ಔಟಾಗದೆ ಅತಿ ಹೆಚ್ಚು ರನ್; ಲಿಸ್ಟ್ ಎ ಕ್ರಿಕೆಟ್‌ನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದ ಕರುಣ್ ನಾಯರ್
ಪ್ರಸಕ್ತ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರುಣ್ ನಾಯರ್ 4 ಶತಕಗಳನ್ನು ಬಾರಿಸಿದ್ದಾರೆ. ವಿದರ್ಭ ಪರ ಆಡುತ್ತಿರುವ ಕರ್ನಾಟಕದ ಮಾಜಿ ಆಟಗಾರ, ಉತ್ತರ ಪ್ರದೇಶ ವಿರುದ್ಧ ತಮ್ಮ ತಂಡವು 8 ವಿಕೆಟ್‌ಗೆ 307 ರನ್ ಗಳಿಸಿ ಸುಲಭವಾಗಿ ಚೇಸಿಂಗ್ ಮಾಡಲು ನೆರವಾಗಿದ್ದಾರೆ.
ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 300 ರನ್ ಗಳಿಸಿರುವ ಭಾರತದ ಕೇವಲ ಇಬ್ಬರು ಆಟಗಾರರಲ್ಲಿ ಕರುಣ್ ನಾಯರ್ ಕೂಡಾ ಒಬ್ಬರು. ಇದೀಗ ದೇಶೀಯ ಕ್ರಿಕೆಟ್‌ನಲ್ಲಿಯೂ ಅವರ ದಾಖಲೆಯಾಟ ಮುಂದುವರೆದಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ವಿದರ್ಭ ಪರ ಮತ್ತೆ ದಾಖಲೆಯಾಟವಾಡುತ್ತಿದ್ದಾರೆ. ಎಂತಹದೇ ಬೌಲರ್ ಆಗಿದ್ದರೂ ಸ್ಟಂಪ್ಸ್ ಮುಂದೆ ಬಂಡೆಗಲ್ಲಿನಂತೆ ನಿಂತು ಬ್ಯಾಟ್ ಬೀಸುತ್ತಿರುವ ಅವರು, ಔಟಾಗದೆ ಅತಿ ಹೆಚ್ಚು ಲಿಸ್ಟ್ ಎ ರನ್ ಗಳಿಸಿದ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.
ಉತ್ತರ ಪ್ರದೇಶ ವಿರುದ್ಧದ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ವಿದರ್ಭ ತಂಡ 8 ವಿಕೆಟ್‌ಗಳ ಅಂತರದ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಅವರು ತಮ್ಮ ದಾಖಲೆಯನ್ನು ವಿಸ್ತರಿಸಿದ್ದಾರೆ.
2010ರಲ್ಲಿ ಔಟಾಗದೆ 527 ರನ್ ಗಳಿಸಿದ್ದ ನ್ಯೂಜಿಲೆಂಡ್‌ನ ಮಾಜಿ ಆಲ್‌ರೌಂಡರ್ ಜೇಮ್ಸ್ ಫ್ರಾಂಕ್ಲಿನ್‌ರ ದಾಖಲೆಯನ್ನು ಕರುಣ್ ಮುರಿದಿದ್ದಾರೆ. ಉತ್ತರ ಪ್ರದೇಶ ವಿರುದ್ಧ 112 ರನ್ ಸಿಡಿಸಿದ ನಾಯರ್, ಔಟಾಗದೆ 542 ರನ್ ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಂದರೆ ಕಳೆದ ಕೆಲವು ಪಂದ್ಯಗಳಲ್ಲಿ ನಾಯರ್ ನಾಟೌಟ್ ಆಗಿದ್ದಾರೆ. ಈ ಪಟ್ಟಿಯಲ್ಲಿರುವ ಇತರ ಆಟಗಾರರೆಂದರೆ ಜೋಶುವಾ ವ್ಯಾನ್ ಹೀರ್ಡೆನ್ (512), ಫಖರ್ ಜಮಾನ್ (455) ಮತ್ತು ತೌಫೀಕ್ ಉಮರ್ (422).
ಒಂದೇ ಸರಣಿಯಲ್ಲಿ ನಾಲ್ಕು ಶತಕಗಳು
ಪ್ರಸಕ್ತ ವಿಜಯ್ ಹಜಾರೆ ಋತುವಿನಲ್ಲಿ ಕರುಣ್ ನಾಲ್ಕು ಶತಕ ಬಾರಿಸಿದ್ದಾರೆ. ಅಲ್ಲದೆ ಇದು ಅವರ ಸತತ ಮೂರನೇ ಶತಕ. ಕರ್ನಾಟಕದ ಮಾಜಿ ಆಟಗಾರ ಈಗ ವಿದರ್ಭ ಪರ ಆಡುತ್ತಿದ್ದಾರೆ. ಕೇವಲ 47.2 ಓವರ್‌ಗಳಲ್ಲಿ ತಮ್ಮ ತಂಡವು 8 ವಿಕೆಟ್‌ಗೆ 307 ರನ್ ಗಳಿಸಿ ಚೇಸಿಂಗ್ ಮಾಡಲು ನೆರವಾಗಿದ್ದಾರೆ.
ನಾಯರ್ ಅವರ ಅಜೇಯ ಆಟವು ಕಳೆದ ಡಿಸೆಂಬರ್ 23ರಂದು ಆರಂಭವಾಯಿತು. ಮೊದಲು ಜಮ್ಮು ಮತ್ತು ಕಾಶ್ಮೀರ ವಿರುದ್ಧ 108 ಎಸೆತಗಳಲ್ಲಿ 112 ರನ್ ಸಿಡಿಸಿ ಅಜೇಯರಾಗಿ ಉಳಿದ ಅವರು, ಛತ್ತೀಸ್‌ಗಢ ವಿರುದ್ಧದ ಸಣ್ಣ ಮೊತ್ತ ಚೇಸಿಂಗ್ ವೇಳೆ ಅಜೇಯ 44 ರನ್ ಗಳಿಸಿದರು. ಆ ನಂತರ ಚಂಡೀಗಢ ವಿರುದ್ಧದ ಪಂದ್ಯದಲ್ಲಿ ಅಜೇಯ 168 ರನ್ ಗಳಿಸಿ ದಾಖಲೆ ಬರೆದರು. 2024ರ ಕ್ಯಾಲೆಂಡರ್ ವರ್ಷವನ್ನು ತಮಿಳುನಾಡು ವಿರುದ್ಧ ಮತ್ತೊಂದು ಅಜೇಯ ಶತಕದೊಂದಿಗೆ (111) ಮುಗಿಸಿದರು.
ವಿದರ್ಭ ತಂಡದ ಗೆಲುವಿನೊಂದಿಗೆ ತಂಡವು ಆಡಿದ ಐದು ಪಂದ್ಯಗಳಿಂದ 20 ಪಾಯಿಂಟ್‌ಗಳೊಂದಿಗೆ ಡಿ ಗುಂಪಿನಲ್ಲಿ ಅಗ್ರ ತಂಡವಾಗಿದೆ. ತಮಿಳುನಾಡು (14) ಎರಡನೇ ಸ್ಥಾನದಲ್ಲಿದ್ದರೆ, ಯುಪಿ (14) ಮೂರನೇ ಸ್ಥಾನದಲ್ಲಿದೆ.
ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ