ಫೇರ್‌ಪ್ಲೇ ಪ್ರಶಸ್ತಿ ಸಿಗಬಹುದು ಎಂದು ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದೆ; ಗೌತಮ್ ಗಂಭೀರ್
Gautam Gambhir: ಪ್ರಸಕ್ತ ಐಪಿಎಲ್‌ನಲ್ಲಿ ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಹಾಗೂ ಆರ್‌ಸಿಬಿ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಪರಸ್ಪರ ತಬ್ಬಿಕೊಂಡ ದೃಶ್ಯ ಭಾರಿ ವೈರಲ್ ಆಗಿತ್ತು. ಈ ಕುರಿತು ಕೆಕೆಆರ್ ಮಾಜಿ ಆಟಗಾರ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಐಪಿಎಲ್ 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶಿಸಿದೆ. ತಂಡದ ನೂತನ ಮಾರ್ಗದರ್ಶಕ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ತಂಡವು ಪ್ರಚಂಡ ಪ್ರದರ್ಶನ ನೀಡುತ್ತಿದ್ದು, ಈ ಬಾರಿ ಕಪ್ ಗೆಲ್ಲುವ ಫೇವರೆಟ್ ತಂಡಗಳಲ್ಲಿ ಒಂದಾಗಿದೆ. ಟೂರ್ನಿಯ ಲೀಗ್ ಹಂತದಲ್ಲಿ ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ, ವಿರಾಟ್ ಕೊಹ್ಲಿಯನ್ನು ತಬ್ಬಿಕೊಳ್ಳುವ ಮೂಲಕ ಗಂಭೀರ್ ಕ್ರೀಡಾಸ್ಫೂರ್ತಿ ಪ್ರದರ್ಶಿಸಿದ್ದರು. 2023ರ ಐಪಿಎಲ್ ಋತುವಿನಲ್ಲಿ ಪರಸ್ಪರ ವಾಗ್ವಾದ ನಡೆಸಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ಎದುರಿಸಿದ್ದ ಈ ಜೋಡಿ, ಈ ಬಾರಿ ಮತ್ತೆ ಒಂದಾಗಿದ್ದರು. ಈ ಹೃದಯಸ್ಪರ್ಶಿ ನಡೆಯು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿತ್ತು. ಇದೀಗ ಅಂದು ವಿರಾಟ್ ಅವರನ್ನು ತಬ್ಬಿಕೊಂಡಿರುವ ಕುರಿತು ಗಂಭೀರ್ ಮಾತನಾಡಿದ್ದಾರೆ.
ಕೆಕೆಆರ್ ತಂಡವು ಫೇರ್ ಪ್ಲೇ ಪ್ರಶಸ್ತಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತದೆ ಎಂದು ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಿದ್ದೆ ಎಂದು ಗೌತಿ ಹಾಸ್ಯಾಸ್ಪದವಾಗಿ ಹೇಳಿದ್ದಾರೆ.
ಐಪಿಎಲ್ ಪಂದ್ಯಾವಳಿಯಲ್ಲಿ ಫೇರ್ ಪ್ಲೇ ಪ್ರಶಸ್ತಿಗಾಗಿ ಪ್ರತಿ ತಂಡಗಳಿಗೂ ಅಂಕಗಳನ್ನು ನೀಡಲಾಗುತ್ತದೆ. ಋತುವಿನ ಅವಧಿಯಲ್ಲಿ ಮೈದಾನದಲ್ಲಿ ತಂಡದ ಅತ್ಯುತ್ತಮ ನಡವಳಿಕೆಗಾಗಿ ಅಂಕಗಳನ್ನು ನೀಡಲಾಗುತ್ತದೆ. ಕ್ರೀಡಾಸ್ಫೂರ್ತಿಯನ್ನು ಎತ್ತಿ ಹಿಡಿಯುವ ತಂಡ ಈ ಪ್ರಶಸ್ತಿ ಪಡೆಯುತ್ತದೆ. ಪ್ರತಿ ಪಂದ್ಯದ ನಂತರ ಅಂಕಗಳನ್ನು ಸೇರಿಸಲಾಗುತ್ತದೆ. ಲೀಗ್ ಹಂತದ 14 ಪಂದ್ಯಗಳ ನಂತರ ಆರ್‌ಸಿಬಿಗಿಂತ ಒಂದು ಹೆಚ್ಚು ಅಂಕ ಗಳಿಸಿರುವ ಕೋಲ್ಕತಾ 134 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು.
ಇದನ್ನೂ ಓದಿ | RCB vs RR Eliminator: ಇಂದು ಆರ್‌ಸಿಬಿ-ಆರ್‌ಆರ್ ಐಪಿಎಲ್ ಎಲಿಮಿನೇಟರ್ ಪಂದ್ಯ; ಇಲ್ಲಿದೆ ನರೇಂದ್ರ ಮೋದಿ ಸ್ಟೇಡಿಯಂ ಪಿಚ್, ವೆದರ್ ರಿಪೋರ್ಟ್
“ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಚಿನ್ನಸ್ವಾಮಿಯಲ್ಲಿ ನಡೆದ ಘಟನೆಯಿಂದಾಗಿ (ವಿರಾಟ್ ತಬ್ಬಿಕೊಂಡಿರುವುದು) ನಾವು ಫೇರ್ ಪ್ಲೇ ಅವಾರ್ಡ್ ಟೇಬಲ್‌ನಲ್ಲಿ ಅಗ್ರಸ್ಥಾನದಲ್ಲಿ ಇರುತ್ತೇವೆ ಎಂದು ನಾನು ಭಾವಿಸಿದ್ದೆ” ಎಂದು ಗಂಭೀರ್ ಅವರು ಆರ್ ಅಶ್ವಿನ್ ಅವರೊಂದಿಗಿನ ಚರ್ಚೆಯ ಸಮಯದಲ್ಲಿ ಹೇಳಿದ್ದಾರೆ.
ನಾವು ಅಂಕಪಟ್ಟಿಯಲ್ಲಿ ಯಾವುದೇ ಸ್ಥಾನದಲ್ಲಿ ಇದ್ದರೂ ಚಿಂತೆಯಿಲ್ಲ. ಆದರೆ ಫೇರ್ ಪ್ಲೇ ಪ್ರಶಸ್ತಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಬೇಕು. ಆದರೂ ನಾವು ಕೊನೆಯ ಸ್ಥಾನದಲ್ಲಿದ್ದೇವೆ" ಎಂದು ಅವರು ಹೇಳಿದ್ದಾರೆ.
ಫೈನಲ್ ಪ್ರವೇಶಿಸಿದ ಕೆಕೆಆರ್
ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು, ಪ್ರಸಕ್ತ ಆವೃತ್ತಿಯ ಫೈನಲ್‌ಗೆ ಮೊದಲ ತಂಡವಾಗಿ ಲಗ್ಗೆ ಹಾಕಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಕೆಕೆಆರ್, ಟೂರ್ನಿ ಇತಿಹಾದಲ್ಲಿ ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ತಲುಪಿತು. ಈ ಹಿಂದೆ ಎರಡು ಬಾರಿ ಕಪ್ ಗೆದ್ದಿರುವ ತಂಡವು, ಮೂರನೇ ಟ್ರೋಫಿ ಗೆಲುವಿನ ಉತ್ಸಾಹದಲ್ಲಿದೆ.
ಇದನ್ನೂ ಓದಿ | ಅಯ್ಯರ್ ಜೋಡಿ ಆರ್ಭಟ; ಸನ್‌ರೈಸರ್ಸ್ ಸದೆಬಡೆದು ನಾಲ್ಕನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಕೆಕೆಆರ್
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
