ಸೆಮಿಫೈನಲ್‌ನಲ್ಲಿ ಹರಿಯಾಣ ವಿರುದ್ಧ ರೋಚಕ ಗೆಲುವು; ವಿಜಯ್ ಹಜಾರೆ ಟ್ರೋಫಿ ಫೈನಲ್ ಪ್ರವೇಶಿಸಿದ ಕರ್ನಾಟಕ
ಕರ್ನಾಟಕ ತಂಡವು ಇದುವರೆಗೂ ನಾಲ್ಕು ಬಾರಿ ವಿಜಯ್ ಹಜಾರೆ ಟ್ರೋಫಿ ಫೈನಲ್ ಪ್ರವೇಶಿಸಿದೆ. ಈ ಎಲ್ಲಾ ನಾಲ್ಕು ಬಾರಿಯೂ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಹರಿಯಾಣ ಮಣಿಸಿ ಐದನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಮತ್ತೊಮ್ಮೆ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.

ಕರ್ನಾಟಕ ರಾಜ್ಯ ತಂಡವು ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪ್ರವೇಶಿಸಿದೆ. ವಡೋದರದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಹರಿಯಾಣ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ರೋಚಕ ಜಯ ಸಾಧಿಸಿದ ಮಯಾಂಕ್ ಅಗರ್ವಾಲ್ ಬಳಗವು, ಪ್ರಶಸ್ತಿ ಸುತ್ತಿನಿಂದ ಕೇವಲ ಒಂದು ಹೆಜ್ಜೆ ದೂರವಿದೆ. ತಂಡದ ಸಂಘಟಿತ ಬೌಲಿಂಗ್ ದಾಳಿ ಹಾಗೂ ದೇವದತ್ ಪಡಿಕಲ್ ಮತ್ತು ಸಮರನ್ ರವಿಚಂದ್ರನ್ ಜವಾಬ್ದಾರಿಯುತ ಆಟದ ನೆರವಿನಿಂದ ತಂಡವು ರೋಚಕ ಜಯ ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹರಿಯಾಣ, 9 ವಿಕೆಟ್ ಕಳೆದುಕೊಂಡು 237 ರನ್ ಗಳಿಸಿತು. ತಂಡದ ಪರ ನಾಯಕ ಅಂಕಿತ್ ಕುಮಾರ್ 48 ರನ್ ಗಳಿಸಿದರೆ, ಎಚ್ ರಾಣಾ 44 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಒಂದು ಹಂತದಲ್ಲಿ ಹರಿಯಾಣ 200 ರನ್‌ಗಳಿಗಿಂತ ಮುಂಚೆ ಆಲೌಟ್ ಆಗುವ ಸಾಧ್ಯತೆ ಇತ್ತು. ಆದರೆ ಕೊನೆಯ ವಿಕೆಟ್‌ಗೆ ಅನುಜ್ ಥಕ್ರಾಲ್ ಹಾಗೂ ಅಮಿತ್ ರಾಣಾ ಗಳಿಸಿದ ಅಜೇಯ 39 ರನ್ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಪ್ರೇರೇಪಿಸಿತು. ಬೌಲಿಂಗ್‌ನಲ್ಲಿ ಮಿಂಚಿದ ಅಭಿಲಾಷ್ ಶೆಟ್ಟಿ 4 ವಿಕೆಟ್ ಕಬಳಿಸಿದರು.
ಸಾಧಾರಣ ಮೊತ್ತದಗುರಿ ಬೆನ್ನಟ್ಟಿದ ಕರ್ನಾಟಕ, 47.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 238 ರನ್ ಗಳಿಸಿ ಗುರಿ ತಲುಪಿತು. ತಂಡದ ಪರ ದೇವದತ್ ಪಡಿಕ್ಕಲ್ ಹಾಗೂ ಸಮರನ್ ರವಿಚಂದ್ರನ್ ಜವಾಬ್ದಾರಿಯುತ ಆಟವಾಡಿದರು. ಇಬ್ಬರು ತಲಾ ಅರ್ಧಶತಕ ಗಳಿಸಿ ತಂಡದ ಚೇಸಿಂಗ್‌ಗೆ ಬಲ ತುಂಬಿದರು. ಆರಂಭದಲ್ಲೇ ನಾಯಕ ಮಯಾಂಕ್ ಅಗರ್ವಾಲ್ ಅವರನ್ನು ಶೂನ್ಯಕ್ಕೆ ಕಳೆದುಕೊಂಡ ತಂಡವು ಸೋಲಿನ ಭೀತಿ ಅನುಭವಿಸಿತ್ತು.
ಈ ವೇಳೆ ಜವಾಬ್ದಾರಿಯುತ ಆಟವಾಡಿದ ದೇವದತ್ ಪಡಿಕ್ಕಲ್, 86 ರನ್ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು. ಇವರಿಗೆ ಸಾಥ್ ನೀಡಿದ ರವಿಚಂದ್ರನ್ 76 ರನ್ ಗಳಿಸಿದರು. ಕೊನೆಯದಾಗಿ ಶ್ರೇಯಸ್ ಗೋಪಾಲ್ ಅಜೇಯ 23 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಜನವರಿ 18ರ ಶನಿವಾರ ಫೈನಲ್
ನಾಳೆ (ಜ.16) ವಿದರ್ಭ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯುತ್ತಿದೆ. ಅದರಲ್ಲಿ ಗೆದ್ದ ತಂಡದೊಂದಿಗೆ ಕರ್ನಾಟಕ ತಂಡ ಫೈನಲ್ ಪಂದ್ಯದಲ್ಲಿ ಆಡಲಿದೆ. ಜನವರಿ 18ರ ಶನಿವಾರ ಮಧ್ಯಾಹ್ನ 1:30ಕ್ಕೆ ಕೋಟಂಬಿ ಸ್ಟೇಡಿಯಂನಲ್ಲೇ ಫೈನಲ್ ಪಂದ್ಯ ನಡೆಯಲಿದೆ.
ಕರ್ನಾಟಕ ತಂಡವು ಇದುವರೆಗೂ ನಾಲ್ಕು ಬಾರಿ ವಿಜಯ್ ಹಜಾರೆ ಟ್ರೋಫಿ ಗೆದ್ದಿದೆ. ಫೈನಲ್ ಪ್ರವೇಶಿಸಿದ ಎಲ್ಲಾ ನಾಲ್ಕು ಬಾರಿಯೂ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಆವೃತ್ತಿಯ ಮೂಲಕ ಐದನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಮತ್ತೊಮ್ಮೆ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.
