ಕನ್ನಡ ಸುದ್ದಿ  /  ಕ್ರಿಕೆಟ್  /  ನನ್ನ ಪಾಲಿಗೆ ಟಿ20 ವಿಶ್ವಕಪ್‌ ಬಾಗಿಲು ಮುಚ್ಚಿದೆ; ವೆಸ್ಟ್ ಇಂಡೀಸ್ ಪರ ಮತ್ತೆ ಕ್ರಿಕೆಟ್ ಆಡಲ್ಲ ಎಂದ ಸುನಿಲ್ ನರೈನ್

ನನ್ನ ಪಾಲಿಗೆ ಟಿ20 ವಿಶ್ವಕಪ್‌ ಬಾಗಿಲು ಮುಚ್ಚಿದೆ; ವೆಸ್ಟ್ ಇಂಡೀಸ್ ಪರ ಮತ್ತೆ ಕ್ರಿಕೆಟ್ ಆಡಲ್ಲ ಎಂದ ಸುನಿಲ್ ನರೈನ್

ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲು ಮತ್ತೆ ವೆಸ್ಟ್‌ ಇಂಡೀಸ್‌ ತಂಡಕ್ಕೆ ಮರಳುವುದಿಲ್ಲ ಎಂದು ಮಾಜಿ ಕ್ರಿಕೆಟಿಗ ಸುನಿಲ್ ನರೈನ್ ಹೇಳಿದ್ದಾರೆ. ನಿವೃತ್ತಿ ಹಿಂಪಡೆಯುವುದಿಲ್ಲ. ವಿಶ್ವಕಪ್‌ ನನ್ನ ಪಾಲಿಗೆ ಮುಚ್ಚಿದ ಬಾಗಿಲು ಎಂದು ಅವರು ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಪರ ಮತ್ತೆ ಕ್ರಿಕೆಟ್ ಆಡಲ್ಲ ಎಂದ ಸುನಿಲ್ ನರೈನ್
ವೆಸ್ಟ್ ಇಂಡೀಸ್ ಪರ ಮತ್ತೆ ಕ್ರಿಕೆಟ್ ಆಡಲ್ಲ ಎಂದ ಸುನಿಲ್ ನರೈನ್ (PTI)

ಪ್ರಸಕ್ತ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಯಲ್ಲಿ ಕೆಕೆಆರ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಸುನಿಲ್‌ ನರೈನ್‌ (Sunil Narine) ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ಗಿಂತ ಹೆಚ್ಚಾಗಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಅವರ ಸ್ಫೋಟಕ ಫಾರ್ಮ್‌ನಿಂದಾಗಿ ಮುಂಬರುವ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ವೆಸ್ಟ್‌ ಇಂಡೀಸ್‌ ಪರ ಆಡಬೇಕೆಂಬ ಒತ್ತಾಯ ಹೆಚ್ಚುತ್ತಿದೆ. ಆದರೆ, ಈ ಎಲ್ಲಾ ಊಹಾಪೋಗಳಿಗೆ ವಿಂಡೀಸ್‌ ಮಾಜಿ ಆಟಗಾರ ತೆರೆ ಎಳೆದಿದ್ದಾರೆ. ನಿವೃತ್ತಿ ಹಿಂಪಡೆದು ದೇಶದ ಪರ ಆಡುವುದಿಲ್ಲ ಎನ್ನುವ ಮೂಲಕ, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸುನಿಲ್ ನರೈನ್ ಕಳೆದ ವರ್ಷದ ನವೆಂಬರ್‌ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು. ಆದರೂ, ಐಪಿಎಲ್‌ನಲ್ಲಿ ಸಕ್ರಿಯವಾಗಿ ಆಡುತ್ತಿರುವ ಅವರು 2024ರ ಆವೃತ್ತಿಯಲ್ಲೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ಪರ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ತಂಡದ ಆರಂಭಿಕನಾಗಿ ಬ್ಯಾಟಿಂಗ್‌ ಮಾಡಿ ಈಗಾಗಲೇ ಒಂದು ಶತಕ ಸಹಿತ ಉತ್ತಮ ರನ್‌ ಪೇರಿಸಿದ್ದಾರೆ. ಇದೇ ಕಾರಣದಿಂದಾಗಿ ಭಾರತದಿಂದಲೇ ಹಲವಾರು ಅಭಿಮಾನಿಗಳು ನರೈನ್‌ ವಿಶ್ವಕಪ್‌ ಆಡುವ ಕುರಿತು ಮಾತನಾಡಿದ್ದರು. ಜೊತೆಗೆ ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡದ ನಾಯಕ ರೋವ್ಮನ್ ಪೊವೆಲ್, ಸಹ ಆಟಗಾರರು ಮಾತ್ರವಲ್ಲದೆ ಇಯಾನ್ ಬಿಷಪ್ ಅವರಂತಹ ಮಾಜಿ ಕ್ರಿಕೆಟಿಗರು ಕೂಡಾ ಟಿ20 ವಿಶ್ವಕಪ್‌ಗೆ ಮರಳುವ ಕುರಿತು ಮಾತನಾಡಿದ್ದರು. ಆದರೆ, ಇವೆಲ್ಲಾ ಮನವಿಗಳನ್ನು ನರೈನ್‌ ನಾಜೂಕಾಗಿ ತಿರಸ್ಕರಿಸಿದ್ದಾರೆ.

“ಇತ್ತೀಚೆಗೆ ನನ್ನ ಪ್ರದರ್ಶನವನ್ನು ನೋಡಿ, ನಾನು ನಿವೃತ್ತಿಯಿಂದ ಹೊರಬಂದು ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಆಡುವ ಬಯಕೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವಂತೆ ಹಲವರನ್ನು ಪ್ರೇರೇಪಿಸಿದೆ ಎಂಬುದನ್ನು ನೋಡಿ ನನಗೆ ನಿಜಕ್ಕೂ ಖುಷಿಯಾಗಿದೆ. ಇದಕ್ಕಾಗಿ ನಾನು ತೀರಾ ವಿನಮ್ರನಾಗಿದ್ದೇನೆ” ಎಂದು ನರೈನ್ ಹೇಳಿದ್ದಾರೆ.

ಇದನ್ನೂ ಓದಿ | ಐಪಿಎಲ್‌ನಲ್ಲಿ ಯುಜ್ವೇಂದ್ರ ಚಹಾಲ್ ವಿಕೆಟ್‌ಗಳ ದ್ವಿಶತಕ; ವಿಶೇಷ ಮೈಲಿಗಲ್ಲು ತಲುಪಿದ ಮೊದಲ ಹಾಗೂ ಏಕೈಕ ಬೌಲರ್

ಈ ವರ್ಷ ಕೋಲ್ಕತಾ ನೈಟ್ ರೈಡರ್ಸ್ ಪರ ಆರಂಭಿಕ ಪಂದ್ಯದಿಂದಲೂ ಇನ್ನಿಂಗ್ಸ್ ಆರಂಭಿಸುತ್ತಿರುವ ನರೈನ್‌, 40.86 ಸರಾಸರಿಯಲ್ಲಿ 176.54ರ ಸ್ಟ್ರೈಕ್ ರೇಟ್‌ನೊಂದಿಗೆ 286 ರನ್ ಸಿಡಿಸಿದ್ದಾರೆ. ಈ ಆವೃತ್ತಿಯಲ್ಲಿ ತಮ್ಮ ಮೊದಲ ಟಿ20 ಶತಕವನ್ನು ಕೂಡಾ ಗಳಿಸಿದ್ದಾರೆ. ಇದೇ ವೇಳೆ ಈವರೆಗೆ ಆಡಿದ 7 ಪಂದ್ಯಗಳಲ್ಲಿ 7.11ರ ಎಕಾನಮಿ ರೇಟ್‌ನಲ್ಲಿ ಬೌಲಿಂಗ್‌ ಮಾಡಿ 9 ವಿಕೆಟ್‌ ಕೂಡಾ ಕಬಳಿಸಿದ್ದಾರೆ. ಟೂರ್ನಿಯಲ್ಲಿ ಕೆಕೆಆರ್ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ನರೈನ್‌ ಪಾತ್ರ ಪ್ರಮುಖವಾಗಿದೆ. ತಂಡವು ಈವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಜಯ ಸಾಧಿಸಿದೆ. ಅಲ್ಲದೆ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ನರೈನ್ ಅವರ ಆಲ್‌ರೌಂಡ್ ಪ್ರದರ್ಶನವನ್ನು ನೋಡಿದ ವೆಸ್ಟ್ ಇಂಡೀಸ್ ಟಿ20 ತಂಡದ ನಾಯಕ ಪೊವೆಲ್, ನರೈನ್ ಅವರನ್ನು ಸತತವಾಗಿ ಮನವೊಲಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸುಮಾರು 12 ತಿಂಗಳುಗಳಿಂದ ನರೈನ್‌ ನಿವೃತ್ತಿಯಿಂದ ಹೊರಬಂದು ಚುಟುಕು ವಿಶ್ವಕಪ್‌ನಲ್ಲಿ ಆಡಬೇಕಾಗಿ ಮನವೊಲಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಖುದ್ದು ಪೊವೆಲ್‌ ಬಹಿರಂಗಪಡಿಸಿದ್ದಾರೆ. ಇದೇ ಉದ್ದೇಶದಿಂದ ಕೀರನ್ ಪೊಲಾರ್ಡ್ ಮತ್ತು ಡ್ವೇನ್ ಬ್ರಾವೋ ಅವರೊಂದಿಗೂ ನಿರಂತರ ಸಂಪರ್ಕದಲ್ಲಿರುವುದಾಗಿ ರಾಜಸ್ಥಾನ್‌ ರಾಯಲ್ಸ್‌ ಬ್ಯಾಟರ್‌ ತಿಳಿಸಿದ್ದಾರೆ. ಆದರೆ, ನರೈನ್‌ ಯಾವುದೇ ಒತ್ತಾಯಗಳಿಗೆ ಮಣಿದಿಲ್ಲ.

ಈಗ ಎಲ್ಲಾ ಬಾಗಿಲು ಮುಚ್ಚಿದೆ

35 ವರ್ಷದ ಆಟಗಾರ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪಿಲ್ಲ. ಹೀಗಾಗಿ ಈ ವರ್ಷದ ಜೂನ್‌ನಲ್ಲಿ ಆರಂಭವಾಗಲಿರುವ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ.

“ನಾನು ನಿವೃತ್ತಿ ನಿರ್ಧಾರದಿಂದ ಶಾಂತಿ ಕಂಡುಕೊಂಡಿದ್ದೇನೆ. ನಾನು ಯಾರನ್ನೂ ನಿರಾಶೆಗೊಳಿಸಲು ಬಯಸುವುದಿಲ್ಲ. ಆದರೂ, ನನ್ನ ಪಾಲಿಗೆ ವಿಶ್ವಕಪ್‌ ಬಾಗಿಲು ಈಗ ಮುಚ್ಚಲ್ಪಟ್ಟಿದೆ. ಹೀಗಾಗಿ ಜೂನ್‌ನಲ್ಲಿ ವೆಸ್ಟ್ ಇಂಡೀಸ್‌ ಪರ ಮೈದಾನಕ್ಕಿಳಿಯುವ ಆಟಗಾರರನ್ನು ನಾನು ಬೆಂಬಲಿಸುತ್ತೇನೆ. ಇದಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದ ಕಠಿಣ ಪರಿಶ್ರಮ ಪಡುತ್ತಿರುವ ಆಟಗಾರರು, ಅಭಿಮಾನಿಗಳಿಗೆ ಮತ್ತೊಂದು ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆಂದು ತೋರಿಸಲು ಅರ್ಹರಾಗಿದ್ದಾರೆ. ಅವರಿಗೆ ನಾನು ಶುಭ ಹಾರೈಸುತ್ತೇನೆ” ಎಂದು ನರೈನ್ ಹೇಳಿದ್ದಾರೆ.

IPL_Entry_Point