುತ್ತೇನೆ. ರೋಹಿತ್ ಶರ್ಮಾ ಈಗಾಗಲೇ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ವಿರುದ್ಧ ರನ್ ಗಳಿಸಿದ್ದಾರೆ. ಈಗ ಸೂರ್ಯಕುಮಾರ್ ಯಾದವ್ ಸರದಿ. ಅವರು ವಿಶ್ವದ ನಂಬರ್‌ 1 ಆಟಗಾರ ಆಗಿದ್ದರೆ, ಪಾಕಿಸ್ತಾನದ ವಿರುದ್ಧ ರನ್‌ ಗಳಿಸಬೇಕು. ಅವರು ಈವರೆಗೆ ಪಾಕಿಸ್ತಾನದ ವಿರುದ್ಧ ಆಡಿದಾಗ ಹೇಳಿಕೊಳ್ಳುವಂಥಾ ರನ್ ಗಳಿಸಿಲ್ಲ” ಎಂದು ಅಕ್ಮಲ್‌ ಹೇಳಿದ್ದಾರೆ.

ಸೂರ್ಯ ಬ್ಯಾಟಿಂಗ್‌ ನೋಡುವುದೇ ಖುಷಿ

ಇದೇ ವೇಳೆ ಸೂರ್ಯ ಹೊಗಳಿದ ಅಕ್ಮಲ್‌, “ಅವರು ಇತರ ತಂಡಗಳ ವಿರುದ್ಧ ಸಾಕಷ್ಟು ರನ್ ಗಳಿಸಿದ್ದಾರೆ. ಅವರು ಒಬ್ಬ ಅದ್ಭುತ 360 ಡಿಗ್ರಿ ಆಟಗಾರ. ಅವರು ಬ್ಯಾಟಿಂಗ್ ಮಾಡುವುದನ್ನು ನೋಡುವುದೇ ಒಂದು ಔತಣ ಇದ್ದಂತೆ. ಬಹಳ ಕಡಿಮೆ ಅವಧಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ,” ಎಂದು ಹೇಳಿಕೊಂಡಿದ್ದಾರೆ.

ಬಲಗೈ ಬ್ಯಾಟರ್ ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನ ವಿರುದ್ಧ ನಾಲ್ಕು ಪಂದ್ಯಗಳಲ್ಲಿ ಆಡಿದ್ದಾರೆ. ಈ ನಾಲ್ಕರಲ್ಲಿ ಕೇವಲ 57 ರನ್ ಮಾತ್ರ ಗಳಿಸಿದ್ದಾರೆ. ಇವುಗಳಲ್ಲಿ ಎರಡು ಪಂದ್ಯ ಏಷ್ಯಾಕಪ್‌ನಲ್ಲಿ ಆಡಿದರೆ, ಇನ್ನೆರಡು ಟಿ20 ವಿಶ್ವಕಪ್‌ನಲ್ಲಿ ಆಡಿದ್ದಾರೆ.

Whats_app_banner