ದಿಗ್ಗಜ ಆಟಗಾರನಿಗೆ ಬ್ಲಡ್ ಕ್ಯಾನ್ಸರ್; ಬಿಸಿಸಿಐಗೆ ಆರ್ಥಿಕ ಬೆಂಬಲ ಕೋರಿ ತಮ್ಮ ಪಿಂಚಣಿ ದಾನ ಮಾಡಲು ಮುಂದಾದ ಮಾಜಿ ಕ್ರಿಕೆಟಿಗ
Kapil Dev: ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಅಂಶುಮಾನ್ ಗಾಯಕ್ವಾಡ್ ಅವರಿಗೆ ಸಹಾಯ ಮಾಡುವಂತೆ ಕಪಿಲ್ ದೇವ್ ಅವರು ಬಿಸಿಸಿಐಗೆ ಮನವಿ ಮಾಡಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಅವರು ಮಾರಕ ಕ್ಯಾನ್ಸರ್ ರೋಗದಿಂದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ವಿಷಯ ತಿಳಿದ ದಿಗ್ಗಜ ಕಪಿಲ್ ದೇವ್ ದುಃಖ ವ್ಯಕ್ತಪಡಿಸಿದ್ದು, ಆರ್ಥಿಕ ನೆರವು ನೀಡುವಂತೆ ಬಿಸಿಸಿಐಗೆ ವಿನಂತಿಸಿದ್ದಾರೆ. ಗಾಯಕ್ವಾಡ್ ಅವರ ಸಹ ಆಟಗಾರರಾಗಿದ್ದ ಕಪಿಲ್ ದೇವ್, ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ದಿಲೀಪ್ ವೆಂಗ್ಸರ್ಕರ್, ಮದನ್ ಲಾಲ್, ರವಿ ಶಾಸ್ತ್ರಿ ಮತ್ತು ಕೀರ್ತಿ ಆಜಾದ್ ಅವರಂತಹ ಭಾರತೀಯ ಕ್ರಿಕೆಟ್ನ ಹಲವು ಪ್ರಮುಖ ಆಟಗಾರರೊಂದಿಗೆ ಅಂಶುಮಾನ್ ಸಹಾಯಕ್ಕಾಗಿ ಕೈ ಚಾಚುತ್ತಿದ್ದಾರೆ.
ಭಾರತದ ಮಾಜಿ ಕೋಚ್ ಅವರನ್ನು ಉಳಿಸಿಕೊಳ್ಳುವ ಸಲುವಾಗಿ ಹಣ ಸಂಗ್ರಹಿಸಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಹುಡುಕುತ್ತಿರುವ ಕಪಿಲ್ ದೇವ್, ಮಂಡಳಿಯು ಮಧ್ಯಪ್ರವೇಶಿಸಿ ಅನಾರೋಗ್ಯದಿಂದ ಬಳಲುತ್ತಿರುವ ಗಾಯಕ್ವಾಡ್ ಅವರ ಕೈ ಹಿಡಿಯಬೇಕು ಎಂದು ಕೇಳಿಕೊಂಡಿದ್ದಾರೆ. ಇದು ದುಃಖಕರ ಸಂಗತಿ. ವಿಷಯ ಕೇಳಿ ತುಂಬಾ ನಿರಾಶಾದಾಯಕವಾಗಿದೆ. ನಾನು ಅನ್ಶು ಜೊತೆಗೆ ಆಡಿದ್ದೇವೆ. ಅವನನ್ನು ಈ ಸ್ಥಿತಿಯಲ್ಲಿ ನೋಡಲು ಸಹಿಸಲಾಗುತ್ತಿಲ್ಲ ಎಂದು ನೋವು ವ್ಯಕ್ತಪಡಿಸಿದ್ದಾರೆ. ಯಾರೂ ತೊಂದರೆ ಅನುಭವಿಸಬಾರದು. ಬಿಸಿಸಿಐ ಆತನ ಕೈ ಹಿಡಿಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ಕಪಿಲ್ ತಿಳಿಸಿದ್ದಾರೆ.
ನಾವಿಲ್ಲಿ ಯಾರನ್ನೂ ಒತ್ತಾಯಿಸುತ್ತಿಲ್ಲ. ಸಹಾಯ ಮಾಡಬೇಕು ಎಂಬುದು ಹೃದಯದಿಂದ ಬರಬೇಕು. ಕೆಲವು ಕ್ರೂರ ವೇಗದ ಬೌಲರ್ಗಳ ಎದುರು ನಿಂತು ಮುಖ ಮತ್ತು ಎದೆಗೆ ಏಟು ತಿಂದು ಭಾರತ ತಂಡವನ್ನು ರಕ್ಷಿಸಿದ್ದವರ ಪರವಾಗಿ ನಾವೀಗ ನಿಲ್ಲುವ ಸಮಯ ಬಂದಿದೆ. ನಮ್ಮ ಕ್ರಿಕೆಟ್ ಅಭಿಮಾನಿಗಳು ಅವರನ್ನು ಆತನನ್ನು ಎಂದೂ ಕೈಬಿಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸಬೇಕು ಎಂದು ಹೇಳಿದ್ದಾರೆ.
ಗಾಯಕ್ವಾಡ್ ಅವರು ಬಳಲುತ್ತಿರುವ ರಕ್ತದ ಕ್ಯಾನ್ಸರ್ ಸುದ್ದಿಯನ್ನು ಆತನ ಮಾಜಿ ಸಹ ಆಟಗಾರ ಸಂದೀಪ್ ಪಾಟೀಲ್ ಈ ತಿಂಗಳ ಆರಂಭದಲ್ಲಿ ದಿ ಮಿಡ್-ಡೇಗೆ ಬರೆದ ಅಂಕಣದಲ್ಲಿ ಬಹಿರಂಗಪಡಿಸಿದ್ದರು. ಗಾಯಕ್ವಾಡ್ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಈ ರೋಗದ ವಿರುದ್ಧ ಹೋರಾಡುತ್ತಿದ್ದಾರೆ. ಲಂಡನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಗ ಗಾಯಕ್ವಾಡ್ ಆರ್ಥಿಕ ಬೆಂಬಲದ ಅಗತ್ಯದ ಬಗ್ಗೆ ಮಾಹಿತಿ ನೀಡಿದ್ದರು ಎಂದು ಪಾಟೀಲ್ ಹೇಳಿದ್ದರು. ಮಾಜಿ ಆಲ್ರೌಂಡರ್ ವೆಂಗ್ ಸರ್ಕರ್, ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ಅವರೊಂದಿಗೆ ಮಾತನಾಡಿ ವಿನಂತಿಸಿದ್ದಾರೆ.
ಕಪಿಲ್ ದೇವ್ ಅಸಮಾಧಾನ
ನಮ್ಮ ಸಹ ಆಟಗಾರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅವರ ಅಗತ್ಯದ ಸಮಯದಲ್ಲಿ ಸಹಾಯ ಮಾಡುವ ವ್ಯವಸ್ಥೆಯ ಕೊರತೆ ಇದೆ ಎಂದು ಕಪಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಕಾಲದಲ್ಲಿ ಕ್ರಿಕೆಟ್ನಿಂದ ಈಗಿನಷ್ಟು ಆರ್ಥಿಕ ಬಹುಮಾನ ಸಿಗುತ್ತಿರಲಿಲ್ಲ. ಅದಕ್ಕಾಗಿಯೇ ಭಾರತ ತಂಡದ ಪರ ಸೇವೆ ಸಲ್ಲಿಸಿದವರನ್ನು ನೋಡಿಕೊಳ್ಳುವ ಕಾರ್ಯವನ್ನು ಸ್ಥಾಪಿಸಬೇಕು ಎಂದು ಕಪಿಲ್ ಅಭಿಪ್ರಾಯಪಟ್ಟಿದ್ದಾರೆ. ದುರದೃಷ್ಟವಶಾತ್, ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಈ ತಲೆಮಾರಿನ ಆಟಗಾರರು ಉತ್ತಮ ಹಣವನ್ನು ಗಳಿಸುವುದನ್ನು ನೋಡುವುದು ಅದ್ಭುತವಾಗಿದೆ ಎಂದಿದ್ದಾರೆ.
ಸಹಾಯಕ ಸಿಬ್ಬಂದಿ ಸದಸ್ಯರಿಗೂ ಉತ್ತಮ ವೇತನ ನೀಡುತ್ತಿರುವುದು ಖುಷಿಯಾಗುತ್ತಿದೆ. ನಮ್ಮ ಕಾಲದಲ್ಲಿ ಮಂಡಳಿಯ ಬಳಿ ಹಣವೇ ಇರಲಿಲ್ಲ. ಇಂದು ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ, ಈ ಹಿಂದೆ ಸೇವೆ ಸಲ್ಲಿಸಿದ ಆಟಗಾರರನ್ನು ಈಗ ನೋಡಿಕೊಳ್ಳಬೇಕು. ಟ್ರಸ್ಟ್ ರಚಿಸಿದರೆ, ಅವರು ತಮ್ಮ ಹಣವನ್ನು ಅಲ್ಲಿ ಇಡಬಹುದು. ಆದರೆ ನಮ್ಮಲ್ಲಿ ಒಂದು ವ್ಯವಸ್ಥೆ ಇಲ್ಲ. ಒಂದು ಟ್ರಸ್ಟ್ ಇರಬೇಕು. ಬಿಸಿಸಿಐ ಅದನ್ನು ಮಾಡಬಹುದು ಎಂದು ನಾನು ಭಾವಿಸುತ್ತೇನೆ. ಕುಟುಂಬವು ನಮಗೆ ಅನುಮತಿಸಿದರೆ ನಮ್ಮ ಪಿಂಚಣಿ ಮೊತ್ತವನ್ನು ದಾನ ಮಾಡುವ ಮೂಲಕ ಕೊಡುಗೆ ನೀಡಲು ನಾವು ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
71 ವರ್ಷದ ಗಾಯಕ್ವಾಡ್ 1990ರ ದಶಕದ ಕೊನೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಮೊದಲು ತಮ್ಮ 12 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 40 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. 15 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.