ರಣಜಿ ಟ್ರೋಫಿ: ಚಂಡೀಗಢ ವಿರುದ್ಧದ ಪಂದ್ಯ ಡ್ರಾಗೊಂಡರೂ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಕರ್ನಾಟಕ
Ranji Trophy: ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಬಳಗ ಡ್ರಾ ಸಾಧಿಸಿತು. ಪಂದ್ಯದಲ್ಲಿ ಮನೀಶ್ ಪಾಂಡೆ, ಶರತ್ ಶ್ರೀನಿವಾಸ್ ಮತ್ತು ಆರ್‌ಸಿಬಿ ವೇಗದ ಬೌಲರ್ ವಿಜಯ್ ಕುಮಾರ್ ವೈಶಾಖ್ ಶತಕ ಸಿಡಿಸಿ ಮಿಂಚಿದರು.
ಕರ್ನಾಟಕ ಮತ್ತು ಚಂಡೀಗಢ (Karnataka vs Chandigarh) ನಡುವಿನ ರಣಜಿ ಟ್ರೋಫಿ ಪಂದ್ಯವು (Ranji Trophy 2023-24) ಡ್ರಾದಲ್ಲಿ ಅಂತ್ಯಗೊಂಡಿದೆ. ಆ ಮೂಲಕ ಮಯಾಂಕ್ ಅಗರ್ವಾಲ್ ಬಳಗದ ಸತತ ಎರಡು ಪಂದ್ಯಗಳು ಫಲಿತಾಂಶ ರಹಿತವಾಗಿದೆ. ತಮಿಳುನಾಡು ವಿರುದ್ಧದ ಕೊನೆಯ ಪಂದ್ಯ ಕೂಡಾ ಡ್ರಾ ಆಗಿತ್ತು. ಇದೀಗ ಕೊನೆಯ ಪಂದ್ಯ ಡ್ರಾಗೊಂಡರೂ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿರುವ ತಂಡ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಹುಬ್ಬಳ್ಳಿಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ (KSCA Hubli Cricket Ground) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚಂಡೀಗಢ, ಮೊದಲ ಇನ್ನಿಂಗ್ಸ್‌ನಲ್ಲಿ 267 ರನ್‌ಗಳಿಗೆ ಆಲೌಟ್ ಆಯ್ತು. ಇದಕ್ಕೆ ಪ್ರತಿಯಾಗಿ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 563 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ರಾಜ್ಯ ತಂಡದ ಪರ ಮೂವರು ಶತಕ ಸಿಡಿಸಿ ಅಬ್ಬರಿಸಿದರು.
ಇದನ್ನೂ ಓದಿ | ಬಿಹಾರ ವಿರುದ್ಧದ ರಣಜಿ ಪಂದ್ಯದ ಬಳಿಕ ಮನೋಜ್ ತಿವಾರಿ ವಿದಾಯ; ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಭಾವುಕ
ಮನೀಶ್ ಪಾಂಡೆ, ಶರತ್ ಶ್ರೀನಿವಾಸ್ ಮತ್ತು ಆರ್‌ಸಿಬಿ ವೇಗದ ಬೌಲರ್ ವಿಜಯ್ ಕುಮಾರ್ ವೈಶಾಖ್ ಕೂಡಾ ಅಮೋಘ ಶತಕ ಸಿಡಿಸಿ ಮಿಂಚಿದರು. ಆರಂಭಿಕ ವೈಫಲ್ಯ ಅನುಭವಿಸಿದ್ದ ತಂಡಕ್ಕೆ ಮನೀಶ್ ಪಾಂಡೆ ಆಸರೆಯಾದರು. 17 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 148 ರನ್ ಸಿಡಿಸಿದರು. ಅತ್ತ ವಿಕೆಟ್ ಕೀಪರ್ ಶ್ರೀನಿವಾಸ್ ಶರತ್ ಅಜೇಯ 100 ರನ್ ಗಳಿಸಿದರೆ, ಮತ್ತೊಂದೆಡೆ ವೈಶಾಖ್ ಕೂಡಾ ಅಜೇಯ 103 ರನ್ ಗಳಿಸಿದ್ದಾಗ ತಂಡ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ತಂಡ
ಎರಡನೇ ಇನ್ನಿಂಗ್ಸ್ ನಡೆಸಿದ ಚಂಡೀಗಢ 5 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿತು. ಅಂತಿಮವಾಗಿ ಪಂದ್ಯ ಡ್ರಾಗೊಂಡಿತು. ಆದರೂ, ಮಯಾಂಕ್ ಅಗರ್ವಾಲ್ ಬಳಗವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತು. ಅಗ್ರಸ್ಥಾನಿಯಾಗಿ ತಮಿಳುನಾಡು ತಂಡ ಮುಂದಿನ ಹಂತಕ್ಕೆ ಬಡ್ತಿ ಪಡೆಯಿತು. ರಾಜ್ಯ ತಂಡವು ಮುಂದೆ ಮೊದಲನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಎದುರಿಸಲಿದೆ.
ಇದನ್ನೂ ಓದಿ | ಡಬ್ಲ್ಯುಪಿಎಲ್ 2ನೇ ಆವೃತ್ತಿಗೆ ದಿನಗಣನೆ; ಪಂದ್ಯ ನಡೆಯುವ ಸ್ಥಳ, ಯಾವಾಗ, ವೇಳಾಪಟ್ಟಿ ಬಗ್ಗೆ ಸಂಪೂರ್ಣ ವಿವರ ಹೀಗಿದೆ
ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯಗಳು
ಎಲ್ಲಾ ನಾಲ್ಕು ಗುಂಪಿನ ಅಗ್ರಸ್ಥಾನಿ ತಂಡವು ಬೇರೆ ಗುಂಪಿನ ಎರಡನೇ ಸ್ಥಾನ ಪಡೆದ ತಂಡಗಳನ್ನು ಎದುರಿಸಲಿವೆ. ವಿದರ್ಭ, ಮುಂಬೈ, ತಮಿಳುನಾಡು ಮತ್ತು ಮಧ್ಯಪ್ರದೇಶ ತಂಡಗಳು ಆಯಾ ಗುಂಪುಗಳಲ್ಲಿ ಅಗ್ರಸ್ಥಾನ ಪಡೆದಿವೆ. ಕರ್ನಾಟಕವು ಎ ಗುಂಪಿನ ಅಗ್ರಸ್ಥಾನಿಯನ್ನು ಮೊದಲ ಕ್ವಾರ್ಟರ್ ಕದನದಲ್ಲಿ ಎದುರಿಸಲಿದೆ. ಫೆಬ್ರವರಿ 23ರಂದು ಈ ಎಲ್ಲಾ ಪಂದ್ಯಗಳು ನಡೆಯಲಿವೆ.
ರಣಜಿ ಟ್ರೋಫಿ 2023-24 ಕ್ವಾರ್ಟರ್‌ಫೈನಲ್ ಪಂದ್ಯಗಳು
- ಕ್ವಾರ್ಟರ್‌ಫೈನಲ್ 1: ವಿದರ್ಭ vs ಕರ್ನಾಟಕ
- ಕ್ವಾರ್ಟರ್‌ಫೈನಲ್ 2: ಮಧ್ಯಪ್ರದೇಶ vs ಆಂಧ್ರ
- ಕ್ವಾರ್ಟರ್‌ಫೈನಲ್ 3: ಮುಂಬೈ ವಿರುದ್ಧ ಬರೋಡಾ
- ಕ್ವಾರ್ಟರ್‌ಫೈನಲ್ 4: ತಮಿಳುನಾಡು vs ಸೌರಾಷ್ಟ್ರ
ಇದನ್ನೂ ಓದಿ | ಬುಮ್ರಾ, ಪಾಟೀದಾರ್ ಔಟ್; ಕೆಎಲ್ ರಾಹುಲ್ ಇನ್; ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
(This copy first appeared in Hindustan Times Kannada website. To read more like this please logon to kannada.hindustantimes.com)