ಮೂರು ಐಸಿಸಿ ಟ್ರೋಫಿ ಗೆದ್ದ ಧೋನಿ ಅತ್ಯಂತ ಯಶಸ್ವಿ ನಾಯಕ; ಆ ಹಂತ ತಲುಪಲು ಯಾರಿಂದಲೂ ಸಾಧ್ಯವಿಲ್ಲ ಎಂದ ಗೌತಮ್ ಗಂಭೀರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಮೂರು ಐಸಿಸಿ ಟ್ರೋಫಿ ಗೆದ್ದ ಧೋನಿ ಅತ್ಯಂತ ಯಶಸ್ವಿ ನಾಯಕ; ಆ ಹಂತ ತಲುಪಲು ಯಾರಿಂದಲೂ ಸಾಧ್ಯವಿಲ್ಲ ಎಂದ ಗೌತಮ್ ಗಂಭೀರ್

ಮೂರು ಐಸಿಸಿ ಟ್ರೋಫಿ ಗೆದ್ದ ಧೋನಿ ಅತ್ಯಂತ ಯಶಸ್ವಿ ನಾಯಕ; ಆ ಹಂತ ತಲುಪಲು ಯಾರಿಂದಲೂ ಸಾಧ್ಯವಿಲ್ಲ ಎಂದ ಗೌತಮ್ ಗಂಭೀರ್

Gautam Gambhir: ಎಂಎಸ್ ಧೋನಿ ಅವರ ನಾಯಕತ್ವವನ್ನು ಕೆಕೆಆರ್‌ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದೇ ವೇಳೆ ಸಿಎಸ್‌ಕೆ ತಂಡವನ್ನು ಎದುರಿಸುವಾಗ ತಮ್ಮ ಗುರಿ ಗೆಲುವು ಮಾತ್ರವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಧೋನಿ ಅತ್ಯಂತ ಯಶಸ್ವಿ ನಾಯಕ ಎಂದ ಗೌತಮ್ ಗಂಭೀರ್
ಧೋನಿ ಅತ್ಯಂತ ಯಶಸ್ವಿ ನಾಯಕ ಎಂದ ಗೌತಮ್ ಗಂಭೀರ್ (Getty Images)

ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ (Gautam Gambhir), ಐಪಿಎಲ್ ಟ್ರೋಫಿ ಗೆದ್ದ ಕೆಲವೇ ನಾಯಕರಲ್ಲಿ ಒಬ್ಬರು. ಸದಾ ಟೀಕೆಗಳಿಂದಲೇ ಹೆಚ್ಚು ಸುದ್ದಿಯಾಗುವ ಗಂಭೀರ್, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರೊಂದಿಗಿನ ತಮ್ಮ ಆನ್ ಫೀಲ್ಡ್ ಕದನದ ಬಗ್ಗೆ ಮಾತನಾಡಿದ್ದಾರೆ. ನಾಯಕನಾಗಿ ಎರಡು ಬಾರಿ ಕೆಕೆಆರ್ ತಂಡವನ್ನು ಐಪಿಎಲ್ ಟ್ರೋಫಿಯತ್ತ ಮುನ್ನಡೆಸಿದ ಅವರು, 5 ಬಾರಿಯ ಐಪಿಎಲ್ ಚಾಂಪಿಯನ್‌ ಸಿಎಸ್‌ಕೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರೊಂದಿಗೆ ಹಲವು ಬಾರಿ ತಂತ್ರಗಾರಿಕೆಯ ಕದನದಲ್ಲಿ ತೊಡಗಿದ್ದರು. ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜ ಆಟಗಾರರು ತಮ್ಮ ಭಿನ್ನ ನಾಯಕತ್ವ ವಿಧಾನದಿಂದ ಕೆಕೆಆರ್ ಮತ್ತು ಸಿಎಸ್‌ಕೆ ತಂಡಗಳ ನಡುವಿನ ಪೈಪೋಟಿಯನ್ನು ಸ್ಮರಣೀಯವಾಗಿಸಿದ್ದರು.

ಧೋನಿ ತಾಳ್ಮೆಯ ನಾಯಕತ್ವದಿಂದ ಕೂಲ್‌ ಕ್ಯಾಪ್ಟನ್‌ ಎಂದು ಹೆಸರು ಪಡೆದರೆ, ಗಂಭೀರ್‌ ಅದಕ್ಕೆ ಸಂಪೂರ್ಣ ತದ್ವಿರುದ್ಧ. ಆಕ್ರಮಣಕಾರಿ ನಾಯಕತ್ವಕ್ಕೆ ಗಂಭಿರ್ ಹೆಸರುವಾಸಿ. ಕೆಕೆಆರ್ ತಂಡದ ನಾಯಕನಾಗಿ ಸಿಎಸ್‌ಕೆ ತಂಡವನ್ನು ಎದುರಿಸಿದ 11 ಬಾರಿ ಗಂಭೀರ್‌ ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಇದೇ ಗೌತಿ ನಾಯಕತ್ವದಲ್ಲಿ ಕೋಲ್ಕತಾ ತಂಡವು 2012ರ ಐಪಿಎಲ್ ಫೈನಲ್‌ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿ ಟ್ರೋಫಿ ಎತ್ತಿಹಿಡಿದಿತ್ತು.

ಪ್ರತಿ ಬಾರಿಯೂ ಸಿಎಸ್‌ಕೆ ತಂಡವನ್ನು ಎದುರಿಸುವಾಗ, ತಾವು ದೊಡ್ಡ ಮಟ್ಟದ ಪೈಪೋಟಿಯನ್ನು ಗೆಲ್ಲಲು ಬಯಸುವುದು ನನ್ನಲ್ಲಿ ತುಂಬಾ ಸ್ಪಷ್ಟವಾಗಿತ್ತು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಹೇಳಿದ್ದಾರೆ.

ಗೆಲುವೇ ನಿರ್ಣಾಯಕ

“ನಾನು ಖಂಡಿತಾ ಗೆಲುವನ್ನೇ ಬಯಸುತ್ತೇನೆ. ಅದು ನನ್ನ ಮನಸ್ಸಿನಲ್ಲಿ ಬಹಳ ಸ್ಪಷ್ಟವಾಗಿದೆ. ನನಗೆ ಆ ತಂಡದಲ್ಲೂ ಸ್ನೇಹಿತರಿದ್ದಾರೆ, ನಮ್ಮ ನಡುವೆ ಪರಸ್ಪರ ಗೌರವವಿದೆ. ಅದೆಲ್ಲವೂ ಆಟಕ್ಕಿಂತ ಭಿನ್ನ. ಆದರೆ ಮೈದಾನದಲ್ಲಿರುವಾಗ ನಾನು ಕೆಕೆಆರ್ ತಂಡವನ್ನು ಮುನ್ನಡೆಸಿದರೆ, ಅವರು ಸಿಎಸ್‌ಕೆ ನಾಯಕ. ಇದೇ ಪ್ರಶ್ನೆಯನ್ನು ನೀವು ಅವರಲ್ಲಿ ಕೇಳಿದರೆ, ಅವರು ಕೂಡಾ ಇದೇ ಉತ್ತರ ನೀಡುತ್ತಾರೆ. ಇಲ್ಲಿ ಗೆಲುವೇ ಮುಖ್ಯ. ನಾನು ಡ್ರೆಸ್ಸಿಂಗ್ ರೂಮ್‌ಗೆ ಮರಳುವಾಗ ಗೆಲುವನ್ನಷ್ಟೇ ಬಯಸುತ್ತೇನೆ,” ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಗಂಭೀರ್ ಹೇಳಿದರು.

ಧೋನಿ ತಲುಪಿರುವ ಹಂತಕ್ಕೆ ಯಾರೂ ಏರಲು ಸಾಧ್ಯವಿಲ್ಲ

ಇದೇ ವೇಳೆ ಟೀಮ್‌ ಇಂಡಿಯಾ ನಾಯಕನಾಗಿ ಧೋನಿಯ ಅಸಾಧಾರಣ ದಾಖಲೆಯನ್ನು ಗಂಭೀರ್ ಶ್ಲಾಘಿಸಿದ್ದಾರೆ. ದೇಶಕ್ಕಾಗಿ ಟ್ರೋಫಿಗಳನ್ನು ಗೆದ್ದ ವಿಷಯದಲ್ಲಿ ಧೋನಿ ಅವರ ಹಂತಕ್ಕೆ ಯಾರೂ ತಲುಪಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ | ಹೊಸ ಹೇರ್‌ಸ್ಟೈಲ್‌ಗೆ ವಿರಾಟ್ ಕೊಹ್ಲಿ ಖರ್ಚು ಮಾಡಿದ ಹಣ ಲಕ್ಷ ಲಕ್ಷ; ಕೇಶ ವಿನ್ಯಾಸಕ ಹಕೀಮ್ ಹೇಳಿದ್ರು ಅಚ್ಚರಿ ಮಾಹಿತಿ

“ಬಹುಶಃ ಎಂಎಸ್ ಧೋನಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ. ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲುವುದು ಅತ್ಯುನ್ನತ ಸಾಧನೆ. ಬೇರೊಬ್ಬರು ಆ ಮಟ್ಟವನ್ನು ತಲುಪಬಹುದು ಎಂದು ನನಗಂತೂ ಅನಿಸುತ್ತಿಲ್ಲ. ಆಟಗಾರರು ವಿದೇಶದಲ್ಲಿ ಸರಣಿಗಳನ್ನು ಗೆಲ್ಲಬಹುದು, ಹಲವು ಟೆಸ್ಟ್ ಪಂದ್ಯಗಳಲ್ಲಿ ಜಯಶಾಲಿಯಾಗಬಹುದು. ಆದರೆ ಅದು ಮೂರು ಐಸಿಸಿ ಟ್ರೋಫಿಗಳಿಗಿಂತ ದೊಡ್ಡ ಸಾಧನೆಯಾಗಲು ಸಾಧ್ಯವಿಲ್ಲ,” ಎಂದು ಗೌತಿ ಮಾಹಿಯ ಗುಣಗಾನ ಮಾಡಿದ್ದಾರೆ.

Whats_app_banner