ಕನ್ನಡ ಸುದ್ದಿ  /  ಕ್ರಿಕೆಟ್  /  ಸತತ ಹಿನ್ನಡೆಯಿಂದ ಕಪ್‌ ಗೆಲುವಿನತನಕ; ಟಿ20 ವಿಶ್ವಕಪ್‌ಗಿಲ್ಲ ಐಪಿಎಲ್ ಗೆದ್ದ ನಾಯಕ ಶ್ರೇಯಸ್ ಅಯ್ಯರ್

ಸತತ ಹಿನ್ನಡೆಯಿಂದ ಕಪ್‌ ಗೆಲುವಿನತನಕ; ಟಿ20 ವಿಶ್ವಕಪ್‌ಗಿಲ್ಲ ಐಪಿಎಲ್ ಗೆದ್ದ ನಾಯಕ ಶ್ರೇಯಸ್ ಅಯ್ಯರ್

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಶ್ರೇಯಸ್ ಅಯ್ಯರ್ ಅಮೋಘ ಪ್ರದರ್ಶನ ಯಾರಿಗೆ ನೆನಪಿಲ್ಲ ಹೇಳಿ. ಆ ಬಳಿಕ ಮೇಲಿಂದ ಮೇಲೆ ಹಿನ್ನಡೆ ಅನುಭವಿಸಿದ ಅವರು, ಇದೀಗ ಕೆಕೆಆರ್‌ ಪರ ಐಪಿಎಲ್‌ ಟ್ರೋಫಿ ಎತ್ತಿ ಹಿಡಿದಿದ್ದಾರೆ. ಆದರೆ, ಮುಂಬರುವ ಟಿ20 ವಿಶ್ವಕಪ್‌ ತಂಡದಲ್ಲಿ ಅಯ್ಯರ್‌ ಸ್ಥಾನ ಪಡೆದಿಲ್ಲ.

ಟಿ20 ವಿಶ್ವಕಪ್‌ಗಿಲ್ಲ ಐಪಿಎಲ್ ಗೆದ್ದ ನಾಯಕ ಶ್ರೇಯಸ್ ಅಯ್ಯರ್
ಟಿ20 ವಿಶ್ವಕಪ್‌ಗಿಲ್ಲ ಐಪಿಎಲ್ ಗೆದ್ದ ನಾಯಕ ಶ್ರೇಯಸ್ ಅಯ್ಯರ್

ಟಿ20 ವಿಶ್ವಕಪ್‌ಗೆ ಆಯ್ಕೆಯಾಗದ, ಬಿಸಿಸಿಐ ಕೇಂದ್ರೀಯ ಒಪ್ಪಂದದಿಂದ ಕೈಬಿಡಲಾದ ಆಟಗಾರನೊಬ್ಬ ನಾಯಕನಾಗಿ ತನ್ನ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದಾನೆ ಎಂದರೆ ಇಲ್ಲೇನೋ ವಿಶೇಷ ಇದ್ದೇ ಇದೆ. ದಕ್ಷಿಣ ಭಾರತದ ಹೆಬ್ಬಾಗಿಲು ಚೆನ್ನೈ ನಗರದ ಐತಿಹಾಸಿಕ ಚೆಪಾಕ್‌ ಮೈದಾನದಲ್ಲಿ ತುಂಬಿ ತುಳುಕುತ್ತಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಐಪಿಎಲ್‌ ಟ್ರೋಫಿ ಎತ್ತಿಹಿಡಿದ ಶ್ರೇಯಸ್‌ ಅಯ್ಯರ್‌, ಮಿಲಿಯನ್‌ ಡಾಲರ್‌ ಟೂರ್ನಿಯಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ ನಾಯಕನಾಗಿ ಎರಡು ಭಿನ್ನ ತಂಡಗಳನ್ನು ಫೈನಲ್‌ನತ್ತ ಮುನ್ನಡೆಸಿದ ಖ್ಯಾತಿ ಇವರದ್ದು. ಡೆಲ್ಲಿ ಕ್ಯಾಪಿಟಲ್ಸ್‌ ಪರ ಟ್ರೋಫಿ ಕನಸು ನನಸಾಗದಿದ್ದರೂ, ಈ ಬಾರಿ ಕೆಕೆಆರ್‌ ಪರ ಕನಸು ನನಸಾಯಿತು. ಅಸಲಿಗೆ ಶ್ರೇಯಸ್ ಸಾಮರ್ಥ್ಯ ಸಾಬೀತುಪಡಿಸಲು ಈ ಗೆಲುವು ಅನಿವಾರ್ಯವಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಚೆಪಾಕ್‌ ಮೈದಾನದಲಿ ಐಪಿಎಲ್ ಟ್ರೋಫಿ ಕೈಗೆ ಸಿಗುತ್ತಿದ್ದಂತೆ ಫುಟ್ಬಾಲ್‌ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ಟ್ರೋಫಿ ವಿನ್ನಿಂಗ್‌ ಶೈಲಿಯನ್ನು ಅಯ್ಯರ್ ಮರುಸೃಷ್ಟಿಸಿದರು. ಕೆಲವು ವಾರ ಹಾಗೂ ತಿಂಗಳ ಹಿಂದೆ ವೈಯಕ್ತಿಕವಾಗಿ ಕುಗ್ಗಿ ಹೋಗಿದ್ದ ಟೀಮ್‌ ಇಂಡಿಯಾ ಕ್ರಿಕೆಟಿಗನಿಗೆ ಈ ಗೆಲುವು ಮಹತ್ವದ್ದು.ಕೆಕೆಆರ್‌ ತಂಡಕ್ಕೆ 10 ವರ್ಷಗಳ ಬಳಿಕ ಟ್ರೋಫಿ ಗೆದ್ದುಕೊಟ್ಟ ಖ್ಯಾತಿ ಅಯ್ಯರ್‌ ಅವರದ್ದು. 2014ರ ಫೈನಲ್‌ನಲ್ಲಿ ಕೊನೆಯ ಬಾರಿ ಕಪ್‌ ಗೆದ್ದಿದ್ದ ತಂಡವು ಈ ಬಾರಿ ಕಪ್‌ ಗೆದ್ದಾಗ, ಮೆಸ್ಸಿ ಸಂಭ್ರಾಮಚರಣೆ ನಡೆಸಿದಂತೆಯೇ ವಿಜಯೋತ್ಸವ ಆಚರಿಸಿದರು.

ಐಪಿಎಲ್‌ ಆರಂಭಕ್ಕಿಂತ ಕೆಲವು ವಾರಗಳ ಹಿಂದಷ್ಟೇ, ಬಿಸಿಸಿಐ ಕೇಂದ್ರೀಯ ಒಪ್ಪಂದದಿಂದ ಅಯ್ಯರ್‌ ಅವರನ್ನು ಹೊರಗಿಡಲಾಯ್ತು. ಬೆನ್ನುನೋವಿನಿಂದ ಬಳಲುತ್ತಿರುವ ಅಯ್ಯರ್‌, ವರ್ಷದ ಆರಂಭದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದರು. ಅದೆಲ್ಲವನ್ನೂ ಮೆಟ್ಟಿ ನಿಂತು ಹೋರಾಡಿದರು. ಕೆಕೆಆರ್ ತಂಡದಲ್ಲಿ ಒಗ್ಗಟ್ಟಿನ ವಾತಾವರಣ ನಿರ್ಮಿಸಿದರು. ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡವು ಫೈನಲ್‌ನಲ್ಲೂ ಪ್ರಬಲವಾಗಿ ಹೋರಾಡಿ ಸುಲಭ ಜಯ ಸಾಧಿಸಿತು.

“ನಮ್ಮ ಭಾವನೆಯನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ಹಲವು ಸಮಯದಿಂದ ನಾವು ಈ ಸಮಯಕ್ಕಾಗಿ ಕಾಯುತ್ತಿದ್ದೆವು. ಇದೀಗ ಎಲ್ಲವನ್ನೂ ನೆನಪಿಸಿಕೊಂಡು ಖುಷಿ ಪಡುವ ಸಮಯ,” ಎಂದು ಕಪ್‌ ಗೆಲುವಿನ ಬಳಿಕ‌ ಅಯ್ಯರ್ ಹೇಳುತ್ತಿದ್ದಾಗ ಅವರ ಮನಸಿನ ಭಾವನೆ ಮಾತುಗಳಲ್ಲಿ ಸ್ಪಷ್ಟವಾಗುತ್ತದೆ.

ಅಯ್ಯರ್‌ ವೃತ್ತಿಜೀವನದ ಆರಂಭ ಸುಲಭವಾಗಿರಲಿಲ್ಲ

ಆರಂಭದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಸೀಮಿತವಾಗಿದ್ದ ಅಯ್ಯರ್‌, 2014-15ರಲ್ಲಿ ತಮ್ಮ ಚೊಚ್ಚಲ ರಣಜಿ ಋತುವಿನಲ್ಲಿ 7ನೇ ಕ್ರಮಾಂಕದಿಂದ 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದರು. ಈ ಅವಕಾಶ ನೀಡಿದವರು ಮುಂಬೈ ಕೋಚ್ ಪ್ರವೀಣ್ ಆಮ್ರೆ. ಶ್ರೇಯಸ್‌‌ ವೃತ್ತಿಜೀವನದಲ್ಲಿ ಇದು ಟರ್ನಿಂಗ್‌ ಪಾಯಿಂಟ್. ಅದೇ ಆವೃತ್ತಿಯಲ್ಲಿ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಂಗಾಳ ವಿರುದ್ಧ ಅಯ್ಯರ್ 153 ರನ್‌ಗಳ ಆಕರ್ಷಕ ಶತಕ ಸಿಡಿಸಿದರು. ಅದು ಅವರ ಮೊದಲ ಪ್ರಥಮ ದರ್ಜೆ ಶತಕ.

ಏಕದಿನ ವಿಶ್ವಕಪ್‌ ಹೀರೋ

ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟರ್‌ ಆಗಿದ್ದ ಅಯ್ಯರ್‌ ಪ್ರದರ್ಶನವನ್ನು ಹೇಗೆ ತಾನೆ ಮರೆಯಲು ಸಾಧ್ಯ. ಟೂರ್ನಿಯಲ್ಲಿ ಭಾರತದ ಪರ 2 ಆಕರ್ಷಕ ಶತಕ ಸಹಿತ 530 ರನ್ ಗಳಿಸಿದ್ದರು. ಪಂದ್ಯಾವಳಿಯಲ್ಲಿ ಗರಿಷ್ಠ ರನ್‌ ಕಲೆ ಹಾಕಿದ ಆಟಗಾರರ ಪಟ್ಟಯಲ್ಲಿ 6ನೇ ಸ್ಥಾನ ಪಡೆದರು. ಭಾರತದ ಮೂರನೇ ಆಟಗಾರ ಎನಿಸಿಕೊಂಡರು.

ರಣಜಿ ಪಂದ್ಯಾವಳಿಗೂ ಅಲಭ್ಯ

ಈ ಬಾರಿ ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಅಯ್ಯರ್‌ ಆಟ ಹೇಳಿಕೊಳ್ಳುವಂತಿರಲಿಲ್ಲ. ಮೊದಲ ಎರಡು ಪಂದ್ಯಗಳಲ್ಲಿ 140 ರನ್ ಗಳಿಸಿದ ಅವರು, ಕೊನೆಯ ಮೂರು ಟೆಸ್ಟ್‌ಗಳಿಂದ ಹೊರಗುಳಿದರು. ಮತ್ತೆ ಮತ್ತೆ ಬೆನ್ನುನೋವು ಕಾಣಿಸಿಕೊಂಡ ಕಾರಣದಿಂದಾಗಿ ತಮ್ಮ ತವರು ರಾಜ್ಯ ಮುಂಬೈ ಪರ ರಣಜಿ ಟ್ರೋಫಿ ಆಡಲು ಸಾಧ್ಯವಾಗಲಿಲ್ಲ. ಆ ಬಳಿಕ ಐಪಿಎಲ್‌ ಆರಂಭಕ್ಕೂ ಮುನ್ನ ಕೆಕೆಆರ್‌ ಶಿಬಿರ ಸೇರಿಕೊಂಡಾಗ ಸಾಕಷ್ಟು ಟೀಕೆಗೆ ಒಳಗಾದರು. ವಿದರ್ಭ ವಿರುದ್ಧದ ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯದಲ್ಲಿ ಮುಂಬೈ ಪರ ಆಡಿದ ಅಯ್ಯರ್‌, ತಂಡದ 42ನೇ ರಣಜಿ ಗೆಲುವಿನ ಎರಡನೇ ಇನ್ನಿಂಗ್ಸ್‌ನಲ್ಲಿ ಅಮೂಲ್ಯ 95 ರನ್ ಗಳಿಸಿದರು.

ಕಳೆದ ವರ್ಷದ ಪಂದ್ಯಾವಳಿಯ ಸಮಯದಲ್ಲಿ ಅಯ್ಯರ್‌ ಆಡಿರಲಿಲ್ಲ. ಬೆನ್ನುನೋವಿನಿಂದಾಗಿ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಯಬೇಕಿದ್ದ ಕಾರಣದಿಂದ ಅವರು ಹೊರಗುಳಿದಿದ್ದರು. ಈ ಬಾರಿಯ ಐಪಿಎಲ್‌ನಲ್ಲಿಯೂ ಅಯ್ಯರ್‌ ಆರಂಭ ಉತ್ತಮವಾಗಿರಲಿಲ್ಲ. ಎರಡನೇ ಹಂತದ ವೇಳೆಗೆ ಪುಟಿದೆದ್ದ ಅವರು, ತಂಡದ ಪರ ಕ್ವಾಲಿಫೈಯರ್‌ ಹಾಗೂ ಫೈನಲ್‌ ಪಂದ್ಯದಲ್ಲಿ ಅಜೇಯ ಆಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಪ್ರಸಕ್ತ ಋತುವಿನಲ್ಲಿ ಕೆಕೆಆರ್ ಪರ ಎರಡು ಅರ್ಧಶತಕ ಸಹಿತ 351 ರನ್‌ಗಳೊಂದಿಗೆ ಆವೃತ್ತಿ ಮುಗಿಸಿದರು.

ಮುಂದೆ ಟಿ20 ವಿಶ್ವಕಪ್‌ ಫೈನಲ್‌ ಬರುತ್ತಿದೆ. ಐಪಿಎಲ್‌ ಟ್ರೋಫಿ ಗೆದ್ದ ನಾಯಕ ಚುಟುಕು ವಿಶ್ವಸಮರದಲ್ಲಿ ಆಡುವ ಅವಕಾಶ ಪಡೆದಿಲ್ಲ ಎಂಬುದೇ ಅಚ್ಚರಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024

ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲ ಸುದ್ದಿ, T20 ವಿಶ್ವಕಪ್, T20 ವಿಶ್ವಕಪ್ ವೇಳಾಪಟ್ಟಿ, T20 ವಿಶ್ವಕಪ್ ಅತ್ಯಧಿಕ ರನ್‌ಗಳು, T20 ವಿಶ್ವಕಪ್ ಪಾಯಿಂಟ್ಸ್ ಟೇಬಲ್, T20 ವಿಶ್ವಕಪ್ ಲೈವ್ ಸ್ಕೋರ್, T20 ವಿಶ್ವಕಪ್ ಅಂಕಿಅಂಶಗಳು.. ಕ್ರಿಕೆಟ್‌ಗೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ HT ಕನ್ನಡ ವೆಬ್‌ಸೈಟ್ ನೋಡಿ