ಅಗ್ರ ಕ್ರಮಾಂಕ, ವಿಕೆಟ್ ಕೀಪರ್, ನಾಯಕ: ಐಪಿಎಲ್ ಮೆಗಾ ಹರಾಜಿನಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಖರೀದಿ ತಂತ್ರಗಳಿವು
ಐಪಿಎಲ್ 2025ರ ಮೆಗಾ ಹರಾಜಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತ್ರಿಸೂತ್ರಗಳೊಂದಿಗೆ ಎಂಟ್ರಿ ಕೊಡುತ್ತಿದೆ. ತಂಡಕ್ಕೆ ಬಲಿಷ್ಠ ಆರಂಭಿಕರಿರು ಅಗ್ರ ಕ್ರಮಾಂಕದ ಅಗತ್ಯವಿದೆ. ಇದರೊಂದಿಗೆ ಒಬ್ಬ ಸಮರ್ಥ ನಾಯಕ ಹಾಗೂ ವಿಕೆಟ್ ಕೀಪರ್ ಬೇಕಿದೆ. ಇದನ್ನು ಗುರಿಯಾಗಿಸಿಕೊಂಡು ಕೆಕೆಆರ್ ಹರಾಜಿನಲ್ಲಿ ಬಿಡ್ ಮಾಡಲಿದೆ.
ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯು ನವೆಂಬರ್ 24 ಮತ್ತು 25ರಂದು ನಡೆಯಲಿದೆ. ಈ ಬಾರಿ ಪ್ರಬಲ ಆಟಗಾರರೇ ಹರಾಜಿಗೆ ನಿಂತಿದ್ದು, ವಿವಿಧ ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಖರೀದಿಗೆ ತಂತ್ರ ರೂಪಿಸಿವೆ. ಅದರಲ್ಲೂ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ. ಆಟಗಾರರ ರಿಟೆನ್ಷನ್ ವೇಳೆ ನಾಯಕನನ್ನೇ ಕೈಬಿಟ್ಟಿರುವ ತಂಡವು, ಯಾವ ರೀತಿ ಆಟಗಾರರ ಖರೀದಿ ನಡೆಸಲಿದೆ ಎಂಬುದು ಸದ್ಯದ ಕುತೂಹಲ. ತಂಡವು ಆರು ಪ್ರಮುಖ ಆಟಗಾರರನ್ನು ಉಳಿಸಿಕೊಂಡಿದ್ದರೂ, ನೂತನ ಆವೃತ್ತಿಗೂ ಮುನ್ನ ತಂಡದ ದೌರ್ಬಲ್ಯಗಳನ್ನು ಪರಿಹರಿಸಲು ಎದುರು ನೋಡುತ್ತಿದೆ. ಕಳೆದ ಋತುವಿನಲ್ಲಿ ಯಶಸ್ಸು ಸಾಧಿಸಿದ ನಂತರ, ಅಭಿಮಾನಿಗಳಿಗೂ ತಂಡದ ಮೇಲೆ ನಿರೀಕ್ಷೆ ಹೆಚ್ಚಿದೆ.
ಕೆಕೆಆರ್ ತಂಡವು ಹರಾಜಿಗೂ ಮುನ್ನ ರಿಂಕು ಸಿಂಗ್, ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ ಅವರನ್ನು ಉಳಿಸಿಕೊಂಡಿದೆ. ಇದಕ್ಕಾಗಿ ತನ್ನ ಪರ್ಸ್‌ನಿಂದ 69 ಕೋಟಿ ರೂಪಾಯಿ ಖರ್ಚು ಮಾಡಿದೆ. ಇದೀಗ ಮೆಗಾ ಹರಾಜಿಗೆ 51 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ಕಣಕ್ಕಿಳಿಯುತ್ತಿದೆ.
ತಂಡವು ಉಳಿಸಿಕೊಂಡಿರುವ ಎಲ್ಲಾ ಆಟಗಾರರು ಬಲಿಷ್ಠರೇ. ರಿಂಕು ಪಂದ್ಯ ಫಿನಿಶಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದರೆ, ಚಕ್ರವರ್ತಿ ಹಾಗೂ ನರೈನ್ ತಂಡದ ಸ್ಪಿನ್ ಅಸ್ತ್ರಗಳು. ಆಂಡ್ರೆ ರಸೆಲ್ ತಂಡದ ಆಲ್‌ರೌಂಡ್ ವಿಭಾಗದ ಅವಿಭಾಜ್ಯ ಅಂಗ. ಕಳೆದ ಋತುವಿನಲ್ಲಿ ಪ್ರಭಾವ ಬೀರಿದ ಹರ್ಷಿತ್ ರಾಣಾ ಮತ್ತು ರಮಣದೀಪ್ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.
ನಾಯಕನ ಅಗತ್ಯ
ಹರಾಜಿನ ಸಮಯದಲ್ಲಿ ತಂಡವು ಕೆಲವೊಂದು ಕೊರತೆಗಳನ್ನು ನೀಗಿಸಬೇಕಿದೆ. ಮಾಜಿ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಪರ್ಯಾಯ ಆಯ್ಕೆ ಹುಡಕಬೇಕಿದೆ. ಇದರೊಂದಿಗೆ ಆರಂಭಿಕ ಸ್ಥಾನಕ್ಕೆ ಇಂಗ್ಲೀಷ್ ದೈತ್ಯ ಫಿಲ್ ಸಾಲ್ಟ್‌ಗೆ ಬದಲಿ ದಾಂಡಿಗನ ಅಗತ್ಯವಿದೆ. ತಂಡದ ಅಗ್ರ ಕ್ರಮಾಂಕ ಬಲಹೀನವಾಗಿದ್ದು, ಬಲಿಷ್ಠ ಕ್ರಮಾಂಕವನ್ನು ರೂಪಿಸಬೇಕಿದೆ. ಆರಂಭಿಕ ಆಟಗಾರನ ಜೊತೆಗೆ ಒಬ್ಬ ವಿಕೆಟ್ ಕೀಪರ್ ಅಗತ್ಯ ತಂಡಕ್ಕಿದೆ.
ಈ ಆಟಗಾರರ ಮೇಲೆ ತಂಡದ ಕಣ್ಣು
ಆರಂಭಿಕ ಆಟಗಾರ ಹಾಗೂ ವಿಕೆಟ್ ಕೀಪರ್ ಖರೀದಿಯು ತಂಡದ ಮೊದಲ ಆಯ್ಕೆ. ಹೀಗಾಗಿ ಫ್ರಾಂಚೈಸಿಯು ರಾಜಸ್ಥಾನ್ ರಾಯಲ್ಸ್ ಮಾಜಿ ಆಟಗಾರ ಜೋಸ್ ಬಟ್ಲರ್‌ನ ಮೇಲೆ ಕಣ್ಣಿಟ್ಟಿದೆ. ಟಿ20 ಮಾತ್ರವಲ್ಲದೆ ಐಪಿಎಲ್‌ನಲ್ಲೂ ಹಲವು ದಾಖಲೆ ಮಾಡಿರುವ ಇಂಗ್ಲೆಂಡ್ ಆಟಗಾರ, ತಂಡಕ್ಕೆ ಸಮರ್ಥ ಬದಲಿ ಆಯ್ಕೆ. ಓಪನರ್ ಮತ್ತು ವಿಕೆಟ್‌ಕೀಪರ್ ಆಗಿ ಅಬ್ಬರಿಸಬಲ್ಲರು. ಅಲ್ಲದೆ ಫಿಲ್ ಸಾಲ್ಟ್ ಅನುಪಸ್ಥಿತಿಯನ್ನು ನೀಗಿಸಬಲ್ಲರು.
ಅಯ್ಯರ್‌ಗೆ ಬದಲಿ ನಾಯಕ ಯಾರು?
ಇದೇ ವೇಳೆ ತಂಡವು ನಾಯಕತ್ವದ ಪಾತ್ರಕ್ಕಾಗಿ, ಡೆಲ್ಲಿ ಕ್ಯಾಪಿಟಲ್ಸ್ ಮಾಜಿ ಆಟಗಾರ ರಿಷಬ್ ಪಂತ್ ಮೇಲೆ ಕಣ್ಣಿಟ್ಟಿದೆ. ಬಹುತೇಕ ಎಲ್ಲಾ ಫ್ರಾಂಚೈಸಿಗಳು ಭಾರತೀಯ ವಿಕೆಟ್ ಕೀಪರ್ ಖರೀದಿಗೆ ತಂತ್ರ ರೂಪಿಸಿವೆ. ಇದಕ್ಕೆ ಕೆಕೆಆರ್ ಕೂಡಾ ಹೊರತಾಗಿಲ್ಲ. ಇದೇ ವೇಳೆ ಜಮ್ಮು ಕಾಶ್ಮೀರದ ಯುವ ವೇಗಿ ಉಮ್ರಾನ್ ಮಲಿಕ್ ಖರೀದಿಗೆ ತಂಡ ಮುಂದಾಗಬಹುದು. ಇದೇ ವೇಳೆ ಅನ್ಶುಲ್ ಕಾಂಬೋಜ್ ಮತ್ತು ತನುಷ್ ಕೋಟ್ಯಾನ್ ಅವರಂತಹ ಉದಯೋನ್ಮುಖ ಆಟಗಾರರು ಕೂಡಾ ತಂಡದ ಸಂಭಾವ್ಯ ಖರೀದಿ ಪಟ್ಟಿಯಲ್ಲಿದ್ದಾರೆ.
ಈ ಆಟಗಾರರನ್ನು ಮತ್ತೆ ಮನೆಗೆ ಕರೆಯಬಹುದು
ಕೆಕೆಆರ್ ತಂಡವು ಈಗಾಗಲೇ ಒಗ್ಗಟ್ಟನ್ನು ಪ್ರದರ್ಶಿಸಿದೆ. ಸುನಿಲ್ ನರೈನ್, ರಸೆಲ್ ಅವರಂಥಾ ಆಟಗಾರರು ದೀರ್ಘಕಾಲದಿಂದ ತಂಡದ ಭಾಗವಾಗಿದ್ದಾರೆ. ಹೀಗಾಗಿ ನಿತೀಶ್ ರಾಣಾ ಮತ್ತು ವೆಂಕಟೇಶ್ ಅಯ್ಯರ್ ಅವರಂಥ ಸ್ಫೋಟಕ ಆಟಗಾರರನ್ನು ತಂಡ ಮತ್ತೆ ಖರೀದಿಸಲು ಮುಂದಾಗಬಹುದು. ಕಳೆದ ಆವೃತ್ತಿಯಲ್ಲಿ ವೆಂಕಟೇಶ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಇದೇ ವೇಳೆ ಕೊನೆಯ ಋತುವಿನಲ್ಲಿ ಬೌಲಿಂಗ್‌ನಲ್ಲಿ ಪ್ರಭಾವ ಬೀರಿದ ವೈಭವ್ ಅರೋರಾ ಮತ್ತೊಮ್ಮೆ ತಂಡದ ಪರ ಮಿಂಚಲು ಕಾತರರಾಗಿದ್ದಾರೆ.