ಆರ್​ಸಿಬಿ ಆಟಗಾರನ ಅಬ್ಬರ, ಮಹಾರಾಜ ಟ್ರೋಫಿ ಗೆದ್ದ ಮೈಸೂರು ವಾರಿಯರ್ಸ್; ಫೈನಲ್​ನಲ್ಲಿ ಮುಗ್ಗರಿಸಿದ ಬೆಂಗಳೂರು ಬ್ಲಾಸ್ಟರ್ಸ್-karun nairs mysore warriors beat bengaluru blasters to win maiden maharaja trophy t20 2024 title manoj bhandage prs ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್​ಸಿಬಿ ಆಟಗಾರನ ಅಬ್ಬರ, ಮಹಾರಾಜ ಟ್ರೋಫಿ ಗೆದ್ದ ಮೈಸೂರು ವಾರಿಯರ್ಸ್; ಫೈನಲ್​ನಲ್ಲಿ ಮುಗ್ಗರಿಸಿದ ಬೆಂಗಳೂರು ಬ್ಲಾಸ್ಟರ್ಸ್

ಆರ್​ಸಿಬಿ ಆಟಗಾರನ ಅಬ್ಬರ, ಮಹಾರಾಜ ಟ್ರೋಫಿ ಗೆದ್ದ ಮೈಸೂರು ವಾರಿಯರ್ಸ್; ಫೈನಲ್​ನಲ್ಲಿ ಮುಗ್ಗರಿಸಿದ ಬೆಂಗಳೂರು ಬ್ಲಾಸ್ಟರ್ಸ್

Mysore Warriors beat Bengaluru Blasters: ಮಹಾರಾಜ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ಭರ್ಜರಿ ಗೆಲುವು ಸಾಧಿಸಿ ಚೊಚ್ಚಲ ಗೆಲುವು ಸಾಧಿಸಿದೆ.

ಮಹಾರಾಜ ಟ್ರೋಫಿ ಗೆದ್ದ ಮೈಸೂರು ವಾರಿಯರ್ಸ್
ಮಹಾರಾಜ ಟ್ರೋಫಿ ಗೆದ್ದ ಮೈಸೂರು ವಾರಿಯರ್ಸ್

ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್​ ತಂಡವನ್ನು ಮಣಿಸಿದ ಮೈಸೂರು ವಾರಿಯರ್ಸ್ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಸರ್ವಾಂಗೀಣ ಪ್ರದರ್ಶನದೊಂದಿಗೆ ಅದ್ಭುತ ಮತ್ತು ಅಮೋಘ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅದರಲ್ಲೂ ಎಸ್​ಯು ಕಾರ್ತಿಕ್ (71), ನಾಯಕ ಕರುಣ್ ನಾಯರ್ (66) ಮತ್ತು ಆರ್​ಸಿಬಿ ಆಟಗಾರ ಮನೋಜ್ ಭಾಂಡಗೆ (44*) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮೈಸೂರು ರನ್​ ಮಳೆ ಹರಿಸಿತು. ಇದರೊಂದಿಗೆ ಬೆಂಗಳೂರು ತಂಡದ ವಿರುದ್ಧ 45 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂತಿಮ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮೈಸೂರು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆ ಬಳಿಕ ಒಂದಾದ ಎಸ್​ಯು ಕಾರ್ತಿಕ್ ಮತ್ತು ಕರುಣ್ ನಾಯರ್​ ಬಿರುಸಿನ ಜೊತೆಯಾಟವಾಡಿದರು. 2ನೇ ವಿಕೆಟ್​ಗೆ 81 ರನ್​ಗಳ ಪಾಲುದಾರಿಕೆ ಹರಿದು ಬಂತು. ಕರುಣ್ ನಾಯರ್ 45 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ 66 ರನ್ ಪೇರಿಸಿದರು. ಮತ್ತು ಕಾರ್ತಿಕ್ 44 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ ಸಹಿತ 71 ರನ್ ಚಚ್ಚಿದರು. ಅಲ್ಲದೆ, 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾಂಡಗೆ ಕೇವಲ 13 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಿತ ಅಜೇಯ 44 ರನ್ ಬಾರಿಸಿದರು.

ಇವರ ಬ್ಯಾಟಿಂಗ್ ವೈಭವದಿಂದ ಮೈಸೂರು 4 ವಿಕೆಟ್ ನಷ್ಟಕ್ಕೆ 207 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಗುರಿಯಾಗಿ ಕಣಕ್ಕಿಳಿದ ಬೆಂಗಳೂರು ಆರಂಭಿಕ ಆಟಗಾರ ಎಲ್​ಆರ್ ಚೇತನ್ ಅರ್ಧಶತಕ ದಾಖಲಿಸಿದ್ದು ಬಿಟ್ಟರೆ, ಉಳಿದವರು ಪ್ರತಿರೋಧ ನೀಡಲಿಲ್ಲ. ಮಯಾಂಕ್ ಅಗರ್ವಾಲ್ 6, ಭುವನ್ ರಾಜು 1, ಶಿವಕುಮಾರ್ ರಕ್ಷಿತ್ 5, ಶುಭಾಂಗ್ ಹೆಗ್ಡೆ 5, ಸೂರಜ್ ಅಹುಜಾ 8 ರನ್ ಗಳಿಸಲಷ್ಟೆ ಶಕ್ತರಾದರು. ಇದರ ಪರಿಣಾಮವಾಗಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಹಾಗಾಗಿ 45 ರನ್​​ಗಳಿಂದ ಶರಣಾಗಬೇಕಾಯಿತು. ವಿದ್ಯಾದರ್ ಪಾಟೀಲ್ 3 ವಿಕೆಟ್ ಮತ್ತು ಕೆ ಗೌತಮ್ 2 ವಿಕೆಟ್ ಪಡೆದು ಮಿಂಚಿದರು.

ಮನೋಜ್ ಭಾಂಡಗೆ ಮಿಂಚು

ಆರ್​​ಸಿಬಿ ತಂಡದಲ್ಲಿ ಸ್ಥಾನ ಪಡೆದಿರುವ ಮನೋಜ್ ಭಾಂಡಗೆ ಮಹಾರಾಜ ಟ್ರೋಫಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಫೈನಲ್​​ನಲ್ಲೂ 13 ಎಸೆತಗಳಲ್ಲಿ 44 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 12 ಪಂದ್ಯಗಳಲ್ಲಿ 292 ರನ್ ಗಳಿಸಿದ್ದಾರೆ. ಅದು ಕೂಡ 41ರ ಬ್ಯಾಟಿಂಗ್ ಸರಾಸರಿ ಮತ್ತು 213ರ ಸ್ಟ್ರೈಕ್​ರೇಟ್​​ನಲ್ಲಿ ಅಬ್ಬರಿಸಿದ್ದಾರೆ. ಈ ಆವೃತ್ತಿಯಲ್ಲಿ 16 ಬೌಂಡರಿ, 25 ಸಿಕ್ಸರ್​ ಸಿಡಿಸಿದ್ದಾರೆ. ಆದರೆ ಇಂತಹ ಆಟಗಾರನಿಗೆ ಆರ್​ಸಿಬಿ ಒಂದೇ ಒಂದು ಅವಕಾಶ ನೀಡಿರಲಿಲ್ಲ. ಎರಡು ಆವೃತ್ತಿಗಳಲ್ಲೂ ಬೆಂಚ್​ಗೆ ಸೀಮಿತಗೊಳಿಸಿದೆ.

ಈವರೆಗೂ ಚಾಂಪಿಯನ್ ಆದ ತಂಡಗಳು

2022 - ಗುಲ್ಬರ್ಗಾ ಮಿಸ್ಟಿಕ್ಸ್

2023 - ಹುಬ್ಬಳ್ಳಿ ಟೈಗರ್ಸ್

2024 - ಮೈಸೂರು ವಾರಿಯರ್ಸ್

ಗರಿಷ್ಠ ರನ್ ಸಿಡಿಸಿದವರು (2024ರ ಆವೃತ್ತಿ)

ಕರುಣ್ ನಾಯರ್ - 560

ಅಭಿನವ್ ಮನೋಹರ್​ - 507

ಎಲ್​ಆರ್​ ಚೇತನ್ - 429

ಗರಿಷ್ಠ ವಿಕೆಟ್ ಪಡೆದವರು (2024ರ ಆವೃತ್ತಿ)

ಎಲ್​ಆರ್​ ಕುಮಾರ್​ - 17

ವಿದ್ಯಾದರ್ ಪಾಟೀಲ್ - 16

ಲವೀಶ್ ಕೌಶಲ್ - 16

ಗರಿಷ್ಠ ಸಿಕ್ಸರ್ ಸಿಡಿಸಿದವರು (2024ರ ಆವೃತ್ತಿ)

ಅಭಿನವ್ ಮನೋಹರ್​ - 52

ಕರುಣ್ ನಾಯರ್ - 30

ಮನೋಜ್ ಭಾಂಡಗೆ - 25