ಶ್ರೀಲಂಕಾ ಸರಣಿಗೂ ಮುನ್ನ ಕೆಎಲ್ ರಾಹುಲ್ ತವರಿನಲ್ಲಿ ಟೆಂಪಲ್ ರನ್; ಕೊರಗಜ್ಜ, ದುರ್ಗಾ ಪರಮೇಶ್ವರಿ ಆಶೀರ್ವಾದ ಪಡೆದ ಕೆಎಲ್
KL Rahul: ಕ್ರಿಕೆಟಿಗ ಕೆಎಲ್ ರಾಹುಲ್, ಅವರ ಪತ್ನಿ ಆಥಿಯಾ ಶೆಟ್ಟಿ, ಬಾಮೈದ ಆಹಾನ್ ಶೆಟ್ಟಿ ಹಾಗೂ ನಟಿ ಕತ್ರಿನಾ ಕೈಫ್ ಅವರು ಮಂಗಳೂರಿನ ಕುತ್ತಾರು ಕೊರಗಜ್ಜನ ಆದಿಸ್ಥಾನಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅವರ ಪತ್ನಿ ಆಥಿಯಾ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಿನ ಪ್ರಸಿದ್ಧ ಕುತ್ತಾರು ಎಂಬಲ್ಲಿರುವ ಕೊರಗಜ್ಜ ದೈವದ ಆದಿಸ್ಥಾನಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದ್ದರು. ರಾಹುಲ್ ಬಾಮೈದ ಸಹೋದರ ಆಹಾನ್ ಶೆಟ್ಟಿ ಸಹ ಜೊತೆಗಿದ್ದರು. ಅಲ್ಲದೆ, ನಟಿ ಕತ್ರಿನಾ ಕೈಫ್ ಅವರು ಕೊರಗಜ್ಜ ದೈವಕ್ಕೆ ಪೂಜೆ ಸಲ್ಲಿಸಿ ಮುಖ್ಯಸ್ಥರ ಆಶೀರ್ವಾದ ಪಡೆದಿದ್ದರು. ಆದರೆ ಈ ಭೇಟಿ ಒಟ್ಟಿಗೆ ಅಲ್ಲ. ಈ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿವೆ.
ದೇಶಾದ್ಯಂತ ಅಪಾರ ಭಕ್ತರು ಕೊರಗಜ್ಜನ ಅಶೀರ್ವಾದ ಪಡೆಯುತ್ತಿದ್ದಾರೆ. ಅದರಂತೆ ಶ್ರೀಲಂಕಾ ಎದುರಿನ ಪ್ರವಾಸಕ್ಕೂ ಮುನ್ನ ತನ್ನ ತವರಿನ ಜಿಲ್ಲೆಯ ಕಡೆಗೆ ಪ್ರವಾಸ ಕೈಗೊಂಡಿದ್ದು, ರಾಹುಲ್ ಅವರು ಪತ್ನಿ ಆಥಿಯಾ ಹಾಗೂ ಆಹಾನ್ ಅವರೊಂದಿಗೆ ಕೊರಗಜ್ಜನ ಆದಿಸ್ಥಾನಕ್ಕೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದಿದ್ದರು. ನಂತರ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಇವರ ನಂತರ ಕೊರಗಜ್ಜನ ದೇವಸ್ಥಾನಕ್ಕೆ ಕತ್ರಿನಾ ಕೈಫ್ ಭೇಟಿ ನೀಡಿದ್ದರು
ಬಿಳಿ ಸಲ್ವಾರ್ ಕಮೀಜ್ ಧರಿಸಿದ ನಟಿ ದೇವಾಲಯದ ಕಚೇರಿಯಲ್ಲಿ ಕುಳಿತು ದೇವಾಲಯದ ಅಧಿಕಾರಿಗಳೊಂದಿಗೆ ಮಾತನಾಡುವುದನ್ನು ಕಾಣಬಹುದು. ಈ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಮಂಗಳೂರು ಮೇರಿ ಜಾನ್, ಬಾಲಿವುಡ್ ನಟಿ ಕತ್ರಿನಾ ಕೈಫ್ ಇಂದು ಕುತ್ತಾರಿನಲ್ಲಿರುವ ಸ್ವಾಮಿ ಕೊರಗಜ್ಜ ಆದಿಸ್ಥಳಕ್ಕೆ ಭೇಟಿ ನೀಡಿ ಸ್ವಾಮಿ ಕೊರಗಜ್ಜನ ಆಶೀರ್ವಾದ ಪಡೆದರು ಎಂದು ಬರೆದಿದ್ದಾರೆ.
ನಂತರ ಕೆಎಲ್ ರಾಹುಲ್ ದಂಪತಿ ಅದೇ ದಿನ ಅಂದರೆ ಜುಲೈ 14ರಂದು ಭಾನುವಾರ ಐತಿಹಾಸಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮಂಗಳೂರು ಹೊರವಲಯದ ಮುಲ್ಕಿ ಸಮೀಪ ಇರುವ ಬಪ್ಪನಾಡು ಕ್ಷೇತ್ರದ ದುರ್ಗಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದ ದಂಪತಿಗೆ ದೇವಸ್ಥಾನದ ಆಡಳಿತ ಮಂಡಳಿ ವಿಶೇಷ ಗೌರವ ಸಲ್ಲಿಸಿತು.
2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವಕಾಶ ಪಡೆಯಲು ವಿಫಲರಾದ ಕೆಎಲ್ ರಾಹುಲ್, ಜುಲೈ 27ರಿಂದ ಪ್ರಾರಂಭವಾಗುವ ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗುವ ನಿರೀಕ್ಷೆ ಇದೆ. ಅಲ್ಲದೆ, ಏಕದಿನ ಸರಣಿಗೆ ಅವರೇ ನಾಯಕನಾಗುವ ಸಾಧ್ಯತೆಯೂ ಇದೆ. ಶೀಘ್ರದಲ್ಲೇ ತಂಡ ಪ್ರಕಟವಾಗಲಿದೆ. ಅದಕ್ಕೂ ಮುನ್ನ ತಮ್ಮ ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಮಂಗಳೂರಿನ ಕುತ್ತಾರು ಕೊರಗಜ್ಜನ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಈ ಮೂವರ ವಿಡಿಯೋವನ್ನು ಪಿಟಿಐ ಹಂಚಿಕೊಂಡಿದೆ. ಅಥಿಯಾ ಮತ್ತು ಆಹಾನ್ ಅವರ ತಂದೆ ಸುನಿಲ್ ಶೆಟ್ಟಿ ತುಳುನಾಡಿನವರು.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಕತ್ರಿನಾ, ಅಥಿಯಾ, ಅಹಾನ್ ಮತ್ತು ಕೆಎಲ್ ರಾಹುಲ್ ಭಾಗವಹಿಸಿದ್ದರು. ಕತ್ರಿನಾ ಮತ್ತು ಅವರ ಪತಿ, ನಟ ವಿಕ್ಕಿ ಕೌಶಲ್ ಒಟ್ಟಿಗೆ ಮದುವೆಯಲ್ಲಿ ಭಾಗವಹಿಸಿದ್ದರು.
ತಮ್ಮ ಇನ್ಸ್ಟಾಂ ಖಾತೆಗಳಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದು, ಅಥಿಯಾ ಇದನ್ನು 'ಸಂತೋಷದ ನಂತರದ ಆಚರಣೆ' ಎಂದು ಕರೆದಿದ್ದಾರೆ. ಕತ್ರಿನಾ ತನ್ನ ಮತ್ತು ವಿಕ್ಕಿ ಕಪ್ಪು ಮತ್ತು ಚಿನ್ನದ ಬಟ್ಟೆಯಲ್ಲಿ ಮಿಂಚುತ್ತಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಯಾವುದೇ ಕ್ಯಾಪ್ಶನ್ ನೀಡಿಲ್ಲ.
ಕೊರಗಜ್ಜ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಪೂಜಿಸಲ್ಪಡುವ ಪ್ರಮುಖ ಜಾನಪದ ದೇವತೆ. ಈ ಹಿಂದೆ ದೇವಾಲಯದೊಳಗೆ ಫೋಟೋ, ವಿಡಿಯೋ ಚಿತೀಕರಣ ನಿರ್ಬಂಧಿಸಲಾಗಿದ್ದರೂ ಸೆಲೆಬ್ರಿಟಿಗಳಿಗೆ ವಿನಾಯಿತಿ ನೀಡಿದ್ದಾರೆ ಎಂದು ತೋರುತ್ತದೆ. ಕೊರಗಜ್ಜನನ್ನು ದುಷ್ಟ ಶಕ್ತಿಗಳಿಂದ ಗ್ರಾಮಗಳನ್ನು ರಕ್ಷಿಸುವ ಪ್ರಬಲ ರಕ್ಷಕ ದೇವತೆ ಎಂದು ನಂಬಲಾಗಿದೆ. ದೇವರಿಗೆ ಸಮರ್ಪಿತವಾದ ಹಬ್ಬಗಳನ್ನು ಜಾನಪದ ಆಚರಣೆಗಳು, ಸಂಗೀತ ಮತ್ತು ನೃತ್ಯದೊಂದಿಗೆ ಆಚರಿಸಲಾಗುತ್ತದೆ.
