ಕನ್ನಡ ಸುದ್ದಿ  /  Cricket  /  Kane Williamson Says Shubman Gill Very Authentic Guy And A Gifted Cricketer Ipl 2024 Gujarat Titans Captain Jra

ಶುಭ್ಮನ್ ಗಿಲ್ ಅತ್ಯಂತ ಪ್ರಾಮಾಣಿಕ ಆಟಗಾರ, ಕ್ರಿಕೆಟ್‌ನ ಉತ್ತಮ ಜ್ಞಾನವಿರುವ ಪ್ರತಿಭಾನ್ವಿತ ಕ್ರಿಕೆಟಿಗ: ಕೇನ್ ವಿಲಿಯಮ್ಸನ್

Kane Williamson: ಶುಭ್ಮನ್ ಗಿಲ್ ಪ್ರತಿಭೆ ಕುರಿತು ಮಾತನಾಡಿದ ಕೇನ್ ವಿಲಿಯಮ್ಸನ್, 24 ವರ್ಷದ ಯುವ ಆಟಗಾರನ ಅಸಾಧಾರಣ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಗುಜರಾತ್‌ ಟೈಟಾನ್ಸ್‌ ತಂಡದ ನೂತನ ನಾಯಕನನ್ನು ಪ್ರಮಾಣಿಕ ಮತ್ತು ಉತ್ತಮ ಜ್ಞಾನವುಳ್ಳ ಚತುರ ಎಂದು ಬಣ್ಣಿಸಿದ್ದಾರೆ.

ಶುಬ್ಮನ್ ಗಿಲ್ ಅತ್ಯಂತ ಪ್ರಾಮಾಣಿಕ ಆಟಗಾರ ಎಂದ ಕೇನ್ ವಿಲಿಯಮ್ಸನ್
ಶುಬ್ಮನ್ ಗಿಲ್ ಅತ್ಯಂತ ಪ್ರಾಮಾಣಿಕ ಆಟಗಾರ ಎಂದ ಕೇನ್ ವಿಲಿಯಮ್ಸನ್

ನಾಯಕತ್ವದ ಹೊಸ ಜವಾಬ್ದಾರಿಯನ್ನು ಯುವ ಆಟಗಾರ ಶುಭ್ಮನ್‌ ಗಿಲ್‌ (Shubman Gill) ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಅದು ಕೂಡಾ ತಮ್ಮದೇ ಗುಜರಾತ್‌ ಟೈಟಾನ್ಸ್‌ ತಂಡವನ್ನು ಕಳೆದೆರಡು ಆವೃತ್ತಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿಸಿದ ಹಾರ್ದಿಕ್‌ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್‌ ವಿರುದ್ಧ. ನಾಯಕನಾಗಿ ಮೊದಲ ಪಂದ್ಯದಲ್ಲೇ ಚಾಣಾಕ್ಷತನದಿಂದ ತಂಡವನ್ನು ಮುನ್ನಡೆಸಿದ ಶುಭ್ಮನ್ ಗಿಲ್ ನಾಯಕತ್ವಕ್ಕೆ ಗುಜರಾತ್ ಟೈಟಾನ್ಸ್ ಬ್ಯಾಟರ್‌ ಹಾಗೂ ನ್ಯೂಜಿಲ್ಯಾಂಡ್ ಕ್ರಿಕೆಟ್‌ ತಂಡದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಶ್ಲಾಘಿಸಿದ್ದಾರೆ.

ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗಿಲ್‌ ಬಳಗವು 6 ರನ್‌ಗಳ ರೋಚಕ ಜಯ ಸಾಧಿಸಿತು. ಪ್ರಸಕ್ತ ಐಪಿಎಲ್ ಋತುವಿನಲ್ಲಿ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶುಬ್ಮನ್ ಗಿಲ್, ಪಂದ್ಯದುದ್ದಕ್ಕೂ ಖಡಕ್‌ ಹಾಗೂ ಚಾಣಾಕ್ಷ ನಿರ್ಧಾರಗಳನ್ನು ತೆಗೆದುಕೊಂಡರು. ರಿವ್ಯೂ ಮಾತ್ರವಲ್ಲದೆ ಬೌಲಿಂಗ್ ಬದಲಾವಣೆಗಳನ್ನು ಮಾಡುವಲ್ಲೂ ಬುದ್ಧಿವಂತಿಕೆ ಪ್ರದರ್ಶಿಸಿದರು. ಎದುರಾಳಿ ಮುಂಬೈ ತಂಡದಲ್ಲಿ ಅನುಭವಿ ಆಟಗಾರರ ದೊಡ್ಡ ಬಳಗವೇ ಇದ್ದರೂ, ಸಂಪೂರ್ಣ ಯುವ ಬಳಗದೊಂದಿಗೆ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು.

ವಿಶ್ವ ಕ್ರಿಕೆಟ್‌ನಲ್ಲಿ ಮುಂದೊಂದು ದಿನ ದೊಡ್ಡ ಹೆಸರು ಮಾಡಬಲ್ಲ ಕ್ರಿಕೆಟಿಗ ಶುಭ್ಮನ್‌ ಗಿಲ್‌ ಎಂಬುದಾಗಿ ಈಗಾಗಲೇ ಹಲವು ದಿಗ್ಗಜ ಕ್ರಿಕೆಟಿಗರು ಹೇಳಿಕೊಂಡಿದ್ದಾರೆ. ಇದೀಗ ಕಿವೀಸ್‌ ದಿಗ್ಗಜ ಕೇನ್‌ ವಿಲಿಯಮ್ಸನ್‌ ಕೂಡಾ ಗಿಲ್‌ ಆಟವನ್ನು ಕೊಂಡಾಡಿದ್ದಾರೆ. ಈ ಹಿಂದೆ ಎಸ್ಆರ್‌ಎಚ್ ತಂಡವನ್ನು ಮುನ್ನಡೆಸಿದ್ದ ವಿಲಿಯಮ್ಸನ್, ಕಳೆದೆರಡು ವರ್ಷಗಳಿಂದ ಗುಜರಾತ್‌ ತಂಡದ ಸದಸ್ಯರಾಗಿದ್ದಾರೆ. ಶುಬ್ಮನ್ ಪ್ರತಿಭೆಯ ಬಗ್ಗೆ ಮಾತನಾಡಿದ ಅವರು, 24 ವರ್ಷದ ಆಟಗಾರನು ಅಸಾಧಾರಣ ಪ್ರತಿಭೆ ಹೊಂದಿರುವ ಶ್ರೇಷ್ಠ ಕ್ರಿಕೆಟ್ ಮೆದುಳು ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ | CSK vs GT: ಕಳೆದ ಆವೃತ್ತಿಯ ಫೈನಲಿಸ್ಟ್‌ಗಳ ಹಣಾಹಣಿಗೆ ಚೆಪಾಕ್‌ ವೇದಿಕೆ; ಸಿಎಸ್‌ಕೆ-ಟೈಟಾನ್ಸ್‌ ಸಂಭಾವ್ಯ ತಂಡ ಹೀಗಿದೆ

“ಶುಭ್ಮನ್ ಗಿಲ್ ಅತ್ಯುನ್ನತ ಪ್ರತಿಭೆ. ಅವರು ಅತ್ಯಂತ ಪ್ರತಿಭಾನ್ವಿತ ಕ್ರಿಕೆಟಿಗ. ತುಂಬಾ ವಿಶೇಷ ಆಟಗಾರ ಮತ್ತು ಕಳೆದ ವರ್ಷ ಅಮೋಘ ಪ್ರದರ್ಶನ ನೀಡಿದ್ದರು. ಇದು ಈ ಬಾರಿಯೂ ಮುಂದುವರೆದಿದೆ. ಎಲ್ಲಾ ಸ್ವರೂಪಗಳಲ್ಲೂ ಭಾರತದ ಪರ ಆಡುತ್ತಿದ್ದಾರೆ. ಕ್ರಿಕೆಟ್‌ ಕುರಿತ ಉತ್ತಮ ಜ್ಞಾನವುಳ್ಳ ಮತ್ತು ಸಾಕಷ್ಟು ಸಾಮರ್ಥ್ಯವಿರುವ ಯುವಕ. ನಾಯಕತ್ವದ ಅವಕಾಶಕ್ಕೆ ನಿಜಕ್ಕೂ ತುಂಬಾ ಉತ್ಸುಕರಾಗಿದ್ದಾರೆ. ಗುಜರಾತ್‌ನಲ್ಲಿ ಅವರಿಗೆ ಉತ್ತಮ ಅವಕಾಶ ಸಿಕ್ಕಿದೆ. ಮತ್ತೆ ನನ್ನ ಪಾತ್ರದ ಬಗ್ಗೆ ನಿಮಗೆ ತಿಳಿದಿದೆ. ಆತನಿಗೆ ಎಲ್ಲಿ ಬೇಕೋ ಅಲ್ಲಿ ಬೆಂಬಲ ನೀಡುವುದು ಮತ್ತು ಸಹಾಯ ಮಾಡುವುದು ನನ್ನ ಜವಾಬ್ದಾರಿ,” ಎಂದು ವಿಲಿಯಮ್ಸನ್ ನ್ಯೂಸ್ 18 ಕ್ರಿಕೆಟ್ ನೆಕ್ಸ್ಟ್‌ಗೆ ತಿಳಿಸಿದ್ದಾರೆ.

ಕಳೆದ ಎರಡು ಋತುಗಳಲ್ಲಿ ತಂಡದೊಂದಿಗೆ ಕೆಲಸ ಮಾಡಿರುವ ಸಹಾಯಕ ಸಿಬ್ಬಂದಿ ಕೂಡ ನಾಯಕ ಶುಬ್ಮನ್ ಅವರ ಬೆಳವಣಿಗೆಗೆ ಸಹಾಯ ಮಾಡುತ್ತಾರೆ ಎಂದು ಕಿವೀಸ್ ದೈತ್ಯ ತಿಳಿಸಿದ್ದಾರೆ.

ನನ್ನ ನೆರವು ಇದ್ದೇ ಇದೆ 

ಅಗತ್ಯವಿದ್ದರೆ ಶುಭ್ಮನ್‌ಗೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ವಿಲಿಯಮ್ಸನ್ ಹೇಳಿದ್ದಾರೆ. “ಪ್ರಾಮಾಣಿಕವಾಗಿರುವುದು ತುಂಬಾ ಮುಖ್ಯ. ಆತ ಮಾಡುವ ಕೆಲಸ ಹಾಗೂ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ತುಂಬಾ ಪ್ರಾಮಾಣಿಕ ವ್ಯಕ್ತಿಯಂತೆ ಕಾಣುತ್ತಾನೆ. ಹೀಗಾಗಿ ಆತನಿಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಆದರೆ ಖಂಡಿತವಾಗಿಯೂ ಅಗತ್ಯವಿದ್ದರೆ ನಾನು ಬೆಂಬಲ ನೀಡುತ್ತೇನೆ. ಆತನಲ್ಲಿ ಕ್ರಿಕೆಟ್ ಕುರಿತ ಉತ್ತಮ ಜ್ಞಾನವಿದೆ. ನಾಯಕನ ಉತ್ತಮ ಗುಣಲಕ್ಷಣಗಳನ್ನು ಹೊಂದಿದ್ದಾನೆ. ಆ ಹಾದಿಯಲ್ಲಿ ನಡೆಯಲು ಉತ್ಸುಕನಾಗಿದ್ದಾನೆ. ಇನ್ನೂ ಕೆಲವು ಜವಾಬ್ದಾರಿಗಳಿವೆ. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಾನೆ ಎಂದು ನನಗೆ ವಿಶ್ವಾಸವಿದೆ,” ಎಂದು ಕೇನ್‌ ಹೇಳಿಕೊಂಡಿದ್ದಾರೆ.

IPL_Entry_Point