ಮಹಾರಾಜ ಟ್ರೋಫಿ 2024: ಆಗಸ್ಟ್ 15ರಿಂದ ಕರ್ನಾಟಕದಲ್ಲಿ ಕ್ರಿಕೆಟ್‌ ಹಬ್ಬ; ದಿನಾಂಕ, ತಂಡಗಳು ಹಾಗೂ ನೇರ ಪ್ರಸಾರ ವಿವರ
ಕನ್ನಡ ಸುದ್ದಿ  /  ಕ್ರಿಕೆಟ್  /  ಮಹಾರಾಜ ಟ್ರೋಫಿ 2024: ಆಗಸ್ಟ್ 15ರಿಂದ ಕರ್ನಾಟಕದಲ್ಲಿ ಕ್ರಿಕೆಟ್‌ ಹಬ್ಬ; ದಿನಾಂಕ, ತಂಡಗಳು ಹಾಗೂ ನೇರ ಪ್ರಸಾರ ವಿವರ

ಮಹಾರಾಜ ಟ್ರೋಫಿ 2024: ಆಗಸ್ಟ್ 15ರಿಂದ ಕರ್ನಾಟಕದಲ್ಲಿ ಕ್ರಿಕೆಟ್‌ ಹಬ್ಬ; ದಿನಾಂಕ, ತಂಡಗಳು ಹಾಗೂ ನೇರ ಪ್ರಸಾರ ವಿವರ

Maharaja Trophy 2024: ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಮೂರನೇ ಆವೃತ್ತಿಯನ್ನು ಕೆಎಸ್‌ಸಿಎ ಘೋಷಿಸಿದೆ. ಆಗಸ್ಟ್‌ 15ರಂದು ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಟೂರ್ನಿ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಮಹಾರಾಜ ಟ್ರೋಫಿ 2024; ದಿನಾಂಕ, ತಂಡಗಳು ಹಾಗೂ ನೇರ ಪ್ರಸಾರ ವಿವರ
ಮಹಾರಾಜ ಟ್ರೋಫಿ 2024; ದಿನಾಂಕ, ತಂಡಗಳು ಹಾಗೂ ನೇರ ಪ್ರಸಾರ ವಿವರ (X)

ಐಪಿಎಲ್‌ನಂತೆಯೇ ಕರ್ನಾಟಕದಲ್ಲಿ ನಡೆಯುವ ಫ್ರಾಂಚೈಸ್‌ ಆಧಾರಿತ ಟಿ20 ಲೀಗ್‌ ಮಹಾರಾಜ ಟ್ರೋಫಿಯ (Maharaja Trophy T20) ಮೂರನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಸತತ ಎರಡು ಆವೃತ್ತಿಗಳಲ್ಲಿ ಅಮೋಘ ಯಶಸ್ಸು ಸಾಧಿಸಿದ ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಮೂರನೇ ಆವೃತ್ತಿಯನ್ನುಆರಂಭಿಸುವುದಾಗಿ ಘೋಷಿಸಿದೆ. ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಆಗಸ್ಟ್ 15ರಂದು ಆರಂಭವಾಗಲಿದ್ದು, ಸೆಪ್ಟೆಂಬರ್ 1ರವರೆಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾಗಳು ನಡೆಯಲಿದೆ.

ಕಳೆದ ವರ್ಷ ಪರಿಚಯಿಸಲಾದ ಟೂರ್ನಿಯು ಈ ಬಾರಿಯೂ ಫ್ರ್ಯಾಂಚೈಸ್ ಆಧಾರಿತ ಪಂದ್ಯಾವಳಿಯಾಗಿ ನಡೆಯಲಿದೆ. ಐಪಿಎಲ್‌ನಂತೆಯೇ ಫ್ರಾಂಚೈಸಿಗಳಿಗೆ ತಮ್ಮ ಹಿಂದಿನ ತಂಡದಿಂದ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ರಿಟೆನ್ಷನ್‌ ನಂತರ, ಪಂದ್ಯಾವಳಿಗೂ ಮುಂಚಿತವಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಮಹಾರಾಜ ಟ್ರೋಫಿ ಫ್ರಾಂಚೈಸಿಯಲ್ಲಿ ವಿವಿಧ ತಂಡಗಳ ಪರ ಆಡಲು 700ಕ್ಕೂ ಹೆಚ್ಚು ಪ್ರತಿಭಾವಂತ ಕ್ರಿಕೆಟಿಗರು ಸ್ಪರ್ಧಿಸುತ್ತಿದ್ದಾರೆ.

ಈ ಬಾರಿಯ ಟೂರ್ನಿಯಲ್ಲಿ ಒಟ್ಟು ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ಹಾಗೂ ಕಳೆದ ವರ್ಷದ ರನ್ನರ್ ಅಪ್ ಮೈಸೂರು ವಾರಿಯರ್ಸ್ ಸೇರಿದಂತೆ ಮಂಗಳೂರು ಡ್ರಾಗನ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಆಡಲಿವೆ.‌

ಹಲವು ಸ್ಟಾರ್‌ ಆಟಗಾರರು ಭಾಗಿ

ದೇಶದ ಪ್ರಮುಖ ದೇಶೀಯ ಟಿ20 ಲೀಗ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಮಹಾರಾಜ ಟ್ರೋಫಿಯಲ್ಲಿ ರಾಷ್ಟ್ರೀಯ ತಂಡದ ಪರ ಆಡಿರುವ ಹಲವು ಬಲಿಷ್ಠ ಆಟಗಾರರು ಆಡಲಿದ್ದಾರೆ. ಕರ್ನಾಟಕದ ಆಟಗಾರರಾದ ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ವೈಶಾಖ್ ವಿಜಯಕುಮಾರ್, ಕೃಷ್ಣಪ್ಪ ಗೌತಮ್ ಮತ್ತು ವಿದ್ವತ್ ಕಾವೇರಪ್ಪ ವಿವಿಧ ತಂಡಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಹಾರಾಜ ಟ್ರೋಫಿ 2024 ಯಾವಾಗ ಪ್ರಾರಂಭವಾಗಲಿದೆ?

ಮಹಾರಾಜ ಟ್ರೋಫಿ ಟಿ20 ಟೂರ್ನಿಯು ಆಗಸ್ಟ್ 15 ರಂದು ಆರಂಭವಾಗಲಿದೆ. ಸೆಪ್ಟೆಂಬರ್ 1ರಂದು ಫೈನಲ್ ಪಂದ್ಯ ನಡೆಯಲಿದೆ. ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಘೋಷಣೆಯಾಗಲಿದೆ.

ಮಹಾರಾಜ ಟ್ರೋಫಿ ಪಂದ್ಯಗಳು ಎಲ್ಲಿ ನಡೆಯುತ್ತವೆ?

ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಮಹಾರಾಜ ಟ್ರೋಫಿಯ ಮೂರನೇ ಸೀಸನ್‌ಗೆ ಮೊದಲು ರಿಟೆನ್ಷನ್‌ ಅಥವಾ ಹರಾಜು ನಡೆಯುತ್ತಾ?

ಹೌದು, ಫ್ರಾಂಚೈಸಿಗಳಿಗೆ ಈ ಹಿಂದಿನ ತಂಡದಿಂದ ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ರಿಟೆನ್ಷನ್‌ ನಂತರ 700ಕ್ಕೂ ಹೆಚ್ಚು ಕ್ರಿಕೆಟಿಗರನ್ನು ಒಳಗೊಂಡಿರುವ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಆ ಬಳಿಕ ತಂಡಗಳ ಅಂತಿಮ ಚಿತ್ರಣ ಸಿಗಲಿದೆ.

ಮಹಾರಾಜ ಟ್ರೋಫಿ ಟಿ20 ಪಂದ್ಯಗಳನ್ನು ವೀಕ್ಷಿಸುವುದು ಹೇಗೆ?

ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯಗಳ ನೇರಪ್ರಸಾರ ಇರಲಿದೆ. ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ವಾಹಿನಿಗಳ ಮೂಲಕ ಪಂದ್ಯಗಳನ್ನು ಟಿವಿ ಮೂಲಕ ವೀಕ್ಷಿಸಬಹುದು. ಇದರಲ್ಲಿ ಕನ್ನಡ ಕಾಮೆಂಟರಿಯೂ ಇರಲಿದೆ. ಇದೇ ವೇಳೆ ಫ್ಯಾನ್‌ಕೋಡ್ ಅಪ್ಲಿಕೇಶನ್‌ನಲ್ಲಿ ಮಹಾರಾಜ ಟ್ರೋಫಿಯ ಲೈವ್ ಸ್ಟ್ರೀಮಿಂಗ್‌ ಇರಲಿದೆ.

ಟಿ20 ವರ್ಲ್ಡ್‌ಕಪ್ 2024ರ ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner