ಹೊಗಳಿ ಅಟ್ಟಕ್ಕೇರಿಸಿದ್ದ ಅಭಿಮಾನಿಗಳಿಂದಲೇ ಟೀಕೆ, ಟ್ರೋಲ್; ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಎಲ್ ರಾಹುಲ್ ಆಡಿದ ರೀತಿಗೆ ಆಕ್ರೋಶ
KL Rahul: ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೆಎಲ್ ರಾಹುಲ್ ಆಡಿದ ರೀತಿಗೆ ಹೊಗಳಿ ಅಟ್ಟಕ್ಕೇರಿಸಿದ್ದ ಅಭಿಮಾನಿಗಳಿಂದಲೇ ಟೀಕೆ ವ್ಯಕ್ತವಾಗಿದೆ. ಟೆಸ್ಟ್ ಕ್ರಿಕೆಟ್ ಆಡಲು ಐಪಿಎಲ್ಗೆ ಬರಬೇಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 77 ರನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 93* ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಎತ್ತಿ ಮೆರೆಸಿದ್ದ ಇದೇ ಅಭಿಮಾನಿಗಳು 2025ರ ಇಂಡಿಯನ್ ಪ್ರೀಮಿಯರ್ ಲೀಗ್ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ ರೀತಿಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಕೆಎಲ್ ರಾಹುಲ್ ಅವರಿಂದ ಸರಿಯಾದ ಟೆಸ್ಟ್ ಇನ್ನಿಂಗ್ಸ್ ಎಂದು ಕಿಡಿಕಾರಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದ ಆಟವನ್ನೇ ಇಲ್ಲೂ ಮುಂದುವರೆಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜಸ್ಥಾನ್ ವಿರುದ್ಧದ ಇನ್ನಿಂಗ್ಸ್ ಪ್ರಸಕ್ತ ಆವೃತ್ತಿಯಲ್ಲಿ ರಾಹುಲ್ ಅವರ ಕಳೆದ ಇನ್ನಿಂಗ್ಸ್ಗಳಿಗೆ ವ್ಯತಿರಿಕ್ತವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ 34/2ಕ್ಕೆ ಕುಸಿಯುತ್ತಿದ್ದಂತೆ ಕೆಎಲ್, ಎಚ್ಚರಿಕೆಯ ಮತ್ತು ನಿಧಾನಗತಿಯ ಆಟಕ್ಕೆ ಒತ್ತುಕೊಟ್ಟರು. 32 ಎಸೆತಗಳಲ್ಲಿ 38 ರನ್ ಗಳಿಸಿದ ಕರ್ನಾಟಕದ ಆಟಗಾರರ ಹಿಂದಿನ ಫಾರ್ಮ್ ಅನ್ನು ಗಮನಿಸಿದರೆ ಇದು ಅಸಹಜವಾಗಿ ನಿಧಾನಗತಿಯ ಆಟವಾಗಿದೆ. 4 ಮತ್ತು 12 ಓವರ್ಗಳ ನಡುವೆ ರಾಹುಲ್ 29 ಎಸೆತಗಳನ್ನು ಎದುರಿಸಿದರೂ ಕೇವಲ ಎರಡು ಬೌಂಡರಿಗಳನ್ನಷ್ಟೇ ಸಾಧ್ಯವಾದರು. 5ನೇ ಓವರ್ನಲ್ಲಿ ತೀಕ್ಷಾಣಗೆ ಬೌಂಡರಿ, 7ನೇ ಓವರ್ನಲ್ಲಿ ತುಷಾರ್ ದೇಶಪಾಂಡೆಗೆ ಸಿಕ್ಸರ್ ಚಚ್ಚಿದರು. ಇದು ಬಿಟ್ಟರೆ ಸಿಂಗಲ್ಸ್ ಮತ್ತು ಡಾಟ್ಗಳಲ್ಲೇ ಕಾಲ ಕಳೆದರು.
ಕೆಎಲ್ ರಾಹುಲ್ ಫುಲ್ ಟ್ರೋಲ್
13ನೇ ಓವರ್ನಲ್ಲಿ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ ರಾಹುಲ್ ವಿಕೆಟ್ ಒಪ್ಪಿಸಿದರು. ಐಪಿಎಲ್ ಇತಿಹಾಸದಲ್ಲಿ ಆರ್ಚರ್ಗೆ ಇದೇ ಮೊದಲ ಬಾರಿಗೆ ಔಟಾದರು. ಸ್ಕೋರ್ ಹೆಚ್ಚಿಸಲು ವಿಫಲವಾದ ರಾಹುಲ್ ವಿರುದ್ಧವೇ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಕೈಯಲ್ಲಿ ವಿಕೆಟ್ಗಳಿಂದ್ದರೂ ವೇಗ ಕಾಯ್ದುಕೊಳ್ಳುವ ಮನಸ್ಥಿತಿ ಬದಲಿಸದೇ ಇರುವುದು ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಟೆಸ್ಟ್ ಆಡುವುದು ಬಿಟ್ಟು ಟಿ20 ಕ್ರಿಕೆಟ್ನಲ್ಲಿ ಟೆಸ್ಟ್ ಆಡಿದರೆ ಹೇಗೆ ಎಂದು ಅಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಟ್ರೈಕ್ರೇಟ್ ಹೆಚ್ಚಿಸಿಕೊಳ್ಳುವುದು ಬಿಟ್ಟು, ಆರೆಂಜ್ ಕ್ಯಾಪ್ ಮೇಲೆ ಕಣ್ಣು ಹಾಕಿದರೆ ಹೇಗೆ? ಕೆಎಲ್ ರಾಹುಲ್ ಎಲ್‌ಎಸ್‌ಜಿ ಪರ ಆಡುತ್ತಿದ್ದ ರೀತಿ ಇದು ಎಂದು ಕಿಡಿಕಾರಿದ್ದಾರೆ.
ನಿರೀಕ್ಷಿಸುವುದು ಮೂರ್ಖತನ ಎಂದ ನೆಟ್ಟಿಗರು
ಕೆಎಲ್ ರಾಹುಲ್ ಮತ್ತೊಮ್ಮೆ ಶ್ರೇಷ್ಠ ಬ್ಯಾಟಿಂಗ್. ಆಟವನ್ನು ಆಳವಾಗಿ ಎದುರಿಸಲು ಬಯಸಿದಾಗಲೆಲ್ಲಾ ಅವನು ವಿಫಲನಾಗುತ್ತಾರೆ. ಅವರು ಎಂದಿಗೂ ಬದಲಾಗುವುದಿಲ್ಲ. ಅವರಿಂದ ಬೇರೆಯದನ್ನು ನಿರೀಕ್ಷಿಸುವುದು ಮೂರ್ಖತನ ಎಂದು ಕ್ರಿಕೆಟ್ ತಮಿಝಾನ್ ಎಂಬ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ರಾಹುಲ್ 32 ಎಸೆತಗಳಲ್ಲಿ ಕೇವಲ 38 ರನ್ ಗಳಿಸಿದರು (ಸ್ಟ್ರೈಕ್ರೇಟ್ - 118). ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತ್ರ ಅವರು ಉತ್ತಮ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಾರಷ್ಟೆ. ಅವರ ಇನ್ನಿಂಗ್ಸ್ ಅವರಿಗಾಗಲಿ ಅಥವಾ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಗಲಿ ಪ್ರಯೋಜನವಾಗಲಿಲ್ಲ ಎಂದು ಸತೀಶ್ ಮಿಶ್ರಾ ಅವರು ಎಕ್ಸ್ನಲ್ಲಿ ಬರೆದಿದ್ದಾರೆ.