ಡೇವಿಡ್ ವಾರ್ನರ್ ದೊಡ್ಡ​ ಫಿಕ್ಸರ್, ಆತನನ್ನು ನಾನೇ SRHನಿಂದ ತೆಗೆಸಿದೆ; ಖೈರತಾಬಾದ್ ಶಾಸಕ ದಾನಂ ನಾಗೇಂದರ್ ಗಂಭೀರ ಆರೋಪ
ಕನ್ನಡ ಸುದ್ದಿ  /  ಕ್ರಿಕೆಟ್  /  ಡೇವಿಡ್ ವಾರ್ನರ್ ದೊಡ್ಡ​ ಫಿಕ್ಸರ್, ಆತನನ್ನು ನಾನೇ Srhನಿಂದ ತೆಗೆಸಿದೆ; ಖೈರತಾಬಾದ್ ಶಾಸಕ ದಾನಂ ನಾಗೇಂದರ್ ಗಂಭೀರ ಆರೋಪ

ಡೇವಿಡ್ ವಾರ್ನರ್ ದೊಡ್ಡ​ ಫಿಕ್ಸರ್, ಆತನನ್ನು ನಾನೇ SRHನಿಂದ ತೆಗೆಸಿದೆ; ಖೈರತಾಬಾದ್ ಶಾಸಕ ದಾನಂ ನಾಗೇಂದರ್ ಗಂಭೀರ ಆರೋಪ

Danam Nagender : ಸನ್​ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾಗ ಡೇವಿಡ್ ವಾರ್ನರ್​ ಫಿಕ್ಸಿಂಗ್ ಮಾಡುತ್ತಿದ್ದರು. ನಾನೇ ದೂರು ನೀಡಿ ಅವರನ್ನು ತೆಗೆಸಿದೆ ಎಂದು ಖೈರತಾಬಾದ್ ಶಾಸಕ ದಾನಂ ನಾಗೇಂದರ್​ ಗಂಭೀರ ಆರೋಪ ಮಾಡಿದ್ದಾರೆ.

ಡೇವಿಡ್ ವಾರ್ನರ್ ವಿರುದ್ಧ ಖೈರತಾಬಾದ್ ಶಾಸಕ ದಾನಂ ನಾಗೇಂದರ್ ಗಂಭೀರ ಆರೋಪ
ಡೇವಿಡ್ ವಾರ್ನರ್ ವಿರುದ್ಧ ಖೈರತಾಬಾದ್ ಶಾಸಕ ದಾನಂ ನಾಗೇಂದರ್ ಗಂಭೀರ ಆರೋಪ

ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಜಿ ನಾಯಕ ಹಾಗೂ ಆಸ್ಟ್ರೇಲಿಯಾದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ವಿರುದ್ಧ ತೆಲಂಗಾಣದ ಖೈರತಾಬಾದ್ ಟಿಆರ್​​ಎಸ್​ ಶಾಸಕ ದಾನಂ ನಾಗೇಂದರ್ (MLA Danam Nagender) ಗಂಭೀರ ಆರೋಪ ಮಾಡಿದ್ದಾರೆ. ಎಸ್​ಆರ್​ಹೆಚ್​ ತಂಡದ ಕ್ಯಾಪ್ಟನ್​ ಆಗಿದ್ದಾಗ ಡೇವಿಡ್ ವಾರ್ನರ್ (David Warne) ಮ್ಯಾಚ್ ಫಿಕ್ಸಿಂಗ್​​​ನಲ್ಲಿ (Match Fixing) ಭಾಗಿಯಾಗಿದ್ದರು ಎಂದು ಅವರು ಸಂಚಲನ ಹೇಳಿಕೆ ನೀಡಿದ್ದಾರೆ.

ನಾನು ಈ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ಆಡಳಿತ ಮಂಡಳಿಗೆ ದೂರು ನೀಡಿದ್ದೆ. ದೂರಿನ ವಿಚಾರಣೆ ನಡೆಸಿದ ನಂತರ ಆರ್​​ಆರ್​​ಹೆಚ್​ ತಂಡವು ಡೇವಿಡ್ ವಾರ್ನರ್ ಅವರನ್ನು ತಂಡದಿಂದ ತೆಗೆದುಹಾಕಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ದಾನಂ ನಾಗೇಂದರ್​ರ ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. 17ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ - ಸನ್‌ರೈಸರ್ಸ್ ಹೈದರಾಬಾದ್​ ನಡುವಿನ ಪಂದ್ಯಕ್ಕೂ ಮುನ್ನ ಹೇಳಿಕೆ ನೀಡಿದ್ದಾರೆ.

ಕಾಳಸಂತೆಯಲ್ಲಿ ಟಿಕೆಟ್ ಮಾರಾಟ

ಇದೇ ವೇಳೆ ಬ್ಲಾಕ್​ ಟಿಕೆಟ್​​ಗಳ ಕುರಿತು ಮಾತನಾಡಿರುವ ದಾನಂ ನಾಗೇಂದರ್​, ಸಾಮಾನ್ಯರಿಂದ ಹಿಡಿದು ಸಿನಿಮಾ, ರಾಜಕೀಯ, ಉದ್ಯಮ ಮುಖಂಡರವರೆಗೂ ಈ ಪಂದ್ಯದ ಟಿಕೆಟ್​​ಗಾಗಿ ಬೇಡಿಕೆ ಇಟ್ಟಿದ್ದರು. ಆದರೆ ಕೆಲವು ಕಿಡಿಗೇಡಿಗಳು ಈ ಬೇಡಿಕೆಯನ್ನೇ ಕ್ಯಾಶ್ ರೂಪವಾಗಿ ಪರಿವರ್ತಿಸಲು ಪ್ರಯತ್ನಿಸಿದ್ದಾರೆ. ಬ್ಲಾಕ್​ ಟಿಕೆಟ್​ ಮೂಲಕ ಮಾರಾಟ ಮಾಡಿದ್ದಾರೆ ಎಂದು ತೆಲುಗು ಟಿವಿ ವಾಹಿನಿಯೊಂದರ ಜತೆ ಮಾತನಾಡಿದ ದಾನಂ ನಾಗೇಂದರ್, ಆರೋಪ ಮಾಡಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ಮ್ಯಾನೇಜ್‌ಮೆಂಟ್ ಹಾಗೂ ಎಚ್‌ಸಿಎ ಅಧ್ಯಕ್ಷ ಜಗನ್ ಮೋಹನ್​ ರಾವ್ ಅವರನ್ನು ಟೀಕಿಸಿದ ನಾಗೇಂದರ್​, ಜುಬಿಲಿ ಹಿಲ್ಸ್ ಚೆಕ್‌ಪೋಸ್ಟ್, ಸಿಕಂದರಾಬಾದ್ ರೈಲು ನಿಲ್ದಾಣ ಮತ್ತು ಉಪ್ಪಲ್ ಸ್ಟೇಡಿಯಂನಲ್ಲಿ ಟಿಕೆಟ್​​ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕಾಂಪ್ಲಿಮೆಂಟರಿ ಪಾಸ್​ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕಾಳಸಂತೆಯಲ್ಲಿ ಟಿಕೆಟ್​ಗಳ ಮಾರಾಟ ಕುರಿತು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕ್ರೀಡಾ ಸಚಿವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಎಚ್​​ಸಿಎ ಕಾಂಪ್ಲಿಮೆಂಟರಿ ಪಾಸ್​ಗಳನ್ನೂ ಬ್ಯಾಕ್​ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಎಚ್‌ಸಿಎ ವರ್ತನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಹೈದರಾಬಾದ್​ ಕ್ರಿಕೆಟಿಗರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಹೈದರಾಬಾದ್ ಆಟಗಾರರಿಗೆ ಅವಕಾಶ ನೀಡದಿದ್ದರೆ, ಮುಂದಿನ ಋತುವಿನಿಂದ ಉಪ್ಪಲ್ ಮೈದಾನದಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಬಿಡುವುದಿಲ್ಲ. ನಾನೇ ಅದನ್ನು ತಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

10 ನಿಮಿಷದಲ್ಲಿ 45 ಸಾವಿರ ಟಿಕೆಟ್ ಮಾರಾಟ

ಎಚ್‌ಸಿಎಯಲ್ಲಿ ಅಧಿಕಾರ ಚಲಾಯಿಸುತ್ತಿರುವ ಕಿರಣ್ ಅವರ ವಿರುದ್ಧ ಸನ್‌ರೈಸರ್ಸ್ ಫ್ರಾಂಚೈಸಿ ಮಾಲೀಕರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 10 ನಿಮಿಷದಲ್ಲಿ 45 ಸಾವಿರ ಟಿಕೆಟ್ ಮಾರಾಟವಾಗಿದ್ದೇಗೆ? ಟಿಕೆಟ್ ಮಾರಾಟ ಪಾರದರ್ಶಕವಾಗಿ ನಡೆಯಬೇಕು ಎಂದು ಸೂಚಿಸಿದ್ದೇನೆ. ಮುಂಬರುವ ಪಂದ್ಯಗಳಲ್ಲಿ ಬ್ಲಾಕ್​ ಟಿಕೆಟ್​ಗಳನ್ನು ಮಾರಾಟ ಮಾಡದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಡೇವಿಡ್ ವಾರ್ನರ್ ವಿರುದ್ಧ ದಾನಂ ನಾಗೇಂದರ್ ಅವರ ಪ್ರತಿಕ್ರಿಯೆಗೆ ಸಂಬಂಧಿಸಿ ಅಭಿಮಾನಿಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯದ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ನಾಗೇಂದರ್ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕೇಳುವವರು ಸಿಕ್ಕಿಬಿಟ್ಟರೆ, ಎಂಎಸ್ ಧೋನಿ ಕೂಡ ಫಿಕ್ಸರ್ ಎಂದು ಹೇಳುತ್ತಾರೆ ಎಂದು ಕ್ರಿಕೆಟ್ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.

Whats_app_banner