ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ; ಡಿ. 2ರಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ
ಕನ್ನಡ ಸುದ್ದಿ  /  ಕ್ರಿಕೆಟ್  /  ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ; ಡಿ. 2ರಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ; ಡಿ. 2ರಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ

ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನವಿದೆ. ದಕ್ಷಿಣ ಭಾರತದ ದೊಡ್ಡ ರಾಜ್ಯವಾಗಿರುವ ಕರ್ನಾಟಕಕ್ಕೂ ಎರಡನೇ ಸ್ಟೇಡಿಯಂ ಅಗತ್ಯವಿದೆ. ಹೀಗಾಗಿ ಬೆಂಗಳೂರಿನ ಸಮೀಪದ ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತಿದೆ.

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ (Meta AI representational photo)
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ (Meta AI representational photo)

ತುಮಕೂರು ಜಿಲ್ಲೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಇದೀಗ ಕ್ರೀಡಾಂಗಣ ನಿರ್ಮಾಣದ ಕನಸು ನನಸಾಗುತ್ತಿದೆ. ಡಿಸೆಂಬರ್‌ ತಿಂಗಳಲ್ಲೇ ಸ್ಟೇಡಿಯಂ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಬಗ್ಗೆ ಗೃಹಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖೆಗಳ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಡಿಸೆಂಬರ್‌ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಲಿದ್ದಾರೆ. ಈ ವೇಳೆ ಕ್ರಿಕೆಟ್‌ ಮೈದಾನದ ಶಂಕುಸ್ಥಾಪನೆ ನಡೆಯಲಿದೆ.

ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕೆಎಸ್‌ಸಿಎ ಅಧ್ಯಕ್ಷ ಎ ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿ ಸುಮಾರು 938 ಕೋಟಿ ರೂ. ಮೊತ್ತದ 825 ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆದರೆ, 94 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕಾಮಗಾರಿಗಳ ಉದ್ಘಾಟನೆ ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಪಿ ಗೊಲ್ಲಹಳ್ಳಿ ಮತ್ತು ಸೂರೆಕುಂಟೆ ವ್ಯಾಪ್ತಿಯಲ್ಲಿ 41 ಎಕರೆ ಭೂಮಿಯನ್ನು ಕೆಐಎಡಿಬಿ ವತಿಯಿಂದ ಈಗಾಗಲೇ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌)ಗೆ ಹಸ್ತಾಂತರಿಸಲಾಗಿದೆ. ಬರೋಬ್ಬರಿ 150 ಕೋಟಿ ರೂ. ವೆಚ್ಚದ ಸುಸಜ್ಜಿತ ಸ್ಟೇಡಿಯಂ ನಿರ್ಮಾಣವಾಗಲಿದ್ದು, ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಸ್ಟೇಡಿಯಂ ನಿರ್ಮಾಣವಾದರೆ, ಇದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಪರ್ಯಾಯವಾಗಲಿದೆ.

ಕರ್ನಾಟಕಕ್ಕೆ ಎರಡನೇ ಕ್ರಿಕೆಟ್‌ ಸ್ಟೇಡಿಯಂ

ಭಾರತದಲ್ಲಿ ಹಲವಾರು ಅಂತಾರಾಷ್ಟ್ರೀಯ ಸ್ಟೇಡಿಯಂಗಳಿವೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನವಿದೆ. ಭಾರತದ ಕೆಲವು ರಾಜ್ಯಗಳಲ್ಲಿ ಮಾತ್ರ ಒಂದಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ಸ್ಟೇಡಿಯಂಗಳಿವೆ. ಅದರಲ್ಲಿ ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ ಪ್ರಮುಖವು. ದಕ್ಷಿಣ ಭಾರತದ ದೊಡ್ಡ ರಾಜ್ಯವಾಗಿರುವ ಕರ್ನಾಟಕಕ್ಕೂ ಎರಡನೇ ಸ್ಟೇಡಿಯಂ ಅಗತ್ಯವಿದೆ.

ಎಂ ಚಿನ್ನಸ್ವಾಮಿ ಮೈದಾನದಲ್ಲಿ‌ 50 ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿವೆ. ರಾಜ್ಯದಲ್ಲಿ ಇನ್ನೊಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ ಬೇಕು ಎಂಬ ಬೇಡಿಕೆ ಇದೆ. ಈಗಾಗಲೇ, ಮಡಿಕೇರಿ, ಮೈಸೂರು, ಮಂಗಳೂರು ಭಾಗದಲ್ಲಿ ಸ್ಟೇಡಿಯಂ ನಿರ್ಮಾಣವಾಗಲಿದೆ ಎಂಬ ಪ್ರಸ್ತಾವನೆ ಇದೆ. ಆದರೆ, ನಿರ್ಮಾಣ ಹಂತಕ್ಕೆ ಯಾವುದೂ ಬಂದಿಲ್ಲ. ಇದೀಗ ಬೆಂಗಳೂರಿನ ಮಗ್ಗುಲಲ್ಲೇ ಇರುವ ತುಮಕೂರಿನಲ್ಲಿ ಕ್ರಿಕೆಟ್ ಮೈದಾನ ನಿರ್ಮಾಣವಾಗುತ್ತಿದ್ದು, ಕೆಲವೇ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆ ಇಲ್ಲಿನ ಅಭಿಮಾನಿಗಳದ್ದು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಡಿಸೆಂಬರ್‌ 2ರಂದು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಜೊತೆಗೆ, ಕೃಷಿ ಇಲಾಖೆಯಿಂದ ಫಲಾನುಭವಿ ರೈತರಿಗೆ ಟ್ರ್ಯಾಕ್ಟರ್, ಡೀಸೆಲ್ ಇಂಜಿನ್, ಪಿವಿಸಿ ಪೈಪ್, ತುಂತುರು ನೀರಾವರಿಯ ಕಿಟ್‌ಗಳು, ತೋಟಗಾರಿಕೆ ಇಲಾಖೆಯಲ್ಲಿ ಹನಿ‌ನೀರಾವರಿ, ಪವರ್‌ಫೀಡರ್ಸ್, ರೇಷ್ಮೇ ಇಲಾಖೆಯ 2100 ಫಲಾನುಭವಿಗಳಿಗೆ ಸೋಂಕು ನಿವರಣಾ ಕಿಟ್, ದೇವರಾಜು ಅರಸು ನಿಗಮದಿಂದ ಮಹಿಳೆಯರಿಗೆ 200 ಹೊಲಿಗೆ ಯಂತ್ರ, ಟ್ಯಾಕ್ಸಿ, ಕಾರ್ಮಿಕ‌ ಇಲಾಖೆಯಿಂದ ವೆಲ್ಡಿಂಗ್ ಟೂಲ್‌ ಕಿಟ್‌ ಸೇರಿದಂತೆ ಜಿಲ್ಲಾಡಳಿತ ಗುರುತಿಸಿರುವ 1.50 ಲಕ್ಷ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಹಂಚಿಕೆ‌ ಮಾಡಲಾಗುತ್ತದೆ.

ಕಂದಾಯ ಇಲಾಖೆಯಿಂದ 2000 ಸಾವಿರ ಹಕ್ಕು ಪತ್ರಗಳನ್ನು ಹಂಚಿಕೆ‌ ಮಾಡಲಾಗುವುದು. ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಿದೆ. ಸಂಜೀವಿನಿ ಕಾರ್ಯಕ್ರಮದಡಿ 40 ಸಾವಿರ ಮಹಿಳೆಯರಿಗೆ 40 ಕೋಟಿ ರೂ. ನೀಡಲಾಗುತ್ತಿದೆ. ಎಲ್ಲ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿ, ಶಂಕುಸ್ಥಾಪನೆಗಳಿವೆ. ಯೋಜನೆಗಳ ಫಲಾನುಭವಿಗಳಿದ್ದಾರೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಾದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ. ಎಲ್ಲ‌ ಜಿಲ್ಲೆಗಳ ಅಭಿವೃದ್ಧಿಯಾದರೆ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂಬುದು ನಮ್ಮ ದೂರದೃಷ್ಟಿ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಯವರಿಗೆ ವಿಪಕ್ಷದ ಶಾಸಕರು ಕಪ್ಪು ಭಾವುಟ ತೋರಿಸುವ ಅಗತ್ಯವಿಲ್ಲ ಎಂದು ಪರಮೇಶ್ವರ್‌ ಹೇಳಿದ್ದಾರೆ‌.

ತುಮಕೂರಿಗೆ ಮೆಟ್ರೋ ರೈಲು ಯೋಜನೆಗೆ ಡಿಪಿಆರ್ ನಡೆಯುತ್ತಿದೆ. ಹೈದ್ರಾಬಾದ್ ಮೂಲದ ಕಂಪನಿಗೆ ಟೆಂಡರ್ ಆಗಿದ್ದು, ಒಂದೂವರೆ ತಿಂಗಳಿಂದ ಮಾಡುತ್ತಿದೆ. ವಸಂತಾನರಸಾಪುರಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಟೌನ್‌ಶಿಪ್‌ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

Whats_app_banner