ಮತ್ತೆ ಭಾರತ ಪರ ಆಡುವ ನಿರೀಕ್ಷೆಯಲ್ಲಿ ಕರುಣ್ ನಾಯರ್; ಚಾಂಪಿಯನ್ಸ್‌ ಟ್ರೋಫಿ, ಇಂಗ್ಲೆಂಡ್‌ ಸರಣಿಗೆ ತ್ರಿಶತಕವೀರ ಆಯ್ಕೆ ಸಾಧ್ಯತೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಮತ್ತೆ ಭಾರತ ಪರ ಆಡುವ ನಿರೀಕ್ಷೆಯಲ್ಲಿ ಕರುಣ್ ನಾಯರ್; ಚಾಂಪಿಯನ್ಸ್‌ ಟ್ರೋಫಿ, ಇಂಗ್ಲೆಂಡ್‌ ಸರಣಿಗೆ ತ್ರಿಶತಕವೀರ ಆಯ್ಕೆ ಸಾಧ್ಯತೆ

ಮತ್ತೆ ಭಾರತ ಪರ ಆಡುವ ನಿರೀಕ್ಷೆಯಲ್ಲಿ ಕರುಣ್ ನಾಯರ್; ಚಾಂಪಿಯನ್ಸ್‌ ಟ್ರೋಫಿ, ಇಂಗ್ಲೆಂಡ್‌ ಸರಣಿಗೆ ತ್ರಿಶತಕವೀರ ಆಯ್ಕೆ ಸಾಧ್ಯತೆ

ಪ್ರಸಕ್ತ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ನಾಯರ್ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಆಡಿದ 6 ಇನ್ನಿಂಗ್ಸ್‌ಗಳಲ್ಲಿ 664 ರನ್ ಗಳಿಸಿದ್ದಾರೆ. ಟೂರ್ನಿಯಲ್ಲಿ 5 ಶತಕ ಸಿಡಿಸಿರುವ ಆಟಗಾರ, ಟೀಮ್‌ ಇಂಡಿಯಾ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಹೀಗಾಗಿ ಮುಂದಿನ ಮಹತ್ವದ ಟೂರ್ನಿಗಳಿಗೆ ಆಯ್ಕೆಯಾಗುವ ನಿರೀಕ್ಷೆ ಕನ್ನಡಿಗನದ್ದು.

ಮತ್ತೆ ಭಾರತ ಪರ ಆಡುವ ನಿರೀಕ್ಷೆಯಲ್ಲಿ ಕರುಣ್ ನಾಯರ್; ಚಾಂಪಿಯನ್ಸ್‌ ಟ್ರೋಫಿ, ಇಂಗ್ಲೆಂಡ್‌ ಸರಣಿಗೆ ತ್ರಿಶತಕವೀರ ಆಯ್ಕೆ ಸಾಧ್ಯತೆ
ಮತ್ತೆ ಭಾರತ ಪರ ಆಡುವ ನಿರೀಕ್ಷೆಯಲ್ಲಿ ಕರುಣ್ ನಾಯರ್; ಚಾಂಪಿಯನ್ಸ್‌ ಟ್ರೋಫಿ, ಇಂಗ್ಲೆಂಡ್‌ ಸರಣಿಗೆ ತ್ರಿಶತಕವೀರ ಆಯ್ಕೆ ಸಾಧ್ಯತೆ (Instagram)

ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿರುವುದು ಇಬ್ಬರು ಆಟಗಾರರು ಮಾತ್ರ. ಅವರಲ್ಲಿ ಒಬ್ಬರು ವೀರೇಂದ್ರ ಸೆಹ್ವಾಗ್. ವೀರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ. ಇನ್ನೊಬ್ಬ ಆಟಗಾರ ಕನ್ನಡಿಗ ಕರುಣ್‌ ನಾಯರ್ (Karun Nair).‌ ಆದರೆ, ಇವರು ಭಾರತ ಕ್ರಿಕೆಟ್‌ ತಂಡದ ಪರ ಆಡಿದ್ದೇ ಕಡಿಮೆ. ಆದರೂ, ದೇಶಿಯ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ಅಬ್ಬರದಾಟ ನಿಂತೇ ಇಲ್ಲ. ಎಲ್ಲಿ ಅವಕಾಶ ಸಿಗುತ್ತೋ, ಅದನ್ನು ಎರಡೂ ಕೈಗಳಿಂದ ಬಾಚಿ ಪಡೆದ ಕನ್ನಡಿಗ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಲೇ ಇದ್ದಾರೆ. ಆದರೆ, ಟೀಮ್‌ ಇಂಡಿಯಾ ಕಮ್‌ಬ್ಯಾಕ್‌ ಸಾಧ್ಯವಾಗುತ್ತಲೇ ಇಲ್ಲ.

ಅವಕಾಶಕ್ಕಾಗಿ ಕರುಣ್‌ ನಾಯರ್‌ ಇದ್ದ ಬದ್ದ ಎಲ್ಲಾ ಪ್ರಯತ್ನವನ್ನೂ ಮಾಡಿದ್ದಾರೆ. ಸಿಕ್ಕಿದ ಅವಕಾಶಗಳನ್ನು ಸದ್ಬಳಕೆ ಮಾಡಿ ಸಾಮರ್ಥ್ಯ ತೋರಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌, ಲಿಸ್ಟ್‌ ಎ ಕ್ರಿಕೆಟ್‌ ಎಲ್ಲದರಲ್ಲೂ ಆಡಿದ್ದಾರೆ. ಕರ್ನಾಟಕ ತಂಡದ ಪರ ಆಡಿ ಹಲವು ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಿದ್ದಾರೆ. ಆದರೂ ಭಾರತ ತಂಡಕ್ಕೆ ಮಾತ್ರ ಆಯ್ಕೆಯಾಗಲಿಲ್ಲ.

ಬೇರೆ ದಾರಿ ಕಾಣದ ಕರುಣ್‌, ಸರಿಸುಮಾರು 13 ತಿಂಗಳ ಹಿಂದೆ ಭಾವನಾತ್ಮಕ ಟ್ವೀಟ್ ಒಂದನ್ನು ಮಾಡಿದ್ದರು. “ಪ್ರಿಯ ಕ್ರಿಕೆಟ್, ನನಗೆ ಇನ್ನೊಂದು ಅವಕಾಶ ನೀಡು” ಎಂದು 2022ರ ಡಿಸೆಂಬರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಅತ್ಯುತ್ತಮ ಪ್ರದರ್ಶನದ ಹೊರತಾಗಿ ಒಬ್ಬ ಸಮರ್ಥ ಆಟಗಾರ ಏನೆಲ್ಲಾ ಮಾಡಲು ಸಾಧ್ಯವೋ ಎಲ್ಲವನ್ನೂ ಕರುಣ್‌ ಮಾಡಿದ್ದಾರೆ. ಆದರೂ ಅವಕಾಶಗಳು ಸಿಗಲಿಲ್ಲ. ತಮ್ಮದೇ ರಾಜ್ಯ ತಂಡ ಕರ್ನಾಟಕ ಪರ ಆಡುವ ಅವಕಾಶಗಳ ಕೊರತೆ ಎದುರಾದಾಗ, ತಮ್ಮ ರಾಜ್ಯ ತಂಡವನ್ನು ತೊರೆದು ವಿದರ್ಭ ಪರ ಆಡಲು ಮುಂದಾದರು. ಈಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರ ಪ್ರಚಂಡ ಫಾರ್ಮ್‌, ಗಮನ ಸೆಳೆದಿದೆ.

6 ಇನ್ನಿಂಗ್ಸ್‌ಗಳಲ್ಲಿ 5 ಶತಕ, 664 ರನ್

ವಿದರ್ಭ ಪರ ಆಡಿದ 6 ಇನ್ನಿಂಗ್ಸ್‌ಗಳಲ್ಲಿ ದಾಖಲೆಯ 5 ಶತಕ ಸಿಡಿಸಿ ಕರುಣ್ ಅಬ್ಬರಿಸಿದ್ದಾರೆ. ಆ ಮೂಲಕ ಟೀಮ್‌ ಇಂಡಿಯಾ ಆಯ್ಕೆದಾರರಿಗೆ ತಮ್ಮ ಇರುವಿಕೆಯನ್ನು ಮತ್ತೆ ತೋರಿಸಿಕೊಟ್ಟಿದ್ದಾರೆ. ಇದೀಗ ವಿದರ್ಭ ತಂಡವು ಈ ಬಾರಿಯ ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಇದರಲ್ಲಿ ಕರುಣ್‌ ನಾಯರ್‌ ಅವರದ್ದೇ ಸಿಂಹಪಾಲು. ಆಡಿದ 6 ಇನ್ನಿಂಗ್ಸ್‌ಗಳಲ್ಲಿ 5 ಶತಕ ಸೇರಿದಂತೆ ಬರೋಬ್ಬರಿ 664 ರನ್‌ ಗಳಿಸಿದ್ದಾರೆ. ಮುಂದೆ ನಿರ್ಣಾಯಕ ಪಂದ್ಯದಲ್ಲೂ ಸಿಡಿಯುವ ವಿಶ್ವಾಸದಲ್ಲಿದ್ದಾರೆ.

2016ರಲ್ಲಿ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ತ್ರಿಶತಕ ಗಳಿಸಿದ ಆಟಗಾರನನ್ನು, ಭಾರತ ತಂಡದಿಂದ ಅಚ್ಚರಿಯ ರೀತಿಯಲ್ಲಿ ಕೈಬಿಡಲಾಯಿತು. ಅಷ್ಟಕ್ಕೂ ಕರುಣ್‌ ಅವರು ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗದಿರುವುದು ಯಾಕೆ ಎಂಬ ರಹಸ್ಯಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಆಟಗಾರ, ಸತತ ನಾಲ್ಕು ಶತಕಗಳನ್ನು ಬಾರಿಸುವ ಮೂಲಕ ಟೀಮ್‌ ಇಂಡಿಯಾ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಭಾರತದ ಮುಂದಿನ ಸರಣಿಗಾದರೂ ತಾನು ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಅವರದ್ದು.

ಅಜೇಯ ಆಟ

ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಈವರೆಗೆ ಕರುಣ್ ಆಡಿರುವ ಪಂದ್ಯಗಳಲ್ಲಿ ಅವರ ಸ್ಕೋರ್ ಹೀಗಿದೆ. 112, 44, 163, 111, 112 ಹಾಗೂ 122 ರನ್. ಇದರಲ್ಲಿ ಒಮ್ಮೆ ಮಾತ್ರ ಅವರು ಔಟಾಗಿದ್ದಾರೆ. ತಮಿಳುನಾಡಿನ ಜಗದೀಶ್ ನಂತರ ಪಂದ್ಯಾವಳಿಯ ಒಂದೇ ಆವೃತ್ತಿಯಲ್ಲಿ ಐದು ಶತಕಗಳನ್ನು ಗಳಿಸಿದ ಎರಡನೇ ಬ್ಯಾಟರ್‌ ಕರುಣ್. ಇದೇ ವೇಳೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕಗಳನ್ನು ದಾಖಲಿಸಿದ ಮೂರನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ನಾಯರ್ ಪಾತ್ರರಾಗಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ, ಇಂಗ್ಲೆಂಡ್‌ ವಿರುದ್ಧದ ಸರಣಿ ಮೇಲೆ ನಿರೀಕ್ಷೆ

ಅತ್ತ, ಭಾರತ ಕ್ರಿಕೆಟ್‌ ತಂಡವು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೇಲಿಂದ ಮೇಲೆ ಸೋಲು ಕಂಡು ಕಂಗೆಟ್ಟಿದೆ. ಈ ನಡುವೆ ಇಂಗ್ಲೆಂಡ್‌ ವಿರುದ್ಧದ ಏಕದಿನ ಹಾಗೂ ಚಾಂಪಿಯನ್ಸ್‌ ಟ್ರೋಫಿಗೆ ಭಾರತ ತಂಡವನ್ನು ಇನ್ನಷ್ಟೇ ಆಯ್ಕೆ ಮಾಡಬೇಕಿದೆ. ವಿಜಯ್‌ ಹಜಾರೆ ಟ್ರೋಫಿಯ ಫೈನಲ್‌ ಪಂದ್ಯವು ಜನವರಿ 19ರಂದು ನಡೆಯಲಿದ್ದು, ಅದಾದ ನಂತರವೇ ಚಾಂಪಿಯನ್ಸ್‌ ಟ್ರೋಫಿಗೆ ಟೀಮ್‌ ಇಂಡಿಯಾ ಪ್ರಕಟಿಸಲಾಗುತ್ತದೆ ಎಂದು ವರದಿ ಹೇಳಿದೆ. ಹೀಗಾಗಿ ಟೀಮ್‌ ಇಂಡಿಯಾಗೆ ಮತ್ತೆ ಕರುಣ್‌ ಆಯ್ಕೆಯಾಗುವ ನಿರೀಕ್ಷೆ ಮೂಡಿದೆ.

ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ ಹೆಣಗಾಡುತ್ತಿದ್ದಾರೆ. ಹೀಗಾಗಿ ಕರುಣ್ ಆಟವನ್ನು ಬಿಸಿಸಿಐ ಆಯ್ಕೆದಾರರು ಕೂಡಾ ಗಮನಿಸುತ್ತಿದ್ದಾರೆ. ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯು ಬಲಗೈ ಬ್ಯಾಟರ್‌ ಅನ್ನು ಚಾಂಪಿಯನ್ಸ್ ಟ್ರೋಫಿಗೆ ಪರಿಗಣಿಸುತ್ತದೆಯೇ ಅಥವಾ ಜೂನ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪರಿಗಣಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ನನ್ನಿಂದ ಸಾಧ್ಯವಾಗುವ ಪ್ರಯತ್ನ ಮಾಡುತ್ತಲೇ ಇರುತ್ತೇನೆ

“ಪ್ರತಿಯೊಬ್ಬರೂ ತಮ್ಮ ದೇಶಕ್ಕಾಗಿ ಆಡಲು ಬಯಸುತ್ತಾರೆ. ನಾನು ಕೂಡಾ ಅಷ್ಟೇ. ನಾನು ಮತ್ತೆ ಟೆಸ್ಟ್ ಪಂದ್ಯಗಳನ್ನು ಆಡಲು ಇಷ್ಟಪಡುತ್ತೇನೆ. ಅದಕ್ಕಾಗಿ, ನನ್ನಿಂದ ಸಾಧ್ಯವಾಗುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇನೆ. ನನ್ನ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತಲೇ ಇರಬೇಕು ಎಂದು ನನಗೆ ತಿಳಿದಿದೆ,” ಎಂದು ನಾಯರ್ ಹೇಳುತ್ತಾರೆ.

Whats_app_banner