IPL 2024: ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ vs ಎಸ್‌ಆರ್‌ಎಚ್ ಹಣಾಹಣಿ; ಕೋಲ್ಕತ್ತಾ ಪಿಚ್ ಹಾಗೂ ಹವಾಮಾನ ವರದಿ ಹೀಗಿದೆ
KKR vs SRH: ಕಳೆದ ಆವೃತ್ತಿಯ ಐಪಿಎಲ್ ಪಂದ್ಯಾವಳಿಯಲ್ಲಿ ಪ್ಲೇಆಫ್ ಪ್ರವೇಶಿಸಲು ವಿಫಲವಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು, 2024ರ ಋತುವಿನಲ್ಲಿ ಅಬ್ಬರಿಸುವ ನಿರೀಕ್ಷೆಯಲ್ಲಿವೆ. ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಹಣಾಹಣಿಗೂ ಮುನ್ನ ಪಿಚ್ ಹಾಗೂ ಹವಾಮಾನ ವರದಿ ತಿಳಿಯೋಣ.

ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡಗಳು ಮುಖಾಮುಖಿಯಾಗುತ್ತಿವೆ. ಹೊಸ ನಾಯಕರೊಂದಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ತಂಡಗಳು, ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ ಪಂದ್ಯದಲ್ಲಿ ಟೂರ್ನಿಯ ಮೊದಲ ಗೆಲುವಿನ ಹುಡುಕಾಟದಲ್ಲಿವೆ. ಮಾರ್ಚ್ 23ರ ಶನಿವಾರವು ಅಭಿಮಾನಿಗಳಿಗೆ ಎರಡೆರಡು ಮನರಂಜನೆ ಸಿಗಲಿದ್ದು, ದಿನದ ಎರಡನೇ ಪಂದ್ಯವು ರೋಚಕತೆ ಹೆಚ್ಚಿಸಿದೆ.
ಬೆನ್ನುನೋವಿನಿಂದಾಗಿ ಕಳೆದ ಋತುವಿನಲ್ಲಿ ಎಲ್ಲಾ ಪಂದ್ಯಗಳಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್, ಈ ಬಾರಿ ಮತ್ತೆ ಕೆಕೆಆರ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಅತ್ತ 2023ರ ಏಕದಿನ ವಿಶ್ವಕಪ್ ಎತ್ತಿಹಿಡಿದ ಆಸ್ಟ್ರೇಲಿಯಾದ ಯಶಸ್ವಿ ನಾಯಕ ಪ್ಯಾಟ್ ಕಮಿನ್ಸ್, ಈ ಬಾರಿ ಎಸ್‌ಆರ್‌ಎಚ್ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಈ ಇಬ್ಬರೂ ಹೊಸ ನಾಯಕರು. ಈ ಆವೃತ್ತಿಗೆ ಹೈದರಾಬಾದ್ ತಂಡಗಳಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿವೆ. ಉಭಯ ತಂಡಗಳಲ್ಲಿ ಆಸೀಸ್ ಆಟಗಾರರು ಹೆಚ್ಚಿದ್ದು, ಕಮಿನ್ಸ್ ಬಳಗಕ್ಕೆ ಟ್ರಾವಿಸ್ ಹೆಡ್ ಸಾಥ್ ನೀಡಲಿದ್ದಾರೆ. ಅತ್ತ ಬರೋಬ್ಬರಿ 24.75 ಕೋಟಿ ರೂಪಾಯಿಗೆ ಕೆಕೆಆರ್ ಪಾಲಾದ ಮಿಚೆಲ್ ಸ್ಟಾರ್ಕ್ ಮೇಲೆ, ಕೋಲ್ಕತ್ತಾ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ.
ಕಳೆದ ಆವೃತ್ತಿಯಲ್ಲಿ ಪ್ಲೇಆಫ್‌ಗೆ ಲಗ್ಗೆ ಹಾಕಲು ಉಭಯ ತಂಡಗಳು ವಿಫಲವಾಗಿದ್ದವು. ಈ ಬಾರಿ ಆರಂಭದಿಂದಲೇ ಅಬ್ಬರಿಸುವ ಮೂಲಕ, ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿವೆ.
ಇದನ್ನೂ ಓದಿ | ಇನ್ನೂ ಕೆಲವು ವರ್ಷ ಕ್ರಿಕೆಟ್ ಆಡಬಲ್ಲ ಸಾಮರ್ಥ್ಯ ಅವರಲ್ಲಿದೆ; ವಿರಾಟ್ ಕೊಹ್ಲಿ ಕುರಿತು ಭವಿಷ್ಯ ನುಡಿದ ಕ್ರಿಸ್ ಗೇಲ್
ಈಡನ್ ಗಾರ್ಡನ್ಸ್ ಸ್ಟೇಡಿಯಂ ಪಿಚ್ ವರದಿ
ಕಳೆದ ಬಾರಿಯ ಏಕದಿನ ವಿಶ್ವಕಪ್ ಪಂದ್ಯಗಳಿಗೂ ಆತಿಥ್ಯ ವಹಿಸಿದ್ದ ಕೋಲ್ಕತ್ತಾದ ಈಡನ್ ಗಾರ್ಡನ್ ಪಿಚ್, ನಿಧಾನಗತಿಯ ಸ್ವಭಾವಕ್ಕೆ ಹೆಸರಾಗಿದೆ. ಈ ಪಿಚ್ ಸ್ಪಿನ್ನರ್‌ಗಳು ಮತ್ತು ನಿಧಾನಗತಿಯ ಬೌಲರ್‌ಗಳಿಗೆ ಹೆಚ್ಚು ನೆರವಾಗುತ್ತವೆ. ಹುಲ್ಲಿನಿಂದಾಗಿ ಕಳೆದ ವರ್ಷ ವೇಗಿಗಳಿಗೆ ತುಸು ನೆರವಾಗಿತ್ತು. ವೇಗ ಮತ್ತು ಉತ್ತಮ ಬೌನ್ಸ್‌ನೊಂದಿಗೆ ವೇಗಿಗಳಿಗೂ ಪಿಚ್ ನೆರವಾದರೆ ಅಚ್ಚರಿಯಿಲ್ಲ. ಸದ್ಯ ಮಿಚೆಲ್ ಸ್ಟಾರ್ಕ್ ದುಬಾರಿ ಆಟಗಾರನಾಗಿ ಆತಿಥೇಯ ತಂಡದ ಪಾಲಾಗಿದ್ದು, ಪಿಚ್ ಅನ್ನು ಹೇಗೆ ಬಳಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಕೋಲ್ಕತ್ತಾ ಹವಾಮಾನ ವರದಿ
ಮಾರ್ಚ್ 23ರಂದು ಕೋಲ್ಕತ್ತಾದಲ್ಲಿ ಮಳೆಯ ಸಾಧ್ಯತೆ ಕಡಿಮೆ ಇದೆ. ವರುಣಾಗಮನದ ಸಂಭವ ಕೇವಲ ಐದು ಪ್ರತಿಶತದಷ್ಟು ಮಾತ್ರ ಇದ್ದು, ಕೋಲ್ಕತ್ತಾದಲ್ಲಿ ಸಂಪೂರ್ಣ ಪಂದ್ಯ ನಡೆಯುವ ಸಾಧ್ಯತೆ ದಟ್ಟವಾಗಿದೆ.
ನೇರಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ಐಪಿಎಲ್ ಪಂದ್ಯಗಳನ್ನು ಸ್ಟಾರ್ ಸ್ಫೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುತ್ತದೆ. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು. ವಿವಿಧ ಭಾಷೆಗಳಲ್ಲಿ ಕಾಮೆಂಟರಿ ಕೂಡಾ ಲಭ್ಯವಿರಲಿದೆ.
ಕೋಲ್ಕತ್ತಾ ಸಂಭಾವ್ಯ ಆಡುವ ಬಳಗ
ವೆಂಕಟೇಶ್ ಅಯ್ಯರ್, ಫಿಲ್ ಸಾಲ್ಟ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮಿನ್ಸ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.
ಹೈದರಾಬಾದ್ ಸಂಬಾವ್ಯ ಆಡುವ ಬಳಗ
ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.
ಇದನ್ನೂ ಓದಿ | ರಿಷಭ್ ಪಂತ್ ಇನ್, ಡೇವಿಡ್ ವಾರ್ನರ್ ಔಟ್; ಪಂಜಾಬ್ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XI
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
