ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್, ಜಿಂಬಾಬ್ವೆ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ; ಸಪ್ತಸಾಗರದಾಚೆಯೂ ಬೆಳೆಯಲಿದೆ ಕರ್ನಾಟಕದ ಬ್ರಾಂಡ್
ಕರ್ನಾಟಕದ ದೇಶೀಯ ಬ್ರಾಂಡ್ ನಂದಿನಿ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳನ್ನು ಪ್ರಾಯೋಜಿಸುತ್ತಿದೆ. ಮುಂಬರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಐರ್ಲೆಂಡ್ ಹಾಗೂ ಜಿಂಬಾಬ್ವೆ ತಂಡಕ್ಕೆ ನಂದಿನಿ ಬ್ರಾಂಡ್ ಆಗಿ ಪ್ರಾಯೋಜಕತ್ವ ವಹಿಸುತ್ತಿದೆ.
ಕರ್ನಾಟಕದ ಹೆಮ್ಮೆಯ ಡೈರಿ ಬ್ರಾಂಡ್ ನಂದಿನಿ ಹಾಗೂ ಭಾರತದ ಮತ್ತೊಂದು ಡೈರಿ ಸಂಸ್ಥೆ ಅಮುಲ್ ನಡುವೆ ಇತ್ತೀಚೆಗೆ ಭಾರಿ ಪೈಪೋಟಿ ಏರ್ಪಟ್ಟಿತ್ತು. ಈ ವೇಳೆ ನಂದಿನಿ ಕರ್ನಾಟಕದ ಅಸ್ಮಿತೆ ಎಂಬ ಹೆಮ್ಮೆಯ ಹೇಳಿಕೆಗಳು ಹೊರಹೊಮ್ಮಿದ್ದವು. ದೇಶ-ವಿದೇಶಗಳ ಪ್ರಬಲ ಬ್ರಾಂಡ್‌ಗಳಿಗೆ ಪೈಪೋಟಿ ಕೊಟ್ಟು ಕರ್ನಾಟಕದ ನಂದಿನಿಯು ಖ್ಯಾತಿ ಹೆಚ್ಚಿಸಿದೆ. ಈ ನಡುವೆ ದೇಶದ ಗಡಿಯನ್ನು ಮೀರಿ ನಿಂತು ನಂದಿನಿ ಬ್ರಾಂಡ್ ತನ್ನ ಖ್ಯಾತಿಯ ಪರಿಧಿಯನ್ನು ವಿಸ್ತಿರಿಸುತ್ತಿದೆ.
ಹೌದು, ಕರ್ನಾಟಕದ ರಾಜ್ಯದ ಸರ್ಕಾರಿ ಸ್ವಾಮ್ಯದ ಹೆಮ್ಮೆಯ ಡೈರಿ ಬ್ರಾಂಡ್ ನಂದಿನಿ, ಈ ವರ್ಷದ ಜೂನ್ ತಿಂಗಳಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಯ ವೇಳೆ ಅಂತಾರಾಷ್ಟ್ರೀಯ ಬ್ರಾಂಡ್ ಆಗಿ ಗುರುತಿಸಿಕೊಳ್ಳಲು ಸಜ್ಜಾಗಿದೆ. ಸಪ್ತಸಾಗರದಾಚೆ ನಡೆಯಲಿರುವ ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ನಂದಿನಿ ಹೆಸರು ಜಾಗತಿಕ ಕ್ರೀಡಾಸಕ್ತರ ಗಮನ ಸೆಳೆಯಲಿದೆ.
ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್)ದ ನಂದಿನಿಯು ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳ ಪ್ರಾಯೋಜಕತ್ವ ವಹಿಸಿಕೊಂಡಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಮಯದಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಲ್ಲಿದ್ದ ರಾಜ್ಯದ ಬ್ರಾಂಡ್, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಗಳನ್ನು ಪ್ರಾಯೋಜಿಸುತ್ತಿದೆ.
ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸ್ಪಾನ್‌ಸರ್‌ಶಿಪ್ ಕುರಿತಾಗಿ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂಕೆ ಜಗದೀಶ್, “ನಾವು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಲಿದ್ದೇವೆ. ನಮ್ಮ ಬ್ರಾಂಡ್ ಅನ್ನು ಪಂದ್ಯಗಳ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.
ನಂದಿನಿ ಉತ್ಪನ್ನವು 'ನಂದಿನಿ ಸ್ಪ್ಲಾಶ್' ಹೆಸರಿನೊಂದಿಗೆ ಅಮೆರಿಕದ ಎನರ್ಜಿ ಡ್ರಿಂಕ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ವರದಿಯಾಗಿದೆ. “ವಿಶ್ವಕಪ್ ವೇಳೆ ನಂದಿನಿಯನ್ನು ಜಾಗತಿಕ ಕೇಂದ್ರಬಿಂದುವನ್ನಾಗಿ ಮಾಡಲು ನಾವು ಬಯಸುತ್ತೇವೆ. ಪಂದ್ಯಾವಳಿಯ ಸಮಯದಲ್ಲಿ ಹಾಲೊಡಕು ಆಧಾರಿತ ಎನರ್ಜಿ ಡ್ರಿಂಕ್ಸ್ ಯುಎಸ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಹೀಗಾಗಿ ನಂದಿನಿ ಜಾಗತಿಕ ಬ್ರಾಂಡ್ ಆಗಲಿದೆ,” ಎಂದು ಎಂಕೆ ಜಗದೀಶ್ ತಿಳಿಸಿದ್ದಾರೆ.
ಐಪಿಎಲ್ ಪಂದ್ಯಾವಳಿ ಮುಗಿದ ಬೆನ್ನಲ್ಲೇ ಜೂನ್ ಆರಂಭದಲ್ಲೇ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಟೂರ್ನಿಗೆ ಆತಿಥ್ಯ ವಹಿಸಲಿದೆ.